ಕೆಡಿಪಿ ಪ್ರಗತಿ ಪರಿಶೀಲನೆ ಸಭೆ – ಜಿಲ್ಲೆಗೆ 45 ಹೆಚ್ಚುವರಿ ಅಂಗನವಾಡಿ ಕೇಂದ್ರ

Spread the love

ಕೆಡಿಪಿ ಪ್ರಗತಿ ಪರಿಶೀಲನೆ ಸಭೆ – ಜಿಲ್ಲೆಗೆ 45 ಹೆಚ್ಚುವರಿ ಅಂಗನವಾಡಿ ಕೇಂದ್ರ

ಉಡುಪಿ: ಉಡುಪಿ ಜಿಲ್ಲೆಗೆ ಪ್ರಸಕ್ತ ಸಾಲಿನಲ್ಲಿ 45 ಹೆಚ್ಚುವರಿ ಅಂಗನವಾಡಿ ಕೇಂದ್ರಗಳು ಅಕ್ಟೋಬರ್ 2 ರಂದು ಆರಂಭಗೊಳ್ಳಲಿದೆ ಎಂದು ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಹೇಳಿದರು.

ಅವರಿಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್‍ನ ಡಾ ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನ ಸಭೆಗೆ ಮೇಲ್ಕಂಡ ಮಾಹಿತಿ ನೀಡುತ್ತಿದ್ದರು.
ಕುಂದಾಪುರಕ್ಕೆ 25, ಉಡುಪಿಗೆ 13, ಬ್ರಹ್ಮಾವರ 5, ಕಾರ್ಕಳಕ್ಕೆ 2 ಅಂಗನವಾಡಿ ಕೇಂದ್ರಗಳು ಆರಂಭವಾಗಲಿದೆ. ನೂತನ ಅಂಗನವಾಡಿಗಳ ಆರಂಭಕ್ಕೆ ತಕ್ಷಣಕ್ಕೆ ನೂತನ ನೇಮಕಾತಿಗೂ ಮೊದಲು ಪಕ್ಕದ ಅಂಗನವಾಡಿ ಶಿಕ್ಷಕರಿಗೆ ಪ್ರಭಾರ ಹೊಣೆಗಾರಿಕೆ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಈ ಸಂಬಂಧ ಇಲಾಖೆ ಸ್ವೀಕರಿಸಿದ ಅರ್ಜಿಗಳು ಮತ್ತು ನಡೆಸಿದ ಸಮಗ್ರ ಪ್ರಕ್ರಿಯೆ ಮಾಹಿತಿ ನೀಡಲು ಹಾಗೂ ಸಂಬಂದಪಟ್ಟ ಪಂಚಾಯಿತಿ ಸದಸ್ಯರಿಗೆ ಹಾಗೂ ಗ್ರಾಮ ಪಂಚಾಯಿತಿಗಳವರಿಗೆ ಮಾಹಿತಿ ನೀಡುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಸೂಚಿಸಿದರು.

kdp2

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಒಟ್ಟು 241 ಅಂಗನವಾಡಿ ಕಟ್ಟಡಗಳ ಮತ್ತು 15 ಖಾಲಿ ನಿವೇಶನಗಳ ಆರ್ ಟಿ ಸಿ ಪಡೆಯಲಾಗಿದ್ದು 583 ಅಂಗನವಾಡಿ ಕಟ್ಟಡ /ಖಾಲಿ ನಿವೇಶನಗಳ ಆರ್ ಟಿ ಸಿ ಆಗಲು ಬಾಕಿ ಇದ್ದು, ಪ್ರಕ್ರಿಯೆ ಪ್ರಗತಿಯಲ್ಲಿರುವುದಾಗಿ ಉಪನಿರ್ದೇಶಕರಾದ ಗ್ರೇಸಿ ಗೊನ್ಸ್ವಾಲಿಸ್ ಮಾಹಿತಿ ನೀಡಿದರು.

ಶಿಕ್ಷಣ ಇಲಾಖೆಯವರು ಇದೇ ಮಾದರಿಯನ್ನು ಅಳವಡಿಸಿಕೊಳ್ಳಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.

