ನೇತ್ರಾವತಿ ನದಿ ತೀರದಲ್ಲಿ ಕಣ್ಣೂರು ವರೆಗೆ ಹೆದ್ದಾರಿ ನಿರ್ಮಾಣ : ಶಾಸಕ ಜೆ.ಆರ್.ಲೋಬೊ

Spread the love

ನೇತ್ರಾವತಿ ನದಿ ತೀರದಲ್ಲಿ ಕಣ್ಣೂರು ವರೆಗೆ ಹೆದ್ದಾರಿ ನಿರ್ಮಾಣ : ಶಾಸಕ ಜೆ.ಆರ್.ಲೋಬೊ

ಮಂಗಳೂರು:  ನೇತ್ರಾವತಿ ನದಿತೀರದಿಂದ ಕಣ್ಣೂರು ಮಸೀದಿ ವರೆಗೆ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಪರ್ಯಾಯ ಹೆದ್ದಾರಿ ನಿರ್ಮಾಣಕ್ಕೆ ಶಾಸಕ ಜೆ.ಆರ್.ಲೋಬೊ ಅವರು ಇಂದು ಖುದ್ದು ದೋಣಿಯಲ್ಲಿ ಕುಳಿತು ತಾವೇ ಸ್ವತ: ಸರ್ವೇ ನಡೆಸಿದರು.

ಬೆಳಿಗ್ಗೆ 9 ಗಂಟೆಗೆ ದೋಣಿಯಲ್ಲಿ ಕುಳಿತ ಲೋಬೊ ಅವರು 12 ಗಂಟೆಗೆ ಪುನ: ನೇತ್ರಾವತಿ ನದಿ ತೀರಕ್ಕೆ ಬಂದಿಳಿದರು. ಸುದೀರ್ಘ ಮೂರು ಗಂಟೆಗೆಳ ಕಾಲ ವಿಹಾರ ನಡೆಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿ ಇದು 50 ಮೀಟರ್ ಅಗಲದ ನಾಲ್ಕು ಪಥ ರಸ್ತೆಯಾಗಲಿದ್ದು ಪ್ರವಾಸೋದ್ಯಮಕ್ಕೆ ವಿಶೇಷ ಕೊಡುಗೆಯಾಗಲಿದೆ ಎಂದರು.

ಮೊದಲು ಇಲ್ಲಿ ಸರ್ವೇ ಮಾಡಬೇಕು. ಇಲ್ಲಿ ಸರ್ಕಾರಿ ಭೂಮಿ ಎಷ್ಟದೆ ಮತ್ತು ಎಷ್ಟು ಭೂಮಿಯನ್ನು ನದಿ ಆವರಿಸಿದೆ ?. ಇದರಲ್ಲಿ ಖಾಸಗಿ ಭೂಮಿ ಎಷ್ಟು ಅಗತ್ಯವಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಿದರು.

ಈ ರಸ್ತೆಯನ್ನು ನಿರ್ಮಾಣ ಮಾಡಲು ಯಾವುದೇ ಮನೆಗಳನ್ನು ತೆರವು ಮಾಡುವುದಿಲ್ಲ. ಮನೆಗಳನ್ನು ತೆರಲು ಮಾಡದೆ ಯಾವ ರೀತಿಯಲ್ಲಿ ರಸ್ತೆ ನಿರ್ಮಿಸಲು ಸಾಧ್ಯವೆಂದು ಸರ್ವೇ ಮಾಡಬೇಕು. ಸಾಧ್ಯವಿದ್ದಷ್ಟು ನದಿಯಲ್ಲಿ ಸೇರಿಕೊಂಡಿರುವ ಭೂಮಿಯನ್ನೇ ಬಳಸಿಕೊಂಡು ರಸ್ತೆ ನಿರ್ಮಿಸಲು ಪ್ರಯತ್ನಿಸುವಂತೆಯೂ ಅಧಿಕಾರಿಗಳಿಗೆ ಶಾಸಕ ಜೆ.ಆರ್.ಲೋಬೊ ಸೂಚಿಸಿದರು.

