ಅದ್ಧೂರಿ ಮೆರವಣಿಗೆಯಿಂದ ದಕ್ಷಿಣಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

Spread the love

ಅದ್ಧೂರಿ ಮೆರವಣಿಗೆಯಿಂದ ದಕ್ಷಿಣಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ಉಜಿರೆ: ಉಜಿರೆಯಲ್ಲಿ ನಡೆಯುತ್ತಿರುವ ದಕ್ಷಿಣಕನ್ನಡ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಯು ವಿಜೃಂಭಣೆಯಿಂದ ನಡೆಯಿತು. ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಮೊದಲ್ಗೊಂಡ ಮೆರವಣಿಗೆ ಜನಾರ್ಧನ ಸ್ವಾಮಿ ದೇವಳದ ಆವರಣದವರೆಗೆ ವೈಭವದಿಂದ ನಡೆಯಿತು.

ಉಜಿರೆ ಸಂತ ಅಂತೋನಿ ಚರ್ಚ್ ಪ್ರಧಾನ ಗುರುಗಳಾದ ವಂ| ಫಾ| ಜೋಸೆಫ್ ಮಸ್ಕರೇನ್ಹಸ್ ಮೆರವಣಿಗೆಗೆ ಚಾಲನೆ ನೀಡಿದರು. ಕನ್ನಡ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ನಡೆಸುವ ಮೂಲಕ ಮೆರವಣಿಗೆ ಆರಂಭಗೊಂಡಿತು. ಅಲಂಕೃತ ತೆರೆದ ವಾಹನದಲ್ಲಿ ಅಧ್ಯಕ್ಷರನ್ನು ಕುಳ್ಳಿರಿಸಿ, ಚೆಂಡೆ ವಾದನ, ಡ್ಯಾನ್ಸ್ ,ಕೊಂಬುವಾದ್ಯಗಳ ಮೂಲಕ ಕರೆದೊಯ್ಯಲಾಯಿತು. ಶ್ರೀಭುವನೇಶ್ವರಿ ದೇವಿಯ ಸ್ತಬ್ಧ ಚಿತ್ರ ಮೆರವಣಿಗೆಯಲ್ಲಿನ ಮುಖ್ಯ ಆಕರ್ಷಣೆಯಾಗಿತ್ತು. ಕಂಬಳದ ಕೋಣಗಳನ್ನು ಮೆರವಣಿಗೆಯಲ್ಲಿ ಕರೆತಂದು ‘ಕಂಬಳ ನಿಷೇಧ’ಕ್ಕೆ ವಿರೋಧ ವ್ಯಕ್ತಪಡಿಸಲಾಯಿತು.

ಶಾಲಾಮಕ್ಕಳ ಎನ್.ಸಿ.ಸಿ ನೇವಲ್ ಮತ್ತು ಗೈಡ್ಸ್ ಪಥಸಂಚಲನದ ತಂಡಗಳು ಕನ್ನಡ ಬಾವುಟ ಹಿಡಿದು ಭುವನೇಶ್ವರಿ ತಾಯಿಗೆ ಗೌರವ ಸಲ್ಲಿಸಿದರು. 10ರಿಂದ 25 ಮಕ್ಕಳ ವಿವಿಧ ನೃತ್ಯ ತಂಡಗಳು ಪ್ರದರ್ಶನ ನೀಡಿದವು. 15 ಹಂಸ ನೃತ್ಯದ ತಂಡ, ಕೀಲುಕುದುರೆ, ಮರಗಾಲು ನಡಿಗೆ, ಕರಾವಳಿಯ ಗಂಡುಕಲೆ ಯಕ್ಷಗಾನದ ಗೊಂಬೆಗಳು ನೋಡುಗರ ಮನಸೆಳೆದವು.

ಉಜಿರೆ ತಾಲೂಕು ಪಂಚಾಯತ್ ಸದಸ್ಯರಾದ ಶಶಿಧರ ಎಂ ಕಲ್ಮಂಜ ಕಾರ್ಯಕ್ರಮ ಉದ್ಘಾಟಿಸಿದರು. ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ಅಧ್ಯಕ್ಷ ಡಾ.ಬಿ ಯಶೋವರ್ಮ ಸೇರಿದಂತೆ ಅನೇಕ ಗಣ್ಯರು ಮೆರವಣಿಗೆಯಲ್ಲಿ ಭಾಗವಹಿಸಿದರು.


Spread the love