ಅಮಾಯಕರ ಕೊಲೆ ಮಾಡುವ ಕಾಂಗ್ರೆಸ್ ಸರ್ಕಾರ ಹೋಗುವ ತನಕ ಕರ್ನಾಟಕ ಉದ್ದಾರ ಅಸಾಧ್ಯ ; ನರೇಂದ್ರ ಮೋದಿ

Spread the love

ಅಮಾಯಕರ ಕೊಲೆ ಮಾಡುವ ಕಾಂಗ್ರೆಸ್ ಸರ್ಕಾರ ಹೋಗುವ ತನಕ ಕರ್ನಾಟಕ ಉದ್ದಾರ ಅಸಾಧ್ಯ ; ನರೇಂದ್ರ ಮೋದಿ

ಫೋಟೊಗಳು: ಪ್ರಸನ್ನ ಕೊಡವೂರು

ಉಡುಪಿ: ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸುವುದು ಗಾಂಧೀಜಿಯವರ ಕೊನೆಯ ಆಸೆ ಆಗಿತ್ತು. ದೇಶದೆಲ್ಲಡೆ ಅವಕಾಶ ಸಿಕ್ಕಲ್ಲೆಲ್ಲ ಜನರು ಗಾಂಧೀಜಿಯವರ ಕನಸ್ಸನ್ನುಈಡೇರಿಸಲು ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಿದ್ದಾರೆ. ಈಗ ಆ ಕನಸ್ಸನ್ನು ಈಡೇರಿಸುವ ಸರದಿ ಕರ್ನಾಟಕದ ಜನತೆಯದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಉಡುಪಿಯ ಮಹಾತ್ಮಾ ಗಾಂಧಿ ಕಾಲೇಜಿನ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿಯವರು ಉಡುಪಿಯ ನಾಥ ದ್ವಾರಕೆಯಿಂದ ಬಂದವನು. ಹೀಗಾಗಿ ಉಡುಪಿಯ ಕೃಷ್ಣ ನನ್ನ ಸ್ವಾಭಾವಿಕ ಒಡೆಯ. ಅವನು ನಿಮ್ಮೆಲ್ಲರ ಹೃದಯದಲ್ಲಿ ನನ್ನ ಬಗ್ಗೆ ಪ್ರೀತಿಯನ್ನು ಉದ್ದೀಪಿಸಿದ್ದಾನೆ. ಭಕ್ತ ಕನಕದಾಸರಿಗೆ ವಾಸುದೇವನ ದರ್ಶನ, ಮಧ್ವಾಚಾರ್ಯರಿಗೆ ಬಾಲಕೃಷ್ಣನ ದರ್ಶನ. ದೇಗುಲಗಳು ನಮಗೆ ಪ್ರೇರಣೆ ಕೊಡುತ್ತವೆ.

ಇದು ಪರಶುರಾಮರ ಸೃಷ್ಟಿ. ಪ್ರಕೃತಿ ಸಂರಕ್ಷಣೆ, ಸಂವರ್ಧನೆ, ಸಹಜೀವನ ಹೇಗಿರಬೇಕು ಎಂಬುದನ್ನು ತಿಳಿಸಿಕೊಡುತ್ತದೆ. ಪ್ರಕೃತಿಯ ರಕ್ಷಣೆ ನಮ್ಮ ಸಂಸ್ಕೃತಿ. ಪ್ರಕೃತಿಯ ಶೋಷಣೆ ನಮ್ಮ ಪರಂಪರೆ ಅಲ್ಲ. ಉಡುಪಿಯ ನನ್ನ ಸೋದರರೇ, ಈ ನೆಲದ ಬಗ್ಗೆ ಗೌರವದಿಂದ ಮಾತಾನಾಡುತ್ತಿದ್ದೇನೆ ಎಂದು ಮೋದಿ ಹೇಳಿದರು.

