ಹಾಲಾಡಿ ಶ್ರೀನಿವಾಸ ಶೆಟ್ಟಿ ಕಾಂಗ್ರೆಸಿಗೆ? ಸಿದ್ದರಾಮಯ್ಯ ಆಹ್ವಾನ ನೀಡಿದ್ದಾರಂತೆ; ಸೂಕ್ತ ಸಮಯದಲ್ಲಿ ನಿರ್ಧಾರ!

Spread the love

ಹಾಲಾಡಿ ಶ್ರೀನಿವಾಸ ಶೆಟ್ಟಿ ಕಾಂಗ್ರೆಸಿಗೆ? ಸಿದ್ದರಾಮಯ್ಯ ಆಹ್ವಾನ ನೀಡಿದ್ದಾರಂತೆ; ಸೂಕ್ತ ಸಮಯದಲ್ಲಿ ನಿರ್ಧಾರ!

ಉಡುಪಿ: ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಕಾಂಗ್ರೆಸ್ ಸೇರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಹ್ವಾನ ನೀಡಿದ್ದಾರೆ. ‘ಯಾವ ಪಕ್ಷ ಸೇರಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ’ ಎಂದು ಶ್ರೀನಿವಾಸ ಶೆಟ್ಟಿ ಹೇಳಿಕೊಂಡಿದ್ದಾರೆ.

ರಾಜ್ಯ ಮಟ್ಟದ ಟಿವಿ ವಾಹಿನಿಯೊಂದಿಗೆ  ಶುಕ್ರವಾರ ಕುಂದಾಪುರ ಕ್ಷೇತ್ರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಈ  ಕುರಿತು ಪ್ರತಿಕ್ರಿಯಿಸಿ  ‘ನಾನು ಬಿಜೆಪಿ ಬೆಂಬಲಿಸುತ್ತೇನೆ ಎಂದು ತಿಳಿದಿದ್ದರೂ ಸಿದ್ದರಾಮಯ್ಯ ಅವರು ಪಕ್ಷ ಸೇರುವಂತೆ ಆಹ್ವಾನ ನೀಡಿದ್ದಾರೆ’ ಎಂದರು.

‘ಬಿಜೆಪಿ ಅಥವ ಕಾಂಗ್ರೆಸ್ ಯಾವ ಪಕ್ಷ ಸೇರಬೇಕು? ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಸೂಕ್ತ ಸಮಯದಲ್ಲಿ ನನ್ನ ಬೆಂಬಲಿಗರ ಜೊತೆ ಮಾತನಾಡಿ ಈ ಕುರಿತು ನಿರ್ಧಾರ ಕೈಗೊಳ್ಳುತ್ತೇನೆ. ಆದರೆ ಆಯ್ಕೆ ಸಂಪೂರ್ಣ ಮುಕ್ತವಾಗಿದೆ ಎಂದ ಶ್ರೀನಿವಾಸ ಶೆಟ್ಟಿ ಅವರು ತಾನು ಪಕ್ಷೇತರ ಶಾಸಕನಾಗಿ ಗೆದ್ದ ಬಳಿಕವೂ ಕೂಡ ಎಲ್ಲಾ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ನನ್ನ ಬೆಂಬಲಿತರು ಬಿಜೆಪಿಗೆ ಬೆಂಬಲಿಸಿದ್ದಾರೆ ಇನ್ನೂ ಮುಂದೆಯೂ ನನ್ನ ಬೆಂಬಲಿಗರ ತೀರ್ಮಾನದ ಮೇಲೆಯೇ ನನ್ನ ನಿರ್ಧಾರ ನಿಂತಿದೆ ಎಂದರು.

ಪಕ್ಷೇತರ ಶಾಸಕನಾಗಿದ್ದವನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗಬೇಕಿದ್ದರೆ ಗೆದ್ದು ಆರು ತಿಂಗಳ ಒಳಗೆ ಸೇರಬೇಕು ಇಲ್ಲದೆ ಹೋದರೆ ಶಾಸಕ ಸ್ಥಾನ ಅನರ್ಹಗೊಳ್ಳುತ್ತದೆ. ನನಗೆ ಚಂಚಲ ಮನಸ್ಸು ಇಲ್ಲ ಧೃಡ ನಿರ್ಧಾರ ಕೈಗೊಳ್ಳುವುದು ನನ್ನ ಅಭ್ಯಾಸ ಆದ್ದರಿಂದ ಚಂಚಲ ಮನಸ್ಸಿನಿಂದ ಏನು ಹೇಳುವುದಿಲ್ಲ. ನಾನು ಎಲ್ಲಾ ಪಕ್ಷದವರ ಜೊತೆ ವಿಶ್ವಾಸದಿಂದ ಇದ್ದೇನೆ ಎಂದರು.

ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ಕಾಂಗ್ರೆಸ್ ಸರಕಾರ ಬೆಂಬಲ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹಾಲಾಡಿಯವರು ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಆಳುವ ಪಕ್ಷದ ಶಾಸಕರಿಗೆ ಯಾವತ್ತೂ ಮೊದಲ ಆದ್ಯತೆ ನೀಡುವುದು ನಡೆದು ಬಂದ ರೀತಿ. ಅದರಂತೆ ರಾಜ್ಯದಲ್ಲೂ ಅಂತಹ ವ್ಯವಸ್ಥೆ ಇದೆ ಅವರಿಗೆ ಹೆಚ್ಚು ನೆರವು ನೀಡುತ್ತಾರೆ. ಆದರೆ ನನ್ನ ಕ್ಷೇತ್ರದಲ್ಲಿ ಅಭಿವೃದ್ದಿಗೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಸಂಪೂರ್ಣ ಸಹಕಾರ ನೀಡಿದೆ ಯಾವುದೇ ಹಸ್ತಕ್ಷೇಪ ಮಾಡಿಲ್ಲ.

ಕಾಂಗ್ರೆಸ್ ಸರಕಾರ ಪಕ್ಷೇತರ ಶಾಸಕರನ್ನು ಹಣದ ಆಮೀಷ ತೋರಿಸಿ ತನ್ನ ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂಬ ಸಂಸದೆ ಶೋಭಾ ಕರಂದ್ಲಾಜೆ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹಾಲಾಡಿಯವರು ಅದರ ಕುರಿತು ಹೆಚ್ಚು ವಿಮರ್ಸೆ ಮಾಡಲು ಹೋಗುವುದಿಲ್ಲ. ಶೋಭಾ ಅವರಿಗೆ ನಾನು ಬೆಂಬಲ ನೀಡಿದ್ದೆ. ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಕೂಡ ಬಿಜೆಪಿಗೆ ಬೆಂಬಲ ನೀಡಿದ್ದೆ ಐದು ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದಿದ್ದು, ತಾಲೂಕು ಪಂಚಾಯತಿಯಲ್ಲಿ ಕೇವಲ ಒಂದು ಸ್ಥಾನ ಕಳೆದುಕೊಂಡು ನಾಲ್ಕು ಬಿಜೆಪಿ ಸ್ಥಾನ ಗೆದ್ದುಕೊಂಡಿದ್ದೇವೆ ಎಂದರು

ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಹಾಲಾಡಿಯವರನ್ನು ಖಾಸಗಿಯಾಗಿ ಭೇಟಿಯಾಗುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಹಾಲಾಡಿ ಖಾಸಗಿಯಾಗಿ ಎಂದೂ ಕೂಡ ಮಧ್ವರಾಜ್ ನನ್ನನ್ನು ಭೇಟಿಯಾಗಿಲ್ಲ ಆದರೆ ಪರಸ್ಪರ ವಿಶ್ವಾಸದಲ್ಲಿದ್ದೇವೆ. ನಮ್ಮಿಬ್ಬರ ಮಧ್ಯೆ ಸಂಪರ್ಕ ಸಂಬಂಧ ಇದೆ ಆದರೆ ಗಾಢವಾದ ಸಂಬಂಧ ಏನೂ ಇಲ್ಲ ಎಂದರು.

