ಸರ್ ಎಂ. ವಿಶ್ವೇಶ್ವರಯ್ಯ ಜನ್ಮ ದಿನ ಸೆಪ್ಟೆಂಬರ್ 15 ಭಾರತಿಯರು ಮರೆಯದ ದೀಮಂತ ಕನ್ನಡಿಗ….

Spread the love

  • 155ನೇ ಜನ್ಮ ದಿನದ ಸವಿ ನೆನಪಿಗಾಗಿ ಸರ್ ಎಂ. ವಿ. ಯವರ ಅಭಿಮಾನಿ ಕನ್ನಡಿಗರಿಗಾಗಿ ವಿಶೇಷ ಲೇಖನ

1. Sir M. Vishveshwarayya 1.jpg

ಭಾರತ ದೇಶದ ಪವಿತ್ರ ಭೂಮಿಯಲ್ಲಿ ಜನಿಸಿದ ಪುಣ್ಯ ಪುರುಷರಲ್ಲಿ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ವಿಶ್ವದ ಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್ ಮೇಧಾವಿ, ತಂತ್ರಜ್ಞ, ಅಮರ ವಾಸ್ತು ಶಿಲ್ಪಿ, ಭಾರತದ ಭಾಗ್ಯ ವಿಧಾತ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ನವರ ಜನ್ಮ ದಿನ ಸೆಪ್ಟೆಂಬರ್ 15. 1860. ಮೈಸೂರು ಪ್ರಾಂತ್ಯ (ಈಗಿನ ಕರ್ನಾಟಕ ರಾಜ್ಯ) ಚಿಕ್ಕಬಳ್ಳಾಪುರದ ಮುದ್ದೇನ ಹಳ್ಳಿಯಲ್ಲಿ ಸಂಸ್ಕೃತ ಪಂಡಿತರು, ಆಯುರ್ವೇದಿಕ್ ಪಂಡಿತರೂ ಆಗಿದ್ದ ಶ್ರೀನಿವಾಸ ಶಾಸ್ತ್ರಿ ಮತ್ತು ಶ್ರೀಮತಿ ವೆಂಕಚಮ್ಮ ದಂಪತಿಗಳ ಮಗನಾಗಿ ಜನಿಸಿದರು. ಇವರ ಜನ್ಮದಿನ ಸೆಪ್ಟೆಂಬರ್ 15ನೇ ತಾರೀಕು ಭಾರತ ದೇಶ “ಇಂಜಿನಿಯರುಗಳ ದಿನ” ವನ್ನಾಗಿ ಆಚರಿಸುತ್ತಿದೆ. 155 ನೇ ಜನ್ಮದಿನದ ವರ್ಷದಲ್ಲಿ ಇತಿಹಾಸದ ಪುಟಗಳಲ್ಲಿ ದಾಖಲೆಯಾಗಿರುವ ಸಾಧನೆಗಳನ್ನು ಒಮ್ಮೆ ನೋಡಿ ಭಾರತ ಮಾತೆಯ ವರಪುತ್ರ, ಅಪ್ಪಟ ದೇಶಪ್ರೇಮಿಗೆ ಗೌರವ ಸಲ್ಲಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ.

Sir M. Vishveshvarayya 2

ಚಿಕ್ಕಬಳ್ಳಾಪುರದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪ್ರಾರಂಭಿಸಿ ನಂತರದ ಪ್ರೌಢ ಶಾಲಾ ಹಂತವನ್ನು ಬೆಂಗಳೂರಿನಲ್ಲಿ, 1881ರಲ್ಲಿ ಬಿ. ಎ. ಪದವಿಯನ್ನು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಪಡೆದರು. ಉನ್ನತ ವ್ಯಾಸಂಗ ಪುಣೆಯ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಸಿವಿಲ್ ಇಂಜಿನಿಯರ್ ಪದವಿಯನ್ನು 1883 ರಲ್ಲಿ ರ್ಯ್ಯಾಂಕ್ ಪಡೆಯುವುದರ ಮೂಲಕ ಸಾಧನೆಯ ಹೆಜ್ಜೆಗಳನ್ನು ಇಡಲು ಪ್ರಾರಂಭಿಸಿದರು. ಬಾಂಬೆ ಸರ್ಕಾರದ ಲೋಕೊಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ವೃತ್ತಿ ಜೀವನ ಪ್ರಾರಂಭವಾಯಿತು.

Sir M.V. BRANDAVAN KRISHNA RAJ SAGARA - MYSORE

ಬಾಂಬೆಯ ಆಡಳಿತದಲ್ಲಿದ ಸಿಂಧ್ ಪ್ರಾಂತ್ಯದ ಜಲವಿತರಣೆ ಕಾಮಗಾರಿಕೆಯಲ್ಲಿ ಸಿಂಧೂ ನದಿಯಿಂದ ಸುಕ್ಕೂರಿಗೆ ನೀರು ಹರಿಸುವ ಯೋಜನೆಯ ಜವಾಬ್ದಾರಿ ಸರ್ ಎಂ. ವಿ. ಯವರಿಗೆ ದೊರೆತು ತಮ್ಮ ತಂತ್ರಜ್ಞಾನ, ಚಮತ್ಕಾರಿಕೆಯ ಕಾರ್ಯವೈಖರಿ ಆಡಳಿತ ಸರ್ಕಾರದ ಗಮನ ಸೆಳೆಯಿತು. ನಂತರ ಗುಜರಾತಿನ ಸೂರತ್ ನಲ್ಲಿಯೂ ನೀರು ಸರಬರಾಜು ವ್ಯವಸ್ಥೆಯನ್ನು ಸಹ ಅತ್ಯುತ್ತಮ ರೀತಿಯಲ್ಲಿ ಯೋಜನೆ ತಯಾರಿಸಿ ಪೂರ್ಣ ಗೊಳಿಸಿದರು. ನೂರು ವರ್ಷಗಳ ನಂತರ ಆ ಭಾಗಗಳಲ್ಲಿ ಭಾರೀ ಭೂಕಂಪವಾದರೂ ಯಾವುದೇ ಹಾನಿಯಾಗದೆ ಸರ್ ಎಂ. ವಿ. ಯವರ ಕಾಮಗಾರಿ ಭದ್ರವಾಗಿದೆ.