ಅಧಿಕಾರಿಗಳು ಪ್ರತಿ ಸಭೆಯಲ್ಲಿ ಫಾಲೋ ಅಪ್ ಶಬ್ದವನ್ನು ಬಿಟ್ಟು ಕೆಲಸ ಸಂಪೂರ್ಣಗೊಂಡ ಬಗ್ಗೆ ವರದಿ ನೀಡಿ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರು ಸೂಚಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 1,60,284 ಆದ್ಯತಾ ಕುಟುಂಬಗಳಿಗೆ ಆಹಾರ ಹಂಚಿಕೆ ಮಾಡಿದ್ದು, ಈ ತಿಂಗಳ 29 ರವರೆಗೆ ಪಡಿತರ ಕೂಪನ್ ವಿತರಿಸಲಾಗುವುದು ಎಂದು ಇಲಾಖೆ ಉಪನಿರ್ದೇಶಕರು ವಿವರಿಸಿದರು. ಗ್ರಾಹಕರು ಸ್ವತ: ತಾವೇ ಕೂಪನ್ ಪಡೆಯಲು ಆಧಾರ್ ಗೆ ಜೋಡಣೆ ಮಾಡಿರುವ ಮೊಬೈಲ್ ನಿಂದ 161 ಡಯಲ್ ಮಾಡಿ 4 ಪ್ರೆಸ್ ಮಾಡಿ ಸ್ಟಾರ್ ಒತ್ತಿದಲ್ಲಿ ಕೂಪನ್ ಕೋಡ್ ದೊರೆಯಲಿದೆ. ಇದನ್ನು ಪಡಿತರ ಅಂಗಡಿಯಲ್ಲಿ ತೋರಿಸಿದರೆ ರೇಷನ್ ದೊರೆಯಲಿದೆ. ಇ ಕೂಪನ್‍ನಿಂದ ಪಡಿತರ ದೊರೆಯಲಿದೆ. ಅಕ್ಟೋಬರ್ ನಿಂದ 3 ತಿಂಗಳ ಕೂಪನ್ ಒಟ್ಟಿಗೆ ದೊರೆಯಲಿದೆ ಎಂದರು. ಮುಂದಿನ ದಿನಗಳಲ್ಲಿ 6 ತಿಂಗಳ ಕೂಪನ್ ಒಟ್ಟಿಗೆ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ. ಇಲಾಖೆಯು ಕೂಪನ್ ಪಡೆಯುವ ಬಗ್ಗೆ ಬಗ್ಗೆ ಎಲ್ಲ ಪಡಿತರ ಅಂಗಡಿಯ ಮುಂದೆ, ಸಮೂಹ ಮಾಧ್ಯಮಗಳ ಮುಖಾಂತರ, ಮಾಹಿತಿ ಫಲಕಗಳ ಮೂಲಕ ಜನಸಾಮಾನ್ಯರಿಗೆ ಮಾಹಿತಿ ನೀಡಲಾಗುವುದು ಎಂದೂ ಉಪನಿರ್ದೇಶಕರಾದ ಯೋಗೇಶ್ವರ ಹೇಳಿದರು.