ರಾಜಕೀಯ ನಡೆಯ ಕುರಿತು ನಿರ್ಧಾರವನ್ನು ಚುನಾವಣೆ ಹತ್ತಿರ ಬಂದಾಗ ತೆಗೆದುಕೊಳ್ಳುತ್ತೇನೆ. ಬಿಜೆಪಿಯ ಕಿಶೋರ್ ಕುಮಾರ್ ಅವರಿಗೆ ಪಕ್ಷ ಸಂಘಟನೆಗೆ ಸೂಚನೆ ನೀಡಿದ್ದಾರೆ ಎನ್ನುವ ಪ್ರಶ್ನೆಗೆ ಅದು ಬಿಜೆಪಿಗರಿಗೆ ಬಿಟ್ಟ ವಿಚಾರ ನಾನು ಅದರ ಕುರಿತು ಮಾತನಾಡುವುದಿಲ್ಲ. ನನಗೆ ಬಿಜೆಪಿಯಿಂದ ಟಿಕೇಟ್ ನೀಡುವ ಕುರಿತು ಯಾವುದೇ ಸೂಚನೆಗಳು ಬಂದಿಲ್ಲ ಆದರೆ ಪಕ್ಷಕ್ಕೆ ಸೇರ್ಪಡೆಗೊಳ್ಳಿ ಎಂಬ ಸೂಚನೆಯಷ್ಟೇ ಬಂದಿದೆ. ಕಾಂಗ್ರೆಸಿನಿಂದ ಕೂಡ ಬಂದಿದೆ ಅವರ ಪ್ರಯತ್ನ ಮಾಡಿದ್ದಾರೆ ಆದರೆ ನನ್ನ ನಿರ್ಧಾರ ಗಟ್ಟಿಯಾಗಿದೆ. ಸಿದ್ದರಾಮಯ್ಯ ಅವರೇ ಸ್ವತಃ ನಮ್ಮ ಪಕ್ಷಕ್ಕೆ ಬನ್ನಿ ಎಂಬ ಆಹ್ವಾನ ನೀಡಿದ್ದಾರೆ. ಇಂದಿನ ತನಕ ಬಿಜೆಪಿಯನ್ನು ಬೆಂಬಲ ನೀಡಿಕೊಂಡು ಬಂದಿದ್ದೇ ಮುಂದೆ ಏನು ಎನ್ನುವುದು ಕಾದು ನೋಡಬೇಕು ಎಂದರು.

ಮುಂದೆ ಚುನಾವಣೆಗೆ ಹೋಗಬೇಕಾ ಬೇಡವಾ ಎನ್ನುವುದರ ಕುರಿತು ಏನೂ ಕೂಡ ನಿರ್ಧಾರ ಮಾಡಿಲ್ಲ. ಆದರೆ ರಾಜಕೀಯ ನಿವೃತ್ತಿಯ ಕುರಿತು ಕೂಡ ಸದ್ಯದ ಪರಿಸ್ಥಿತಿಯಲ್ಲಿ ಏನನ್ನು ಹೇಳಲಾರೆ ಆದರೆ ಯಾವುದೇ ನಿರ್ಧಾರವನ್ನು ಕೂಡ ಸೂಕ್ತ ಸಮಯದಲ್ಲಿ ಬೆಂಬಲಿಗರೊಂದಿಗೆ ಚರ್ಚಿಸಿ ಕೈಗೊಳ್ಳುತ್ತೇನೆ ಎಂದರು.

ಕುಂದಾಪುರದ ವಾಜಪೇಯಿ ಎಂದೇ ಹಾಲಾಡಿ ಶ್ರೀನಿವಾಸ ಶೆಟ್ಟಿ ಪ್ರಸಿದ್ಧಿ ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದರೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಸೋಲಿನ ರುಚಿ ತೋರಿಸಿವಷ್ಟು ಜನ ಬೆಂಬಲ ಹಾಲಾಡಿ ಅವರಿಗಿದೆ. ಆದ್ದರಿಂದ, ಅವರನ್ನು ಪಕ್ಷಕ್ಕೆ ಸೆಳೆಯಲು ಎರಡೂ ಪಕ್ಷಗಳು ಪ್ರಯತ್ನ ನಡೆಸಿವೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವಧಿಯಲ್ಲಿ ಹಾಲಾಡಿಯವರಿಗೆ ಕೊನೆಯ ಕ್ಷಣದಲ್ಲಿ ಸಚಿವ ಪದವಿ ತಪ್ಪಿ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಲಭಿಸಿತ್ತು. ಇದರಿಂದ ಮನನೊಂದ ಹಾಲಾಡಿ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.

2013ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಮಲ್ಯಾಡಿ ಶಿವರಾಮ್ ಶೆಟ್ಟಿ ಹಾಗೂ ಬಿಜೆಪಿಯಿಂದ ಕಿಶೋರ್ ಕುಮಾರ್ ಸ್ಪರ್ಧೆಯಲ್ಲಿದ್ದರೂ ಹಾಲಾಡಿ ಅವರಿಗೆ ಪ್ರಬಲ ಪೈಪೋಟಿ ನೀಡಲು ಸಾಧ್ಯವಾಗಿರಲಿಲ್ಲ. ಭಾರೀ ಅಂತರದಿಂದಲೇ ಹಾಲಾಡಿ ಗೆಲುವು ಸಾಧಿಸಿದ್ದರು. ಇತ್ತೀಚೆಗೆ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸಿನಿಂದ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಹಾಲಾಡಿಯವರಿಗೆ ಸಮಾಧಾನ ನೀಡಿರಲಿಲ್ಲ ಎಂಬ ಮಾತು ಕೂಡ ಕೇಳಿಬಂದಿತ್ತು. ಇದರಿಂದ ಬಿಜೆಪಿ ಸೇರ್ಪಡೆ ಬಗ್ಗೆ ನಿರಾಸಕ್ತಿ ತೋರಿದ್ದಾರೆ ಎನ್ನಲಾಗಿದೆ.

