ಮಕ್ಕಳ ಭವಿಷ್ಯದೊಂದಿಗೆ ರಾಜ್ಯ ಸರಕಾರ ಆಡಬಾರದು – ವೇದವ್ಯಾಸ ಕಾಮತ್

Spread the love

ಮಕ್ಕಳ ಭವಿಷ್ಯದೊಂದಿಗೆ ರಾಜ್ಯ ಸರಕಾರ ಆಡಬಾರದು – ವೇದವ್ಯಾಸ ಕಾಮತ್

ಮಂಗಳೂರು: ರಾಜ್ಯ ಸರಕಾರದ ಹೊಸ ಸುತ್ತೋಲೆಯಿಂದ ಒಂದನೇ ತರಗತಿಗೆ ದಾಖಲಾತಿ ಬಯಸುವ ಮಕ್ಕಳ ಭವಿಷ್ಯ ಅತಂತ್ರ ಸ್ಥಿತಿಗೆ ತಲುಪಿದೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ಯುಕೆಜಿಯಿಂದ ಒಂದು ಮಗುವನ್ನು ಒಂದನೇ ತರಗತಿಗೆ ಸೇರಿಸುವಾಗ ಮಗುವಿಗೆ ವಯಸ್ಸು ಕನಿಷ್ಟ 5 ವರ್ಷ 10 ತಿಂಗಳು ಆಗಲೇಬೇಕು ಎಂದು ರಾಜ್ಯ ಸರಕಾರ ಹೊಸ ಸುತ್ತೋಲೆಯನ್ನು ಎಲ್ಲ ಶಾಲೆಗಳಿಗೆ ಕಳುಹಿಸಿಕೊಟ್ಟಿದೆ. ಸರಕಾರ ವಯಸ್ಸಿನ ಪರಿಮಾಣವನ್ನು ಕಡ್ಡಾಯಗೊಳಿಸಿರುವುದರಿಂದ ಈಗ ಯುಕೆಜಿಯಲ್ಲಿರುವ ಅಸಂಖ್ಯಾತ ಮಕ್ಕಳ ಭವಿಷ್ಯ ಡೋಲಾಯಮಾನವಾಗಿದೆ. ಸರಕಾರದ ಹೊಸ ನಿರ್ಬಂಧವನ್ನು ಪರಿಪಾಲಿಸಲೇಬೇಕಾದ ಒತ್ತಡಕ್ಕೆ ಸಿಲುಕಿರುವ ಶಾಲೆಗಳು 5 ವರ್ಷ 10 ತಿಂಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಒಂದನೇ ತರಗತಿಗೆ ದಾಖಲಿಸುತ್ತಿಲ್ಲ. ಇದರಿಂದ ನೊಂದಿರುವ ಅಸಂಖ್ಯಾತ ಪೋಷಕರು ನಿತ್ಯ ಬಿಜೆಪಿ ಕಚೇರಿಗೆ ಬಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

ಶಾಸಕರಾಗಿರುವ ಕ್ಯಾ.ಗಣೇಶ್ ಕಾರ್ಣಿಕ್, ಕೋಟ ಶ್ರೀನಿವಾಸ ಪೂಜಾರಿ, ಎಸ್ ಅಂಗಾರ, ಸುನೀಲ್ ಕುಮಾರ್ ಅವರು ಪೋಷಕರ ಈ ಗೊಂದಲವನ್ನು ಬಗೆಹರಿಸುವ ನಿಟ್ಟಿನಲ್ಲಿ ಮತ್ತು ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಲ್ಲಿ ಸರಕಾರವನ್ನು ಈಗಾಗಲೇ ಆಗ್ರಹಿಸಿದ್ದಾರೆ ಮತ್ತು ರಾಜ್ಯದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಈಗಾಗಲೇ ಮಾತುಕತೆ ನಡೆಸಿ ಇದರ ಗಂಭೀರತೆಯನ್ನು ವಿವರಿಸಿದ್ದಾರೆ. ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳು, ಶಾಸಕರು, ಸಚಿವರು ಬಿಜೆಪಿ ಶಾಸಕರೊಂದಿಗೆ ಕೈ ಜೋಡಿಸಲೇಬೇಕು. ಪುಟ್ಟ ಮಕ್ಕಳ ಶಿಕ್ಷಣದ ಅಮೂಲ್ಯ ಒಂದು ವರ್ಷ ವ್ಯರ್ಥವಾಗದಂತೆ ಆಡಳಿತ ನಡೆಸುತ್ತಿರುವ ಜನಪ್ರತಿನಿಧಿಗಳು ನೋಡಿಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು ವೇದವ್ಯಾಸ್ ಕಾಮತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love