ಅಲೆಮಾರಿ ಆಯೋಗ ರಚನೆ ಅತೀ ಅಗತ್ಯ: ಡಾ. ಮಲ್ಲಿಕಾರ್ಜುನ ಮಾನ್ಪಡೆ

ಅಲೆಮಾರಿ ಆಯೋಗ ರಚನೆ ಅತೀ ಅಗತ್ಯ: ಡಾ. ಮಲ್ಲಿಕಾರ್ಜುನ ಮಾನ್ಪಡೆ

ಮಂಗಳೂರು: ಅಲೆಮಾರಿ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಿ, ಅವರನ್ನು ಸಮಾಜ ಗುರುತಿಸುವಂತಾಗಲು ರಾಜ್ಯದಲ್ಲಿ ಅಲೆಮಾರಿ ಆಯೋಗ ರಚನೆ ಅತೀ ಅಗತ್ಯ ಎಂದು ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಯುವಜನ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಮಲ್ಲಿಕಾರ್ಜುನ ಮಾನ್ಪಡೆ ಅಭಿಪ್ರಾಯಿಸಿದ್ದಾರೆ.

ಅವರು ಇಂದು ನಗರ ಮಿನಿ ವಿಧಾನ ಸೌಧ ಸಮೀಪದ ಕರಾವಳಿ ಸಭಾಭವನದಲ್ಲಿ ಡಿವೈಎಫ್ಐ ದ ಕ ಜಿಲ್ಲಾ ಸಮಿತಿ ಸಹಯೋಗದಲ್ಲಿ ನಡೆದ ಕರಾವಳಿ ವೃತ್ತಿ ನಿರತ ಅಲೆಮಾರಿ (ಶಿಳ್ಳೆಕ್ಯಾತ ಸಮುದಾಯ)ದ ಹಕ್ಕೊತ್ತಾಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಅಲೆಮಾರಿ ಸಮುದಾಯಗಳಿಗೆ ಯಾವುದೇ ಗಡಿ, ನಿರ್ದಿಷ್ಟವಾದ ಪ್ರದೇಶಗಳ ನಿರ್ಬಂಧವಿಲ್ಲ. ಅವರ ಹೊಟ್ಟೆಪಾಡಿಗೆ ಅನುಕೂಲವಾದ ಸ್ಥಳವನ್ನು ತಮ್ಮದಾಗಿಸಿಕೊಂಡು ನೆಲೆಯೂರುತ್ತಾರೆ. ಗುಡಿಸಲು ಮುಕ್ತ ದೇಶದ ಘೋಷಣೆ ಮಾಡಲಾಗುತ್ತಿದೆಯಾದರೂ, ಅಲೆಮಾರಿಗಳ ಟೆಂಟ್ ಬದುಕಿನಿಂದ ಅವರಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಪ್ರಯತ್ನ ಇನ್ನೂ ಸರಕಾರಗಳಿಂದ ಆಗಿಲ್ಲ. ಅವರ ಹಕ್ಕುಗಳ ಬಗ್ಗ ನಿರ್ಲಕ್ಷ ತಾಳಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಲೆಮಾರಿಗಳಿಗಾಗಿ ಪ್ರತ್ಯೇಕ ಆಯೋಗದ ಜತೆಗೆ ನಿಗಮದ ಮೂಲಕ ಮಾತ್ರವೇ ಸಂವಿಧಾನಾತ್ಮಕ ಬದುಕು ಒದಗಿಸಲು ಸಾಧ್ಯ ಎಂದು ಅವರು ಹೇಳಿದರು.
ಅಲೆಮಾರಿಗಳ ಜಾತಿ, ಕಸುಬನ್ನು ಗುರುತಿಸುವುದು ದೊಡ್ಡ ಸಮಸ್ಯೆಯಾಗಿದೆ. ಆಯೋಗದ ಮೂಲಕ ಅಲೆಮಾರಿಗಳ ಜಾತಿ ಸಮಸ್ಯೆಯನ್ನು ಅಧ್ಯಯನ ಮಾಡಿ, ಶಿಳ್ಳೆಕ್ಯಾತ ಸೇರಿದಂತೆ ಇತರ ಅಲೆಮಾರಿ ಸಮುದಾಯಗಳಿಗೆ ಬಳಸಲಾಗುವ ಜಾತಿ ಸೂಚಕ ಪರ್ಯಾಯ ಪದಗಳ ಮೂಲಕ ಸಮುದಾಯವನ್ನು ಒಗ್ಗೂಡಿಸಿ ಸಂವಿಧಾನಾತ್ಮಕ ಹಕ್ಕುಗಳನ್ನು ಒದಗಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭ ಅಲೆಮಾರಿ ಕೋಶದಡಿ 130 ಕೋಟಿ ರೂ.ಗಳನ್ನು ಅಭಿವೃದ್ಧಿಗಾಗಿ ಮೀಸಲಿರಿಸಲಾಗಿತ್ತು. ಆದರೆ ಆ ಹಣದಲ್ಲಿ ಸಾಕಷ್ಟು ಹಣ ಖರ್ಚೇ ಆಗಿಲ್ಲ. ಅಲೆಮಾರಿಗಳ ಜಾತಿಯನ್ನು ಗುರುತಿಸಲು ತೊಂದರೆ ಆಗಿರುವ ಕಾರಣ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಕೂಡಾ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದಿಲ್ಲ. ಮೂಲ ದಾಖಲೆಗಳ ಕೊರತೆಯಿಂದ ಅಲೆಮಾರಿ ಸಮುದಾಯಗಳಿಗೆ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ತೊಂದರೆಯಾಗುತ್ತಿದೆ ಎಂದು ಡಾ. ಮಲ್ಲಿಕಾರ್ಜುನ ಮಾನ್ಪಡೆಯವರು ಅಭಿಪ್ರಾಯಿಸಿದರು.
