ಗಂಡನ ಆತ್ಮಹತ್ಯೆ : ಹೆಂಡತಿ, ಪ್ರಿಯಕರನಿಗೆ ಕಠಿಣ ಸಜೆ ವಿಧಿಸಿದ ನ್ಯಾಯಾಲಯ

Spread the love

ಗಂಡನ ಆತ್ಮಹತ್ಯೆ : ಹೆಂಡತಿ, ಪ್ರಿಯಕರನಿಗೆ ಕಠಿಣ ಸಜೆ ವಿಧಿಸಿದ ನ್ಯಾಯಾಲಯ

ಮಂಗಳೂರು: ಗಂಡನಿಗೆ ಮೋಸ ಮಾಡಿದ ಪರಿಣಾಮ ಮನನೊಂದು ಗಂಡ ಆತ್ಮಹತ್ಯೆ ಮಾಡಿದ ಪ್ರಕರಣವೊಂದರಲ್ಲಿ ಹೆಂಡತಿಗೆ ತಲಾ 5 ವರ್ಷಗಳ ಕಠಿಣ ಸಜೆ ಹಾಗೂ ತಲಾ 10 ಸಾವಿರ ರೂ ಗಳ ದಂಡ ಶಿಕ್ಷೆಯನ್ನು ವಿಧಿಸಿ ಮಂಗಳೂರಿನ ಒಂದನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದೆ.

ಬೆಳ್ತಂಗಡಿಯ ಕನ್ಯಾಡಿಯ ರೂಪಾವತಿ (34) ಮತ್ತು ಈಕೆಯ ಪ್ರಿಯಕರ ಬೆಳ್ತಂಗಡಿ ಕಾಣಿಯೂರು ಗ್ರಾಮದ ಪದ್ಮುಂಜ ಕೆದಿಲ ನಿವಾಸಿ ದಿನೇಶ್ ಗೌಡ (32) ಶಿಕ್ಷೆಗೊಳಗಾಳಗಾದ ಆರೋಪಿಗಳು.

ಸದಾಶಿವ ಗೌಡ ಮತ್ತು ದಿನೇಶ್ ಗೌಡ ಆತ್ಮೀಯ ಸ್ನೇಹಿತರಾಗಿದ್ದು, ಗದಗ್ ನಲ್ಲಿ ಪಾಲುದಾರಿಕೆಯಲ್ಲಿ ಹೋಟೆಲ್ ವ್ಯಾಪಾರ ಆರಂಬಿಸದ್ದರು. 2005 ಅಗಸ್ಟ್ 22 ರಂದು ಸದಾಶಿವ ಗೌಡರ ಮದುವೆ ರೂಪಾವತಿ ಎಂಬಾಕೆಯ ಜೊತೆ ನಡೆದಿತ್ತು. ರೂಪಾವತಿಯ ಮೇಲೆ ಕಣ್ಣಿಟ್ಟಿದ್ದ ದಿನೇಶ್ ಗೌಡ ಅಂತಿಮವಾಗಿ ಆಕೆಯ ಸಖ್ಯ ಬೆಳೆಸಿದ್ದ, ವಿಷಯ ಸದಾಶಿವ ಗೌಡರಿಗೆ ಗೊತ್ತಾಗಿ ಸಾಕಷ್ಟು ಬುದ್ದಿವಾದ ಹೇಳಿದ್ದರು. ಆದರೆ ಅದು ಫಲಕಾರಿಯಾಗದ ಕಾರಣ 2011 ರ ಮಾರ್ಚ್ 15 ರಂದು ಸದಾಶಿವ ಗೌಡ ಪತ್ರ ಬರೆದಿಟ್ಟು ವಿಷ ಸೇವನೆ ಮಾಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 16 ರಂದು ಮೃತಪಟ್ಟಿದ್ದರು.

ಈ ಬಗ್ಗೆ ಸದಾಶಿವ ಅವರ ಸಹೋದರ ಶ್ರೀನಿವಾಸ್ ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಅಂದಿನ ಸಬ್ ಇನ್ಸ್ ಪೆಕ್ಟರ್ ಎಂ ಆರ್ ಎಂ ತಹಶೀಲ್ದಾರ್ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಲಾಯಕ್ಕೆ ಸಲ್ಲಿಸಿದ್ದರು.
ವಿಚಾರಣೆಯನ್ನು ಕೈಗೆತ್ತಿಕೊಂಡ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸಿ ಎಂ ಜೋಶಿ ಅವರು ವಾದ-ಪ್ರತಿವಾದವನ್ನು ಆಲಿಸಿ ಆರೋಪ ಸಾಬೀತಾಗಿದೆ ಎಂಬ ತೀರ್ಮಾನಕ್ಕೆ ಬಂದು ಇಬ್ಬರು ಆರೋಪಿಗಳಿಗೆ ತಲಾ 5 ವರ್ಷಗಳ ಕಠಿಣ ಸಜೆ ಹಾಗೂ ತಲಾ 10 ಸಾವಿರ ರೂಗಳ ದಂಡ ಮತ್ತು ದಂಡ ತೆರಲು ತಪ್ಪಿದರೆ ಮತ್ತೆ 6 ತಿಂಗಳ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ದಂಡದ ಮೊತ್ತದಲ್ಲ ರೂ 15 ಸಾವಿರ ರೂ ಗಳನ್ನು ಮೃತ ಸದಾಶಿವ ಗೌಡರ ತಾಯಿಗೆ ನೀಡಬೇಕು ಮತ್ತು ಮೃತ ಸದಾಶಿವ ಗೌಡ ಅವರ ಅಪ್ರಾಪ್ತ ಪುತ್ರನಿಗೆ ಸೂಕ್ತ ಪುನರ್ವಸತಿ ವ್ಯವಸ್ಥೆ ಮಾಡುವಂತೆ ನ್ಯಾಯಾಧೀಶರು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇದರ ಹೊರತಾಗಿ ಸದಾಶಿವ ಗೌಡರ ತಾಯಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ಪರಿಹಾರ ಪಡೆಯಲು ಅವಕಾಶವಿದೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ಪರವಾಗಿ ಒಟ್ಟು 15 ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದು ಪಬ್ಲಿಕ್ ಪ್ರಾಸಿಕ್ಯೂಟರ್ ರಾಜು ಪೂಜಾರಿ ಬನ್ನಾಡಿ ವಾದ ಮಂಡಿಸಿದ್ದರು.


Spread the love