ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ವಾಸ್ತವ್ಯ

ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ವಾಸ್ತವ್ಯ

ಉಡುಪಿ: ನಗರದ ಜಿಲ್ಲಾ ಆಸ್ಪತ್ರೆಯ ಸ್ಥಿತಿಗತಿಯನ್ನು ಶುಕ್ರವಾರ ರಾತ್ರಿ ಖುದ್ದು ಪರಿಶೀಲಿಸಿದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಆಸ್ಪತ್ರೆಯಲ್ಲೇ ವಾಸ್ತವ್ಯ ಮಾಡಿದರು. ಅದಕ್ಕೂ ಮೊದಲು ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿದರು.

 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಪ್ರವಾಸ ನಡೆಸಿ ಅಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ವಾಸ್ತವ್ಯ ಹೂಡುವ ಮೂಲಕ ಅಲ್ಲಿಗೆ ಭೇಟಿ ನೀಡುವ ಜನರ ಸಮಸ್ಯೆಗಳು ಮತ್ತು ಆರೋಗ್ಯ ಸೇವೆಯ ಕುರಿತು ಮಾಹಿತಿ ಕಲೆ ಹಾಕುವುದಾಗಿ ತಿಳಿಸಿದರು. ಸಾರ್ವಜನಿಕರ ಆರೋಗ್ಯ ಸೌಕರ್ಯ, ಕೊರತೆಗಳನ್ನು ತಿಳಿದು ಕ್ರಮ ವಹಿಸುವ ಸಲುವಾಗಿ ಆಸ್ಪತ್ರೆಗಳಿಗೆ ಭೇಟಿ ಕೊಡುತ್ತಿದ್ದೇನೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವಾಸ್ತವ್ಯ ಹೂಡುವ ಮೂಲಕ ಆರೋಗ್ಯ ಸೌಲಭ್ಯಗಳಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಅಲಿಸುತ್ತಿದ್ದೇನೆ ಎಂದು ಸಚಿವರು ನುಡಿದರು.

ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳು ಸುಧಾರಣೆ ಆಗಬೇಕು. ಖಾಸಗಿ ಆಸ್ಪತ್ರೆಗಳಿಗೆ ಪ್ರತಿಸ್ಪರ್ಧಿಯಾಗಿ ಸರ್ಕಾರಿ ಆಸ್ಪತ್ರೆಗಳು ಬೆಳೆಯಬೇಕು. ಈ ಹಿಂದೆ ಕೆಪಿಎಸ್ಸಿಯಿಂದ ವೈದ್ಯರ ನೇಮಕಾತಿ ಮಾಡಿಕೊಳ್ಳುತ್ತಿದ್ದೆವು. ಆದರೆ, ಈಗ ಡಿಎಚ್ಒಗಳಿಗೆ ವೈದ್ಯರ ನೇಮಕಾತಿ ಅಧಿಕಾರ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ಉಡುಪಿ ಸರ್ಕಾರಿ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೇಗೇರಿಸುವ ಕುರಿತು ಮಾತನಾಡಿದ ಅವರು ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದಲ್ಲಿ ಚರ್ಚಿಸಿ ಆರ್ಥಿಕ ಇಲಾಖೆಯ ಮಂಜೂರಾತಿ ಪಡೆದುಕೊಂಡು 250 ಹಾಸಿಗೆಗಳ ಆಸ್ಪತ್ರೆಯಾಗಿಸುವಲ್ಲಿ ಬದ್ದನಾಗಿದ್ದೇನೆ ಎಂದರು.

ವಿವಿಧ ವಿಭಾಗಕ್ಕೆ ಭೇಟಿಕೊಟ್ಟು ಅಲ್ಲಿ ನೀಡಲಾಗುತ್ತಿರುವ ಚಿಕಿತ್ಸೆ ವಿಧಾನಗಳ ಬಗ್ಗೆ ವಿವರ ಪಡೆದರು. ಅಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯಗಳು ಸಿಗುತ್ತಿವೆಯೇ ಎಂಬ ಬಗ್ಗೆ ಪ್ರಶ್ನಿಸಿದರು. ರೋಗಿಗಳೊಂದಿಗೆ ಮಾತನಾಡಿ ಯೋಗಕ್ಷೇಮ ವಿಚಾರಿಸಿದರು. ಚಿಕಿತ್ಸೆಗಾಗಿ ಬಂದಿದ್ದ ಸಾರ್ವಜನಿಕರೊಂದಿಗೆ ಮಾತನಾಡಿ ಚಿಕಿತ್ಸೆ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು.

ಆಸ್ಪತ್ರೆಯ ವೈದ್ಯರ ವಿಶ್ರಾಂತಿ ಕೊಠಡಿಯಲ್ಲಿ ಸಚಿವರು ವಾಸ್ತವ್ಯ ಹೂಡಿದರು. ಕೊಠಡಿಯಲ್ಲಿ ಸಚಿವರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹಾಲು ಹಣ್ಣು ಸೇವಿಸಿದ ಶ್ರೀರಾಮುಲು ಮಲಗಿದರು.