Prime Minister of India Pandit Jawaharlal Nehru (right), Presents a commemoration volume to Dr. M. Visvesvaraya (seated) on the occassion of his Centenary Celebrations function in Bangalore on September 15, 1960.

Prime Minister of India Pandit Jawaharlal Nehru (right), Presents a commemoration volume to Dr. M. Visvesvaraya (seated) on the occassion of his Centenary Celebrations function in Bangalore on September 15, 1960.

Sir M. Vishveshwarayya samadi 16.jpg

1903 ರಲ್ಲಿ ಪುಣೆಯ ಬಳಿ ಖಡಕ್ ವಾಸ್ಲಾ ಜಲಾಶಯದಲ್ಲಿ ತಮ್ಮ ವಿಶಿಷ್ಟ ತಂತ್ರಜ್ಞಾನವನ್ನು ಬಳಸಿ ಸ್ವಯಂ ಚಾಲಿತ ಗೇಟ್ ಗಳನ್ನು ಅಳವಡಿಸಿ, ಜಲಾಶಯದ ಈ ತಂತ್ರಜ್ಞಾನ ವಿಶ್ವದಲ್ಲೇ ಪ್ರಥಮ ಬಾರಿಗೆ ತೋರಿಸಿಕೊಟ್ಟ ಏಕೈಕ ತಂತ್ರ ಜ್ಞಾನಿಯಾಗಿ ಐತಿಹಾಸಿಕ ಸಾಕ್ಷಿಯಾಗಿದ್ದಾರೆ. 1909 ರಲ್ಲಿ ಹೈದರಾಬಾದ್, ವಿಶಾಖ ಪಟ್ಟಣದಲ್ಲಿ ಪ್ರವಾಹದಿಂದ ರಕ್ಷಿಸಲು ಯೋಜನೆ ರೂಪಿಸಿ ಪೂರ್ಣ ಗೊಳಿಸಿದರು.

