ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಕಡತ ನಿರ್ವಹಣೆ – ತರಬೇತಿ ಕಾರ್ಯಗಾರ 

Spread the love

ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಕಡತ ನಿರ್ವಹಣೆ – ತರಬೇತಿ ಕಾರ್ಯಗಾರ 

ಮಂಗಳೂರು : ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಇದರ ವತಿಯಿಂದ ಅಕ್ಟೋಬರ್ 9 ಮತ್ತು 10 ರಂದು ಜಿಲ್ಲೆಯಲ್ಲಿರುವ ಮಕ್ಕಳ ಪಾಲನೆ ಮತ್ತು ಪೋಷಣೆ ಮಾಡುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ಮತ್ತು ಸಿಬ್ಬಂದಿಗಳಿಗೆ ಮಕ್ಕಳ ಕಡತಗಳ ನಿರ್ವಹಣೆ ,ವೈಯಕ್ತಿಕ ಪೋಷಣಾ ಯೋಜನೆ ಮತ್ತು ಸಾಮಾಜಿಕ ತನಿಖಾ ವರದಿ  ಕುರಿತು ಜಿಲ್ಲಾ ಮಟ್ಟದ ತರಬೇತಿ ಕಾರ್ಯಗಾರವನ್ನು ‘ಜಿಲ್ಲಾ ಬಾಲಭವನ ಕದ್ರಿ’ ಮಂಗಳೂರು ಇಲ್ಲಿ ಹಮ್ಮಿಕೊಳ್ಳಲಾಯಿತು.

ಸದರಿ ತರಬೇತಿ ಕಾರ್ಯಕ್ರಮವನ್ನು ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮಂಗಳೂರು ಮಲ್ಲಣ ಗೌಡ ಇವರು ಉದ್ಘಾಟಿಸಿ ಬಾಲನ್ಯಾಯ ಕಾಯ್ದೆಯಡಿ ನೋಂದಾವಣೆಯಾಗಿ ಮಕ್ಕಳ ಪಾಲನೆ ಮಾಡುವ ಸಂಸ್ಥೆಗಳಲ್ಲಿರುವ ಮಕ್ಕಳ ಗುಣವನ್ನು ವೃದ್ದಿಸಲು ಇಂತಹ ತರಬೇತಿಗಳು ಅಗತ್ಯವಿದೆ ಎಂದು ತಿಳಿಸಿದರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿಸೋಜಾ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಬಾಲನ್ಯಾಯ ಕಾಯ್ದೆಯಡಿ ನೋಂದಾವಣೆಯಾಗಿ ಮಕ್ಕಳ ಪಾಲನೆ ಮಾಡುವ ಸಂಸ್ಥೆಗಳಲ್ಲಿ ಮಕ್ಕಳ ವೈಯುಕ್ತಿಕ ಕಡತವನ್ನು ನಿರ್ವಹಣೆ ಮಾಡುವುದರಿಂದ ಮಕ್ಕಳ ಮುಂದಿನ ಭವಿಷ್ಯಕ್ಕೆ ಸಹಾಯವಾಗುತ್ತದೆಯೆಂದು ಹೇಳಿದರು.

ಬಾಲನ್ಯಾಯ ಮಂಡಳಿಯ ಸದಸ್ಯರುಗಳಾದ ಉಮೇಶ್ ನಿರ್ಮಲ್ ಹಾಗೂ ಗೌರಿ ಮತ್ತು ತರಬೇತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಸಿಸ್ಟರ್ ಲಿಲ್ಲಿಪುಷ್ಪ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಾರವಾರ ಇಲ್ಲಿಯ ಸಿಬ್ಬಂದಿಯಾದ ದೇವಿದಾಸ್.ಎನ್. ನಾಯ್ಕ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಸ್ಮಾನ್ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಂಗಳೂರು ಇವರು ತರಬೇತಿಯ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು ಮತ್ತು ಸರ್ವರನ್ನು ಸ್ವಾಗತಿಸಿದರು.

ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ ಸಿಸ್ಟರ್ ಲಿಲ್ಲಿ ಪುಷ್ಪ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಾರವಾರ ಇಲ್ಲಿಯ ಸಿಬ್ಬಂದಿಯಾದ ದೇವಿದಾಸ್.ಎನ್. ನಾಯ್ಕ ರವರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಂಗಳೂರು ಇಲ್ಲಿಯ ಸಿಬ್ಬಂದಿಯಾದ ಪ್ರತಿಮಾರವರು ತರಬೇತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ, ಮಕ್ಕಳ ಕಡತಗಳ ನಿರ್ವಹಣೆ ಮತ್ತು ಕಡತಗಳಲ್ಲಿರುವ ದಾಖಲೆಗಳ ನಿರ್ವಹಣೆ ವೈಯಕ್ತಿಕ ಪೋಷಣಾ ಯೋಜನೆ ಮತ್ತು ಸಾಮಾಜಿಕ ತನಿಖಾ ವರದಿಯನ್ನು ಸಿದ್ದಪಡಿಸುವ ಕುರಿತು ಉಪನ್ಯಾಸ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಲನ್ಯಾಯ ಕಾಯ್ದೆಯಡಿ ನೋಂದಾಯಿತ 74 ಮಕ್ಕಳ ಪಾಲನಾ ಪೋಷಣಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಮೊದಲನೇಯ ದಿನ 54 ಶಿಬಿರಾರ್ಥಿಗಳು ಮತ್ತು ಎರಡನೆಯ ದಿನ 66 ಶಿಬಿರಾರ್ಥಿಗಳು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಿಸ್ಟರ್ ಕ್ರಿಸ್ಟಿಯಾ ಪ್ರಾರ್ಥಿಸಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಕ್ಷಣಾಧಿಕಾರಿ (ಸಾಂಸ್ಥಿಕ) ಕುಮಾರ್ ಶೆಟ್ಟಿಗಾರ್ ನಿರೂಪಿಸಿದರು.


Spread the love