ಮಕ್ಕಳ ಜೊತೆ ಮಗುವಾದ ಬೊಳುವಾರು

Spread the love

ಬೊಳುವಾರಿನ ಮಕ್ಕಳ ಜೊತೆ ಮಗುವಾದ ಬೊಳುವಾರು

ದೆಹಲಿ: ದೆಹಲಿಯ ಕರ್ನಾಟಕ ಸಂಘದಲ್ಲಿ ಒಂದು ದಿಢೀರ್ ಕಾರ್ಯಕ್ರಮ- ಪುತ್ತೂರು ಬೊಳುವಾರಿನ ಸುದಾನ ವಸತಿ ಶಾಲೆಯ ಭಾರತ್ ಸ್ಕೌಟ್ ಮತ್ತು ಗೈಡ್ಸ್ನನ National Golden Arrow ರಾಷ್ಟ್ರ ಪ್ರಶಸ್ತಿ ಪಡೆದ ಮಕ್ಕಳಿಗಾಗಿ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆಯವರು ಎರಡನೆಯ ಬಾರಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಬೊಳುವಾರು ಮಹಮ್ಮದ್ ಕುಂಞÂಯವರ ಜೊತೆ ಸಂಘದ ಸೆಮಿನಾರ್ ಹಾಲ್ ನಲ್ಲಿ ನಡೆಸಿದ ಸಂವಾದ ಕಾರ್ಯಕ್ರಮ.

ಶಾಲೆಯ ಪಠ್ಯಪುಸ್ತಕದಲ್ಲಿ ಬೊಳುವಾರರ ಕಥೆಗಳನ್ನು ಓದಿದ ಮಕ್ಕಳಿಗೆ ಅವರ ಜೊತೆ ನೇರ ಸಂಭಾಷಣೆ ಖುಷಿ ಆದರೆ, ಬೊಳುವಾರರಿಗೆ ಆತಂಕ. ಮಕ್ಕಳ ಜೊತೆ ಮಾತಾಡೋದು ಕಷ್ಟ ಮಾರಾಯ್ರೇ, ಅವರ ಮನಸ್ಸು ಹಸಿ ಮಣ್ಣಿನ ಗೋಡೆಯ ಹಾಗೆ. ಎಂದು ಹೇಳುತ್ತಲೇ ಮಕ್ಕಳ ಕುರಿತು ಹಿರಿಯರ ಜವಾಬ್ದಾರಿಯನ್ನು ಚೆನ್ನಾಗಿಯೇ ನಿಭಾಯಿಸಿದ ಬೊಳುವಾರು ಚಪ್ಪಾಳೆ ತಟ್ಟುವ ಪುಟ್ಟ ಮಕ್ಕಳೊಡನೆ ನಡೆಸಿದ ಸರಳ ಸಂವಾದದಲ್ಲಿ ಎರಡು ಗಂಟೆ ಹೋದದ್ದೇ ತಿಳಿಯಲಿಲ್ಲ. ‘ಸುಳ್ಳು ಹೇಳಬಾರದು’ ಎಂಬಲ್ಲಿಂದ ಆರಂಭವಾದ ಮಾತುಕತೆ, ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಹಲವಾರು ವಿಷಯಗಳನ್ನು ಪ್ರಸ್ತುತ ಪಡಿಸುತ್ತ ಮಕ್ಕಳನ್ನು ಚಿಂತನೆಗೆ ಹಚ್ಚಿದ ರೀತಿ ಸೊಗಸಾಗಿತ್ತು.

ಸಂವಾದಕ್ಕೊಂದು ವಿಷಯ ವಸ್ತು ಇಲ್ಲದುದರಿಂದಲೇ, ಈ ಅರ್ಥಪೂರ್ಣ ಹರಟೆಯಲ್ಲಿ ಎಲ್ಲರಿಗೂ ಪ್ರಶ್ನೆಗಳನ್ನು ಕೇಳುವ ಹಾಗೂ ಅವುಗಳಿಗೆ ಉತ್ತರ ಪಡೆದು ಹೊಸ ಪ್ರಶ್ನೆಗಳಿಗೆ ಉತ್ತರ ಹುಡುಕುವಂತೆ ಹಾಕಿದ ‘ಚಿಂತನಾ ಅಡಿಪಾಯ’ ಹಾಕಿರುವುದು ‘ಬೊಳುವಾರು ಕಲೆ’ಯ ವಿಶೇಷ.

ಸೂಕ್ತಾ ರೈ, ಜೋಶಿತಾ, ಲಾಸ್ಯ, ವಿನೀತಾ, ನಮ್ರತಾ, ಮನ್ವಿತ್, ಪ್ರದ್ಯುಮ್ನ, ಆದಿತ್ಯರಾಮ, ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಅಧ್ಯಾಪಕಿಯರಾದ ಪ್ರೇಮಲತಾ ಮತ್ತುರೇಖಾ ಮಕ್ಕಳ ಜೊತೆಗಿನ ಚರ್ಚೆಯಲ್ಲಿ ಭಾಗವಹಿಸಿ, ಮಕ್ಕಳಿಗೆ ನೆರವಾದರು. ಲತಾ ಅಮರನಾಥ್ ದೀಪಾ ಸತೀಶ್, ಜ್ಯೋತಿ ಮಕ್ಕಳ ಜೊತೆಗಿದ್ದು, ಸಂವಾದದಲ್ಲಿ ಭಾಗವಹಿಸಿದರು.

ವಸಂತ ಶೆಟ್ಟಿ ಬೆಳ್ಳಾರೆಯವರ ನೇತೃತ್ವದಲ್ಲಿ ನಡೆದ ಈ ಸುಂದರ ಕಾರ್ಯಕ್ರಮ ಪ್ರಶಸ್ತಿ ಪಡೆಯಲು ಬಂದ ಮಕ್ಕಳಿಗೆ ಸಿಕ್ಕಿದ ಬೌದ್ಧಿಕ ಬಹುಮಾನ. ಪಠ್ಯ ಪುಸ್ತಕದಲ್ಲಿರುವ ಬೊಳುವಾರರ ಜೊತೆ ನಾವು ದೂರದ ದೆಹಲಿಯಲ್ಲಿ ಮಾತನಾಡಿದ್ದೇವೆ ಎಂದು ಹೆಮ್ಮೆಯಿಂದ ಹೇಳುವ ಅವಕಾಶವೂ ಹೌದು.


Spread the love