ಜನಕೋಟಿಯನ್ನು ಆಕರ್ಷಿಸುತ್ತಿರುವ ವಿಶ್ವ ವಿಖ್ಯಾತ ಕೃಷ್ಣರಾಜ ಸಾಗರ ಆಣೆಕಟ್ಟು

Sir M.V. KRISHNA RAJ SAGARA - MYSORE

1911 ಜಗತ್ತೇ ಆಶ್ಚರ್ಯದಿಂದ ನೋಡುವಂತಾಗಿದ್ದು, ಅಂದಿನ ಕಾಲಘಟ್ಟದಲ್ಲಿ ಭಾರತದಲ್ಲೇ ಅತ್ಯಂತ ದೊಡ್ದದು ಎಂದು ಹೆಗ್ಗಳಿಕೆಗೆ ಪಾತ್ರವಾದ ಕೃಷ್ಣರಾಜ ಸಾಗರ (ಕನ್ನಂಬಾಡಿ) ಜೀವನದಿ ಕಾವೇರಿ ನದಿಗೆ ಕಟ್ಟಲಾದ ಆಣೆಕಟ್ಟನ್ನು ಪ್ರಾರಂಭಿಸಿ ನಾಲ್ಕು ವರ್ಷಗಳಲ್ಲಿ ಮುಗಿಸಿ ಸ್ವಯಂ ಚಾಲಿತ ಗೇಟುಗಳನ್ನು ಅಳವಡಿಸಿ ಜಗತ್ತಿನಲ್ಲಿ ಯಾರೊಬ್ಬರೂ ಮಾಡಿರದಂತಹ ಸಾಧನೆ ಮಾಡಿದರು. ಬೇರೆ ಆಣೆಕಟ್ಟುಗಳು ಸಿಮೆಂಟ್, ಕಾಂಕ್ರಿಟ್ ನಿಂದ ನಿರ್ಮಾಣವಾಗಿದ್ದರೆ, ಕೆ. ಆರ್. ಎಸ್. ಆಣೆಕಟ್ಟು ಸರ್ ಎಂ. ವಿ. ಯವರ ಜಾಣ್ಮೆಯ ತಂತ್ರಜ್ಞಾನದಿಂದ ಸುಣ್ಣ ಮತ್ತು ಬೆಲ್ಲದ ಮಿಶ್ರಣದಿಂದ ಕಟ್ಟಿದ ಗಟ್ಟಿ ಮಾನವ ನಿರ್ಮಿತವಾಗಿದ್ದು, ದಾಖಲೆಯೊಂದಿಗೆ ಶತಮಾನದಿಂದ ಮೈಸೂರು ಮಂಡ್ಯ, ಬೆಂಗಳೂರು, ತಮಿಳುನಾಡಿಗೆ ಜೀವಜಲವನ್ನು ನೀಡುತ್ತಿರುವ ವಾಸ್ತುಶಿಲ್ಪವಾಗಿದೆ. ಎಲ್ಲಿಯಾದರೂ ದುರಂತ ಸಂಭವಿಸಿದರೆ ಸ್ವಯಂ ಚಾಲಿತ ಗೇಟುಗಳು ತನ್ನಷ್ಟಕ್ಕೆ ತಾನೆ ತೆರೆದುಕೊಂಡು ಮುನ್ನುಗುವ ಅಪಾರ ಪ್ರಮಾಣದ ನೀರು ಯಾರಿಗೂ ತೊಂದರೆಯಾಗದಂತೆ ಹರಿದು ಮುಂದೆ ಸಾಗಲು ಮುಂದಾಲೋಚನೆಯಿಂದ ಅಣೆಕಟ್ಟು ನಿರ್ಮಿಸುವಾಗಲೇ ಆಳವಾದ ನಾಲೆಯ ವ್ಯವಸ್ಥೆ ಮಾಡಲಾಗಿದೆ. ಜಗತ್ತಿನ ಅದ್ಭುತಗಳ ಸಾಲಲ್ಲಿ ಬರುವ ಕೃಷ್ಣ ರಾಜ ಸಾಗರ ಆಣೆಕಟ್ಟು ಒಂದು ಲಕ್ಷ ಇಪ್ಪತ್ತು ಸಾವಿರ ಏಕರೆ ಕೃಷಿ ಭೂಮಿಗೆ ನೀರುಣಿಸಿ, ದಕ್ಷಿಣ ಭಾರತದ ಕೋಟ್ಯಾಂತರ ಜೀವಿಗಳಿಗೆ ಜೀವ ಜಲವನ್ನು ನೀಡಿದ ಭಾರತದ ಭಾಗ್ಯವಿಧಾತ ಸರ್ ಎಂ. ವಿಶ್ವೇಶ್ವರಯ್ಯನವರನ್ನು ದಕ್ಷಿಣ ಭಾರತದ ಜನತೆ ಮರೆಯುವಂತಿಲ್ಲ. ಬೃಂದಾವನ ಉಧ್ಯಾನವನದಲ್ಲಿ ವೈವಿಧ್ಯಮಯ ನರ್ತಿಸುವ ಕುಣಿದು ಕುಪ್ಪಳಿಸುವ ನೀರಿನ ಕಾರಂಜಿಗಳು, ಪುಷ್ಪಕಾಶಿಯೊಂದಿಗೆ ಜಗತ್ತಿನ ನಾನಾ ದೇಶದ ಪ್ರವಾಸಿಗರನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿದೆ.

Sir M.V. Acheivements

ಕರ್ನಾಟಕದ ಕನ್ನಡಿಗರ ಭಾಗ್ಯೋದಯ….

1912 ರಲ್ಲಿ ಮೈಸೂರು ಪ್ರಾಂತ್ಯದ ದಿವಾನರಾಗಿ ಅಧಿಕಾರ ಸ್ವೀಕರಿಸಿದರು. ಅಂದಿನಿಂದ ಕರ್ನಾಟಕದ ಭಾಗ್ಯದ ಬಾಗಿಲು ತೆರೆಯಿತು. ’ಕರ್ನಾಟಕದ ಭಗಿರಥ’ ಎಂದೇ ಕರೆಯಲ್ಪಡುವ ಸರ್ ಎಂ. ವಿ. ಯವರಿಂದ 1913 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪನೆಯಾದರೆ, 1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯಾಗಿ ಕನ್ನಡ ಭಾಷೆಗೆ ಶತಮಾನದ ಪ್ರಾರಂಭದಲ್ಲೆ ಭದ್ರ ಬುನಾದಿ ದೊರೆಯಿತು. ಮೈಸೂರು ಪ್ರಾಂತ್ಯದಲ್ಲಿ ಪ್ರಥಮ ದರ್ಜೆ ಕಾಲೇಜು ಇರಲಿಲ್ಲ. 1916 ರಲ್ಲಿ ಮೈಸೂರು ವಿಶ್ವ ವಿದ್ಯಾಲಯ ಸ್ಥಾಪಿಸಿ, ನಂತರ ಹುಡುಗಿಯರಿಗಾಗಿ ಮೈಸೂರಿನಲ್ಲಿ ಮಹಾರಾಣಿ ಕಾಲೇಜು ಸ್ಥಾಪಿಸಿ ಜ್ಞಾನದ ದೀಪ ಬೆಳಗಿದರು. 1912 ರಲ್ಲಿ ಮೈಸೂರು ಪ್ರಾಂತ್ಯದಲ್ಲಿ ಒಟ್ಟು 4,500 ಶಾಲೆಗಳಿದ್ದು, ಆರು ವರ್ಷದ ಅವಧಿಯಲ್ಲಿ ಒಟ್ಟು 6,500 ಶಾಲೆಗಳಾಗುವಂತೆ ಮಾಡಿ 1,40,000 ವಿದ್ಯಾರ್ಥಿಗಳಿದ್ದದು 1918 ರಲ್ಲಿ ನಿವೃತಿ ಪಡೆಯುವಾಗ 3,66,000 ವಿದ್ಯಾರ್ಥಿಗಳು ವಿದ್ಯಾಭಾಸ ಪಡೆಯುವಂತಾಯಿತು ಭಾರತದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಜಾರಿಗೆ ತರುವಲ್ಲಿ ಮತ್ತು ಹೆಣ್ಣು ಮಕ್ಕಳು ಶಾಲೆಗೆ ತೆರಳಿ ವಿದ್ಯಾಭ್ಯಾಸ ಪಡೆಯುವಂತೆ ಪ್ರೋತ್ಸಾಹಿಸಿ ಸಾಕ್ಷರತೆಗೆ ಅಡಿಪಾಯ ಹಾಕಿದವರು. ದೇಶದಲ್ಲೆ ಮೊಟ್ಟ ಮೊದಲ ಬಾರಿಗೆ ಕಡ್ಡಾಯ ಪ್ರಾಥಮಿಕ ಶಿಕ್ಷಣ ಜಾರಿ ಮಾಡಿದ ಪ್ರಥಮ ಕನ್ನಡಿಗನಾಗಿದ್ದಾರೆ. 1917ರಲ್ಲಿ ಬೆಂಗಳೂರು ವಿ. ವಿ. ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ. ಭಾರತದಲ್ಲೇ ಪ್ರಾರಂಭವಾದ ಪ್ರಥಮ ಇಂಜಿನಿಯರಿಂಗ್ ಕಾಲೇಜು ಕನ್ನಡಿಗನ ಕೊಡುಗೆಯಾಗಿದೆ. ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಮೈಸೂರು ಸ್ಯಾಂಡಲ್ ಸೋಪ್, ಶ್ರೀಗಂಧ ಎಣ್ಣೆ ತಯಾರಿಕಾ ಕಾರ್ಖಾನೆ ಸ್ಥಾಪಿಸಿದ ಮಹಾನುಭಾವ ಸರ್ ಎಂ. ವಿ. ಯವರು ಸ್ಥಾಪಿಸಿದ ಹಲವಾರು ಸಂಸ್ಥೆಗಳಲ್ಲಿ ಕೋಟ್ಯಾಂತರ ಮಂದಿಗೆ ಉದ್ಯೋಗ ಅವಕಾಶ ದೊರೆತು, ಅನ್ನದಾತರಾಗಿರುವುದನ್ನು ಇಂದಿಗೂ ಸ್ಮರಿಸಿಕೊಳ್ಳುವಂತಾಗಿದೆ.

