ಕ್ವಾರಂಟೈನ್ ಮುಗಿಸಿ ಹೋದವರಲ್ಲಿ ಸೋಂಕು ಪತ್ತೆ: ಕುಂದಾಪುರ ತಾಲೂಕಿನ ಹಲವೆಡೆ ಕಂಟೈನ್ ಮೆಂಟ್ ಝೋನ್!

Spread the love

ಕ್ವಾರಂಟೈನ್ ಮುಗಿಸಿ ಹೋದವರಲ್ಲಿ ಸೋಂಕು ಪತ್ತೆ: ಕುಂದಾಪುರ ತಾಲೂಕಿನ ಹಲವೆಡೆ ಕಂಟೈನ್ ಮೆಂಟ್ ಝೋನ್!

ಕುಂದಾಪುರ: ಕ್ವಾರಂಟೈನ್ ಮುಗಿಸಿದ ಬಳಿಕ ಸರಕಾರದ ಆದೇಶದ ಮೇರೆಗೆ ಮನೆಗೆ ಬಂದವರಿಗೆ ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆ ಕುಂದಾಪುರ ತಾಲೂಕಿನ ಕೆಲವೆಡೆ ಕಂಟೈನ್ ಮೆಂಟ್ ಝೋನ್ ಮಾಡಲಾಗಿದೆ.

ಕೋವಿಡ್ ಸೋಂಕು ಪತ್ತೆಯಾದ ಹಿನ್ನೆಲೆ ಸೋಂಕಿತರನ್ನು ಉಡುಪಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಲೂಕಿನ ಕುಂದಾಪುರ ನಗರ ಠಾಣಾ ವ್ಯಾಪ್ತಿಯ ಕೋಡಿಯಲ್ಲಿ, ಗ್ರಾಮಾಂತರ ಠಾಣೆಯ ನೇರಳಕಟ್ಟೆ, ಬಸ್ರೂರು, ಹಳ್ನಾಡುವಿನ ಸೋಂಕಿತರ ಮನೆಯ 200ಮೀಟರ್ ವ್ಯಾಪ್ತಿಯಲ್ಲಿ ನಗರ ಠಾಣೆಯ ಪಿಎಸ್ಐ ಹರೀಶ್ ಆರ್ ನಾಯ್ಕ್ ಹಾಗೂ ಸಿಬ್ಬಂದಿಗಳು ಪೊಲೀಸ್ ಬ್ಯಾಂಡ್ ಹಾಕಿ ಸಾರ್ವಜನಿಕ ಸಂಪರ್ಕಕ್ಕೆ ನಿರ್ಬಂದ ಹೇರಿದ್ದಾರೆ.

ಇನ್ನು ಶಂಕರನಾರಾಯಣ ಠಾಣಾ ವ್ಯಾಪ್ತಿಯ ವಂಡಾರು ಗ್ರಾಮದ ಮಾರ್ವಿಯಲ್ಲಿ ಪೂನದಿಂದ ಆಗಮಿಸಿದ ಒಂದೂವರೇ ವರ್ಷದ ಮಗುವಿನ ವರದಿಯು ಪಾಸಿಟಿವ್ ಬಂದಿದ್ದು, ಕೋಟತಟ್ಟು ಗ್ರಾ.ಪಂ. ವ್ಯಾಪ್ತಿಯ ಬಾರಿಕೆರೆಯ 100 ಮೀ ವ್ಯಾಪ್ತಿಯ 12 ಮನೆ ಮತ್ತು ವಂಡಾರು ಮಾರ್ವಿಯನ್ನು ಕಂಟೈನ್ ಮೆಂಟ್ ಝೋನ್ ಮಾಡಲಾಗಿದೆ.

ಕಳೆದೆರಡು ದಿನಗಳಿಂದ ಏಳು ದಿನ‌ ಕ್ವಾರಂಟೈನ್ ಮುಗಿಸಿದವರನ್ನೂ ಒಳಗೊಂಡಂತೆ ಕ್ವಾರಂಟೈನ್ ನಲ್ಲಿರುವವರ ಪರೀಕ್ಷಾ ವರದಿ ಬಾರದಿದ್ದರೂ ಮನೆಗೆ ಕಳುಹಿಸಿಕೊಡಲು ಸರ್ಕಾರ ಆದೇಶ ಮಾಡಿತ್ತು. ಇದೀಗ ಮನೆಗೆ ಬಂದ ಬಳಿಕ ಕೆಲವರ ವರದಿ ಪಾಸಿಟಿವ್ ಬರುತ್ತಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಕುಂದಾಪುರ ತಾಲೂಕಿನ ಕೆಲವೆಡೆ ಇದೇ ಮೊದಲ ಬಾರಿಗೆ ಕಂಟೈನ್ ಮೆಂಟ್ ಝೋನ್ ಆಗಿದ್ದು, ತಾಲೂಕಿನ ಜನರಿಗೆ ಕಂಟೈನ್ ಮೆಂಟ್ ಝೋನ್ ಇನ್ನಷ್ಟು ನಿದ್ದೆಗೆಡಿಸಿದೆ.


Spread the love

1 Comment

  1. ಕ್ವಾರಂಟೈನ್ ಮುಗಿದು ರಿಪೋರ್ಟ್ ಬಾರದವರನ್ನ ದಯವಿಟ್ಟು ಮನೆಗಳಿಗೆ ಕಳುಹಿಸಿ ಕೊಡಬೇಡಿ ಸರ್.. ಅವರ ರಿಪೋರ್ಟ್ ಬಂದ ನಂತರವೆ ಕಳುಹಿಸಿ ಕೂಡಿ ಸರ್ ಕಳಕಳಿಯ ವಿನಂತಿ…

Comments are closed.