ಹೆತ್ತವರು ಮಕ್ಕಳನ್ನು ಸಹಜವಾಗಿ ಬದುಕಲು ಬಿಡಿ; ಜಿಪಂ ಸಿಇಒ ಡಾ.ಎಂ.ಆರ್. ರವಿ

Spread the love

ಹೆತ್ತವರು ಮಕ್ಕಳನ್ನು ಸಹಜವಾಗಿ ಬದುಕಲು ಬಿಡಿ; ಜಿಪಂ ಸಿಇಒ ಡಾ.ಎಂ.ಆರ್. ರವಿ

ಮಂಗಳೂರು: ನಾಡಿನ ಪ್ರಮುಖ ದಿನಪತ್ರಿಕೆಯಾದ ವಿಜಯ ಕರ್ನಾಟಕ ಹಾಗೂ ಐಡಿಯಲ್ ಐಸ್ ಕ್ರೀಮ್ ವತಿಯಿಂದ ಆಯೋಜಿಸಿದ ಮುದ್ದುಕೃಷ್ಣ ಹಾಗೂ ಮುದ್ದುಕಂದ ಸ್ವರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಎಸ್‍ಸಿಡಿಸಿಸಿ ಬ್ಯಾಂಕ್‍ನ ಸಭಾಂಗಣದಲ್ಲಿ ಮಂಗಳವಾರ ಜರುಗಿತು.

ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ ಅವರು ಮಕ್ಕಳಿಗೆ ಮಕ್ಕಳ ರೀತಿಯಲ್ಲಿ ಇರಲು ಹೆತ್ತವರು ಬಿಡಬೇಕು ಅಲ್ಲದೆ ಅವರಿಗೆ ಸಹಜವಾಗಿ ಬದುಕುವ ಸ್ಥಿತಿಯನ್ನು ಮಾಡಿದಾಗ ಬುದ್ದಿವಂತರಾಗಿ ಬೆಳೆಯುತ್ತಾರೆ. ಹೆತ್ತವರು ತಮ್ಮ ವೈಫಲ್ಯಗಳನ್ನು ಮಕ್ಕಳ ಮೇಲೆ ಹಾಕಬಾರದು. ಈ ಮೂಲಕ ಅವರ ಅಮೂಲ್ಯವಾದ ಬದುಕನ್ನು ಕಸಿಯುವ ಕೆಲಸ ಮಾಡಲೇಬಾರದು. ವಿಕದ ವಿನೂತನ ಸ್ವರ್ಧೆ  ನಿಜವಾಗಿಯೂ ಶ್ಲಾಘನೀಯ. ಮಂಗಳೂರು ಜನ ಏನೂ ಮಾಡಿದ್ರೂ ವಿಶೇಷವಾಗಿರುತ್ತದೆ. ದಕ್ಷಿಣ ಕನ್ನಡದವರು ಬರೀ ಬುದ್ದಿವಂತರು ಮಾತ್ರವಲ್ಲ ಹೃದಯವಂತರು ಕೂಡ ಆಗಿದ್ದಾರೆ. ಹೃದಯವಂತಿಕೆ ಇದ್ದಾರೆ ಮಾತ್ರ ಸೌಂದರ್ಯ ಅರಳುತ್ತದೆ. 5 ಸಾವಿರ ಮಕ್ಕಳ ಫೋಟೋಗಳ ನಡುವೆ ವಿಜೇತರನ್ನು ಹುಡುಕಿ ತೆಗೆಯುವುದು ನಿಜವಾಗಿಯೂ ತಾಳ್ಮೆಯ ಕೆಲಸ ಮೆಚ್ಚುವಂತದ್ದು ಎಂದರು.

ಐಡಿಯಲ್ ಐಸ್‍ಕ್ರೀಮ್ ಮಾಲೀಕ ಮುಕುಂದ ಕಾಮತ್ ಮಾತನಾಡಿ, ದೇವರು ಏನಾದರೂ ವರ ನೀಡಿದರೆ ಮತ್ತೊಂದು ಸಲ ಬಾಲ್ಯವ್ಯವಸ್ಥೆಗೆ ಮರಳುವಂತೆ ಬೇಡುತ್ತೇನೆ. ಈ ಬಾರಿ ಜಿಎಸ್‍ಟಿಯಲ್ಲಿ ಹೋಟೆಲ್ ಹಾಗೂ ಐಸ್‍ಕ್ರೀಮ್ ಉದ್ಯಮಕ್ಕೆ  ಸಾಕಷ್ಟು ವಿನಾಯಿತಿ ಸಿಕ್ಕಿದೆ. ಎಂದಿಗೂ ಈ ಕ್ಷೇತ್ರದಲ್ಲಿ ಬೆಲೆ ಏರಿಕೆ ಇದ್ದೇ ಇರುತ್ತದೆ ಮೊದಲ ಬಾರಿಗೆ ಇಳಿಕೆಯಾಗುತ್ತಿರುವುದು ಸಂತಸಕರ ಬೆಳವಣಿಗೆ ಎಂದರು.