Sir M.V. Metro Stn Delhi

ಕರ್ನಾಟಕದಲ್ಲಿ ಕಾರು ತಯಾರಿಕಾ ಕಾರ್ಖಾನೆಗೆ ಬ್ರಿಟಿಷರ ಅಡ್ಡಗಾಲು….

ಸರ್ ಎಂ. ವಿ. ಯವರಿಗೆ ಕರ್ನಾಟಕದಲ್ಲಿ ಕಾರು ತಯಾರಿಕಾ ಕಾರ್ಖಾನೆ ಸ್ಥಾಪಿಸಬೇಕೆಂದು ಮಹದಾಸೆ ಇತ್ತು. ಅದಕ್ಕಾಗಿ ಅವರು ತಿಂಗಳುಗಟ್ಟಲೆ ಯುರೋಪು, ಅಮೇರಿಕಾ ಸುತ್ತಿಬಂದರು. ಸರ್ ಎಂ. ವಿ. ಯವರ ಮನದಾಕಾಂಕ್ಷೆಯ ಯೋಜನೆಗೆ ಮೈಸೂರು ಮಹಾರಾಜರು ಸೂಕ್ತವಾದ ಸ್ಥಳವನ್ನು ನೀಡಿದರು. ಆದರೆ ಆಗಿನ ಆಡಳಿತದಲ್ಲಿದ್ದ ಬ್ರಿಟೀಷ್ ಅಧಿಕಾರಿಗಳು ಇವರ ಯೋಜನೆಗೆ ಅಡ್ಡಕಾಲಿಟ್ಟರು. ಆದರೆ ಎದೆಗುಂದದ ಸರ್. ಎಂ.ವಿ. ಯವರು ಹಿಂದುಸ್ಥಾನ್ ಏರ್ ಕ್ರಾಫ್ಟ್ ಫ್ಯಾಕ್ಟರಿ ಸ್ಥಾಪಿಸಿದರು. ಸರ್. ಎಂ. ವಿ. ಯವರು ಟಾಟಾ ಇನ್ಸ್ಟಿಟ್ಯೂಟ್ ಮುಖ್ಯಸ್ಥರಿಗೆ ಏರೋನಾಟಿಕ್ಸ್ ಪ್ರಾರಂಭಿಸುವಂತೆ ಮಾಡಿದರು ನಂತರ ಇದರ ಫಲವಾಗಿ ಬೆಂಗಳೂರಿನಲ್ಲಿಯೂ ಬಾಹ್ಯಕಾಶ ಸಂಶೋಧನಾ ಕೇಂದ್ರ, ವಾಯುಪಡೆ ನೆಲೆಯೂ ಪ್ರಾರಂಭವಾಯಿತು. ಇಂದು ಬೆಂಗಳೂರು ಹಂತ ಹಂತವಾಗಿ ಏರೊನಾಟಿಕ್ಸ್ ಸಂಶೋಧನಾ ಕೇಂದ್ರ, ಉಪಗ್ರಹ ಸಂಪರ್ಕ ಜಾಲ, ಮಾಹಿತಿ ತಂತ್ರ ಜ್ಞಾನ, ಮೆಟ್ರೋ ರೈಲಿನವರೆಗೆ ತಲುಪಿದೆ.

