ರಮಾನಾಥ ರೈಯವರ ಜನ ಸಂಪರ್ಕ ಸಭೆಯ ಸುಳ್ಳು ಮಾಹಿತಿ ನಾಚಿಕೆಗೇಡು: ಭಾಜಪಾ

ರಮಾನಾಥ ರೈಯವರ ಜನ ಸಂಪರ್ಕ ಸಭೆಯ ಸುಳ್ಳು ಮಾಹಿತಿ ನಾಚಿಕೆಗೇಡು: ಭಾಜಪಾ

ಮಂಗಳೂರು : ಬಂಟ್ವಾಳ ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವ ರಮಾನಾಥ ರೈಯವರು “94ಸಿ” ಯೋಜನೆ ಅಡಿಯಲ್ಲಿ ಹಕ್ಕು ಪತ್ರ ಹಂಚಿರುವುದು ರಾಜ್ಯದಲ್ಲೆ ಬಂಟ್ವಾಳ ತಾಲೂಕು ಪ್ರಥಮ ಸ್ಥಾನ ಎಂದು ಹೇಳಿರುವುದು ನಾಚಿಕೆಗೇಡು. ಉಸ್ತುವಾರಿ ಸಚಿವರ ಈ ಹೇಳಿಕೆ “94ಸಿ” ಯೋಜನೆಯು ಇಡೀ ರಾಜ್ಯದಲ್ಲಿಯೇ ಬಡಜನರಿಗೆ ಹಕ್ಕು ಪತ್ರವನ್ನು ಹಂಚುವಲ್ಲಿ ವಿಫಲವಾಗಿದೆ ಎಂದು ಸಾಬೀತಾಗಿದೆ.
ಬಂಟ್ವಾಳ ತಾಲೂಕು ಕಛೇರಿಯ ಮಾಹಿತಿ ಪ್ರಕಾರ 2014ರ ಜೂನ್ 1 ರಿಂದ 2016ರ ಜೂನ್ 30ರ ವರೆಗೆ “94ಸಿ”ಯ ಅಡಿಯಲ್ಲಿ ಸುಮಾರು 14735 ಅರ್ಜಿಯನ್ನು ಫಲಾನುಭವಿಗಳಿಂದ ಸ್ವೀಕರಿಸಲಾಗಿದೆ. ಇದರಲ್ಲಿ 4579 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, 2220 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಒಟ್ಟು 2359 ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ನೀಡಲಾಗಿದೆ. ಮತ್ತು ಒಂಬತ್ತು ಲಕ್ಷದ ಐವತ್ತೇಳು ಸಾವಿರದ ಎಳುನೂರ ಎಪ್ಪತೈದು ರೂಪಾಯಿಗಳನ್ನು (95775-00) ಶುಲ್ಕದ ರೂಪದಲ್ಲಿ ವಸೂಲಿ ಮಾಡಲಾಗಿದೆ. ಈ ಮಾಹಿತಿಯ ಪ್ರಕಾರ ಕೇವಲ 16 ಶೇಕಡಾದಷ್ಟು ಮಾತ್ರ ಹಕ್ಕು ಪತ್ರ ನೀಡಿದ್ದು ಜನರ ಕಣ್ಣಿಗೆ ಮಣ್ಣುಎರಚುವ ತಂತ್ರವಾಗಿದೆ.
ಬಂಟ್ವಾಳ ತಾಲೂಕಿನಲ್ಲಿ ಕೇವಲ 16ಶೇಕಡಾದಷ್ಟು ಮಾತ್ರ ಹಕ್ಕು ಪತ್ರ ಹಂಚಿಕೆ ಮಾಡಿ, ಬಂಟ್ವಾಳ ತಾಲೂಕು ಇಡೀ ರಾಜ್ಯದಲ್ಲಿ ಪ್ರಥಮ ಎಂಬ ಉಸ್ತುವಾರಿ ಸಚಿವರ ಹೇಳಿಕೆ,ರಾಜ್ಯದಲ್ಲಿ “94ಸಿ”ಯ ಪ್ರಕಾರ ಫಲನುಭವಿಗಳಿಗೆ ನೀಡಿರುವ ಹಕ್ಕು ಪತ್ರಗಳು ನಗಣ್ಯವಾಗಿದೆ ಮತ್ತು ಈ ಯೋಜನೆಯು ಜನರಿಗೆ ಸಮರ್ಪಕ ರೀತಿಯಲ್ಲಿ ತಲುಪಿರುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಇದೊಂದು ಸರಕಾರಿ ಯೋಜನೆಗಳ ಮೂಲಕ ಜನರ ಕಣ್ಣಿಗೆ ಮಣ್ಣು ಎರಚುವ ಕಾರ್ಯವಾಗಿದೆ.
