ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಮಹೋತ್ಸವದ ನಾಲ್ಕನೆಯ ದಿನ; ಹರಿದು ಬಂದ ಜನಸಾಗರ

Spread the love

ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಮಹೋತ್ಸವದ ನಾಲ್ಕನೆಯ ದಿನ; ಹರಿದು ಬಂದ ಜನಸಾಗರ

ಕಾರ್ಕಳ : ಅತ್ತೂರು ಸಂತ ಲಾರೆನ್ಸರ ಬಸಿಲಿಕಾದ ವಾರ್ಷಿಕ ಮಹೋತ್ಸವದ ನಾಲ್ಕನೆಯ ದಿನ ವಾರ್ಷಿಕ ಹಬ್ಬವು ವಿಜೃಂಭಣೆಯಿಂದ ಜರುಗಿತು. ಮಹೋತ್ಸವದ ಪ್ರಮುಖ ದಿವ್ಯ ಬಲಿಪೂಜೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾರವರು ನೆರವೇರಿಸಿದರು.

ಪ್ರಭು ಯೇಸುವಿನ ದಿವ್ಯ ಬಲಿದಾನ ಮತ್ತು ಪುನರುತ್ಥಾನದ ಮಹಿಮೆಯಲ್ಲಿ ಭಾಗಿಯಾಗಿ, ದೈನಂದಿನ ಜೀವನದಲ್ಲಿ ಪವಿತ್ರತೆಯನ್ನು ಗಳಿಸಲು ಸಾಧ್ಯ. ‘ಪವಿತ್ರತೆ’ ಕಥೋಲಿಕ ಪವಿತ್ರ ತಿರುಸಭೆಯ ಶೋಭೆಯನ್ನು ಹೆಚ್ಚಿಸಿ ಅದನ್ನು ಆಕರ್ಶಣೀಯಗೊಳಿಸಿದೆ. ಪ್ರಭು ಕ್ರಿಸ್ತರು ತೋರಿಸಿಕೊಟ್ಟ ವಿಧೇಯ ಮಾರ್ಗದಲ್ಲಿ ನಡೆದು, ಭಾತ್ರತ್ವದ ಭಾಂಧವ್ಯದ ಮೂಲಕ ಎಲ್ಲರೊಡನೆ ಪ್ರೀತಿಯಿಂದ ಬಾಳಿದಾಗ, ದೇವರ ಪವಿತ್ರತೆಯಲ್ಲಿ ನಾವು ಭಾಗಿಯಾಗಲು ಸಾಧ್ಯ ಎಂದು ಅವರು ತಮ್ಮ ಪ್ರವಚನದಲ್ಲಿ  ನುಡಿದರು.

ಸಂಜೆ 5.30 ಯ ಕನ್ನಡ ಬಲಿಪೂಜೆಯನ್ನು ನೆರವೇರಿಸಿದ ಬೆಳ್ತಂಗಡಿಯ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಲೋರೆನ್ಸ್ ಮುಕ್ಕುಝ್ಹಿಯವರು ದೇವರ ಮಕ್ಕಳಾದ ನಾವೆಲ್ಲರೂ ದೇವರಂತೆ ಪಾವಿತ್ರತೆಯನ್ನು ಹೊಂದಿ ಬಾಳಲು ಆಹ್ವಾನಪಟ್ಟವರಾಗಿದ್ದೇವೆ. ಸನ್ಮಾರ್ಗದಲ್ಲಿ ಬಾಳಲು ಪ್ರಯತ್ನಿಸಿದಾಗ ನಾವು ಪವಿತ್ರತೆಯನ್ನು ಗಳಿಸಲು ಸಾಧ್ಯ ಎಂದು ಅವರು ತಮ್ಮ ಪ್ರವಚನದಲ್ಲಿ ನುಡಿದರು.

ನಾನು ಪವಿತ್ರನಾಗಿರುವಂತೆ ನೀವೂ ಪವಿತ್ರರಾಗಿರಿ ಎಂಬ ಮಹೋತ್ಸವದ ಧ್ಯೇಯ ವಾಕ್ಯದ ಮೇಲೆ ಕೇಂದ್ರಿಕೃತಗೋಂಡು ಇಡೀ ದಿನದ ಬಲಿಪೂಜೆಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು  ನೆರವೇರಿದವು. ರಾತ್ರಿ 11.30 ರವರೆಗೆ ಕೊಂಕಣಿಯಲ್ಲಿ ಎಂಟು ಮತ್ತು ಕನ್ನಡದಲ್ಲಿ ಮೂರು ದಿವ್ಯ ಬಲಿಪೂಜೆಗಳು ನೆರವೇರಿದವು. ಇಡೀ ದಿನ ಸಹಸ್ರಾರು ಸಂಖ್ಯೆಯ ಭಕ್ತರು ಶೃದ್ಧೆ  ಭಕ್ತಿಯಿಂದ ಧಾರ್ಮಿಕ ವಿಧಿ ವಿಧಾನದಲ್ಲಿ ಭಾಗಿಯಾದರು.

ಗುರುವಾರ ವಾರ್ಷಿಕ ಹಬ್ಬದ ಕೊನೆಯ ದಿನವಾಗಿದ್ದು, ಬೆಳಿಗ್ಗೆ 10.30 ಘಂಟೆಯ ಹಬ್ಬದ ಪ್ರಮುಖ ದಿವ್ಯ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಜೆರಾಲ್ಡ್ ಲೋಬೊರವರು ನೆರವೇರಿಸಲಿದ್ದಾರೆ. ಇಡೀ ದಿನ ಹತ್ತು ಬಲಿಪೂಜೆಗಳು ನಡೆಯಲಿದ್ದು, ರಾತ್ರಿ 9.30ಕ್ಕೆ ಕೊನೆಯ ಬಲಿಪೂಜೆಯು ಕೊಂಕಣಿಯಲ್ಲಿ ನಡೆಯಲಿದೆ. ಇದರೊಂದಿಗೆ ವಾರ್ಷಿಕ ಮಹೋತ್ಸವಕ್ಕೆ ತೆರೆ ಬೀಳಲಿದೆ. ಕೊನೆಯ ದಿನ ಬಸಿಲಿಕಾಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.


Spread the love