ಸರ್ ಎಂ. ವಿ. ಅಂದಿನ ಅವರ ಕನಸಿನ ತಂತ್ರಜ್ಞಾನ ಭದ್ರ ಭುನಾದಿಯೇ ಇಂದಿನ ವಿಶ್ವ ನಿಬ್ಬೆರಗಾಗಿ ನೋಡುವ ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ವಿಶ್ವದರ್ಜೆಯ ಮಟ್ಟದಲ್ಲಿ ಬೆಳೆದು ನಿಂತಿದೆ. ಜೋಗದ ಜಲ ವಿದ್ಯುತ್ ಯೋಜನೆ, ಮೈಸೂರು ಸಕ್ಕರೆ ಕಾರ್ಖಾನೆ, ಪ್ರಿಂಟಿಂಗ್ ಪ್ರೆಸ್, ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯಗಳು ಇವರ ಕೊಡುಗೆ. ಭದ್ರಾವತಿ ಕಾರ್ಖಾನೆಯ ಚೇರ್ ಮೆನ್ ಆಗಿ ಸೇವೆ ಸಲ್ಲಿಸುತ್ತಿರುವಾಗ ಸರ್ಕಾರ ವೇತನ ನಿಗಧಿ ಪಡಿಸಿರಲಿಲ್ಲ. ಕೆಲವು ವರ್ಷಗಳ ನಂತರ ಲಕ್ಷಕಿಂತಲೂ ಹೆಚ್ಚು ಹಣವನ್ನು ಪಾವತಿಸಲು ಬಂದಾಗ ಅವರು ಒಂದು ರೂಪಾಯಿ ಸಹ ಮುಟ್ಟಲಿಲ್ಲ, ಆ ಹಣದಿಂದ ಹುಡುಗರ ಪಾಲಿಟೆಕ್ನಿಕ್ ಪ್ರಾರಂಭಿಸಲು ಸಲಹೆ ನೀಡಿದರು. ಅವರ ಇಚ್ಚೆಯಂತೆ ನೂತನ ಪಾಲಿಟೆಕ್ನಿಕ್ ಪ್ರಾರಂಭಿಸಿ ಸರ್ ಎಂ. ವಿ. ಯವರ ಹೆಸರನ್ನು ಇಡಲು ಕೇಳಿಕೊಂಡಾಗ ಅವರು ಮೈಸೂರಿನ ಮಹಾರಾಜರ ಹೆಸರನನ್ನು ಇಡುವಂತೆ ಸೂಚಿಸಿದ ನಂತರ, ಶ್ರೀ ಜಯ ಚಾಮರಾಜೇಂದ್ರ ವೃತ್ತಿ ಶಿಕ್ಷಣ ತರಬೇತಿ ಸಂಸ್ಥೆ ಬೆಂಗಳೂರು ಸ್ಥಾಪನೆಯಾಯಿತು. ಭಾರತದ ಬೆನ್ನೆಲುಬು ಅನ್ನ ದಾತ ರೈತರ ಅಭಿವೃದ್ದಿಗಾಗಿ ಬೆಂಗಳೂರು ಹೆಬ್ಬಾಳದ ಕೃಷಿ ಸಂಶೋಧನಾ ಕೇಂದ್ರ ಸ್ಥಾಪಿಸಿದರು.

ಜನಕೋಟಿಯನ್ನು ಉದ್ದರಿಸಲು ಅವತರಿಸಿದ ಪುಣ್ಯ ಪುರುಷ…

ಸರ್ ಎಂ. ವಿಶ್ವೇಶ್ವರಯ್ಯ ಜನಕೋಟಿಯನ್ನು ಉದ್ದರಿಸಲು ಅವತರಿಸಿದ ಅವತಾರ ಪುರುಷನಂತೆ ನಮ್ಮ ಕಣ್ಣಿನ ಮುಂದೆ ಬರುತ್ತಾರೆ. ಅಪ್ಪಟ ಕನ್ನಡಿಗ ಭಾರತದ ಭಾಗ್ಯ ಶಿಲ್ಪಿ, ಕಟ್ಟಾ ಶಿಸ್ತಿನ ಸಿಪಾಯಿ, ದೇಶಭಕ್ತ ಈ ಮಾಹಾ ತಪಸ್ವಿಯನ್ನು ಕಂಡಾಗ ಭಕ್ತಿ ಭಾವ, ಗೌರವ ತುಂಬಿ ಬರುತ್ತದೆ.