ವಿಜಯ ಕರ್ನಾಟಕದ ಮಂಗಳೂರು ಸ್ಥಾನೀಯ ಸಂಪಾದಕ ಯು.ಕೆ. ಕುಮಾರ್‍ನಾಥ್ ಮಾತನಾಡಿ ಕಳೆದ 15 ವರ್ಷಗಳಿಂದ ನಿರಂತರವಾಗಿ ಈ ಮುದ್ದು ಕಂದ ಸ್ಪರ್ಧೆ ಹಾಗೂ 6 ವರ್ಷಗಳಿಂದ ನಿರಂತರವಾಗಿ ಮುದ್ದುಕೃಷ್ಣ ಸ್ಪರ್ಧೆಗಳು ನಡೆಯುತ್ತಿದೆ. ಆರಂಭದಲ್ಲಿ ಮಂಗಳೂರು, ಉಡುಪಿ, ಕಾಸರಗೋಡು ಮಾತ್ರಕ್ಕೆ ಸೀಮಿತವಾದ ಸ್ಪರ್ಧೆ ಈಗ ಬೇರೆ ಜಿಲ್ಲೆ, ಬೇರೆ ರಾಜ್ಯ, ಬೇರೆ ದೇಶಗಳಲ್ಲಿರುವ ದ.ಕ.ದ ಮಂದಿ ಸ್ವರ್ಧೆಗೆ ಎಂಟ್ರಿಗಳನ್ನು ಕಳುಹಿಸಿ ಕೊಡುತ್ತಿದ್ದಾರೆ. ಪತ್ರಿಕೆಯಲ್ಲಿ ಪ್ರಕಟಣೆ ಕೊಟ್ಟ ಕೂಡಲೇ ಸಾಮಾಜಿಕ ಜಾಲತಾಣಗಳ ಮೂಲಕ  ಮಾಹಿತಿ ಹರಿದಾಡಿ ಪ್ರತಿ ವರ್ಷನೂ ಸ್ವರ್ಧೆಯ ಎಂಟ್ರಿಗಳು ಏರುತ್ತಿದೆ  ಎಂದು ಹೇಳಿದರು.

ಬಳಿಕ ಮುದ್ದುಕೃಷ್ಣ ಹಾಗೂ ಮುದ್ದು ಕಂದ ಸ್ವರ್ಧೆಯಲ್ಲಿ ವಿಜೇತರಾಗಿರುವ ಪುಟಾಣಿಗಳಿಗೆ ಬಹುಮಾನ ನೀಡಲಾಯಿತು. ಮುದ್ದು ಕಂದ ಸ್ವರ್ಧೆಯ ಪ್ರಥಮ ಬಹುಮಾನ ವಿಜೇತ ಛಾಯಾಚಿತ್ರಗಾರ  ಶರತ್ ಕನ್ನಂಗಿ ಶ್ರೀ ಗುರು ಕಾರ್ಕಳ ಅವರಿಗೆ ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಚಿತ್ರನಟಿ ಶಿಲ್ಪಾ ಸುವರ್ಣ, ತೀರ್ಪುಗಾರರಾದ ಡಾ ಸಿಂಧು, ಛಾಯಾಚಿತ್ರಗಾರ ದಯಾನಂದ ಬಂಟ್ವಾಳ್, ಪ್ರಸರಣ ವಿಭಾಗದ ನಾರಾಯಣ ಭಟ್, ಜಾಹೀರಾತು ವಿಭಾಗದ ಮುಖ್ಯಸ್ಥ ರಾಮಕೃಷ್ಣ ಡಿ, ಸ್ವರ್ಧೆಯ ತೀರ್ಪುಗಾರ ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು.


Spread the love