ಪರೇಶ್ ಮೇಸ್ತ ಸಾವು: ನ್ಯಾಯಕ್ಕಾಗಿ ಆಗ್ರಹಿಸಿ ಬಿಜೆಪಿ, ಹಿಂದೂ ಸಂಘಟನೆಗಳ ಪ್ರತಿಭಟನೆ;  ಐಜಿಪಿ ಕಾರಿಗೆ ಬೆಂಕಿ

Spread the love

ಪರೇಶ್ ಮೇಸ್ತ ಸಾವು: ನ್ಯಾಯಕ್ಕಾಗಿ ಆಗ್ರಹಿಸಿ ಬಿಜೆಪಿ, ಹಿಂದೂ ಸಂಘಟನೆಗಳ ಪ್ರತಿಭಟನೆ;  ಐಜಿಪಿ ಕಾರಿಗೆ ಬೆಂಕಿ

ಕುಮಟಾ: ಹೊನ್ನಾವರದ ಹಿಂದೂ ಸಂಘಟನೆಯ ಕಾರ್ಯಕರ್ತ ಪರೇಶ್ ಮೇಸ್ತಾ ಸಾವು ಪ್ರಕರಣವನ್ನು ಖಂಡಿಸಿ ಬಿಜೆಪಿ ಹಾಗೂ ಸಂಘಪರಿವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ರ್ಯಾಲಿ ಕುಮಟಾ ಪಟ್ಟಣ ಉದ್ವಿಘ್ನಗೊಂಡಿದೆ ಎನ್ನಲಾಗಿದೆ.

ಸ್ವಯಂ ಪ್ರೇರಿತ ಬಂದ್‌ಗೆ ಬಿಜೆಪಿ ಕರೆ ನೀಡಿದ್ದ ಹಿನ್ನೆಲೆಯಲ್ಲಿ ನಗರದ ಬಹುತೇಕ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿವೆ. ಸಾರಿಗೆ ಸಂಚಾರವನ್ನೂ ಬಲವಂತವಾಗಿ ಸ್ಥಗಿತಗೊಳಿಸಲಾಗಿದೆ. ಆದರೆ, ಶಾಲೆ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.

ಇದೇ ವೇಳೆ ಕೆಲವೊಂದು ಕಿಡಿಗೇಡಿಗಳೂ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು ಕೂಡಲೇ ಕಾರ್ಯಪ್ರವೃತ್ತಾರದ ಪೋಲಿಸರು ಪ್ರತಿಭಟನಾಕಾರರ ವಿರುದ್ದ ಲಾಠಿ ಚಾರ್ಚ್ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿದ್ದು ಪ್ರತಿಭಟನಾಕಾರರು ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರ ನಡುವೆ ಕುಮಟಾದ ಮಾಸ್ತಿಕಟ್ಟೆ ರಸ್ತೆ ಬಳಿ ನಿಂತಿದ್ದ ಪಶ್ಚಿಮ ವಲಯ ಐ.ಜಿ.ಪಿ ಹೇಮಂತ್ ನಿಂಬಾಳ್ಕರ್ ಅವರ ವಾಹನಕ್ಕೆ ಉದ್ರಿಕ್ತ ಗುಂಪು ಬೆಂಕಿ ಹಚ್ಚಿ ಕಲ್ಲು ತೂರಾಟ ನೆಡೆಸಿದೆ. ಈ ಸಂದರ್ಭದಲ್ಲಿ ಪೇದೆಯೊಬ್ಬರಿಗೆ ತೀವ್ರ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

ಉದ್ರಿಕ್ತ ಗುಂಪನ್ನು ಚದುರಿಸಲು ಅಶೃವಾಯು ಸಿಡಿಸಿ ಲಘು ಲಾಟಿ ಚಾರ್ಜ್ ಮಾಡಲಾಯ್ತು. ನಗರಾದ್ಯಾಂತ 144 ಸೆಕ್ಷನ್ ಜಾರಿ ಮಾಡಿದ್ದು 2000 ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಐದು ದಿನದ ಹಿಂದೆ ಎರಡು ಕೋಮುಗಳ ನಡುವೆ ನಡೆದ ಗಲಾಟೆ ವೇಳೆ ಪರೇಶ್ ಮೇಸ್ತಾ(21) ಎಂಬ ಯುವಕ ನಾಪತ್ತೆಯಾಗಿದ್ದ. ನಂತರ ಹೊನ್ನಾವರ ಕೆರೆಯಲ್ಲಿ ಯುವಕ ಶವವಾಗಿ ಪತ್ತೆಯಾಗಿದ್ದ. ಈ ಹಿನ್ನೆಲೆಯಲ್ಲಿ ಪರೇಶ್ ಸಾವಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಇಂದು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಬಂದ್‍ಗೆ ಕರೆ ನೀಡಿದ್ದವು.


Spread the love