ಸರ್ಕಾರಿ ಕೆಲಸ ದೇವರ ಕೆಲಸ…

ಮೈಸೂರು ಪೇಟಾ ಧರಿಸಿ ಶುಭ್ರ ಉಡುಪನ್ನುಟ್ಟು, ಬೆಳಿಗೆ 7.00 ಗಂಟೆಯಿಂದ ಸೇವಾ ದಿನಚರಿಯನ್ನು ಸರ್ಕಾರಿ ಕೆಲಸ ದೇವರ ಕೆಲಸ ಎಂದು ಭಾವಿಸಿ ಪ್ರಾರಂಭಿಸುತ್ತಿದ್ದರು. ಸರ್ ಎಂ. ವಿ. ಯವರು ತಮ್ಮ ಬಂಧುಬಳಗದವರಿಗೆ ತಮ್ಮ ಬಳಿಗೆ ಶಿಪಾರಸು ಉಪಯೋಗಿಸಿ ತಮ್ಮ ತಮ್ಮ ಕೆಲಸವನ್ನು ಮಾಡಿಕೊಡಲು ಬರದಂತೆ ಸೂಚನೆ ನೀಡಿ, ಅದರಂತೆ ಅಧಿಕಾರ ದುರುಪಯೋಗ ಪಡಿಸದೆ ಪಾಲಿಸಿ ತೋರಿಸಿದ್ದಾರೆ. ಮನೆಯಲ್ಲಿ ರಾತ್ರಿಯ ವೇಳೆ ಕಛೇರಿಯ ಕೆಲಸವನ್ನು ಮಾಡುವಾಗ ಸರ್ಕಾರ ನೀಡಿದ ದೀಪವನ್ನು ಉರಿಸಿಕೊಂಡು, ಪೆನ್ ಬಳಸುತಿದ್ದರು. ನಂತರ ಸ್ವಂತ ಕೆಲಸಕ್ಕೆ ಸ್ವಂತ ದೀಪ ಪೆನ್ನನ್ನು ಬಳಸುತಿದ್ದರು. ಅದೇ ರೀತಿ ಸರ್ಕಾರದ ಕೆಲಸಕ್ಕೆ ಸರ್ಕಾರದ ಕಾರು, ಸ್ವಂತ ಕೆಲಸಕ್ಕೆ ಸ್ವಂತ ಕಾರು ಬಳಸುತ್ತಿದ್ದ ಅಪ್ಪಟ ದೇಶಪ್ರೇಮಿ.

Sir M. Vishveshwarayya 6

ಭಾರತದ ರಾಜದಾನಿ ದೆಹಲಿ ಮತ್ತು ದೇಶದ ಪ್ರಮುಖ ನಗರಗಳ ಸೌಂದರ್ಯದ ರೂವಾರಿಯಾಗಿರುವ ಸರ್ ಎಂ. ವಿ. ಯವರು ಒರಿಸ್ಸಾ ರಾಜ್ಯದ ಹಿರಾಕುಡ್ ಆಣೆಕಟ್ಟು, ಯಮನ್ ರಾಷ್ಟ್ರದ ನಿರಾವರಿ ವ್ಯವಸ್ಥೆ, ಈಡನ್ ನಗರದ ನೀರಿನ ವ್ಯವಸ್ಥೆ, ವಿದೇಶದಲ್ಲಿ ಬೃಹತ್ ವಾಸ್ತುಶಿಲ್ಪ ರಚನೆ ಮಾಡಿದ ನಂತರ ಮುಖ್ಯವಾದ ಒಂದು ಕಲ್ಲಿನಲ್ಲಿ ” ಮೇಡ್ ಇನ್ ಇಂಡಿಯಾ” ಕೆತ್ತಿಸಿ ಇಟ್ಟಿದ್ದಾರೆ. ಯಾರದಾರೂ ಭಾರತ ದೇಶದ ಬಗ್ಗೆ ಸಣ್ಣತನ ತೋರಿಸಿ ಆ ಕಲ್ಲನ್ನು ಕಿತ್ತು ತೆಗೆದರೆ ಪೂರ್ತಿ ವಾಸು ಶಿಲ್ಪ ಕುಸಿದು ಬೀಳುವ ರೀತಿಯಲ್ಲಿ ಭಾರತೀಯ ತಂತ್ರ ಜ್ಞಾನದ ಹಸ್ತಕೌಶಲ್ಯವನ್ನು ವಿದೇಶಿಯರಿಗೆ ತೋರಿಸಿಕೊಟ್ಟಿದಾರೆ.

ಸರ್ ಎಂ .ವಿ. ಯವರ ಹೆಸರಿನ ಮೂಲಕ ಗೌರವ ನೀಡಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳು

ವಿಶ್ವೇಶ್ವರಯ್ಯ ಟೆಕ್ನಾಲಜಿ ಯೂನಿವರ್ಸಿಟಿ ಬೆಳಗಾಂ.
ವಿಶ್ವೇಶ್ವರಯ್ಯ ಇನ್ಸ್ಟ್ಯೂಟ್ ಅಫ್ ಅಡ್ವಾನ್ಸ್ಡ್ ಟೆಕ್ನಾಲಜಿ – ಮುದ್ದೇನ ಹಳ್ಳಿ ಕಣಿವೆನಾರಾಯಣಪುರ
ಇಂಡಿಯನ್ ಇನ್ಸ್ಟ್ಯೂಟ್ ಅಫ್ ಟೆಕ್ನಾಲಜಿ ಮುದ್ದೇನ ಹಳ್ಳಿ – ಸರ್ ಎಂ. ವಿ. ಯವರ ಜನ್ಮಸ್ಥಳ
ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಅಫ್ ಇಂಜಿನಿಯರಿಂಗ್ – ಬೆಂಗಳೂರು.
ವಿಶ್ವೇಶ್ವರಯ್ಯ ಪಾಲಿಟೆಕ್ನಿಕ್ ಕಾಲೇಜ್
ಸರ್ ಎಂ. ವಿಶ್ವೇಶ್ವರಯ್ಯ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ – ಬೆಂಗಳೂರು.
ವಿಶ್ವೇಶ್ವರಯ್ಯ ನ್ಯಾಶನಲ್ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ – ನಾಗಪುರ
ವಿಶ್ವೇಶ್ವರಯ್ಯ ಇಂಡಸ್ಟ್ರೀಯಲ್ ಅಂಡ್ ಟೆಕ್ನಾಲಜಿ ಮ್ಯೂಸಿಯಂ – ಬೆಂಗಳೂರು.
ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ – ಭದ್ರಾವತಿ.
ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪನೆ – ಕಾಲೇಜ್ ಅಫ್ ಇಂಜಿನಿಯರಿಂಗ್ – ಪುಣೆ
ಸರ್ ಎಂ. ವಿಶ್ವೇಶ್ವರಯ್ಯ ಹಾಸ್ಟೆಲ್ – ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ – ಬನಾರಸ್ ಹಿಂದೂ ಯೂನಿವರ್ಸಿಟಿ (ಏಶ್ಯಾದಲ್ಲೇ ಅತಿ ದೊಡ್ದ ರೆಶಿಡೆನ್ಸಿಯಲ್ ಯೂನಿವರ್ಸಿಟಿ)
ಕರ್ನಾಟಕ ಇಂಡಸ್ಟ್ರಿಯಲ್ ಕೋಪರೇಟಿವ್ ಬ್ಯಾಂಕ್ ಲಿಮಿಟೆಡ್.
ಎನ್. ಐ. ಟಿ. ರೂರ್ಕೆಲಾ – ವಿಶ್ವೇಶ್ವರಯ್ಯ ಸಭಾಂಗಣ
ಚೆನೈನಲ್ಲಿ ಅಣ್ಣಾ ನಗರದ ಬೃಹತ್ ಜಾಗತಿಕ ಮಟ್ಟದ ಉದ್ಯಾನವನಕ್ಕೆ ಅಚ್ಚ ಕನ್ನಡಿಗ ಸರ್ ಎಂ ವಿಶ್ವೇಶ್ವರಯ್ಯ ಅವರ ಹೆಸರಿಡಲಾಗಿದೆ.
ದೆಹಲಿ ಮೋತಿಬಾಗ್ ಮೆಟ್ರೊ ಸ್ಟೇಷನ್ ಗೆ ಸರ್ ಎಂ. ವಿಶ್ವೇಶ್ವರಯ್ಯ ಹೆಸರು 2014ರಲ್ಲಿ ಪುನರ್ ನಾಮಕರಣ ಮಾಡಲಾಗಿದೆ.

ಸರ್ ಎಂ. ವಿ.ಯವರ ಪುಸ್ತಕಗಳು : ’ರಿ ಕನ್ಸ್ಟ್ರಕ್ಷನ್ ಇಂಡಿಯಾ – (1934)
’ಪ್ಲಾನ್ಡ್ ಎಕಾನಮಿ ಫಾರ್ ಇಂಡಿಯಾ.
ತಮ್ಮ 94 ರ ಇಳಿ ವಯಸ್ಸಿನಲ್ಲಿಯೂ ’ಪ್ಲಾನಿಂಗ್ ನ ಬಗ್ಗೆ ಪುಸ್ತಕ ಬರೆಯುತಿದ್ದರು.

Sir M. Vishveshvarayya 3

ಸರ್ ಎಂ. ವಿ. ಯವರಿಗೆ ದೊರೆತ ಗೌರವ, ಪ್ರಶಸ್ತಿಗಳು

1904 – ಗೌರವ ಸದಸ್ಯತ್ವ, ಲಂಡನ್ ಇನ್ಸ್ಟಿಟ್ಯೂಶನ್ ಅಫ್ ಸಿವಿಲ್ ಇಂಜಿನಿಯರ್ಸ್ – 50 ವರ್ಷಗಳ ವರೆಗೆ
1906 – ಕೈಸರ್ – ಇ – ಹಿಂದ್
1911 – ಸಿ. ಐ. ಇ. (ಕಾಂಪನಿಯನ್ ಅಫ್ ದಿ ಇಂಡಿಯನ್ ಏಂಪೈರ್) ದೆಹಲಿ ದರ್ಬಾರ್ ನಲ್ಲಿ
1915 – ಕೆ.ಸಿ. ಐ. ಇ. (ನೈಟ್ ಕಮಾಂಡರ್ ಅಫ್ ದಿ ಆರ್ಡರ್ ಅಫ್ ದಿ ಇಂಡಿಯನ್ ಏಂಪೈರ್)

Sir M. Vishveshwarayya 12.jpg

1921 – ಡಿ. ಎಸ್ ಸಿ – ಕಲ್ಕತಾ ಯೂನಿವರ್ಸಿಟಿ
1931 – ಎಲ್ ಎಲ್ ಡಿ – ಬಾಂಬೆ ಯೂನಿವರ್ಸಿಟಿ
1937 – ಡಿ. ಲಿಟ್. – ಬನಾರಸ್ ಯೂನಿವರ್ಸಿಟಿ
1943 – ಅಜೀವ ಸದಸ್ಯತ್ವ – ಇನಿಸ್ಟಿಟ್ಯೂಶನ್ ಅಫ್ ಇಂಜಿನೀಯರ್ಸ್ – ಭಾರತ
1944 – ಡಿ. ಎಸ್ ಸಿ. – ಅಲಹಾಬಾದ್ ಯೂನಿವರ್ಸಿಟಿ
1948 – ಡಾಕ್ಟರೇಟ್ – ಎಲ್ ಎಲ್ ಡಿ., ಮೈಸೂರು ಯೂನಿವರ್ಸಿಟಿ
1953 – ಡಿ. ಲಿಟ್. – ಆಂದ್ರ ಯೂನಿವರ್ಸಿಟಿ
1955 – ಭಾರತ ರತ್ನ (ಭಾರತದ ಅತ್ಯುನ್ನತ ಗೌರವದ ಪ್ರಶಸ್ತಿ)

