ಅಪ್ಪಾ, ಅಮ್ಮಾ ನಾನು ಮತ ಚಲಾಯಿಸುತ್ತೇನೆ,ನೀವು ಚಲಾಯಿಸಿ…

Spread the love

ಅಪ್ಪಾ, ಅಮ್ಮಾ ನಾನು ಮತ ಚಲಾಯಿಸುತ್ತೇನೆ,ನೀವು ಚಲಾಯಿಸಿ…

ಅಪ್ಪಾ, ಅಮ್ಮಾ, ತಪ್ಪದೇ 2019 ರ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿ.. ಯಾವುದೇ ಆಮಿಷಗಳಿಗೆ ಒಳಗಾಗಬೇಡಿ…. ಇದು ಮನೆಯಲ್ಲಿರುವ ಮಕ್ಕಳು ಹೇಳುವ ಮಾತಲ್ಲ, ಅಪ್ಪ ಅಮ್ಮ ಬಂಧು ಬಳಗದಿಂದ ದೂರ ಇದ್ದು, ಹಾಸ್ಟೆಲ್ಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಪತ್ರ ಬರೆಯುವ ಮೂಲಕ ಹೇಳುತ್ತಿರುವ ಮಾತುಗಳು..

ಉಡುಪಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ, ಮತದಾನ ಜಾಗೃತಿಗಾಗಿ ಕೈಗೊಂಡಿರುವ ವಿನೂತನ ಕಾರ್ಯಕ್ರಮ ಇದಾಗಿದೆ, ಜಿಲ್ಲೆಯ ಐಟಿಡಿಪಿ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯಲ್ಲಿರುವ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಸ್ಟೆಲ್ ಮತ್ತು ಆಶ್ರಮ ಶಾಲೆಗಳಲ್ಲಿರುವ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ, ಬಂಧು ಬಳಗದವರಿಗೆ, ಆತ್ಮೀಯರಿಗೆ ಪತ್ರದ ಮೂಲಕ ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ಪತ್ರ ಬರೆಯಲು ಅಗತ್ಯವಿರುವ ಅಂಚೆ ಕಾಗದಗಳನ್ನು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನೀಡುತ್ತಿದ್ದು, ಮಕ್ಕಳು ತಮ್ಮ ಪೋಷಕರಿಗೆ, ಹಿತೈಷಿಗಳಿಗೆ, ಸಂಬಂದಿಕರಿಗೆ ಎಷ್ಟು ಪತ್ರ ಬೇಕಾದರೂ ಬರೆಯಬಹುದಾಗಿದ್ದು, ಪತ್ರದಲ್ಲಿ ವಿಳಾಸ ನಮೂದಿಸಿ, ಪತ್ರಗಳನ್ನು ಹಾಸ್ಟೆಲ್ಗಳ ವಾರ್ಡನ್ ಗಳಿಗೆ ನೀಡಬೇಕು, ವಾರ್ಡನ್ಗಳು ಆ ಪತ್ರಗಳನ್ನು ಅಂಚೆ ಕಚೇರಿಗೆ ತಲುಪಿಸಿ ವಿಲೇವಾರಿಗೆ ಕ್ರಮ ಕೈಗೊಳ್ಳುತ್ತಾರೆ.

ಉಡುಪಿ ಜಿಲ್ಲೆಯಲ್ಲಿ ಐಟಿಡಿಪಿ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಒಟ್ಟು 61 ಹಾಸ್ಟಲ್ಗಳ ಸುಮಾರು 5000 ವಿದ್ಯಾರ್ಥಿಗಳಿಂದ ಈ ಪತ್ರ ಅಭಿಯಾನ ನಡೆಯಲಿದ್ದು, ವಿದ್ಯಾರ್ಥಿಗಳು ಪತ್ರದಲ್ಲಿ ಮತದಾನ ಮಾಡುವಂತೆ ತಿಳಿಸುವುದಲ್ಲದೇ ಮತದಾನದ ಮಹತ್ವ ಕುರಿತ ಸಂದೇಶಗಳನ್ನು ಸಹ ತಿಳಿಸಲಿದ್ದಾರೆ.

ಮೆಟ್ರಿಕ್ ಪೂರ್ವ ಹಾಸ್ಟೆಲ್ ವಿದ್ಯಾರ್ಥಿಗಳಿಂದ ತಮ್ಮ ಪೋಷಕರಿಗೆ ಪತ್ರ ಬರೆಯುವ ಮೂಲಕ ಮತದಾನ ಮಾಡಲು ಮನವಿ ಮಾಡಿದರೆ, ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಮತದಾನ ಮಾಡುವ ಕುರಿತು ಪ್ರತಿಜ್ಞಾ ವಿಧಿ ಸ್ವೀಕಾರ ಮತ್ತು ಮತಯಂತ್ರ ಹಾಗೂ ವಿವಿ ಪ್ಯಾಟ್ ಬಗ್ಗೆ ಪ್ರಾತ್ಯಕ್ಷಿಕೆ ತರಬೇತಿ ನೀಡಲಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ಹಿಂದುಳಿದ ವರ್ಗಗಳ ಅಭಿವೃದ್ದಿ ಇಲಾಖೆ ಅಧಿಕಾರಿ ಸಂಕಪ್ಪ ಆರ್ ಲಮಾಣಿ ಅವರು.

ಇಂದಿನ ಎಲೆಕ್ಟ್ರಾನಿಕ್ ಯುಗದಲ್ಲಿ ಪತ್ರ ಬರೆಯುವ ಸಂಸ್ಕøತಿ ಮರೆಯಾಗುತ್ತಿದೆ ಆದರೂ ಪತ್ರ ಸಂದೇಶದಲ್ಲಿ ಇರುವ ಆತ್ಮೀಯತೆ ಯಾವ ಎಲೆಕ್ಟ್ರಾನಿಕ್ ಯಂತ್ರವು ನೀಡಲಾರದು, ಮಕ್ಕಳು ತಮ್ಮ ಮುದ್ದು ಅಕ್ಷರದಲ್ಲಿ ಬರೆದಿರುವ ಪತ್ರವನ್ನು ಓದುವ ಪೋಷಕರು ಖಂಡಿತವಾಗಿ ಮಕ್ಕಳ ಮನವಿಗೆ ಸ್ಪಂದಿಸಿ, ಮತದಾನದಲ್ಲಿ ಭಾಗವಹಿಸುತ್ತಾರೆ ಎಂಬುದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧೂ ಬಿ ರೂಪೇಶ್ ಅವರ ಚಿಂತನೆ.

ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳ ಮತ್ತು ಮತದಾನ ಜಾಗೃತಿಗಾಗಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಇನ್ನೂ ಅನೇಕ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲಾಗುವುದು ಎಂದು ಸಿಇಓ ತಿಳಿಸಿದ್ದಾರೆ.


Spread the love