ಉಡುಪಿಯೊಂದಿಗೆ ಬಿಜೆಪಿ ಮತ್ತು ಜನಸಂಘಕ್ಕೆ ಇದ್ದ ಅವಿನಾಭಾವ ಸಂಭಂಧವನ್ನು ನೆನಪಿಸಿದ ಪ್ರಧಾನಿ ಉಡುಪಿ ದೇವಳಗಳ ನಗರಿ ಮಾತ್ರವಲ್ಲದೆ ಬ್ಯಾಂಕಿಂಗ್ ಕ್ಷೇತ್ರದ ತವರೂರು ಎಂದರು. ಉಡುಪಿಯಲ್ಲಿ ಆರಂಭವಾದ ಬ್ಯಾಂಕಿಂಗ್ ಕ್ರಾಂತಿ ಇಂದು ದೇಶದ ಉದ್ದಗಲಕ್ಕೂ ಹರಡಲು ಉಡುಪಿ ಪ್ರಮುಖ ಕಾರಣ ಎಂದರು.

ಕರ್ನಾಟಕದಿಂದ ಪ್ರಾರಂಭವಾದ ಬ್ಯಾಂಕಿಂಗ್ ಕ್ರಾಂತಿಯನ್ನು ದೇಶದ ಸಾಮಾನ್ಯ ಬಡವನಿಗೂ ತಲುಪಿಸಿದ್ದು ನಮ್ಮ ಸರ್ಕಾರ ಎಂಬುದನ್ನು ಹೆಮ್ಮೆ ಇಂದ ಹೇಳುತ್ತೇನೆ. ಸ್ವತಂತ್ರ ಬಂದು ದಶಕಗಳೇ ಕಳೆದರೂ ಬ್ಯಾಂಕಿನ ಬಾಗಿಲು ಬಡವರಿಗೆ ಮುಚ್ಚಿತ್ತು. ನೀವು ನನ್ನನು ಪ್ರಧಾನಿಯಾಗಿ ಆರಿಸಿದ ಮೇಲೆ ಮುಚ್ಚಿದ್ದ ಬ್ಯಾಂಕಿನ ಬಾಗಿಲನ್ನು ಬಡವರಿಗೆ ತೆರೆದವು

ಈ ಮುಂಚೆ ಯುವಜನತೆಗೆ ಬ್ಯಾಂಕುಗಳು ಬಾಗಿಲು ಬಂದ್ ಮಾಡಿ,ಕೇವಲ ಕೆಲವರಿಗಷ್ಟೇ ಸಾಲ ನೀಡುತ್ತಿದ್ದವು.ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುದ್ರಾ ಯೋಜನೆ ಮುಖಾಂತರ ಕೋಟ್ಯಾಂತರ ಯುವಕರ ಕನಸುಗಳನ್ನು ನನಸು ಮಾಡಿದ್ದೇವೆ

ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಇದೇ ಉಡುಪಿ ನೆಲದ ಗುರುರಾಜ್ ಪೂಜಾರಿ ವೇಟ್ಲಿಫ್ಟಿಂಗ್ನಲ್ಲಿ ಪದಕ ತಂದುಕೊಟ್ಟರು. ನನಗೆ ಗುರುರಾಜ್ರನ್ನು ಭೇಟಿಯಾಗುವ, ಮಾತನಾಡುವ ಆಸೆ ಇದೆ ಎಂದೂ ಅವರು ಹೇಳಿದರು.

ರಾಜ್ಯದಲ್ಲಿ ಮರಳು ಮಾಫಿಯಾ ಮಿತಿ ಮೀರುತ್ತಿದೆ. ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ವಿಫಲವಾಗಿದೆ. ಸ್ಯಾಂಡ್ ಮಾಫಿಯಗಳ ಹಿಂದೆ ರಾಜ್ಯ ಸರ್ಕಾರದ ಕೈವಾಡ ಇರುವುದು ತಿಳಿದಿರುವ ವಿಚಾರ. ಕಾನೂನನ್ನು ಕಾಯುವವರೇ ಕಾನೂನನ್ನು ಧ್ವಂಸ ಮಾಡಲು ಹೊರಟಿದ್ದಾರೆ. ಇಂತಹ ಸರ್ಕಾರ ನಿಮಗೆ ಬೇಕಾ? ಇಂತಹ ಕೃತ್ಯಕ್ಕೆ ನಿಮ್ಮ ಬೆಂಬಲವಿದೆಯಾ? ಎಂದು ನೆರದ ಜನರನ್ನು ಪ್ರಧಾನಿ ಮೋದಿ ಪ್ರಶ್ನೆ ಮಾಡಿದರು.