 Sir M. Vishveshwarayya 11.jpg

1958 – ದುರ್ಗಾ ಪ್ರಸಾದ್ ಕೈತಾನ್ ಮೆಮೊರಿಯಲ್ ಗೋಲ್ಡ್ ಮೆಡಲ್ – ರಾಯಲ್ ಏಶಿಯಾಟಿಕ್ ಸೊಸೈಟಿ ಕೌನ್ಸಿಲ್, ಬಂಗಾಳ
1959 – ಫೆಲೋಶಿಫ್ – ಇಂಡಿಯನ್ ಇನ್ಸ್ಟಿಟ್ಯೂಟ್ ಅಫ್ ಸೈನ್ಸ್ – ಬೆಂಗಳೂರು

Sir. M.V

ಸರ್ ಎಂ. ವಿ ಯವರ ಶತವರ್ಷ ಜನ್ಮದಿನಾಚರಣೆ – 1960

ಭಾರತ ಭಾಗ್ಯವಿಧಾತ ಸರ್ ಎಂ. ವಿಶ್ವೇಶ್ವರಯ್ಯ ನವರ ಶತ ಜನ್ಮ ದಿನಾಚರಣೆ ಸಮಾರಂಭ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಆಚರಿಸಲಾಯಿತು. ಆಗಿನ ಭಾರತದ ಪ್ರಧಾನ ಮಂತ್ರಿಯಾಗಿದ್ದ ಪಂಡಿತ್ ಜವಾಹರ್ ಲಾಲ್ ನೆಹರೂ ರವರು ವಿಶೇಷ ವಿಮಾನದಲ್ಲಿ ಅಗಮಿಸಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಓಡೆಯರ್ ವಹಿಸಿದ್ದರು. ಅಂದಿನ ಸಮಾರಂಭದ ಸವಿನೆನಪಿಗಾಗಿ ಭಾರತ ಸರ್ಕಾರ ಸರ್ ಎಮ್. ವಿ. ಯವರ ಭಾವ ಚಿತ್ರದ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದರು.

Sir M. Vishveshvarayya 4

ಸರ್ ಎಂ. ವಿ ಯವರು ದಿವಂಗತರಾಗಿದ್ದು ಏಪ್ರಿಲ್ 12, 1962

ದೇಶ ಕಂಡ ಮಾಹಾನ್ ಚೇತನ 102 ವರ್ಷ 6 ತಿಂಗಳು 8 ದಿನ ಬದುಕಿ ದೇಶ ಸೇವೆಯನ್ನು ಮಾಡಿ ಶಿಸ್ತಿನ ಜೀವನ ನಡೆಸಿ ತಮ್ಮ ಕೊನೆಯುಸಿರು ಎಳೆದರು. ಅವರ ಜನ್ಮ ಸ್ಥಳವಾದ ಮುದ್ದೆನ ಹಳ್ಳಿಯಲ್ಲಿ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು, ಆ ಸ್ಥಳದಲ್ಲಿ ಸರ್ ಎಂ. ವಿ. ಯವರ ಸುಂದರವಾದ ಸ್ಮಾರಕ ನಿರ್ಮಿಸಲಾಗಿದೆ.

ಬೆಂಗಳೂರಿನ ವಿಮಾನಯಾನಕ್ಕೆ ಕಾರಣಕರ್ತರಾದ ಸರ್ ಎಂ. ವಿ. ಯವರ ಹೆಸರನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಸರಿಡಲು ಅಸಮ್ಮತಿ ಸೂಚಿಸಿದ ಜನ ನಾಯಕರು ಮತ್ತು ಬೆಂಗಳೂರಿನ ಜನತೆಗೆ ಜೀವ ಜಲ ಕಾವೇರಿಯನ್ನು ನೀಡಿದ ಪುಣ್ಯಾತ್ಮನನ್ನು ಮರೆತಿರುವುದು ದುರ್ದೈವಾಗಿದೆ.

AD Block Sir Visvesvaraya VNIT-2005
AD Block Sir Visvesvaraya VNIT-2005

ಭಾರತದ ಇತಿಹಾಸದ ಪುಟಗಳಲ್ಲಿ ಹಲವಾರು ಮಹಾತ್ಮರ ಹೆಜ್ಜೆ ಗುರುತುಗಳು ಮುಚ್ಚಿಹೋಗಿವೆ. ಸರ್ ಎಂ. ವಿ. ಯವರ ಜನ್ಮ ದಿನದ ಈ ಸುಸಂದರ್ಭದಲ್ಲಿ ಅವರನ್ನು ನೆನಪು ಮಾಡಿಕೊಂಡು ಅವರಿಗೆ ಗೌರವ ಸಲ್ಲಿಸಿ, ಅವರ ಅದರ್ಶಗಳಲ್ಲಿ ಕೆಲವನ್ನಾದರೂ ಪಾಲಿಸಿದರೆ ಭಾರತದಲ್ಲಿ ಜನ್ಮ ಪಡೆದುದಕ್ಕೆ ಸಾರ್ಥಕವಾದೀತು.

ಬಿ. ಕೆ. ಗಣೇಶ್ ರೈ
ಅರಬ್ ಸಂಯುಕ್ತ ಸಂಸ್ಥಾನ


Spread the love