ಇಲ್ಲಿ ರಸ್ತೆ ನಿರ್ಮಾಣವಾದರೆ ಜನರಿಗೆ ಸಂಪರ್ಕ ಸಾಧಿಸಲು ಮತ್ತು ಕೇರಳ- ಕರ್ನಾಟಕದ ಬೆಂಗಳೂರು ಹೆದ್ದಾರಿಯನ್ನು ಜೋಡಿಸಲು ನೆರವಾಗುತ್ತದೆ. ತೀರಾ ಅಗತ್ಯವಾದರೆ ಮಾತ್ರ ಒಂದಷ್ಟು ಭೂಮಿಯನ್ನು ಖಾಸಗಿಯವರಿಂದ ಪಡೆದುಕೊಳ್ಳಲಾಗುವುದು ಎಂದರು.

ಸರ್ವೇ ಕಾರ್ಯಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂಪಾಯಿ ನೀಡಿದ್ದು ಇದರ ಮೂಲಕ ಅಂದಾಜನ್ನು ಮಾಡುವಂತೆಯೂ ತಿಳಿಸಿದ ಅವರು ಹೆದ್ದಾರಿ ಇಲಾಖೆ, ಲೋಕೋಪಯೋಗಿ ಇಲಾಖೆಗಳು, ಮಹಾನಗರ ಪಾಲಿಕೆ ಮತ್ತು ಕಂದಾಯ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡುವಂತೆಯೂ ಹೇಳಿದರು.

ಈ ಸರ್ವೇ ಕೆಲಸನ್ನು ಕನಿಷ್ಟ 2 ವಾರಗಳಲ್ಲಿ ಪೂರ್ಣಗೊಳಿಸಿ ತಮಗೆ ಸಲ್ಲಿಸುವಂತೆ ತಿಳಿಸಿದ ಅವರು ಆದಷ್ಟು ಶೀಘ್ರವಾಗಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಹೇಳಿದರು.

ನದಿಯುದ್ದಕ್ಕೂ ತೀರದಲ್ಲಿ ನಿಂತು ಶಾಸಕರನ್ನು ಸ್ವಾಗತಿಸಿದ ಜನರನ್ನುದ್ದೇಶಿಸಿ ಮಾತನಾಡಿದ ಶಾಸಕ ಜೆ.ಆರ್.ಲೋಬೊ ಇದು ಮಹತ್ವಾಕಾಂಕ್ಷಿ ಯೋಜನೆಯಾಗಲಿದ್ದು ಸಾರ್ವಜನಿಕರು ಸರ್ವೇ ಕೆಲಸಕ್ಕೆ ಅಧಿಕಾರಿಗಳಿಗೆ ಸಹಕರಿಸುವಂತೆ ಕೇಳಿದರು.

ಈ ಯೋಜನೆಯಿಂದ ಜನರಿಗೆ ಯಾವುದೇ ರೀತಿಯಲ್ಲು ತೊಂದರೆಯಾಗದು. ಪ್ರವಾಸೋಧ್ಯಮದ ಅಭಿವೃದ್ಧಿಯ ಜೊತೆಗೆ ಈ ಯೋಜನೆಯಿಂದ ಇನ್ನಷ್ಟು ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.

ಶಾಸಕರ ಜೊತೆಯಲ್ಲಿ ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ, ಅಶ್ರಫ್ ಬಜಾಲ್,  ಪಿಡ್ಲ್ಯುಡಿ ಸುಪರಿಂಟೆಂಡೆಂಟ್ ಇಂಜಿನಿಯರ್ ಕಾಂತಾರಾಜ್, ರಾಷ್ಟ್ರೀಯ ಹೆದ್ದಾರಿಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಅಬ್ದುಲ್ ರಹಿಮಾನ್, ಮಹಾನಗರಪಾಲಿಕೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಲಿಂಗೇಗೌಡ, ಗಣಪತಿ, ಗ್ರಾಮ ಲೆಕ್ಕಾಧಿಕಾರಿ ಹರೀಶ್, ಡೆನ್ಸಿಲ್,  ಕ್ಯಾನಿಟ್ ಡಿಸೋಜಾ,ಸ್ಟ್ಟಾನ್ಲಿ ಅಲ್ವಾರಿಸ್, ಕೃತಿನ್ ಕುಮಾರ್, ಜೀವನ್, ವಾಲ್ಟರ್ ಲೋಬೊ, ರಫಿಕ್ ಕಣ್ಣೂರು, ಹಮೀದ್ ಕಣ್ಣೂರ್ ಮುಂತಾದವರಿದ್ದರು.


Spread the love