ಅರ್ಹ ಕುಟುಂಬಗಳಿಗೆ ಹೊಸ ಕಾರ್ಡುಗಳನ್ನು ನೀಡುವ ಹೊಣೆಗಾರಿಕೆ ಪಂಚಾಯತಿ ಪಿಡಿಒ ಅಥವಾ ಕಾರ್ಯದರ್ಶಿಗಳು ನೀಡಲಾಗಿದೆ. ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಆರೋಗ್ಯ ನಿರೀಕ್ಷಕರಿಗೆ ಈ ಹೊಣೆ ವಹಿಸಲಾಗಿದೆ. ಈ ಸಂಬಂಧ ಸಂಬಂದಪಟ್ಟ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ತರಬೇತಿ ನೀಡಲಾಗುವುದು. ಕಾರ್ಡ್ ಹಂಚಿಕೆಯನ್ನು ಸಕಾಲ ವ್ಯಾಪ್ತಿಗೆ ಸೇರಿಸಲಾಗುವುದು ಈ ಕಾರಣದಿಂದ ಕಾರ್ಡ್ ನೀಡುವಲ್ಲಿ ವಿಳಂಬ ತಪ್ಪಿಸಬಹುದು , ರಿಜಿಸ್ಟರ್ ಪೋಸ್ಟ್‍ನಲ್ಲಿ ಕಾರ್ಡ್ ಮನೆಗೆ ತಲುಪುವುದು ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಬು ಶೆಟ್ಟಿ ಅವರು, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆಯವರು ಸರಿಯಾಗಿ ಕೋರಿದ ಮಾಹಿತಿ ನೀಡಬೇಕೆಂದರು. ಕಿಂಡಿ ಅಣೆಕಟ್ಟುಗಳು ರೈತರ ಕೃಷಿಗೆ ಪೂರಕವಾಗಿರಬೇಕೆಂದು ಒತ್ತಾಯಿಸಿದರು. ಮುಳ್ಳಿಕಟ್ಟೆ ಮೂಲಕ ಆಲೂರು, ನಾಡ , ಗುಡ್ಡೆ ಅಂಗಡಿಗೆ ನೀಡಿರುವ ಬಸ್ ಪರ್ಮಿಟ್‍ಗಳ ಮಾಹಿತಿ ಪಡೆದ ಬಾಬು ಶೆಟ್ಟಿ ಅವರು, ಪರವಾನಿಗೆಗಳನ್ನು ಖುದ್ದು ಇಲಾಖಾ ಇನ್ಸ್‍ಪೆಕ್ಟರ್‍ಗಳು ಪರಿಶೀಲಿಸಿ ವರದಿ ನೀಡಲು ಸೂಚಿಸಿದರು.

ನವೆಂಬರ್ ನಿಂದಲೇ ಹಲಗೆ ಹಾಕಲು ಅರಂಭಿಸುವುದಾಗಿ ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಉತ್ತರಿಸಿದರು.

ವಸತಿ ಯೋಜನೆಯಡಿ ಜಿಲ್ಲೆಯಲ್ಲಿ ನೂತನ ವಸತಿ ಯೋಜನೆಗಳಡಿ %42 ಪ್ರಗತಿ ಸಾಧಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಬ್ರಹ್ಮಾವರ, ಉಡುಪಿ ಸುತ್ತಮುತ್ತ ಇಲಿಜ್ವರ ಪ್ರಕರಣದ ಸಮಗ್ರ ಮಾಹಿತಿ ನೀಡುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಡಿಎಚ್‍ಒ ಅವರಿಗೆ ಸೂಚಿಸಿದರು.

ಜಿಲ್ಲೆಯಿಂದ ದಸರಾ ವಸ್ತುಪ್ರದರ್ಶನ ಮಳಿಗೆ ನಿರ್ವಹಣೆಗೆ ಪ್ರತಿಯೊಂದು ಇಲಾಖೆಗೂ ಹೊಣೆ ವಹಿಸಲಾಗಿದ್ದು, ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿ ಎಂದು ಸಿಇಒ ಅವರು ಅಧಿಕಾರಿಗಳಿಗೆ ಆದೇಶಿಸಿದರು. ಬೇಸಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಲು ಈಗಲೇ ಕ್ರಿಯಾ ಯೋಜನೆ ರೂಪಿಸಿ ಕಳುಹಿಸಿ, ವಸತಿ ಯೋಜನೆಗೆ ಮರಳು ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಅಗತ್ಯ ಮರಳಿನ ಬೇಡಿಕೆ ಪಟ್ಟಿ ಸಿದ್ದಪಡಿಸಿ ಎಂದೂ ಸಿಇಒ ಹೇಳಿದರು.

ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ ಪಡುಬಿದ್ರೆ ಮಾತನಾಡಿ, ಆನ್‍ಲೈನ್ ಸ್ಕಾಲರ್‍ಷಿಪ್ ನಮೂದಿಸುವಿಕೆಗೆ ತೊಂದರೆಯಾಗುತ್ತಿದೆ ಎಂದು ಬಿಸಿಎಂ ಅಧಿಕಾರಿಗಳ ಗಮನಕ್ಕೆ ತಂದರು. ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್ ಉಪಸ್ಥಿತರಿದ್ದರು. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಸ್ವಾಗತಿಸಿ, ಸಭೆಯನ್ನು ನಡೆಸಿಕೊಟ್ಟರು.


Spread the love