ವಿಶ್ವಸ್ತನ್ಯಪಾನ ಸಪ್ತಾಹದ ಅಂಗವಾಗಿ ಗರ್ಭಿಣಿ, ಬಾಣಂತಿ ಮತ್ತು ಮಹಿಳೆಯರಿಗಾಗಿ ಅರಿವು ಕಾರ್ಯಗಾರ

ವಿಶ್ವಸ್ತನ್ಯಪಾನ ಸಪ್ತಾಹದ  ಅಂಗವಾಗಿ ಗರ್ಭಿಣಿ, ಬಾಣಂತಿ ಮತ್ತು ಮಹಿಳೆಯರಿಗಾಗಿ ಅರಿವು ಕಾರ್ಯಗಾರ

ಮಂಗಳೂರು: ವಿಶ್ವಸ್ತನ್ಯಪಾನ ಸಪ್ತಾಹದ  ಅಂಗವಾಗಿ ಜಿಲ್ಲಾ ಸರಕಾರಿ ಆಯುರ್ವೇದ ಮತ್ತು ಹೋಮಿಯೋಪತಿ ಸಂಯುಕ್ತ ಆಸ್ಪತ್ರೆ, ಹ್ಯಾಟ್ಹಿಲ್, ಲಾಲ್ಬಾಗ್, ಮಂಗಳೂರು ಇವರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಗರ್ಭಿಣಿ, ಬಾಣಂತಿ ಮತ್ತು ಮಹಿಳೆಯರಿಗಾಗಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಶುಕ್ರವಾರ  ನಗರದ ಬೋಳೂರು ಸುಲ್ತಾನ್ ಬತ್ತೇರಿ ಬಳಿ ಇರುವ ಅಂಗನವಾಡಿ ಕೇಂದ್ರ ” ಅಕ್ಷರ ಸದನ” ದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಆಯುಷ್ ಫೌಂಡೇಶನ್ನ ಅಧ್ಯಕ್ಷರಾದ ಡಾ. ಆಶಾಜ್ಯೋತಿ ರೈ ಮಾಲಾಡಿ ಇವರು ಜ್ಯೋತಿ ಬೆಳಗಿಸುವ ಮೂಲಕ  ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇಂದು ಸ್ತನ್ಯಪಾನದಂತಹ ಪ್ರಾಕೃತಿಕ ಸಹಜ ವಿಚಾರವನ್ನು ಆಚರಣೆ ಮೂಲಕ ಸಾರ್ವಜನಿಕರಿಗೆ ತಿಳಿ ಹೇಳಿ ಜಾಗ್ರತೆ ಮೂಡಿಸುವ ಅನಿವಾರ್ಯತೆ ಬಂದೊದಗಿರುವುದು ತುಂಬಾ ಬೇಸರ ತರುವಂತಹ ವಿಚಾರ. ಇವತ್ತಿನ ಕಾಲಘಟ್ಟದಲ್ಲಿ ಕೂಡು ಕುಟುಂಬಗಳು ವಿಭಜನೆಯಾಗಿರುವುದರಿಂದ ಈ ಸಮಸ್ಯೆ ನಮ್ಮನ್ನು ಕಾಡುತ್ತಿದೆ. ಗರ್ಭಾಶಯ ಪ್ರಾಕೃತಿಕ ಸ್ಥಿತಿಗೆ ಬರಲು ಸ್ತನ್ಯಪಾನ ಸಹಕಾರಿ ಎಂದು ಹೇಳಿದರು.

ayush-20160806

ಪ್ರಾಸ್ತಾವಿಕ ನುಡಿಗಳನ್ನಾಡಿದ  ಜಿಲ್ಲಾ ಅಯುಷ್ ಆಸ್ಪತ್ರೆಯ ಆಯುರ್ವೇದ ತಜ್ಞ ವೈದ್ಯ ಡಾ.ದೇವದಾಸ್ ಕೆ.ಪುತ್ರನ್ ಅವರು,  ಶಿಶುವಿನ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಸದೃಢ  ಸಶಕ್ತ, ಸ್ವಾಸ್ಥ್ಯ ಶರೀರ ಹಾಗೂ ದೀರ್ಘಾಯುಷ್ಯಕ್ಕಾಗಿ ಸಮರ್ಪಕ ಸ್ತನ್ಯಪಾನ ಅತ್ಯವಶ್ಯಕ. ಆದುದರಿಂದ ಇಂದಿನ ಆಧುನಿಕ ಜೀವನ ಶೈಲಿಯಿಂದಾಗಿ ಮಗು ಸ್ತನ್ಯಪಾನದಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸುವಂತೆ ಮಾತೆಯರಿಗೆ ಅವರು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜಿಲ್ಲಾ ಆಯುಷ್ ಆಸ್ಪತ್ರೆಯ ಶುಶ್ರೂಷಕಿ ಸುನಂದ ಡಿ.ಆರ್., ಅವರು ಆಯುರ್ವೇದದ ಶಾಸ್ತ್ರೋಕ್ತ ಮಾಹಿತಿಗಳೊಂದಿಗೆ ಸ್ತನ್ಯಪಾನದ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಸಮಾಜ ಸೇವಾ ಕಾರ್ಯಕರ್ತ ವಾಸುದೇವ ಬೋಳೂರು ಅವರು ಕಾರ್ಯಕ್ರಮಕ್ಕೆ ಶುಭ ಕೋರಿ, ಸಮಾಜಕ್ಕೆ ಒಳಿತಾಗುವ ಯಾವುದೇ ಉತ್ತಮ ಕಾರ್ಯಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸ್ಥಳೀಯ ವಾರ್ಡಿನ ಮಾಜಿ ಕಾರ್ಪೋರೇಟರ್ ಕಮಲಾಕ್ಷ ಸಾಲ್ಯಾನ್ ಹಾಗೂ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಜಲಜಾಕ್ಷಿ ಕಸ್ಬಾ ಬೆಂಗ್ರೆ ಅವರು, ಗರ್ಭಿಣಿ, ಬಾಣಂತಿ ಮತ್ತು ಮಹಿಳೆಯರಿಗೆ ಕೆಲವೊಂದು ಉಪಯುಕ್ತ ಸಲಹೆಗಳನ್ನು ನೀಡಿದರು. ಎಂದು ಪ್ರಕಟಣೆ ತಿಳಿಸಿದೆ.

Leave a Reply