4 ತಿಂಗಳಲ್ಲಿ 5 ಕೆಜಿ ತೂಕ ಇಳಿಸಿ, ಕೇಳಿದಲ್ಲಿ ವರ್ಗಾವಣೆ ಪೋಲಿಸರಿಗೆ ಅಣ್ಣಾಮಲೈ ಆಫರ್

Spread the love

4 ತಿಂಗಳಲ್ಲಿ 5 ಕೆಜಿ ತೂಕ ಇಳಿಸಿ, ಕೇಳಿದಲ್ಲಿ ವರ್ಗಾವಣೆ ಪೋಲಿಸರಿಗೆ ಅಣ್ಣಾಮಲೈ ಆಫರ್

ಚಿಕ್ಕಮಗಳೂರು: ಹೆಚ್ಚು ತೂಕವನ್ನು ಹೊಂದಿರುವ ಪೋಲಿಸರು ಇನ್ನು ನಾಲ್ಕು ತಿಂಗಳಲ್ಲಿ 5 ಕೆಜಿ ತೂಕ ಇಳಿಸಿಕೊಂಡರೆ ಅವರು ಕೇಳಿದ್ದಲ್ಲಿ ಅವರಿಗೆ ವರ್ಗಾವಣೆ ಮಾಡುವುದಾಗಿ ಚಿಕ್ಕಮಗಳೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿಲ್ಲೆಯ ಪೋಲಿಸರಿಗೆ ಹೊಸ ಆಫರ್ ನೀಡಿದ್ದಾರೆ.

ರಾಮನಹಳ್ಳಿ ಸಶಸ್ತ್ರ ಪೋಲಿಸ್ ಕವಾಯತು ಮೈದಾನದಲ್ಲಿ ನಡೆದ ಪೋಲಿಸ್ ವಾರ್ಷಿಕ ಕ್ರೀಡಾಕೂಟದ ಉದ್ಘಾಟನ ಸಮಾರಂಭದಲ್ಲಿ ಅವರು ಮಾತನಾಡಿ ಪೋಲಿಸರು ಇತರರಿಗೆ ಮಾದರಿಯಾಗಿರಬೇಕು. ಸೇವೆಗೆ ಸೇರಿದಾಗಿನಿಂದ ನಿವೃತ್ತಿಯಾಗುವ ವರೆಗೂ ದೇಹವನ್ನು ಒಂದೇ ರೀತಿಯಲ್ಲಿ ಇಟ್ಟುಕೊಳ್ಳಬೇಕು. ಇದು ಕೆಲವೊಮ್ಮೆ ಕಷ್ಟ ಸಾಧ್ಯವಾದರೂ ಸಾಧ್ಯವಾದಷ್ಟು ಮಟ್ಟಿಗೆ ಪಾಲಿಸಬೇಕು ಎಂದ ಅವರು,ತಮ್ಮ ಕಚೇರಿಯನ್ನು ಪ್ರವೇಶಿಸಿದ ಕೂಡಲೇ ಅಲ್ಲಿ ತೂಕದ ಯಂತ್ರವಿದ್ದು ಈಗ ಇರುವ ತೂಕವನ್ನು 4 ತಿಂಗಳಲ್ಲಿ 5 ಕೆಜಿ ಇಳಿಸಿಕೊಂಡಲ್ಲಿ ಅಂತಹ ಪೋಲಿಸರಿಗೆ ಅವರು ಕೇಳಿದ ಸ್ಥಳಕ್ಕೆ ವರ್ಗಾವಣೆ ಮಾಡಿಕೊಡಲಾಗುವುದು ಎಂದರು.

ಪೋಲಿಸ್ ಇಲಾಖೆಯಲ್ಲಿ ಕ್ರೀಡೆಗೆ ಸಾಕಷ್ಟು ಉತ್ತೇಜನ ನೀಡಲಾಗುತ್ತಿದ್ದು ಜಿಲ್ಲಾ ಮಟ್ಟದಲ್ಲಿ ಗೆದ್ದವರು ರಾಜ್ಯ ಮಟ್ಟಕ್ಕೆ ಅಲ್ಲಿಂದ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ಹೋಗಲು ಅವಕಾಶವಿದೆ. ಕಳೆದ ವರ್ಷ ರಾಜ್ಯದಿಂದ 4 ಜನ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದರು. ಈ ಬಾರಿ ಜಿಲ್ಲೆಯಿಂದ ಅಂತರಾಷ್ಟ್ರೀಯ ಮಟ್ಟಕ್ಕೆ ಹೋಗಬೇಕು ಎನ್ನವುದು ನನ್ನ ಆಸೆ ಎಂದರು.

ಕ್ರೀಡಾ ಕೂಟ ಉದ್ಘಾಟಿಸಿದ ಜಿಲ್ಲಾಧಿಕಾರಿ ಜಿ ಸತ್ಯವತಿ ಅವರು ಪೋಲಿಸರು ದಿನದ 24 ಗಂಟೆಯೂ ಒತ್ತಡದಿಂದ ಕೆಲಸ ನಿರ್ವಹಿಸುತ್ತಿದ್ದು, ಒತ್ತಡದ ನಡುವೆ ಆರೋಗ್ಯದತ್ತಲೂ ಗಮನ ಹರಿಸಬೇಕು ಎಂದರು. ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿ ಅಣ್ಣಾಮಲೈ ಅವರಿಗೆ ಕ್ರೀಡೆಯಲ್ಲಿ ಸಾಕಷ್ಟು ಆಸಕ್ತಿ ಇದ್ದು, ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುತ್ತಾರೆ. ಜಿಲ್ಲೆಯಲ್ಲಿ ಅವರು ವ್ಯಾಯಾಮ ಶಾಲೆ ಹಾಗೂ ತೆರೆಯಲು ಮುಂದಾಗಬೇಕು ಎಂದರು.


Spread the love