ಸಚಿವ ಖಾದರ್ ಸಹಾಯಕರಿಂದ ಮುನೀರ್ ಕಾಟಿಪಳ್ಳ ವಿರುದ್ಧ ಸುಳ್ಳು ದೂರು; ದೇಶಪ್ರೇಮಿ ಒಕ್ಕೂಟ

ಸಚಿವ ಖಾದರ್ ಸಹಾಯಕರಿಂದ ಮುನೀರ್ ಕಾಟಿಪಳ್ಳ ವಿರುದ್ಧ ಸುಳ್ಳು ದೂರು;
ದೇಶಪ್ರೇಮಿ ಒಕ್ಕೂಟ

ಬಾಳಿಗಾ ಕೊಲೆಯ ಆರೋಪಿ ನರೇಶ್ ಶೆಣೈನನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಆತನನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಬೇಕು ಎಂದು ಜೈಲರ್‍ಗೆ ಸಚಿವ ಖಾದರ್ ಆಪ್ತ ಸಹಾಯಕನ ಹೆಸರಿನಲ್ಲಿ ಕರೆ ಮಾಡಿದ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, “ಸಚಿವರು ಇತ್ತ ಗಮನ ಹರಿಸಲಿ, ಈ ಕುರಿತು ತನಿಖೆ ನಡೆಸಲಿ” ಎಂಬ ಪೋಸ್ಟ್ ಹಾಕಿದ್ದಕ್ಕಾಗಿ ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ವಿರುದ್ಧ ಸಚಿವ ಖಾದರ್, ತನ್ನ ಮೂವರು ಆಪ್ತ ಸಹಾಯಕರ ಮೂಲಕ ಕ್ರಿಮಿನಲ್ ದೂರು ದಾಖಲಿಸಿರುವುದನ್ನು ದೇಶಪ್ರೇಮಿ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸಿದೆ.

ಆರ್‍ಟಿಐ ಕಾರ್ಯಕರ್ತ ಬಾಳಿಗಾ ಕೊಲೆ ಪ್ರಕರಣದ ದಿಕ್ಕು ತಪ್ಪಿಸಲು ನರೇಶ್ ಶೆಣೈನನ್ನು ಪ್ರಕರಣದಿಂದ ಬಚಾವ್ ಮಾಡಲು ಪ್ರಭಾವಿ ಲಾಬಿಯೊಂದು ಸರಕಾರದ ಉನ್ನತ ಸ್ತರದಲ್ಲಿ ಪ್ರಯತ್ನಿಸುತ್ತಿದ್ದದ್ದು ಎಲ್ಲರಿಗೂ ತಿಳಿದಿರುವ ಸತ್ಯ. ಆದುದರಿಂದ ದೇಶಪ್ರೇಮಿ ಸಂಘಟನೆಗಳ ಒಕ್ಕೂಟ ತನಿಖೆಯ ಪ್ರತೀ ಹಂತದಲ್ಲೂ “ತೆರೆಮರೆಯ ಕೈಗಳು” ಆಟ ಆಡದಂತೆ ಎಚ್ಚರ ವಹಿಸಿತ್ತು. ನರೇಶ್ ಶೆಣೈ ಬಂಧನದ ನಂತರವೂ ಕೊಲೆ ಪ್ರಕರಣದ ಆರೋಪಿ ನರೇಶ್ ಶೆಣೈ ಅನಾರೋಗ್ಯ ನೆಪವೊಡ್ಡಿ ಜೈಲು ವಾಸ ತಪ್ಪಿಸಿ ಖಾಸಗೀ ಆಸ್ಪತ್ರೆ ಸೇರುವ ತೀವ್ರ ಪ್ರಯತ್ನವೂ ನಡೆಯುತ್ತಿದೆ. ಅದರ ಭಾಗವಾಗಿಯೇ ಜೈಲರ್‍ಗೆ ಸಚಿವರ ಆಪ್ತ ಸಹಾಯಕನ ಹೆಸರಿನಲ್ಲಿ ಬಂದ ಕರೆಯ ಬಗ್ಗೆ ಮುನೀರ್ ಕಾಟಿಪಳ್ಳ ಸಾಮಾಜಿಕ ಜಾಲತಾಣ ಫೇಸ್‍ಬುಕ್‍ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಮತ್ತು ತನಿಖೆ ನಡೆಸುವಂತೆ ಸಚಿವರಲ್ಲಿ ಒತ್ತಾಯಿಸಿದ್ದಾರೆ. ಆದರೆ ಈ ಕರೆಯ ಬಗ್ಗೆ ತನಿಖೆ ನಡೆಸಬೇಕಾಗಿದ್ದ ಖಾದರ್, ಅದರ ಬದಲಿಗೆ ತನ್ನ ಆಪ್ತ ಸಹಾಯಕರ ಮೂಲಕ ಮುನೀರ್ ಕಾಟಿಪಳ್ಳರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿ ಅಧಿಕಾರದ ದುರುಪಯೋಗ ಮಾಡಿರುವುದು ಖಂಡನೀಯ ಎಂದು ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ಪ್ರೊ. ನರೇಂದ್ರ ನಾಯಕ್, ಎಂ. ದೇವದಾಸ್, ಸಂತೋಷ್ ಬಜಾಲ್ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply