ಅಲೋಶಿಯಸ್ ವತಿಯಿಂದ ಕಾರಾಗೃಹದ ಕೈದಿಗಳಿಗೆ ವೈದ್ಯಕೀಯ ಶಿಬಿರ

Spread the love

ಅಲೋಶಿಯಸ್ ವತಿಯಿಂದ ಕಾರಾಗೃಹದ ಕೈದಿಗಳಿಗೆ ವೈದ್ಯಕೀಯ ಶಿಬಿರ

ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ವತಿಯಿಂದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಹಯೋಗದೊಂದಿಗೆ ಮಂಗಳೂರಿನ ಜಿಲ್ಲಾ ಕಾರಾಗೃಹದ ಕೈದಿಗಳಿಗೆ 7 ಏಪ್ರಿಲ್ 2024 ರಂದು ಚರ್ಮರೋಗ, ರಕ್ತದಲ್ಲಿನ ಸಕ್ಕರೆ, ಹೃದಯ ಸಮಸ್ಯೆಗಳು/ಇಸಿಜಿ ಮತ್ತು ಜನರಲ್ ಮೆಡಿಸಿನ್ ಕುರಿತು ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿದೆ.

ಶಿಬಿರವನ್ನು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಉದ್ಘಾಟಿಸಿದರು. ಜಿಲ್ಲಾ ಕಾರಾಗೃಹ ಅಧೀಕ್ಷಕ, ಶ್ರೀ ಓಬಳೇಶ್ವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಮಾತನಾಡಿ, ಜಿಲ್ಲಾ ಕಾರಾಗೃಹದ ಕೈದಿಗಳಿಗೆ ನಾವು ಈಗಾಗಲೇ ಹಲವಾರು ಉಪಯುಕ್ತ ಕಾರ್ಯಕ್ರಮಗಳನ್ನು ನಡೆಸಿದ್ದೇವೆ ಮತ್ತು ಭವಿಷ್ಯದಲ್ಲೂ ಕಾರಾಗೃಹದ ಕೈದಿಗಳಿಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು. ಈ ಕಾರ್ಯಕ್ರಮಕ್ಕೆ ಸಹಯೋಗ ನೀಡಿದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಿಬ್ಬಂದಿಗಳನ್ನು ವಂದಿಸಿದರು.

ಶ್ರೀ ಓಬಳೇಶ್ವರ ಅವರು ತಮ್ಮ ಭಾಷಣದಲ್ಲಿ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯವು ನಡೆಸುತ್ತಿರುವ ಈ ರೀತಿಯ ಕಾರ್ಯಕ್ರಮಗಳು ಜೈಲಿನ ಕೈದಿಗಳ ಮಾನಸಿಕ ಆರೋಗ್ಯ ಮತ್ತು ದೈಹಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ವೇಳೆ ಕಾರಾಗೃಹದ ಆವರಣದಲ್ಲಿ ಜೇನುಸಾಕಣೆ ಪೆಟ್ಟಿಗೆಯನ್ನು ಅಳವಡಿಸಲಾಯಿತು.
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ ಅಲ್ವಿನ್ ಡೇಸಾ, ಕಾರ್ಯಕ್ರಮ ಸಂಯೋಜಕರಾದ ಪ್ರೊ. ಎಡ್ಮಂಡ್ ಫ್ರಾಂಕ್, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಿಬ್ಬಂದಿಗಳಾದ ಡಾ ಕೆಲ್ವಿನ್ ಮತ್ತು ಶ್ರೀಮತಿ ಕ್ಯಾರೊಲಿನ್ ವೇದಿಕೆಯಲ್ಲಿದ್ದರು.

ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಉಪನ್ಯಾಸಕರಾದ ಶ್ರೀ ಶರತ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ರಾಜೇಂದ್ರ, ಕಾಪಾಡೆ, ಕಾರಾಗೃಹದ ಜೈಲರ್ ಸ್ವಾಗತಿಸಿದರು. ಪ್ರೊ. ಎಡ್ಮಂಡ್ ಫ್ರಾಂಕ್ ವಂದಿಸಿದರು.

PGDBM ಮತ್ತು NCC ಏರ್ ವಿಂಗ್ ಕೆಡೆಟ್‌ಗಳ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಈ ಕಾರ್ಯಕ್ರಮದಲ್ಲಿ ಸಹಕರಿಸಿದರು.


Spread the love