ಪಟಾಕಿ ಸಿಡಿಸಿದವರಿಂದಲೇ ರಸ್ತೆಯನ್ನು ಶುಚಿಗೊಳಿಸಿದ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ

Spread the love

ಪಟಾಕಿ ಸಿಡಿಸಿದವರಿಂದಲೇ ರಸ್ತೆಯನ್ನು ಶುಚಿಗೊಳಿಸಿದ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ

ಚಿಕ್ಕಮಗಳೂರು: ಸ್ವಚ್ಚತೆಯ ಬಗ್ಗೆ ಕೇವಲ ಭಾಷಣಗಳನ್ನು ಬೀಗಿದರೆ ಸಾಲದು ಅದರ ಬಗ್ಗೆ ನಿಜವಾದ ಅರಿವು ಮೂಡಿಸಬೇಕಾದದ್ದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಸ್ವಚ್ಚ ಭಾರತ ಕನಸಿಗೆ ಆಗ ಮಾತ್ರ ಸ್ವಲ್ಪವಾದರೂ ಕಾಣಿಕ ನೀಡಿದಂತಾಗುತ್ತದೆ.

ಅದಕ್ಕೆ ತಾಜಾ ಉದಾಹರಣೆ ಎಂಬಂತೆ ಚಲನಚಿತ್ರವೊಂದರ ಪ್ರದರ್ಶನ ಪ್ರಯುಕ್ತ ಪಟಾಕಿ ಸಿಡಿಸಿದ ಅಭಿಮಾನಿಗಳು ಬಳಿಕ ಕಸವನ್ನು ಅಲ್ಲಿಯೇ ಬಿಟ್ಟು ಹೋಗುತ್ತಿರುವುದನ್ನು ಗಮನಿಸಿದ ಚಿಕ್ಕಮಗಳೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ ಅಣ್ಣಾಮಲೈ ಅವರು  ರಸ್ತೆಯಲ್ಲಿ ಪಟಾಕಿ ಸಿಡಿಸಿದವರಿಂದಲೇ ರಸ್ತೆ ಸ್ವಚ್ಛ ಗೊಳಿಸಿದ  ಪ್ರಸಂಗ  ನಗರದಲ್ಲಿ ನಡೆಯಿತು.

ಜಿಲ್ಲಾ ಒಕ್ಕಲಿಗರ ಸಂಘದ ಶಾಲೆಯಲ್ಲಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಎಸ್‌.ಪಿ. ಅಣ್ಣಾಮಲೈ ತೆರಳುತ್ತಿದ್ದಾಗ ಐ.ಜಿ.ರಸ್ತೆಯಲ್ಲಿರುವ ನಾಗಲಕ್ಷ್ಮೀ ಚಿತ್ರಮಂದಿರದಲ್ಲಿ “ಲೀ’ ಕನ್ನಡ ಚಲನಚಿತ್ರ ಪ್ರದರ್ಶನ ನಡೆಯುತ್ತಿತ್ತು. ಅಭಿಮಾನಿಗಳು ಚಿತ್ರಮಂದಿರದ ಎದುರು ಪಟಾಕಿ ಸಿಡಿಸುತ್ತಿದ್ದರು.

ಇದನ್ನು ಗಮನಿಸಿದ ಅಣ್ಣಾಮಲೈ ತಮ್ಮ ವಾಹನ ನಿಲ್ಲಿಸಿ ಸ್ಥಳಕ್ಕೆ ತೆರಳಿದರು. ಪಟಾಕಿ ಸಿಡಿಸಲು ಅನುಮತಿ ನೀಡಿದ್ದು ಯಾರು? ಪಟಾಕಿ ಸಿಡಿಸಿ ನೀವು ಹೋಗುತ್ತೀರ, ರಸ್ತೆ ಸ್ವಚ್ಛ ಗೊಳಿಸುವವರು ಯಾರು ಎಂದು ಪ್ರಶ್ನಿಸಿದರು. ಅಭಿಮಾನಿಗಳು ನಾವು ಪಟಾಕಿ ಸಿಡಿಸಿಲ್ಲ ಎಂಬ ಸಮರ್ಥನೆಗೆ ಮುಂದಾದಾಗ ಅಸಮಾಧಾನ ವ್ಯಕ್ತಪಡಿಸಿದ ಅಣ್ಣಾಮಲೈ, ಸ್ಥಳದಲ್ಲಿದ್ದ ಸಂಚಾರಿ ಪೊಲೀಸರನ್ನು ಕರೆದು ಇವರನ್ನು ಠಾಣೆಗೆ ಕರೆದೊಯ್ಯಿರಿ ಎಂದು ಸೂಚಿಸಿದರು. ಆ ನಂತರ ಲೀ ಚಿತ್ರದ ಪೋಸ್ಟರ್‌ಗಳಿರುವ ಟೀ ಶರ್ಟ್‌ ಧರಿಸಿದ್ದವರನ್ನು ಕರೆದು ಕೂಡಲೇ ರಸ್ತೆ ಸ್ವಚ್ಛಗೊಳಿಸುವಂತೆ ಆದೇಶಿಸಿದರು. ಆ ನಂತರ ಅಭಿಮಾನಿಗಳು ರಸ್ತೆಯನ್ನು ಸ್ವಚ್ಛಗೊಳಿಸಿದರು.

ಅಣ್ಣಾಮಲೈ ಅವರ ಕಾರ್ಯ ನೆರೆದ ಸಾರ್ವಜನಿಕರಿಗೆ ಒರ್ವ ಅಧಿಕಾರಿಯ ಸ್ವಚ್ಚತೆಯ ಬಗೆಗಿನ ಕಾಳಜಿಯನ್ನು ಎತ್ತಿ ತೋರಿಸಿತು.


Spread the love