1999ರಲ್ಲಿ ರಾಜಕೀಯ ಜೀವನ ಆರಂಭಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಕಾಂಗ್ರೆಸ್ ಪ್ರಭಾವಿ ನಾಯಕ ಪ್ರತಾಪಚಂದ್ರ ಶೆಟ್ಟಿ, 2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ಶೆಟ್ಟಿ, 2008ರಲ್ಲಿ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ಸೋಲಿಸಿದ್ದರು.

ಕುಂದಾಪುರಕ್ಕೆ ಬಿಜೆಪಿಯಿಂದ ಕಿಶೋರ್ ಕುಮಾರ್ ಸ್ಪರ್ಧೆ?

ಮುಂಬರುವ ಚುನಾವಣೆಗೆ ಬಿಜೆಪಿ ತಳಮಟ್ಟದಿಂದ ಸಜ್ಜಾಗುತ್ತಿದ್ದು, ಈಗಾಗಲೇ ಚುನಾವಣೆಗೆ ಸಂಪೂರ್ಣ ತಯಾರಿಗುತ್ತದೆ. ಬಿಜೆಪಿ ಪಕ್ಷ ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಅಧಿಕಾರವನ್ನು ಹಿಡಿಯಲೇಬೇಕೆಂಬ ಹಠಕ್ಕೆ ಬಿದ್ದಿದ್ದು ಚುನಾವಣೆಯ ಮುನ್ನ ಅಭ್ಯರ್ಥಿಗಳ ಆಯ್ಕೆಯಲ್ಲಿ ಆರ್ ಎಸ್ ಎಸ್ ಮಹತ್ವದ ಪಾತ್ರ ವಹಿಸಿದೆ ಎನ್ನಲಾಗಿದೆ. ಆರ್ ಎಸ್ ಎಸ್ ಸೂಚಿಸಿದ ವ್ಯಕ್ತಿಗಳಿಗೇ ಚುನಾವಣೆಯಲ್ಲಿ ಟಿಕೇಟ್ ನೀಡುವ ಬಗ್ಗೆ ಚಿಂತನೆ ನಡೆದಿದ್ದು ಅದರಂತೆ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ವರ್ಚಸ್ಸು ಸಂಪೂರ್ಣ ಕುಗ್ಗುತ್ತಿದ್ದು, ಹೊಸ ಮುಖದ ಅಗತ್ಯತೆ ಬೇಕಾಗಿದೆ.

ಅದರಂತೆ ಕಳೆದ ಚುನಾವಣೆಯಲ್ಲಿ ಹಾಲಾಡಿಯವರಿಗೆ ಪ್ರಬಲ ಸ್ಪರ್ಧೆ ನೀಡಿದವರು ಬಿಜೆಪಿಯ ಕಿಶೋರ್ ಕುಮಾರ್. ಅವರನ್ನೇ ಈ ಬಾರಿಯೂ ಪಕ್ಷದ ಅಭ್ಯರ್ಥಿಯಾಗಿಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದು, ಅದರಂತೆ ಅವರಿಗೆ ಪಕ್ಷವನ್ನು ತಳಮಟ್ಟದಿಂದ ಚುನಾವಣೆಗೆ ಸಜ್ಜುಗೊಳಿಸುವಂತೆ ಆರ್ ಎಸ್ ಎಸ್ ಮತ್ತು ಪಕ್ಷ ಸೂಚನೆ ನೀಡಿದೆ ಎನ್ನುವ ಮಾಹಿತಿ ಲಭಿಸಿದೆ. ಅದರಂತೆ ಕಿಶೋರ್ ಕುಮಾರ್ ಕೂಡ ತಮ್ಮ ಕೆಲಸವನ್ನು ಆರಂಭಿಸಿದ್ದು ಪಕ್ಷದ ಟಿಕೇಟ್ ಅವರಿಗೆ ಸಿಗುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.


Spread the love