ರಾಜಕೀಯ ಕಾರಣಗಳಿಗೆ ವಿರೋಧಿಗಳನ್ನು ಕೊಲ್ಲುವುದೂ ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅಪಮಾನ. ಕರ್ನಾಟಕದಲ್ಲಿ ಕಳೆದ 3-4 ವರ್ಷಗಳಲ್ಲಿ 24ಕ್ಕೂ ಹೆಚ್ಚು ನಮ್ಮ ಕಾರ್ಯಕರ್ತರನ್ನು ಕೊಲೆಮಾಡಲಾಗುತ್ತಿದೆ. ಇದು ಕರ್ನಾಟಕಕ್ಕೆ ಶೋಭೆ ತರುವುದಿಲ್ಲ. ಇಂತಹ ಕೆಟ್ಟ ಪರಂಪರೆಯನ್ನು ನಾವು ನಿಲ್ಲಿಸಬೇಕಿದೆ

ವಿಭಿನ್ನ ದೃಷ್ಟಿಕೋನದ ,ವಿಭಿನ್ನ ರಾಜಕೀಯ ಕಾರಣಗಳಿಗೋಸ್ಕರ 23ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ.ಇಷ್ಟಾದರೂ ಇಲ್ಲಿನ ಸರ್ಕಾರ ಕಣ್ಣುಮುಚ್ಚಿ ಕುಳಿತಿದ್ದು ಖಂಡನೀಯ

ಪ್ರತಿಬಾರಿ ಮಾಜಿ ಪ್ರಧಾನಿ ದೇವೇಗೌಡ ಅವರು ಭೇಟಿ ಮಾಡಿದಾಗಲೆಲ್ಲ ಮಾತನಾಡಿ ಕಳುಹಿಸಿದ್ದೇನೆ. ಹಿರಿಯ ನೇತಾರನಿಗೆ ಗೌರವ ನೀಡಿದ್ದೇನೆ. ಆದರೆ, ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಸಿಎಂ ಜೆಡಿಎಸ್ ವರಿಷ್ಠ ನೇತಾರನನ್ನು ಅವಮಾನಿಸಿದ್ದಾರೆ. ಇದಕ್ಕೆ ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಮೋದಿ ಹೇಳದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಎರಡು ವರ್ಷಗಳಲ್ಲಿ ಈ ಭಾಗದ 12 ಬಾಜಪ ಕಾರ್ಯಕರ್ತರ ಹತ್ಯೆಯಾಗಿದೆ. ಹಿಂಸೆಯೇ ಕರ್ನಾಟಕ ಕಾಂಗ್ರೆಸ್ ಸರ್ಕಾರದ ನೀತಿ. ದೇಶದಲ್ಲಿ ರಾಜ್ಯದ ಮರ್ಯಾದೆ ಹರಾಜಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು. ಈ ಸರ್ಕಾರ ಕೊನೆಗೊಳ್ಳುವವರೆಗೂ ಕರ್ನಾಟಕ ಉದ್ದಾರವಾಗಲ್ಲ. ನನಗೆ ವಿಶ್ವಾಸವಿದೆ. ಇಲ್ಲಿನ ಜನ ಸರ್ಕಾರವನ್ನು ಬದಲಿಸುತ್ತಾರೆ. ಸಾರ್ವಜನಿಕ ಬದುಕಿನಲ್ಲಿ ಮೌಲ್ಯಗಳು ಇರಬೇಕಾಗುತ್ತದೆ. ಆ ಮೌಲ್ಯಗಳನ್ನು ಉಳಿಸಿಕೊಳ್ಳಲು ಸರ್ಕಾರ ಬದಲಾವಣೆ ಮಾಡುವುದು ಅಗತ್ಯ ಎಂದರು.


Spread the love