ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾ ಅಯೋಗದ ನಿಯಮ ಪಾಲಿಸಿ – ಹೆಬ್ಸಿಬಾ ರಾಣಿ

Spread the love

ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾ ಅಯೋಗದ ನಿಯಮ ಪಾಲಿಸಿ – ಹೆಬ್ಸಿಬಾ ರಾಣಿ

ಉಡುಪಿ: ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಅಭ್ಯರ್ಥಿಗಳಾಗ ಬಯಸುವ ರಾಜಕೀಯ ಪಕ್ಷಗಳು ಮತ್ತು ಇತರ ವ್ಯಕ್ತಿಗಳು ನಾಮಪತ್ರ ಸಲ್ಲಿಸುವಾಗ ಚುನಾವಣಾ ಆಯೋಗ ಸೂಚಿಸಿದ ಎಲ್ಲಾ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಹೆಬ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದ್ದಾರೆ.

ಈ ಕುರಿತು ಸುದ್ದಗೋಷ್ಠಿಯಲ್ಲಿ ಮಾತನಾಡಿದ ಅವರು 15-ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಉಡುಪಿ ಜಿಲ್ಲೆಯ 119 ಕುಂದಾಪುರ, 120 ಉಡುಪಿ, 121 ಕಾಪು, 122 ಕಾರ್ಕಳ ಹಾಗೂ ಚಿಕ್ಕಮಗಳೂರು ಜಿಲ್ಲೆಯ 123 ಶೃಂಗೇರಿ, 124 ಮೂಡಿಗೆರೆ, 125 ಚಿಕ್ಕಮಗಳೂರು ಮತ್ತು 126 ತರೀಕೆರೆ ವಿಧಾನ ಸಭಾ ಕ್ಷೇತ್ರದ ಮತದಾರರನ್ನು ಒಳಗೊಂಡಿರುವ ಲೋಕಸಭಾ ಕ್ಷೇತ್ರವಾಗಿರುತ್ತದೆ.

ಭಾರತ ಚುನಾವಣಾ ಆಯೋಗದವರು ಹೊರಡಿಸಿದ ವೇಳಾ ಪಟ್ಟಿಯಂತೆ 15 ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಾಮ ಪತ್ರ ಸಲ್ಲಿಸುವ ಪ್ರಕ್ರಿಯೆ ದಿನಾಂಕ:19/3/2019 ರಿಂದ ಆರಂಭವಾಗಲಿದೆ, ನಾಮ ಪತ್ರ ಸಲ್ಲಿಸಲು ಕೊನೆಯ ದಿನಾಂಕ 26/3/2019 ರಂದು ಅಪರಾಹ್ನ ಗಂಟೆ 3-00 ರ ವರೆಗೆ, ನಾಮ ಪತ್ರವನ್ನು ದಿನಾಂಕ:19/3/2019 ರಿಂದ 26/3/2019 ರ ವರೆಗೆ ಪ್ರತಿ ದಿನ ಪೂರ್ವಾಹ್ನ 11 ಗಂಟೆಯಿಂದ ಅಪರಾಹ್ನ 3-00 ಗಂಟೆಯವರೆಗೆ ಸ್ವೀಕರಿಸಲಾಗುತ್ತದೆ.

ತನ್ಮದ್ಯೆ ದಿನಾಂಕ:23/3/2019 ರಂದು ನಾಲ್ಕನೇ ಶನಿವಾರ ಹಾಗೂ ದಿನಾಂಕ:24/03/2019 ಭಾನುವಾರ ಸಾರ್ವಜನಿಕ ರಜಾದಿನವಾಗಿರುವುದರಿಂದ ಆ ದಿನ ನಾಮಪತ್ರ ಸ್ವೀಕರಿಸಲಾಗುವುದಿಲ್ಲ. ನಾಮ ಪತ್ರವನ್ನು ಚುನಾವಣಾಧಿಕಾರಿಯಾದ ಉಡುಪಿ ಜಿಲ್ಲಾಧಿಕಾರಿಯವರ ಕೊಠಡಿಯಲ್ಲಿ ಸ್ವೀಕರಿಸಲಾಗುತ್ತದೆ.

