ಬೀದಿಬದಿ ವ್ಯಾಪಾರಸ್ಥರಿಂದ ಮನಪಾ ಕಚೇರಿಯೆದುರು ಧರಣಿ ಸತ್ಯಾಗ್ರಹ

Spread the love

ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಬೀದಿಬದಿ ವ್ಯಾಪಾರಸ್ಥರಿಂದ ಮನಪಾ ಕಚೇರಿಯೆದುರು ಧರಣಿ ಸತ್ಯಾಗ್ರಹ

ಮಂಗಳೂರು: ಈಗಾಗಲೇ ನೀಡಿರುವ 208 ಮಂದಿಯ ಗುರುತುಚೀಟಿ ನವೀಕರಣಕ್ಕಾಗಿ, ಬಾಕಿ ಉಳಿದ 350 ಮಂದಿಯ ಗುರುತುಚೀಟಿ ಕೂಡಲೇ ನೀಡಲು ಒತ್ತಾಯಿಸಿ, ಪರ್ಯಾಯ ವ್ಯವಸ್ಥೆಗಾಗಿ ಆಗ್ರಹಿಸಿ, TVC ಸಮಿತಿ ಸಭೆಯನ್ನು ಕೂಡಲೇ ಕರೆಯಬೇಕೆಂದು ಒತ್ತಾಯಿಸಿ, ವಿನಾಃ ಕಾರಣ ನಡೆಸುತ್ತಿರುವ ದಾಳಿಯನ್ನು ಖಂಡಿಸಿ, ಬೀದಿಬದಿ ವ್ಯಾಪಾರಸ್ಥರು ಸಿಐಟಿಯು ನೇತೃತ್ವದಲ್ಲಿ ನಗರದಲ್ಲಿಂದು (28-07-2016) ಮಂಗಳೂರು ಮಹಾನಗರ ಪಾಲಿಕೆ ಕಚೇರಿಯೆದುರು ಧರಣಿ ಸತ್ಯಾಗ್ರಹ ನಡೆಸಿದರು.

600ಕ್ಕೂ ಮಿಕ್ಕಿದ ಬೀದಿಬದಿ ವ್ಯಾಪಾರಸ್ಥರು ನಗರದ ಪಿವಿಎಸ್ ಜಂಕ್ಷನ್‍ನಿಂದ ಮೆರವಣಿಗೆಯಲ್ಲಿ ಹೊರಟು, “ಬಾಕಿ ಉಳಿದ ಗುರುತು ಚೀಟಿಯನ್ನು ಕೂಡಲೇ ನೀಡಿರಿ. ಈ ಹಿಂದೆ ನೀಡಿದ ಗುರುತುಚೀಟಿಯ ನವೀಕರಣ ಆಗಲೇಬೇಕು, ಪರ್ಯಾಯ ವ್ಯವಸ್ಥೆ ಆಗಲೇಬೇಕು.” ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತ ಲಾಲ್‍ಬಾಗ್‍ನಲ್ಲಿರುವ ಮನಪಾ ಕಚೇರಿಯತ್ತ ಸಾಗಿದರು.

image001citu-protest-20160728-001 image003citu-protest-20160728-003 image004citu-protest-20160728-004 image008citu-protest-20160728-008 image011citu-protest-20160728-011

ಮನಪಾ ಕಚೇರಿಯೆದುರು ನಡೆದ ಧರಣಿ ಸತ್ಯಾಗ್ರಹವನ್ನು ಸಿಐಟಿಯು ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿಯವರು ಉದ್ಘಾಟಿಸುತ್ತಾ, ಬೀದಿಬಿದಿ ವ್ಯಾಪಾರಸ್ಥರ ಉತ್ತಮ ಬದುಕಿಗಾಗಿ ಮಸೂದೆಯೊಂದು ದೇಶದ ಸಂಸತ್ತಿನಲ್ಲಿ ಅಂಗೀಕಾರಗೊಂಡರೂ ಅದನ್ನು ಯಥಾವತ್ತಾಗಿ ಜಾರಿಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಿಂದೇಟು ಹಾಕುತ್ತಿದೆ. ಕಾರ್ಮಿಕ ವರ್ಗದ ಹಿತ ಕಾಯಬೇಕಾದ ಇವೆರಡೂ ಸರ್ಕಾರಗಳು ಕಾರ್ಪೊರೇಟ್ ಕಂಪೆನಿಗಳ ಹಿತ ಕಾಯುತ್ತಿದೆ.

