ಅತ್ತೂರು ಸಂತ ಲಾರೆನ್ಸ್ ಬೆಸಿಲಿಕಾದಲ್ಲಿ ವಾರ್ಷಿಕ ಮಹೋತ್ಸವಕ್ಕೆ ಗರಿಗೆದರಿದ ಸಿದ್ದತೆ

Spread the love

ಅತ್ತೂರು ಸಂತ ಲಾರೆನ್ಸ್ ಬೆಸಿಲಿಕಾದಲ್ಲಿ ವಾರ್ಷಿಕ ಮಹೋತ್ಸವಕ್ಕೆ ಗರಿಗೆದರಿದ ಸಿದ್ದತೆ

ಕಾರ್ಕಳ: ತಾಲ್ಲೂಕಿನ ಅತ್ತೂರು ಸೇಂಟ್ ಲಾರೆನ್ಸ್ ಬೆಸಿಲಿಕದಲ್ಲಿ ಇದೇ 27ರಿಂದ 31ರ ತನಕ ನಡೆಯಲಿರುವ ಸಾಂತಮಾರಿ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದ್ದು, ಐದು ದಿನಗಳ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಜನರು ಭಾಗಿಯಾಗುವ ನಿರೀಕ್ಷೆ ಇದೆ ಎಂದು ಕ್ಷೇತ್ರದ ನಿರ್ದೇಶಕ ರೆ.ಫಾ. ಜಾರ್ಜ್ ಡಿಸೋಜ ತಿಳಿಸಿದರು.

‘27ರಂದು ಬೆಳಿಗ್ಗೆ 7.30ಕ್ಕೆ ಬಲಿಪೂಜೆ, ಮಧ್ಯಾಹ್ನ 3 ಹಾಗೂ 5ಗಂಟೆಗೆ ಮಕ್ಕಳಿಗಾಗಿ ವಿಶೇಷ ಬಲಿಪೂಜೆ ನಡೆಯಲಿದೆ. 28ರಂದು ಬೆಳಿಗ್ಗೆ 10ಕ್ಕೆ ಹಾಗೂ ಮಧ್ಯಾಹ್ನ 3.30ಕ್ಕೆ ಅಸ್ವಸ್ಥರಿಗಾಗಿ ದಿವ್ಯ ಬಲಿಪೂಜೆ ನಡೆಯಲಿದೆ. ಐದು ದಿನಗಳಲ್ಲಿ 35 ಬಲಿಪೂಜೆಗಳು ಕೊಂಕಣಿಯಲ್ಲಿ, 11 ಬಲಿಪೂಜೆಗಳು ಕನ್ನಡದಲ್ಲಿ ನಡೆಯಲಿದ್ದು ಶಿವಮೊಗ್ಗ, ಬೆಳ್ತಂಗಡಿ, ಮೈಸೂರು, ಮಂಗಳೂರು ಹಾಗೂ ಉಡುಪಿ ಧರ್ಮಾಧ್ಯಕ್ಷರು ಬಲಿಪೂಜೆ ಅರ್ಪಿಸಲಿದ್ದಾರೆ’ ಎಂದು ಮಂಗಳವಾರ ಚರ್ಚ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

‘ಯಾತ್ರಿಕರ ಸುರಕ್ಷತೆಗಾಗಿ ಹಳೆಯ ಮತ್ತು ಹೊಸ ಇಗರ್ಜಿಗಳ ಒಳಗಡೆ ಪುಣ್ಯಕ್ಷೇತ್ರದ ವಠಾರದಲ್ಲಿ ಒಟ್ಟು 64 ಕಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಕಾನೂನು ಮತ್ತು ಶಿಸ್ತು ಪಾಲನೆಗಾಗಿ ಬಾಂಬ್‌ ನಿಷ್ಕ್ರಿಯ ದಳ, ರಿಸರ್ವ್ ಪೊಲೀಸ್ ತುಕಡಿ ಹಾಗೂ ಪೋಲಿಸ್ ಸಿಬ್ಬಂದಿಯ ಸೇವೆಯನ್ನು ಗರಿಷ್ಠ ‍ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲಾಗುವುದು. ಜಾತ್ರಾ ಕಾಲದಲ್ಲಿ ಭಿಕ್ಷಾಟನೆಯನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಹಬ್ಬದ ಶುಕ್ರವಾರ ಭಿಕ್ಷಕರಿಗೆ ನೀಡುತ್ತಿದ್ದ ಹಣ ವಿತರಣೆಯನ್ನು ರಾಜ್ಯ ಸರ್ಕಾರದ ಸುತ್ತೋಲೆಯಂತೆ ನಿಷೇಧಿಸಲಾಗಿದೆ’ ಎಂದು ವಿವರಿಸಿದರು.