ದ.ಕ. ಜಿಲ್ಲೆಯ ಮಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ನೆಲೆಯೂರಿರುವ ಶಿಳ್ಳೆಕ್ಯಾತ ಅಲೆಮಾರಿ ಸಮುದಾಯದವರು ಅಚ್ಚೆ ಹಾಕುವುದು, ಕೌದಿ ಹೊಲಿಯುವುದು, ಗೊಂಬೆ ಆಡಿಸುವಂತಹ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವರು. ಮಾತ್ರವಲ್ಲದೆ ನದಿ, ಹೊಳೆ ಬದಿಗಳಲ್ಲಿ ಇವರು ಮೀನು ಹಿಡಿದು ಜೀವನವನ್ನೂ ಸಾಗಿಸುತ್ತಿದ್ದಾರೆ. ಈ ಸಮುದಾಯಕ್ಕೊಂದು ನೆಲೆ ಕಲ್ಪಿಸಲು ರಾಜ್ಯ ಮಟ್ಟದಲ್ಲಿ ಹೋರಾಟ ಆಗಬೇಕಾಗಿದೆ ಎಂದು ಅವರು ಸಲಹೆ ನೀಡಿದರು.
ಮಂಗಳೂರು ಹಾಗೂ ಆಸುಪಾಸಿನಲ್ಲಿ ನೆಲೆಸಿರುವ ಶಿಳ್ಳೆಕ್ಯಾತ ಸಮುದಾಯದ ಪ್ರಮುಖರಾದ ಧರ್ಮಯ್ಯ, ಲೋಕೇಶ್, ಸ್ವಾಮಿ, ಶಿವಪ್ಪ ಮೊದಲಾದವರು ಮಾತನಾಡಿ, ಜೀವದ ಹಂಗು ತೊರೆದು ನದಿಗಳಲ್ಲಿ ಮೀನು ಹಿಡಿದು ಕಳೆದ ಸುಮಾರು 45 ವರ್ಷಗಳಿಂದೀಚೆಗೆ ನಾವು ಮಂಗಳೂರಿನ ಆಸು ಪಾಸಿನಲ್ಲಿ ಬದುಕು ಕಟ್ಟಿಕೊಂಡಿದ್ದೇವೆ ಇಲ್ಲಿನ ಸ್ಥಳೀಯ ನಿವಾಸಿಗಳಿಗೆ ತೊಂದರೆ ಆಗದಂತೆ ನಾವು ಮೀನು ಹಿಡಿದು ಜೀವನ ಸಾಗಿಸುತ್ತಿದ್ದೇವೆ. ಸರಕಾರ ನಮಗೆ ಸೂಕ್ತವಾದ ವ್ಯವಸ್ಥೆಯನ್ನು ಕಲ್ಪಿಸಬೇಕೆಂಬುದೇ ನಮ್ಮ ಆಶಯ ಎಂದು ಆಗ್ರಹಿಸಿದರು.
ಆದಿವಾಸಿ, ಬುಡಕಟ್ಟು ಪರ ಹೋರಾಟಗಾರ ಡಾ. ಕೃಷ್ಣಪ್ಪ ಕೊಂಚಾಡಿ ಮಾತನಾಡಿ, ಅಲೆಮಾರಿ ಸಮುದಾಯಗಳಿಗೂ ಮಾನವೀಯ, ಘನತೆಯ ಬದುಕು ಸಾಗಿಸುವ ಸ್ವರೂಪದ ಹೋರಾಟದ ಅಗತ್ಯವಿದೆ. ಸಂಘಟನೆ, ಹೋರಾಟದ ಜತೆಗೆ ಶಿಕ್ಷಣವನ್ನು ಸಮುದಾಯಗಳು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಸಮುದಾಯದ ಜನ ಮೊದಲು ಸಂಘಟಿತರಾಗಿ ತಮ್ಮ ನ್ಯಾಯಯುತ ಹಕ್ಕುಗಳಿಗೆ ಹೋರಾಟ ನಡೆಸುವ ಮನೋಭಾವ ಬೆಳೆಸಿಕೊಳ್ಳಬೇಕು. ಅಲೆಮಾರಿ ಸಮುದಾಯಗಳು ಇಂದು ಯಾವುದೇ ರೀತಿಯಲ್ಲಿ ರಾಜಕೀಯವಾಗಿ, ಶೈಕ್ಷಣಿಕವಾಗಿ ಬಲವನ್ನು ಪಡೆದಿಲ್ಲ. ಹಕ್ಕುಗಳನ್ನು ಕೇಳಲು ಹೋದರೆ ಇರುವ ಹಕ್ಕುಗಳನ್ನು ಕಳೆದುಕೊಳ್ಳುವ ಭಯ ಇಲ್ಲಿನ ಶಿಳ್ಳೇಕ್ಯಾತ ಸಮುದಾಯದಲ್ಲಿದೆ. ಈ ನಿಟ್ಟಿನಲ್ಲಿ ಸಂಘಟನೆ ವತಿಯಿಂದ ಸಮುದಾಯಕ್ಕೆ ಬೆಂಬಲವನ್ನು ಒದಗಿಸಿ ಅವರ ಹೋರಾಟಕ್ಕೆ ಸ್ಫೂರ್ತಿ ತುಂಬಲು ಈ ಸಮಾವೇಶವನ್ನು ನಡೆಸುತ್ತಿರುವುದಾಗಿ ಹೇಳಿದರು.
ವೇದಿಕೆಯಲ್ಲಿ ಶಿಳ್ಳೆಕ್ಯಾತ ಸಮುದಾಯದ ಪ್ರಮುಖರಾದ ರಘು, ಶಿವಾಜಿ, ರಾಜು, ಬಾಬಯ್ಯ, ಪದ್ಮ ಶಿವಾಜಿ, ಧರ್ಮಯ್ಯ, ದಾಖಲಯ್ಯ, ಲೋಕೇಶಪ್ಪ ಸೇರಿದಂತೆ ಮಂಗಳೂರು ಹಾಗೂ ಆಸುಪಾಸಿನ ಏಳು ಕಡೆ ಟೆಂಟ್‍ಗಳಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬಗಳ ಪ್ರಮುಖರು ಉಪಸ್ಥಿತರಿದ್ದರು.
ಸಮುದಾಯದ ಲೋಕೇಶ್ ಸ್ವಾಗತಿಸಿದರು. ವೆಂಕಟೇಶ್ ವಂದಿಸಿದರು. ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು.

