ಅನಾರೋಗ್ಯ: ಚಿಕಿತ್ಸೆಗೆ ಸ್ಪಂದಿಸದೆ ಯುವ ಪತ್ರಕರ್ತ ನಿಧನ

Spread the love

ಅನಾರೋಗ್ಯ: ಚಿಕಿತ್ಸೆಗೆ ಸ್ಪಂದಿಸದೆ ಯುವ ಪತ್ರಕರ್ತ ನಿಧನ

ಕುಂದಾಪುರ: ಸ್ಥಳೀಯ ಪತ್ರಿಕೆಯೊಂದರಲ್ಲಿ ವರದಿಗಾರನಾಗಿದ್ದ ಹೊಸಾಡು ಕೆಳ ಕುಂಬ್ರಿ ನಿವಾಸಿ ಹರೀಶ್(27) ಅನಾರೋಗ್ಯದಿಂದ ಶನಿವಾರ ಸಂಜೆ ಮೃತಪಟ್ಟಿದ್ದಾರೆ.

ಕುಂದಾಪುರದ ಸ್ಥಳೀಯ ಪತ್ರಿಕೆಯಾದ ಚಾಲುಕ್ಯ ಪತ್ರಿಕೆಯಲ್ಲಿ ಸುದ್ದಿ ಸಂಗ್ರಹ, ಪ್ರಸರಣ ಹಾಗೂ ಜಾಹೀರಾತು ವಿಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಹರೀಶ್ ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು.

ಕಳೆದ ವಾರದ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಎರಡು ದಿನದ ಹಿಂದೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಬಹು ಅಂಗಾಂಗ ವೈಫಲ್ಯದಿಂದ ಚಿಕಿತ್ಸೆಗೆ ಸ್ಪಂದಿಸದೆ ಹರೀಶ್ ಕೊನೆಯುಸಿರೆಳೆದಿದ್ದಾರೆ.

ಹರೀಶ್ ಮೃತದೇಹವನ್ನು ಭಾನುವಾರ ಹೊಸಾಡು ನಿವಾಸಕ್ಕೆ ತಂದಿದ್ದು ಅಂತಿಮ ದರ್ಶನ ಪ್ರಕ್ರಿಯೆಯ ಬಳಿಕ ಸಕಲ ವಿಧಿವಿಧಾನದೊಂದಿಗೆ ಅಂತ್ಯಸಂಸ್ಕಾರ ನಡೆಸಲಾಯಿತು. ಮೃತ ಹರೀಶ್ ತಂದೆ-ತಾಯಿ, ಇಬ್ಬರು ಹಿರಿಯ ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗ ಸ್ನೇಹಿತರನ್ನು ಅಗಲಿದ್ದಾರೆ.

ಮೃತರ ನಿವಾಸಕ್ಕೆ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ, ಕಾರ್ಯದರ್ಶಿ ನಾಗರಾಜ ರಾಯಪ್ಪನ ಮಠ ಮೊದಲಾದವರು ಭೇಟಿ ನೀಡಿ ಸಾಂತ್ವಾನ ಹೇಳಿದರು.

ಸೋಮವಾರ ಶ್ರದ್ಧಾಂಜಲಿ:
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಹರೀಶ್ ಅವರು ಮೃತರಾದ ಪ್ರಯುಕ್ತ ಮೃತರಿಗೆ ಶ್ರದ್ಧಾಂಜಲಿ ಸಭೆಯನ್ನು ದಿನಾಂಕ 5 ಅಕ್ಟೋಬರ್, ಸೋಮವಾರ ಬೆಳಿಗ್ಗೆ 11 ಗಂಟೆಗೆ ಕುಂದಾಪುರ ಪತ್ರಕರ್ತರ ಸಂಘದ ಕಛೇರಿಯಲ್ಲಿ ಏರ್ಪಡಿಸಲಾಗಿದೆ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ್ ಹೆಮ್ಮಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love