ಇಂದಿರಾ ಕ್ಯಾಂಟಿನಿನಲ್ಲಿ ಅವ್ಯವಹಾರದ ಬಗ್ಗೆ ಶಂಕೆ ವ್ಯಕ್ತಪಡಿಸಿದ ಮನಪಾ ಸದಸ್ಯರು

Spread the love

ಇಂದಿರಾ ಕ್ಯಾಂಟಿನಿನಲ್ಲಿ ಅವ್ಯವಹಾರದ ಬಗ್ಗೆ ಶಂಕೆ ವ್ಯಕ್ತಪಡಿಸಿದ ಮನಪಾ ಸದಸ್ಯರು

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್ನಲ್ಲಿ ಅವ್ಯವಹಾರ ನಡೆಯುತ್ತಿರುವುದಾಗಿ ಮನಪಾ ಸದಸ್ಯರು ಶಂಕೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮೇಯರ್ ಭಾಸ್ಕರ ಕೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ವಹಿಸುವ ಬಗ್ಗೆ ಭರವಸೆ ನೀಡಿದ ಪ್ರಸಂಗ ಇಂದು ಮನಪಾ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಮೇಯರ್ ಭಾಸ್ಕರ ಕೆ. ಅಧ್ಯಕ್ಷತೆಯಲ್ಲಿ ನಡೆದ ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸದಸ್ಯ ವಿಜಯ ಕುಮಾರ್ ಮಾತನಾಡಿ, ಪಾಲಿಕೆ ವ್ಯಾಪ್ತಿಯ ಲೇಡಿಗೋಶನ್ ಹೊರತುಪಡಿಸಿ ಉಳಿದ ಇಂದಿರಾ ಕ್ಯಾಂಟೀನ್ಗಳಲ್ಲಿ ಭಾರೀ ಅವ್ಯವಹಾರವಾಗುತ್ತಿದೆ. ಕೆಲವು ಕ್ಯಾಂಟೀನ್ಗಳಿಗೆ 100ರಷ್ಟೂ ಮಂದಿ ಉಪಹಾರ, ಊಟ ಸೇವಿಸದಿದ್ದರೂ 500 ಮಂದಿಯ ಬಿಲ್ ತೋರಿಸಲಾಗುತ್ತಿದೆ. ಈಗಾಗಲೇ ಮನಪ ವತಿಯಿಂದ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ 70 ಲಕ್ಷ ರೂ. ಒದಗಿಸಲಾಗಿದೆ. ಒಳ್ಳೆಯ ಉದ್ದೇಶದಿಂದ ಆರಂಭಿಸಲಾದ ಯೋಜನೆ ದುರುಪಯೋಗವಾಗುವ ಶಂಕೆ ಇದೆ ಎಂದು ಹೇಳಿದರು.

ಮೇಯರ್ ಭಾಸ್ಕರ ಕೆ. ಪ್ರತಿಕ್ರಿಯಿಸಿ, ಈ ಬಗ್ಗೆ ಸಂಬಂಧಪಟ್ಟವರನ್ನು ಕ್ಯಾಂಟೀನ್ಗೆ ಭೇಟಿ ನೀಡಿಸಿ ಸಿಸಿಟಿವಿ ಕ್ಯಾಮರಾ ಸೇರಿದಂತೆ ಪರಿಶೀಲನೆಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ನಗರದಲ್ಲಿ ಒಳಚರಂಡಿ ನೀರು ತೆರೆದ ಚರಂಡಿಯಲ್ಲಿ ಹರಿದಾಡುತ್ತಿದೆ ಎಂದು ಸದಸ್ಯ ಮಧುಕಿರಣ್ ಸದನದಲ್ಲಿ ಆಕ್ಷೇಪಿಸಿದರು. ಬಳಿಕ ಕಾರ್ಯಸೂಚಿ ಮಂಡನೆ ಸಂದರ್ಭ ಸದಸ್ಯ ಅಬ್ದುರ್ರವೂಫ್ ಕೂಡಾ ವಿಷಯ ಪ್ರಸ್ತಾಪಿಸಿ ಬಜಾಲ್, ಪಡೀಲ್ ಫೈಝಲ್ನಗರದಲ್ಲಿ ಎಸ್ಟಿಪಿಗಳು ಕಮಿಷನ್ ಆಗಿದ್ದರೂ ಅದು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆಕ್ಷೇಪಿಸಿದರು.

ಉತ್ತರವಾಗಿ ಆಯುಕ್ತ ಮುಹಮ್ಮದ್ ನಝೀರ್, ಪಾಲಿಕೆ ವ್ಯಾಪ್ತಿಯಲ್ಲಿ ಹಿಂದಿನ ಕುಡ್ಸೆಂಪ್ ಕಾಮಗಾರಿ ಮಿಸ್ ಲಿಂಕ್ಗಳು ಹಾಗೂ ದ್ವಿತೀಯ ಹಂತದ ಎಡಿಬಿ ಯೋಜನೆ, ಸ್ಮಾರ್ಟ್ ಸಿಟಿ, ಅಮೃತ್ ಯೋಜನೆ ಸೇರಿ ಒಟ್ಟು 507 ಕೋಟಿ ರೂ.ಗಳಲ್ಲಿ ಯುಜಿಡಿ ಪುನರ್ವಸತಿ ಕಾಮಗಾರಿ ಆರಂಭವಾಗಿದೆ ಎಂದು ತಿಳಿಸಿದರು.

