ಸುಬ್ರಹ್ಮಣ್ಯ ಶ್ರೀಗಳು ಉಪವಾಸ ಕೈಬಿಡುವಂತೆ ಪೇಜಾವರ ಸ್ವಾಮೀಜಿ ಒತ್ತಾಯ

Spread the love

ಸುಬ್ರಹ್ಮಣ್ಯ ಶ್ರೀಗಳು ಉಪವಾಸ ಕೈಬಿಡುವಂತೆ ಪೇಜಾವರ ಸ್ವಾಮೀಜಿ ಒತ್ತಾಯ

ಉಡುಪಿ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಸುಬ್ರಹ್ಮಣ್ಯ ಮಠದ ಜಟಾಪಟಿಯಲ್ಲಿ ವಿದ್ಯಾಪ್ರಸನ್ನ ಸುಬ್ರಹ್ಮಣ್ಯ ಶ್ರೀಗಳು ಉಪವಾಸ ಶುರು ಮಾಡಿದ್ದು, ಕೂಡಲೇ ಶ್ರೀಗಳು ಉಪವಾಸ ಕೈಬಿಡಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಈ ಕುರಿತು ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು ಕುಕ್ಕೆ ದೇವಸ್ಥಾನದ ಕಿರುಕುಳದಿಂದ ಸ್ವಾಮಿಗಳು ಬೇಸರಪಟ್ಟಿದ್ದಾರೆ. ಇವತ್ತಿನಿಂದ ಅವರು ಉಪವಾಸ ಆರಂಭ ಮಾಡಿದ್ದಾರೆ. ಇದನ್ನು ಕೇಳಿ ನನಗೆ ಕಳವಳ ಆಗಿದೆ ಅಂತ ಹೇಳಿದರು.

ಉಪವಾಸದ ವಿಚಾರ ತಿಳಿದು ನಮಗೆ ಬಹಳ ಬೇಸರವಾಗಿದೆ. ನವರಾತ್ರಿ ಮಹೋತ್ಸವ ಸಂದರ್ಭ ಉಪವಾಸ ಮಾಡುವುದು ಸರಿಯಲ್ಲ. ಶ್ರೀಗಳು ಉಪವಾಸವನ್ನು ಕೂಡಲೇ ಸ್ಥಗಿತಗೊಳಿಸಬೇಕು. ದಸರಾ ಮುಗಿದ ಕೂಡಲೇ ನಾನು ಸುಬ್ರಹ್ಮಣ್ಯಕ್ಕೆ ಬರುತ್ತೇನೆ. ದೇವಸ್ಥಾನ ಮತ್ತು ಮಠದ ಪರಸ್ಪರ ಸಂಘರ್ಷ ಬಗೆಹರಿಸಲು ಪ್ರಯತ್ನಪಡುತ್ತೇನೆ. ಮಠದಲ್ಲಿ ಸರ್ಪಸಂಸ್ಕಾರ ಮಾಡಿದ್ದರಿಂದ ದೇವಸ್ಥಾನಕ್ಕೆ ಏನು ತೊಂದರೆಯಾಗಿದೆ. ಸಾರ್ವಜನಿಕರಿಗೆ – ಭಕ್ತರಿಗೆ ಏನು ನಷ್ಟ ಆಗಿದೆ? ಎಂಬ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಅನಾವಶ್ಯಕ ಗೊಂದಲ ಸಮಾಜದಲ್ಲಿ ನಡೆಯುವುದು ಸರಿಯಲ್ಲ. ದೇವಸ್ಥಾನ ಮತ್ತು ಮಠ ಹಿಂದೆ ಜೊತೆಗೆ ಇತ್ತು. ಸರ್ಪ ಸಂಸ್ಕಾರ ಮತ್ತಿತರ ಸೇವೆಗಳು ಎಲ್ಲೇ ಆದರೂ ಫಲ ದೇವರಿಗೆ ಸಲ್ಲುತ್ತದೆ. ದೇವರ ಸೇವೆ ವಿಚಾರದಲ್ಲಿ ಯಾರು ಯಾರಿಗೂ ಒತ್ತಡ ಹೇರಬಾರದು. ಭಕ್ತರಿಗೆ ಸ್ವಾತಂತ್ರ್ಯವಿದೆ, ಅವರು ಎಲ್ಲಿ ಬೇಕಾದರೂ ಸೇವೆ ನೀಡಬಹುದು ಎಂದರು.

ಯತಿಗಳು ಉಪವಾಸ ಮಾಡಿದರೆ ಹಿಂದೂ ಸಮಾಜಕ್ಕೆ ನಷ್ಟ ಎಂದು ಆತಂಕ ವ್ಯಕ್ತಪಡಿಸಿದರು. ಐದು ದಿನದ ನಂತರ ಸಂಧಾನ ಫಲಿಸದಿದ್ದರೆ ಮುಖ್ಯಮಂತ್ರಿಗಳನ್ನು ಸಂಪರ್ಕಿಸುತ್ತೇನೆ. ಎಲ್ಲ ವಿಚಾರ, ಗೊಂದಲಗಳನ್ನು ಸಿಎಂ ಕುಮಾರಸ್ವಾಮಿ ಅವರ ಗಮನಕ್ಕೆ ತರುತ್ತೇನೆ. ಅವರೂ ಒಬ್ಬ ಕುಕ್ಕೆಯ ಭಕ್ತರಾಗಿ ಸಮಸ್ಯೆ ಬಗೆಹರಿಸುವಂತೆ ಕೇಳಿಕೊಳ್ಳುತ್ತೇನೆ ಎಂದು ಪೇಜಾವರ ಸ್ವಾಮೀಜಿ ಹೇಳಿದ್ದಾರೆ.


Spread the love