ಸುಮಾರು 2ವರ್ಷಗಳ ಹಿಂದೆ ಕೊಳೆ ರೋಗದ ಮೂಲಕ ಬೆಳೆ ನಾಶಕ್ಕೊಳಗಾದ ಕೆಲವು ಅಡಿಕೆ ಬೆಳೆಗಾರರಿಗೆ ಪರಿಹಾರ ವಿತರಿಸುತ್ತೇವೆ ಎಂದು ಆಶ್ವಾಸನೆಯನ್ನು ಕೊಟ್ಟ ಉಸ್ತುವಾರಿ ಸಚಿವರು ಪ್ರತೀ ಜನಸಂಪರ್ಕ ಸಭೆಯಲ್ಲಿ ಭರವಸೆಯನ್ನು ಈಡೇರಿಸದೆ ಅಡಿಕೆ ಬೆಳೆಗಾರರ ಆಕ್ರೋಶಕ್ಕೆ ಒಳಗಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿ, ಕೇವಲ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಜನ ಸಂಪರ್ಕ ಸಭೆಯನ್ನು ಪ್ರ್ರಾಯೋಜಿಸಿ ಕೇವಲ ಬಂಟ್ವಾಳ ತಾಲೂಕಿಗೆ ಸೀಮಿತವಾಗಿ ಹೇಳಿಕೆ ನೀಡಿರುವುದಾದರೆ, ಜಿಲ್ಲೆಯ ಇತರ ತಾಲೂಕುಗಳ ಗತಿಯೇನು ಎಂಬ ಪ್ರಶ್ನೆ ಜನರಲ್ಲಿ ಸ್ವಾಭವಿಕವಾಗಿ ಉದ್ಬವವಾಗುತ್ತದೆ.
ಆದ್ದರಿಂದ ಈ ಜನ ಸಂಪರ್ಕ ಸಭೆಯು ಕೇವಲ ಫಲಾನುಭವಿಗಳನ್ನು ಸೇರಿಸಿ ಸರಕಾರಿ ಯೋಜನೆಗಳ ಮೂಲಕ ಸುಳ್ಳು ಭರವಸೆಗಳನ್ನು ನೀಡಿ ಪ್ರಚಾರ ಗಿಟ್ಟಿಸುವ ತಂತ್ರವಾಗಿದೆ. ಆದ್ದರಿಂದ ತಾಲೂಕಿನ ಜನರು ಕೂಡಲೇ ಕಾರ್ಯಪ್ರವೃತ್ತರಾಗಿ, ಸರಕಾರದಿಂದ ಬರುವ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉಸ್ತುವಾರಿ ಸಚಿವ ರಮಾನಾಥ ರೈವರ ಸುಳ್ಳು ಭರವಸೆಗಳಿಗೆ ಬಲಿಯಾಗಬಾರದು. ಸಚಿವರು ಕೂಡಲೇ ಉಳಿದ ಸುಮಾರು 10136 ಅರ್ಜಿಗಳನ್ನು ವಿಲೇವಾರಿಗೊಳಿಸಿ ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ವಿತರಿಸಬೇಕು. ತಪ್ಪಿದಲ್ಲಿ ತನ್ನ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಇಲ್ಲವಾದಲ್ಲಿ ಈ ಬಗ್ಗೆ ಉಗ್ರ ಹೋರಾಟವನ್ನು ಭಾರತೀಯ ಜನತಾ ಪಾರ್ಟಿ ಕೈಗೆತ್ತಿಗೊಳ್ಳಲಿದೆ ಎಂದು ಜಿಲ್ಲಾ ವಕ್ತಾರ ಜೀತೆಂದ್ರ ಎಸ್.ಕೊಟ್ಟಾರಿ ತಿಳಿಸಿರುತ್ತಾರೆ.

Leave a Reply

Please enter your comment!
Please enter your name here