‘ಕ್ಷೇತ್ರದ ವಠಾರದಲ್ಲಿ ಐದು ಕಡೆ ಶುದ್ಧ ಹಾಗೂ ತಂಪಾದ ನೀರಿನ ವ್ಯವಸ್ಥೆ ಮಾಡಲಾಗಿದೆ. ಪುಣ್ಯಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳ ವಿಸ್ತರಣೆ ನಡೆದಿದ್ದು, ಸುಗಮ ಸಂಚಾರಕ್ಕೆ ವಿಶೇಷ ಗಮನ ನೀಡಲಾಗಿದೆ. ವಾಹನಗಳ ದಟ್ಟಣೆ ತಪ್ಪಿಸಲು ಧೂಪದಕಟ್ಟೆ ಸೇರಿದಂತೆ ಹಲವೆಡೆ ಪಾರ್ಕಿಂಗ್‌ಗೆ ಅವಕಾಶ ಮಾಡಿಕೊಡಲಾಗಿದೆ. ಅಲ್ಲಿಂದ ನೇರ ಕ್ಷೇತ್ರಕ್ಕೆ ಬರಲು ಅನುಕೂ ಲವಾಗುವಂತೆ ದ್ವಾರದ ಎಡಭಾಗಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಭಿಕ್ಷಾಟನೆಯ ಕುರಿತಂತೆ ರಾಜ್ಯ ಸರಕಾರದ ಆದೇಶದಂತೆ ಈ ಬಾರಿ ಅತ್ತೂರು ಬಸಿಲಿಕಾದ ಜಾತ್ರಾ ಮಹೋತ್ಸವದ ವೇಳೆ ಚರ್ಚ್ ಪಾಲನಾ ಮಂಡಳಿ ಭೀಕ್ಷಾಟನೆ ಹಾಗೂ ಭಿಕ್ಷುಕರನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಆದರೆ ಭಿಕ್ಷುಕರ ಹೆಸರಿನಲ್ಲಿ ಭಿಕ್ಷಾಪಾತ್ರೆ ಮಾತ್ರ ಇರಲಿದೆ ಎಂದು ಚರ್ಚ್ ಪಾಲನಾ ಮಂಡಳಿ ತಿಳಿಸಿದೆ.