ಸ್ವೀಕರಿಸಲಾದ ನಾಮಪತ್ರಗಳನ್ನು ದಿನಾಂಕ:27/03/2019 ಬುಧವಾರದಂದು, ಪೂರ್ವಾಹ್ನ 11.00 ಗಂಟೆಗೆ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಪರಿಶೀಲನೆ ನಡೆಸಲಾಗುವುದು. ನಾಮಪತ್ರ ಪರಿಶೀಲನೆಯ ನಂತರ ಕ್ರಮಬದ್ದವಾಗಿ ನಾಮ ನಿರ್ದೇಶಿತರಾದ ಉಮೇದುವಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ನಾಮಪತ್ರ ಹಿಂಪಡೆಯಲು ದಿನಾಂಕ:29/3/2019 ಅಪರಾಹ್ನ 3.00 ಗಂಟೆಯ ತನಕ ಅವಕಾಶ ನೀಡಲಾಗಿದೆ. ತದನಂತರ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ಮಾಡಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು.

ದಿನಾಂಕ: 18/4/2019 ರಂದು ಪೂರ್ವಾಹ್ನ 7.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ಮತದಾನ ನಡೆಯಲಿದೆ, ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ 24 ಗಂಟೆಯೊಳಗೆ ಸೇವಾ ಮತದಾರರಿಗೆ ( ಸೈನ್ಯದಲ್ಲಿರುವ ಮತದಾರರಿಗೆ ) ಮತ ನೀಡಲು ಅನುಕೂಲ ಮಾಡುವ ಸಲುವಾಗಿ ಇಟಿಪಿಬಿಎಸ್ ತಂತ್ರಾಂಶದ ಮೂಲಕ ಮತ ಪತ್ರವನ್ನು ರಚಿಸಿ ಆನ್ ಲೈನ್ ಮೂಲಕ ಸಂಬಂಧಪಟ್ಟ ಸೈನ್ಯದ ಘಟಕದ ಮುಖ್ಯಸ್ಥರಿಗೆ ರವಾನಿಸಲಾಗುತ್ತದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಕರ್ತವ್ಯ ನಿರತ ಮತದಾರರಿಗೆ ಚುನಾವಣಾ ಕರ್ತವ್ಯ ದೃಡಪತ್ರ(ಇಡಿಸಿ) ಹಾಗೂ ಕ್ಷೇತ್ರದ ಹೊರಗೆ ಚುನಾವಣಾ ಕರ್ತವ್ಯ ನಿರ್ವಹಿಸುವ ಮತದಾರರಿಗೆ ಅಂಚೆ ಮತ ಪತ್ರ ಮುದ್ರಣ ವ್ಯವಸ್ಥೆಯನ್ನು ಪ್ರತ್ಯೇಕವಾಗಿ ಮಾಡಲಾಗುವುದು. ಬ್ಯಾಲೆಟ್ ಯೂನಿಟ್ ಮತ ಪತ್ರವನ್ನು ಚುನಾವಣಾ ಆಯೋಗ ಸೂಚಿಸುವ ಸರಕಾರಿ ಮುದ್ರಣಾಲಯದಲ್ಲಿ ಮಾಡಲಾಗುತ್ತದೆ.

ನಾಮ ಪತ್ರ ಸಲ್ಲಿಸುವಾಗ ಪಾಲಿಸಬೇಕಾದ ಸೂಚನೆ

1. ಅಭ್ಯರ್ಥಿಯೊಂದಿಗೆ ನಾಮ ಪತ್ರ ಸಲ್ಲಿಸಲು ಬರುವಾಗ ಚುನಾವಣಾಧಿಕಾರಿ ಕಛೇರಿಯ 100 ಮೀ ವ್ಯಾಪ್ತಿಯೊಳಗೆ ಅಭ್ಯರ್ಥಿಯ ವಾಹನ ಸೇರಿ ಗರಿಷ್ಟ 3 ವಾಹನಗಳಿಗೆ ಮಾತ್ರ ಪ್ರವೇಶಾವಕಾಶ
2. ಚುನಾವಣಾಧಿಕಾರಿಯವರ ಕೊಠಡಿಯೊಳಗೆ ಅಭ್ಯರ್ಥಿಯ ಸಹಿತ ಒಟ್ಟು 5 ಜನರಿಗೆ ಮಾತ್ರ ಪ್ರವೇಶ
3. ವಯಸ್ಸು 25 ವರ್ಷ ಮೀರಿರಬೇಕು,
4. ನಾಮಪತ್ರವನ್ನು ನಿಗದಿತ ನಮೂನೆ 2ಎ ಯಲ್ಲಿ ಎಲ್ಲಾ ಅಂಕಣಗಳನ್ನು ಭರ್ತಿಗೊಳಿಸಿ ಸಲ್ಲಿಸಬೇಕು
5. ಅಭ್ಯರ್ಥಿಯ ಹೆಸರು , ಮತದಾರರ ಪಟ್ಟಿಯಲ್ಲಿ ಹೆಸರು ದಾಖಲಿರುವ ಬಗ್ಗೆ ಮತದಾರರ ಪಟ್ಟಿಯ ವಿಧಾನ ಸಭಾ ಕ್ಷೇತ್ರದ ಹೆಸರು, ಭಾಗ ಸಂಖ್ಯೆ ಮತ್ತು ಕ್ರಮ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು. ಬೇರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಹೆಸರಿರುವುದಾದರೆ ಅಲ್ಲಿನ ಮತದಾರರ ಪಟ್ಟಿಯ ದೃಢಿಕೃತ ನಕಲನ್ನು ನಾಮಪತ್ರದೊಂದಿಗೆ ಲಗ್ತೀಕರಿಸಬೇಕು.
6. ನಾಮ ಪತ್ರಕ್ಕೆ ಸೂಚಕರು, ಕಡ್ಡಾಯವಾಗಿ ಸಹಿ ಮಾಡಿರಬೇಕು. ಹಾಗೂ ಅವರು ಇದೇ ಲೋಕಸಭಾ ಕ್ಷೇತ್ರದ ಮತದಾರರಾಗಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿರಬೇಕು.
7. ರಾಷ್ಟ್ರೀಯ ಮಾನ್ಯತೆ ಪಡೆದ ರಾಜಕೀಯ ಪಕ್ಷದ ಅಭ್ಯರ್ಥಿಯಾಗಿದ್ದಲ್ಲಿ ಒಬ್ಬರು ಸೂಚಕರು, ನೊಂದಾಯಿತ ಆದರೆ ಮಾನ್ಯತೆ ಪಡೆಯದ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿದ್ದಲ್ಲಿ 10 ಜನ ಸೂಚಕರು ಸಹಿ ಮಾಡಿರಬೇಕು ಸೂಚಕರೆಲ್ಲರ ಮತದಾರರ ಪಟ್ಟಿಯ ವಿಧಾನಸಭಾಕ್ಷೇತ್ರ, ಭಾಗ ಸಂಖ್ಯೆ ಮತ್ತು ಕ್ರಮ ಸಂಖ್ಯೆ ಕಡ್ಡಾಯವಾಗಿ ನಮೂದಿಸಿ ಸಹಿ ಹಾಕಿರಬೇಕು.
