ಅಯೋಧ್ಯ ರಾಮ ಮಂದಿರ ಶಿಲಾನ್ಯಾಸ ಹಿನ್ನೆಲೆ – ಕುಂದಾಪುರ ಟೌನ್ ಠಾಣೆಯಲ್ಲಿ ರೌಡಿಗಳ ಪರೇಡ್

Spread the love

ಅಯೋಧ್ಯ ರಾಮ ಮಂದಿರ ಶಿಲಾನ್ಯಾಸ ಹಿನ್ನೆಲೆ – ಕುಂದಾಪುರ ಟೌನ್ ಠಾಣೆಯಲ್ಲಿ ರೌಡಿಗಳ ಪರೇಡ್

ಉಡುಪಿ: ಅಗಸ್ಟ್ 5 ರಂದು ಅಯೋಧ್ಯ ಶ್ರೀ ರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಪರಾಧ ಚುಟುವಟಿಕೆಗಳಲ್ಲಿ ತೊಡಗಿರುವ ಕುಂದಾಪುರ ಟೌನ್ ಪೊಲೀಸ್ ಠಾಣಾ ಸರಹದ್ದಿನ ಸುಮಾರು 39 ರೌಡಿ ಶೀಟರ್ ಗಳನ್ನು ಭಾನುವಾರ ಕುಂದಾಪುರ ಠಾಣೆಯಲ್ಲಿ ಪರೇಡ್ ನಡೆಸಿ ಎಚ್ಚರಿಕೆ ನೀಡಲಾಯಿತು.

ಅಯೋಧ್ಯೆ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮದ ಸಮಯದಲ್ಲಿ ಠಾಣಾ ಸರಹದ್ದಿನಲ್ಲಿ ಅಕ್ರಮ ಗೋ ಸಾಗಾಟ ಮಾಡುವುದು ಅಥವಾ ಸಾಗಾಟಕ್ಕೆ ಸಾಥ್ ನೀಡುವುದು, ಕೋಮು ಪ್ರಚೋದನೆಗೆ, ನೈತಿಕ ಪೊಲೀಸ್ ಗಿರಿಗೆ ಆಸ್ಪದ ನೀಡುವುದು ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುವಂತಹ ಕೃತ್ಯದಲ್ಲಿ ಭಾಗಿಯಾದಲ್ಲಿ ನಿರ್ಧಾಕ್ಷಿಣ್ಯ ಕ್ರಮಕೈಗೊಂಡು ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷಗೆ ಒಳಪಡಿಸಲಾಗುವುದು ಎಂದು ಠಾಣಾಧಿಕಾರಿ ಹರೀಶ್ ನಾಯ್ಕ್ ಅವರು ಎಚ್ಚರಿಕೆ ನೀಡಿದ್ದಾರೆ.

ಅಪರಾಧ ಕೃತ್ಯಗಳಲ್ಲಿ ತೊಡಗಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸ ಮಾಡುವುದು ಬಿಟ್ಟು ಸಾಮಾನ್ಯ ನಾಗರಿಕರಂತೆ ಬದುಕಬೇಕು. ಈಗಾಗಲೇ ಇಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಿರುವವರು ಇದರಿಂದ ದೂರ ಸರಿದು ಗೌರವಯುತ ವೃತ್ತಿಗಳಲ್ಲಿ ಮುಂದುವರಿಯಬೇಕು ಎಂದ ಪಿಎಸ್ಐ ಹರೀಶ್ ಆರ್ ನಾಯ್ಕ್, ಪ್ರತಿಯೊಬ್ಬರ ಚಲನವಲನಗಳನ್ನು ಇಲಾಖೆ ಗಮನಿಸುತ್ತಿರುತ್ತದೆ ಎಂದು ಎಚ್ಚರಿಕೆ ನೀಡಿದರು.


Spread the love