ಪ್ರತಿವರ್ಷ ಜನವರಿ ತಿಂಗಳಲ್ಲಿ ನಡೆಯುವ ಅತ್ತೂರು ಸಾಂತ್ ಮಾರಿ ಮಹೋತ್ಸವದ ಸಂದರ್ಬದಲ್ಲಿ ಚರ್ಚ್ ವಠಾರದಲ್ಲಿ ಭಿಕ್ಷುಕರಿಗೆ ಪ್ರತ್ಯೇಕ ಹುಂಡಿಗಳನ್ನು ಇಡಲಾಗುತ್ತಿತ್ತು. ಹಬ್ಬ ಮುಗಿದ ಬಳಿಕ ಹುಂಡಿಯಿಂದ ಹಣವನ್ನು ಲೆಕ್ಕಾಚಾರ ಮಾಡಿದ ಬಳಿಕ ಹಣವನ್ನು ಅಲ್ಲಿಗೆ ಬರುವ ಭಿಕ್ಷುಕರ ಅರ್ಹತೆಗೆ ಅನುಗುಣವಾಗಿ ಹಂಚಲಾಗುತ್ತಿತ್ತು. ಕರ್ನಾಟಕ ಸರಕಾರದ ಪೊಲೀಸ್ ಇಲಾಖೆಯ ಮಹಾ ನಿರ್ಧೇಶಕರು ಮತ್ತು ಅರಕ್ಷಕರ ಮಹಾನಿರ್ದೇಶಕರು 2018 ಡಿ 15 ರಂದು ಹೊರಡಿಸಿದ ಸುತ್ತೋಲೆಯಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕರು 2019 ರ ಜನವರಿ 5ರಂದು ನೀಡಿದ ಲಿಖಿತ ಆದೇಶದಂತೆ ಕರ್ನಾಟಕ ಭಿಕ್ಷಟನೆ ನಿಷೇಧ ಕಾಯ್ದೆ 1975 ರ ಅನ್ವಯ ಭಿಕ್ಷಾಟನೆ ಅಪರಾಧವಾಗಿದೆ. ಜಾತ್ರಾ ಸಮಯದಲ್ಲಿ ಹಾಗೂ ಹಬ್ಬ ಮುಗಿದ ಬಳಿಕ ಭಿಕ್ಷುಕರಿಗೆ ಹಣ ವಿತರಣೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಜಾತ್ರಾ ಸಮಯದಲ್ಲಿ ವಿಶೇಷ ತಂಡವನ್ನು ರಚಿಸಿ ಭಿಕ್ಷಾಟನೆ ಮಾಡುವವರು ಕಂಡು ಬಂದಲ್ಲಿ ಅವರನ್ನು ಹಿಡಿದು ನಿರಾಶ್ರಿತರ ಕೇಂದ್ರಗಳಿಗೆ ಬಿಡುವ ವ್ಯವಸ್ಥೆಯನ್ನು ಪೊಲೀಸ್ ಇಲಾಖೆಯಿಂದ ಮಾಡಲಾಗುವುದು. ಸರ್ಕಾರದ ಆದೇಶವನ್ನು ಪಾಲಿಸುವದು ನಮ್ಮ ಕರ್ತವ್ಯ. ಈಗಾಗಲೇ ಜಾತ್ರೆ ವೇಳೆ ಭಿಕ್ಷಾಟನೆಯ ನಿಷೇಧದ ಕುರಿತು ಕ್ರಮ ಕೈಗೊಂಡಿದ್ದೇವೆ. ಇನ್ನು ಮುಂದೆ ಭಿಕ್ಷಾ ಪಾತ್ರೆಯಲ್ಲಿ ಸಂಗ್ರಹವಾದ ಹಣವನ್ನು ಕಷ್ಟದಲ್ಲಿದ್ದವರಿಗೆ ಹಂಚುವ ಕೆಲಸವನ್ನು ಚರ್ಚ್ ಪಾಲಾನಾ ಸಮಿತಿಯಿಂದ ಮಾಡಲಾಗುವುದು ಎಂದು ವಂ ಜೋರ್ಜ್ ಡಿಸೋಜಾ ತಿಳಿಸಿದರು

ಸಹಾಯಕ ಧರ್ಮಗುರು ಫಾ. ಜೆನ್ಸಿಲ್ ಆಳ್ವ, ಪಾಲನಾ ಮಂಡಳಿಯ ಉಪಾಧ್ಯಕ್ಷ ಜಾನ್ ಡಿಸಿಲ್ವ, ರಿಚರ್ಡ್ ಪಿಂಟೊ, ಕಾರ್ಯದರ್ಶಿ ಲೀನಾ ಡಿಸಿಲ್ವ, ಸಾರ್ವಜನಿಕ ಸಂಪರ್ಕಾಧಿಕಾರಿ ಸಂತೋಷ ಡಿಸಿಲ್ವ, ವೆಲೆರಿಯನ್ ಪಾಯಸ್, ಪ್ರಕಾಶ ಪಿಂಟೋ, ವಂದೇಶ ಮಥಾಯಸ್, ರೋನಾಲ್ಡ್ ನರೊನ್ಹಾ ಉಪಸ್ಥಿತರಿದ್ದರು.


Spread the love