8. ಒಬ್ಬ ಅಭ್ಯರ್ಥಿ ಗರಿಷ್ಟ 4 ನಾಮಪತ್ರ ಸಲ್ಲಿಸಬಹುದು ಆದರೆ ಠೇವಣಾತಿ ಒಂದು ಮಾತ್ರ. ಠೇವಣಾತಿ ಮೊತ್ತ ರೂಪಾಯಿ 25000/- ನಗದಾಗಿ ಪಾವತಿಸಬೇಕು. ಅಭ್ಯರ್ಥಿಯು ಪರಿಶಿಷ್ಟಜಾತಿ ಅಥವಾ ಪರಿಶಿಷ್ಟ ಪಂಗಡದವರಾಗಿದ್ದಲ್ಲಿ, ರೂ 12500/- ಮಾತ್ರ ಹಾಗೂ ಜಾತಿ ದೃಢಪತ್ರ ಹಾಜರುಪಡಿಸಬೇಕು
9. ನಾಮಪತ್ರಕ್ಕೆ ಅಭ್ಯರ್ಥಿಯ ಭಾವ ಚಿತ್ರ ಅಂಟಿಸಿರಬೇಕು.
10. ನಮೂನೆ 26 ರಲ್ಲಿ ರೂ 20 ರ ಠಸೆ ಪತ್ರದಲ್ಲಿ ನಮೂದಿಸಿದ ( 28/2/2019 ರಲ್ಲಿ ಪರಿಷ್ಕರಿಸಲ್ಪಟ್ಟ) ಎಲ್ಲಾ ಅಂಕಣಗಳನ್ನು ಭರ್ತಿಗೊಳಿಸಿ, ಪ್ರತಿ ಪುಟಗಳಿಗೆ ಅಭ್ಯರ್ಥಿಯ ಸಹಿ ಹಾಕಿ, ನೋಟರಿ ಅಥವಾ ಇತರ ಸಕ್ಷಮ ಅಧಿಕಾರಿಗಳಿಂದ ಪ್ರಮಾಣಿಕರಿಸಿ ದೃಢಿಕರಿಸಿದ ಅಫಿದಾವಿತನ್ನು ಸಲ್ಲಿಸಬೇಕು(ಯಾವುದೇ ಅಂಕಣಗಳನ್ನು ಖಾಲಿ ಬಿಡಬಾರದು. ಖಾಲಿ ಬಿಟ್ಟಲ್ಲಿ ತಿರಸ್ಕರಿಸಲಾಗುತ್ತದೆ)
11. ರಾಷ್ಟ್ರೀಯ /ರಾಜ್ಯ ನೊಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾಗಿದಲ್ಲಿ, ಪಕ್ಷದ ಅಧಿಕೃತರಿಂದ ಸಹಿ ಮಾಡಲ್ಪಟ್ಟ ನಮೂನೆ ಎ ಮತ್ತು ಬಿ ಯ ಮೂಲ ಪ್ರತಿಯನ್ನು ನಾಮ ಪತ್ರದೊಂದಿಗೆ ಅಥವಾ ನಾಮ ಪತ್ರ ಸಲ್ಲಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕವಾದ 26/03/2019 ರಂದು ಅಪರಾಹ್ನ 3.00 ಗಂಟೆಯೊಳಗೆ ಕಡ್ಡಾಯವಾಗಿ ಸಲ್ಲಿಸತಕ್ಕದ್ದು.
12. ಅಭ್ಯರ್ಥಿಯು 4 PASS PORT SIZE ಹಾಗೂ 2 STAMP STIZE ನ ಕಪ್ಪು ಬಿಳುಪು ಅಥವಾ ಬಣ್ಣದ ಮೂರು ತಿಂಗಳೊಳಗೆ ತೆಗೆದ ಅಭ್ಯರ್ಥಿಯ ಮುಖ ಸ್ಪಷ್ಟವಾಗಿ ತೋರುವ 2 ಸಿಎಂ ಅಗಲ 2.5 ಸಿಎಂ ಎತ್ತರ ಗಾತ್ರದ ಭಾವಚಿತ್ರವನ್ನು ಕಡ್ಡಾಯವಾಗಿ ಒದಗಿಸಬೇಕು.
13. ನಾಮಪತ್ರ ಸಲ್ಲಿಸಿದ ನಂತರ ಅಭ್ಯರ್ಥಿಯು ಪ್ರಮಾಣವಚನ ಸ್ವೀಕರಿಸಬೇಕು