ಬೀದಿಬದಿ ವ್ಯಾಪಾರಸ್ಥರ ವಿರುದ್ಧ ಸದಾ ಕೆಂಗಣ್ಣು ಬೀರುತ್ತಿರುವ ಸರ್ಕಾರಗಳು ಚಿಲ್ಲರೆ ವ್ಯಾಪಾರದಲ್ಲಿ ವಿದೇಶೀ ನೇರ ಹೂಡಿಕೆ ಮಾಡುವ ಮೂಲಕ ಕೋಟ್ಯಾಂತರ ಜನತೆಯ ಬದುಕಿಗೆ ಮಾರಕ ಹೊಡೆತ ನೀಡಿದೆ. ಸರಕಾರಗಳ ಇಂತಹ ಜನವಿರೋಧಿ ನೀತಿಗಳ ವಿರುದ್ಧ ಬೀದಿಬದಿ ವ್ಯಾಪಾರಸ್ಥರು ಬೀದಿಗಿಳಿದು ಪ್ರಬಲ ಹೋರಾಟ ನಡೆಸಬೇಕೆಂದು ಕರೆ ನೀಡಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳೂ, ಸಂಘದ ಗೌರವಾಧ್ಯಕ್ಷರಾದ ಸುನೀಲ್ ಕುಮಾರ್ ಬಜಾಲ್‍ರವರು ಮಾತನಾಡುತ್ತಾ, ಮಂಗಳೂರು ಮಹಾನಗರ ಪಾಲಿಕೆಯಡಿಯಲ್ಲಿ ಟೌನ್‍ವೆಂಡಿಂಗ್ ಕಮಿಟಿ ರಚನೆಗೊಂಡು ನಾಮಕಾವಸ್ತೆಗೆ ಕೆಲವು ಬಾರಿ ಸಭೆ ಸೇರಿದ್ದರೂ ಯಾವುದೇ ಸರಿಯಾದ ತೀರ್ಮಾನವಾಗುತ್ತಿಲ್ಲ. ಆದ ತೀರ್ಮಾನಗಳು ಜಾರಿಗೊಳ್ಳುತ್ತಿಲ್ಲ. ಸದ್ಯಕ್ಕೆ ಖಿಗಿಅ ಸಭೆ ಸೇರದೆ 9 ತಿಂಗಳಾದರೂ ಮನಪಾ ಯಾವುದೇ ರೀತಿಯ ಸ್ಪಂಧನವಿಲ್ಲ. ಕಳೆದ ಬಾರಿ 208 ಮಂದಿಗೆ ಗುರುತುಚೀಟಿ ನೀಡಿದ್ದರೂ, ಅದರ ಅವಧಿ 2015ರ ಅಕ್ಟೋಬರ್ ಮುಗಿದಿದ್ದು, ಗುರುತುಚೀಟಿಯನ್ನು ನವೀಕರಣಗೊಳಿಸಬೇಕಾಗಿದೆ. ಉಳಿದ 350 ಮಂದಿಗೆ ನೀಡಬೇಕಾದ ಗುರುತುಚೀಟಿ ಮುದ್ರಣಗೊಂಡು 1 ವರ್ಷ ಕಳೆದರೂ ಇನ್ನೂ ನೀಡಿಲ್ಲ.

ಪರ್ಯಾಯ ವ್ಯವಸ್ಥೆಗಾಗಿ ನಗರದ ಹಲವು ಕಡೆಗಳಲ್ಲಿ ಜಾಗ ನಿಗದಿಪಡಿಸಿದ್ದರೂ, ಅದನ್ನು ನೀಡುವಲ್ಲಿ ಮನಪಾಕ್ಕೆ ಯಾವುದೇ ಆಸಕ್ತಿ ಇಲ್ಲ. ಮಾತ್ರವಲ್ಲದೆ ಮಂಗಳೂರು ಮಹಾನಗರ ಪಾಲಿಕೆ ತಾನು ಮಾಡಬೇಕಾದ ಕೆಲಸವನ್ನು ಮಾಡದೆ ವಿನಾಃಕಾರಣ ಬೀದಿಬದಿ ವ್ಯಾಪಾರಸ್ಥರ ಮೇಲೆ ಧಾಳಿ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾ, ಬೀದಿಬದಿ ವ್ಯಾಪಾರಸ್ಥರ ನ್ಯಾಯಯುತ ಬೇಡಿಕೆಗಳಿಗೆ ಮನಪಾವು ಕೂಡಲೇ ಸ್ಪಂಧಿಸಬೇಕು, ಇಲ್ಲದಿದ್ದಲ್ಲಿ ತೀವ್ರ ರೀತಿಯ ಪರಿಣಾಮವನ್ನು ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.

