ಜಯಶ್ರೀಗೇಟ್ ಮಹಿಳೆಯ ಸರಗಳ್ಳತನ ಆರೋಪಿಯ ಬಂಧನ

Spread the love

ಜಯಶ್ರೀಗೇಟ್ ಮಹಿಳೆಯ ಸರಗಳ್ಳತನ ಆರೋಪಿಯ ಬಂಧನ

ಮಂಗಳೂರು: ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬಿಕರ್ನಕಟ್ಟೆ ಜಯಶ್ರೀ ಗೇಟ್ ಬಳಿಯಲ್ಲಿ ನಡೆದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಧಿಸಿ ಚಿನ್ನದ ಸರ ಹಾಗೂ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಬಂಧಿತನನ್ನು ಕಾರ್ಕಳ ಇರ್ವತ್ತೂರಿನ ಜೀವನ್ ಪೂಜಾರಿ (33) ಎಂದು ಗುರುತಿಸಲಾಗಿದೆ.

ಮಾರ್ಚ್ 29 ರಂದು ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಆಡುಮರೋಳಿ ದೇವಸ್ಥಾನಕ್ಕೆ ಹೋಗಿ ವಾಪಾಸು ಬಿಕರ್ನಕಟ್ಟೆ ಜಯಶ್ರೀ ಗೇಟ್ ಕಡೆಗೆ ರಾತ್ರಿ ಸುಮಾರು 9-00 ಗಂಟೆಗೆ ತನ್ನ ಪೂರ್ಣಿಮಾ ರವರು ಮನೆಯವರ ಜೊತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಓರ್ವ ಯುವಕನು ಆತನು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನವನ್ನು ಚಾಲನೆ ಸ್ಥಿತಿಯಲ್ಲಿಟ್ಟು ಫಿರ್ಯಾದಿದಾರರ ಅಜ್ಜಿ ಅಪ್ಪಿ ರವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬಲತ್ಕಾರದಿಂದ ಸುಲಿಗೆ ಮಾಡಿ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದನು. ಈ ಬಗ್ಗೆ ಪೂರ್ಣಿಮಾ ರವರು ನೀಡಿದ ದೂರಿನಂತೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿತ್ತು.

ಜನವರಿ 4 ರಂದು ಮದ್ಯಾಹ್ನ ಮಂಗಳೂರು ನಗರದ ಹಳೆ ಬಸ್ ನಿಲ್ದಾಣದ ಪರಿಸರದಲ್ಲಿ ಓರ್ವ ವ್ಯಕ್ತಿಯು ಬಿಳಿ ಹಾಗೂ ನೀಲಿ ಬಣ್ಣದ ಯಮಹಾ ಎಫ್ ಝೆಡ್ ಬೈಕ್ ನಲ್ಲಿ ಚಿನ್ನದ ಸರವೊಂದನ್ನು ಮಾರಾಟ ಮಾಡಲು ತಿರುಗಾಡುತ್ತಿದ್ದಾನೆಂಬ ಬಗ್ಗೆ ಮಾಹಿತಿ ಬಂದಂತೆ ಸಿಸಿಬಿ ಪೊಲೀಸರು ಅನುಮಾನಸ್ಪದ ರೀತಿಯಲ್ಲಿದ್ದ ಹಾಗೂ ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಜೀವನ್ ಪೂಜಾರಿ ಎಂಬಾತನನ್ನು ವಶಕ್ಕೆ ಪಡೆದುಕೊಂಡು ಆತನ ವಶದಿಂದ ಸುಮಾರು 18 ಗ್ರಾಂ ತೂಕದ ಚಿನ್ನದ ಸರ, ಮೊಬೈಲ್ ಫೋನ್ ನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಚಿನ್ನಾಭರಣ ಮೌಲ್ಯ ರೂ. 58,000/- ಆಗಿರುತ್ತದೆ. ಈ ಚಿನ್ನಾಭರಣ ಹಾಗೂ ಈತನ ವಶದಲ್ಲಿದ್ದ ಕಳವು ಗೈದ ಯಮಹಾ ಬೈಕ್, ಹೊಂಡಾ ಅಕ್ಟಿವಾ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನಗಳನ್ನು ಈ ಹಿಂದೆ ಸರಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಮಂಗಳೂರು ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮೊಹಮ್ಮದ್ ರಫೀಕ್ ಎಂಬಾತನು ತನ್ನ ಸಹಚರರ ಮೂಲಕ ಸುಲಿಗೆ ಹಾಗೂ ಕಳವು ಮಾಡಿಸಿ ಈತನಿಗೆ ಮಾರಾಟ ಮಾಡಲು ನೀಡಿರುವುದಾಗಿದೆ. ಈತನಿಂದ ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 1,64,000/- ಆಗಿರುತ್ತದೆ.
ಈತನ ವಿರುದ್ಧ ಈ ಹಿಂದೆ, ಕಾರ್ಕಳ ನಗರ, ಮೂಡಬಿದ್ರಿ, ಬಜಪೆ, ಉಳ್ಳಾಲ, ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪೊಲೀಸ್ ಠಾಣೆಗಳಲ್ಲಿ ಒಟ್ಟು 16 ಪ್ರಕರಣ ದಾಖಲಾಗಿತ್ತು. ಈತನು ಈಗ ಸುಮಾರು 4 ತಿಂಗಳ ಹಿಂದೆ ಜೈಲ್ ನಿಂದ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನು. ಆರೋಪಿಯನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ.
ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯಕ್ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.


Spread the love