14. ಅಭ್ಯರ್ಥಿಗೆ ಒರ್ವ ಚುನಾವಣಾ ಏಜೆಂಟ್ರನ್ನು ನೇಮಿಸಲು ಅವಕಾಶವಿದ್ದು, ಈ ಬಗ್ಗೆ ಅವರು ನಮೂನೆ 8 ರಲ್ಲಿ ಏಜೆಂಟ್ರ ಭಾವಚಿತ್ರ ಸಹಿತ ದ್ವಿಪ್ರತಿಯಲ್ಲಿ ಸಲ್ಲಿಸಬೇಕು. ಅದನ್ನು ದೃಢೀಕರಿಸಿ ನೀಡಲಾಗುತ್ತದೆ. ಅಭ್ಯರ್ಥಿ ಹಾಗೂ ಚುನಾವಣಾ ಏಜೆಂಟ್ರ ಮಾದರಿ ಸಹಿಯನ್ನು ನಿಗದಿತ ನಮೂನೆಯಲ್ಲಿ ಒದಗಿಸಬೇಕು
15. ಚುನಾವಣಾ ಉದ್ದೇಶಕ್ಕಾಗಿ ಹೊಸ ಬ್ಯಾಂಕ್ ಖಾತೆ ತೆರೆದು ( ಕನಿಷ್ಟ ನಾಮಪತ್ರ ಸಲ್ಲಿಕೆಯ ಹಿಂದಿನ ದಿನ) ಪಾಸ್ ಬುಕ್ ನ ಯಥಾ ನಕಲನ್ನು ಒದಗಿಸಬೇಕು. ಚುನಾವಣೆಯ ಎಲ್ಲಾ ಆರ್ಥಿಕ ವ್ಯವಹಾರ ಈ ಖಾತೆಯ ಮೂಲಕ ನಡೆಸಬೇಕು
16. ಅಭ್ಯರ್ಥಿಯು ಸಲ್ಲಿಸುವ ಪ್ರತಿ ದಾಖಲೆಗಳಿಗೆ ಸ್ವೀಕೃತಿ ಪತ್ರ ನೀಡಲಾಗುತ್ತದೆ. ಅದನ್ನು ಪರಿಶೀಲಿಸಿಕೊಳ್ಳುವುದು.
17. ಪ್ರತಿಯೊಬ್ಬ ಅಭ್ಯರ್ಥಿಯು ನಾಮ ಪತ್ರ ಸಲ್ಲಿಸಿದ ದಿನಾಂಕದಿಂದಲೇ ಚುನಾವಣೆ ಖರ್ಚುಗಳ ಲೆಕ್ಕವನ್ನು ಇರಿಸಬೇಕು. ಈ ಬಗ್ಗೆ ನಿಗದಿತ ನಮೂನೆಯ ಭಾಗ ಎ, ಬಿ, ಮತ್ತು ಸಿ, ಯ ಪುಸ್ತಕವನ್ನು ಒದಗಿಸಲಾಗುವುದು. ಆ ಪುಸ್ತಕದಲ್ಲಿ ಪೂರಕ ವೋಚರ್ಗಳೊಂದಿಗೆ ಲೆಕ್ಕ ಪತ್ರವನ್ನು ಇರಿಸಬೇಕು. ಈ ಪುಸ್ತಕ ಹಾಗೂ ಲೆಕ್ಕ ಪತ್ರವನ್ನು ಚುನಾವಣಾ ಆಯೋಗದಿಂದ ನೇಮಿಸಲ್ಪಟ್ಟ ವೆಚ್ಚ ವೀಕ್ಷಕರು, ಹಾಗೂ ಈ ಕಛೇರಿಯಿಂದ ನಿಯೋಜಿಸಲ್ಪಟ್ಟ ಸಹಾಯಕ ವೆಚ್ಚ ವೀಕ್ಷಕರಿಗೆ ಪರಿಶೀಲನೆಗೆ ಹಾಜರು ಪಡಿಸಬೇಕು. ಚುನಾವಣಾ ಫಲಿತಾಂಶ ಘೋಷಣೆಯಾಗುವ ದಿನಾಂಕದವರೆಗಿನ ಲೆಕ್ಕವನ್ನು ಈ ವಹಿಯಲ್ಲಿ ದಾಖಲಿಸತಕ್ಕದ್ದು, ಚುನಾವಣಾ ಫಲಿತಾಂಶ ಘೋಷಣೆಯಾದ ದಿನಾಂಕದಿಂದ 30 ದಿವಸಗಳೊಳಗೆ ಸಂಪೂರ್ಣ ಲೆಕ್ಕಚಾರವನ್ನು ಜಿಲ್ಲಾ ಚುನಾವಣಾಧಿಕಾರಿಯವರ ಸಮಕ್ಷಮ ಸಲ್ಲಿಸತಕ್ಕದ್ದು,
18. ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು, ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಬಳಸಲು , ವಾಹನ ಉಪಯೋಗಿಸಲು, ಸಭೆ ಸಮಾರಂಭಗಳನ್ನು ನಡೆಸಲು ಚುನಾವಣಾಧಿಕಾರಿ ಅಥವಾ ಸಂಭಂಧಪಟ್ಟ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಸಹಾಯಕ ಚುನಾವಣಾಧಿಕಾರಿಯವರ ಕಛೇರಿಯಲ್ಲಿನ Single Window ವಿಭಾಗದಿಂದ ಲಿಖಿತ ಪೂರ್ವಾನುಮತಿ ಪಡೆಯಬೇಕು. ಧ್ವನಿವರ್ಧಕವನ್ನು ರಾತ್ರಿ 10.00 ಗಂಟೆಯಿಂದ ಮರು ದಿನ ಪೂರ್ವಾಃಹ್ನ 6.00 ಗಂಟೆಯ ಅವಧಿಯವರೆಗೆ ಉಪಯೋಗಿಸಲು ಅವಕಾಶ ಇರುವುದಿಲ್ಲ. ಈ ವಿಚಾರದಲ್ಲಿ ಯಾವುದೇ ಮಾಹಿತಿಯನ್ನು ಈ ಕಛೇರಿ ಅಥವಾ ಸಹಾಯಕ ಚುನಾವಣಾಧಿಕಾರಿಯವರನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.
19. ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷಗಳ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯ ಪ್ರತಿ ಮತ್ತು ಮತಗಟ್ಟೆಯ ಪಟ್ಟಿ (Polling Station List) ಯ ಉಚಿತ ಪ್ರತಿಯನ್ನು ಒದಗಿಸಲಾಗುತ್ತದೆ. ಇತರರಿಗೆ ಶುಲ್ಕ ಪಾವತಿಸಿದಲ್ಲಿ ನೀಡಲಾಗುವುದು.
20. ಯಾವುದೇ ಅಭ್ಯರ್ಥಿ ಅಥವಾ ಚುನಾವಣಾ ಏಜೆಂಟ್ ಅಥವಾ ಯಾವುದೇ ವ್ಯಕ್ತಿ ರೂ 50,000/- ಕ್ಕಿಂತ ಜಾಸ್ತಿ ನಗದು ಹಣವನ್ನು ಸೂಕ್ತ ದಾಖಲೆಯಿಲ್ಲದೆ ಕೊಂಡೊಯ್ಯುವಂತಿಲ್ಲ.
ಸಂಕ್ಷಿಪ್ತ ಮಾಹಿತಿಯನ್ನು ಒದಗಿಸಲಾಗಿದೆ. ಮುಂಬರುವ ಈ ಚುನಾವಣೆ ಪಾರದರ್ಶಕವಾಗಿ ಹಾಗೂ ಶಾಂತಿಯುತವಾಗಿ ನಡೆಸಲು ತಮ್ಮೆಲ್ಲರ ಸಂಪೂರ್ಣ ಸಹಕಾರವನ್ನು ನೀಡುವಂತೆ ಜಿಲ್ಲಾಧಿಕಾರಿಗಳು ಕೋರಿದ್ದಾರೆ.

ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ವಾರ್ತಾಧಿಕಾರಿ ಖಾದರ್ ಶಾ ಉಪಸ್ಥಿತರಿದ್ದರು


Spread the love