ಸಮಾವೇಶದ ಕೊನೆಗೆ ಈ ಕೆಳಕಂಡಂತೆ ಹಕ್ಕೊತ್ತಾಯ ನಿರ್ಣಯವನ್ನು ಅಂಗೀಕರಿಸಲಾಯಿತು.

* ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟೆಂಟ್ ಗಳಲ್ಲಿ ವಾಸಿಸುವ ಅಲೆಮಾರಿ ಸಮುದಾಯಗಳ ಸಮೀಕ್ಷೆ ನಡೆಸಬೇಕು.

* ಪ್ರತಿ ಕುಟುಂಬಕ್ಕೂ ಮನೆ, ನಿವೇಶನ ಒದಗಿಸಬೇಕು.

*ರೇಷನ್ ಕಾರ್ಡ್, ಆರೋಗ್ಯ ಕಾರ್ಡ್, ಮತದಾರರ ಗುರುತು ಚೀಟಿ, ಜಾತಿಪ್ರಮಾಣ ಪತ್ರ ಸಹಿತ ಎಲ್ಲಾ ದಾಖಲೆಗಳನ್ನು ಒದಗಿಸಬೇಕು.

* ರಾಜ್ಯದಲ್ಲಿ ಅಲೆಮಾರಿ ಆಯೋಗ, ಅಭಿವೃದ್ದಿ ನಿಗಮವನ್ನು ಸ್ಥಾಪಿಸಬೇಕು.

* ದೌರ್ಜನ್ಯಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು.

*ಅಲೆಮಾರಿ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.