ಸಿಐಟಿಯು ನಗರ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರುರವರು, ಅಂದು ಬಿಜೆಪಿ ಆಡಳಿತದ ವಿರುದ್ಧ ಬೀದಿಬದಿ ವ್ಯಾಪಾರಸ್ಥರು ಸಮರಧೀರ ಹೋರಾಟ ನಡೆಸಿದ ಸಂದರ್ಭದಲ್ಲಿ ಇದೇ ಕಾಂಗ್ರೆಸ್ ಬಹಿರಂಗ ಬೆಂಬಲ ನೀಡಿತ್ತು. ಇಂದು ಅದೇ ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಬೀದಿಬದಿ ವ್ಯಾಪಾರಸ್ಥರಿಗೆ ಸರಿಯಾಗಿ ವ್ಯವಸ್ಥೆ ಮಾಡುವ ಬದಲು ಮತ್ತೆ ಟೈಗರ್ ಕಾರ್ಯಾಚರಣೆ ಮಾಡುವುದಾಗಿ ಬೆದರಿಕೆ ಹಾಕುತ್ತಿದೆ. ಈ ರೀತಿಯ ಧಾಳಿ ಮುಂದುವರಿಸಿದ್ದೇ ಆದರೆ ಬಿಜೆಪಿಗೆ ಕಲಿಸಿದ ಪಾಠವನ್ನೇ ನಗರದ ಪ್ರಜ್ಞಾವಂತ ಜನತೆ ಕಾಂಗ್ರೆಸ್‍ಗೂ ಕೂಡ ಕಲಿಸಲಿದ್ದಾರೆ ಎಂದು ಹೇಳಿದರು.

ಧರಣಿ ಸತ್ಯಾಗ್ರಹವನ್ನು ಉದ್ಧೇಶಿ ಸಿಐಟಿಯು ಜಿಲ್ಲಾಧ್ಯಕ್ಷರಾದ ಜೆ. ಬಾಲಕೃಷ್ಣ ಶೆಟ್ಟಿ, ಕಾರ್ಪೊರೇಟರ್ ದಯಾನಂದ ಶೆಟ್ಟಿ, ಸಮುದಾಯದ ಸಂಚಾಲಕರಾದ ವಾಸುದೇವ ಉಚ್ಚಿಲ್, ದಲಿತ ಹಕ್ಕುಗಳ ಸಮಿತಿಯ ಅಧ್ಯಕ್ಷರಾದ ಲಿಂಗಪ್ಪ ನಂತೂರು, ಸಿಐಟಿಯು ಜಿಲ್ಲಾ ನಾಯಕರಾದ ಜಯಂತಿ ಶೆಟ್ಟಿ, ಭಾರತಿ ಬೋಳಾರ್, ನಿವೇಶನ ರಹಿತರ ಹೋರಾಟ ಸಮಿತಿಯ ಕಾರ್ಯದರ್ಶಿ ಸಂತೋಷ್ ಶಕ್ತಿನಗರ ಮುಂತಾದವರು ಮಾತನಾಡುತ್ತಾ, ಬೀದಿಬದಿ ವ್ಯಾಪಾರಸ್ಥರಿಗೆ ಯಾವುದೇ ರೀತಿಯ ಅನ್ಯಾಯವನ್ನು ಮನಪಾ ಮಾಡಿದ್ದಾದರೆ ಎಲ್ಲಾ ವಿಭಾಗದ ಕಾರ್ಮಿಕರು ಬೀದಿಗಿಳಿದು ಹೋರಾಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಧರಣಿ ಸತ್ಯಾಗ್ರಹದ ನೇತೃತ್ವವನ್ನು ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಮುಖಂಡರಾದ ಮುಹಮ್ಮದ್ ಮುಸ್ತಫಾ, ಸಂತೋಷ್ ಕುಮಾರ್ ಆರ್.ಎಸ್., ಅತ್ತಾವುಲ್ಲ, ಹಿತೇಶ್ ಪೂಜಾರಿ, ಸಿಕಂದರ್, ಮೇರಿ ಡಿ’ಸೋಜ, ಹಸನ್, ಆದಂ, ಹೆಲೆನ್, ಅಣ್ಣಯ್ಯ ಕುಲಾಲ್, ರವಿ ಪೂಜಾರಿ, ಜಾಕೀರ್ ಹುಸೇನ್, ಮುಜಾಫರ್, ಚೆರಿಯೋನು ಮುಂತಾದವರು ವಹಿಸಿದ್ದರು.


Spread the love