ಪಚ್ಚನಾಡಿ ಡಂಪಿಂಗ್ ಯಾರ್ಡ್ನ ಸಮಸ್ಯೆಗೆ ಸಂಬಂಧಿಸಿ ಪ್ರಶ್ನೆಗೆ ಆಯುಕ್ತರು ಉತ್ತರಿಸಿ, ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಗಮನಿಸಲಾಗಿದೆ. ಬೇರೆ ಕಡೆಯಿಂದ ರಾತ್ರಿ ವೇಳೆ ಡಂಪಿಂಗ್ ಯಾರ್ಡ್ಗೆ ಕಸ ಸುರಿಯುವ ದೂರು ಇದೆ. ಈ ಬಗ್ಗೆ ಸಿಸಿಟಿವಿ ಕ್ಯಾಮರಾ ಅಳವಡಿಕೆ, ಕಂಪೌಂಡ್ ಹಾಲ್ ತೆರೆದಿದ್ದಲ್ಲಿ ಮುಚ್ಚಲು ಸೂಚನೆ ನೀಡಲಾಗಿದೆ ಎಂದರು.

ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿ ಕಳೆದ 14 ತಿಂಗಳಿನಿಂದ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗುತ್ತಿಲ್ಲ ಎಂದು ಎಂದು ಸಭೆಯಲ್ಲಿ ಸದಸ್ಯ ದಯಾನಂದ ಶೆಟ್ಟಿ ವಿಷಯ ಪ್ರಸ್ತಾಪಿಸಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಗುತ್ತಿಗೆದಾರರಿಗೆ ಸುಮಾರು 50 ಕೋಟಿ ರೂ. ಮನಪಾದಿಂದ ಪಾವತಿಗೆ ಬಾಕಿ ಇದೆ. ಇದರಿಂದ ಕಾಮಗಾರಿಗಳು ಸ್ಥಗಿತಗೊಂಡಿವೆ. ಈ ರೀತಿ ವಿಳಂಬ ಧೋರಣೆಯಿಂದ ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿ ನಿರೀಕ್ಷಿಸಲು ಸಾಧ್ಯವಾಗುವುದಿಲ್ಲ ಎಂದು ಆಕ್ಷೇಪಿಸಿದರು.

ನಗರ ಪಾಲಿಕೆಯು ಆರ್ಥಿಕ ಪರಿಸ್ಥಿತಿಯ ಚಿತ್ರಣ ನೀಡಬೇಕು ಎಂದು ಆಗ್ರಹಿಸಿದ ವಿಪಕ್ಷ ನಾಯಕ, ಸದಸ್ಯರ ಸಾಮಾನ್ಯ ನಿಧಿಯಲ್ಲಿ ಸಾಕಷ್ಟು ಕಾಮಗಾರಿಗಳು ಮಂಜೂರು ಆಗಿವೆ. ಆದರೆ ಯಾವ ನಿಧಿಯಿಂದ ಇದಕ್ಕೆ ಹಣ ಪಾವತಿಸಲಾಗುತ್ತದೆ ಎಂಬ ಬಗ್ಗೆ ಅನುಮಾನವಿದೆ. ಚುನಾವಣೆ ಘೋಷಣೆ ಆದಲ್ಲಿ ಇದರಿಂದ ಮತ್ತಷ್ಟು ಸಂಕಷ್ಟವಾಗಲಿದೆ ಎಂದರು.

ಆಯುಕ್ತ ಮುಹಮ್ಮದ್ ನಝೀರ್ ಉತ್ತರಿಸಿ, ಸಾಮಾನ್ಯ ನಿಧಿಗೆ ಸಂಬಂಧಿಸಿದಂತೆ ಬಿಲ್ ಪಾವತಿಯು ಮೂರು ವಿಭಾಗಗಳಲ್ಲಿ ನಡೆಯುತ್ತಿದೆ. ನಿರ್ವಹಣೆಗೆ ಸಂಬಂಧಿಸಿ ನವೆಂಬರ್ವರೆಗಿನ ಬಿಲ್ ಪಾವತಿ ಮಾಡಲಾಗಿದೆ. ನೀರು ಪೂರೈಕೆ ಮತ್ತು ಒಳಚರಂಡಿಗೆ ಸಂಬಂಧಿಸಿ ಜುಲೈವರೆಗಿನ ಬಿಲ್ ಮೊತ್ತವನ್ನು ಗುತ್ತಿಗೆದಾರರಿಗೆ ಪಾವತಿಸಲಾಗಿದೆ. ಇತರೆ ಕಾಮಗಾರಿಗಳಿಗೆ ಸಂಬಂಧಿಸಿ ಒಂದು ವರ್ಷದ ಬಿಲ್ ಪಾವತಿ ಇದೆ. ಫೆಬ್ರವರಿಯಿಂದ ಎಪ್ರಿಲ್ವರೆಗೆ ಆಸ್ತಿ ತೆರಿಗೆ ಪಾವತಿಯಾಗುತ್ತದೆ. ಆ ಸಂದರ್ಭದಲ್ಲಿ ಗುತ್ತಿಗೆದಾರರಿಗೂ ಬಿಲ್ ಪಾವತಿಸಲಾಗುತ್ತದೆ. ಇದು ಪ್ರತಿ ವರ್ಷವೂ ನಡೆದುಕೊಂಡು ಬಂದಿರುವ ಪ್ರತೀತಿ ಎಂದು ಹೇಳಿದರು.

ಆದರೆ ಈ ಉತ್ತರ ವಿಪಕ್ಷ ಸದಸ್ಯರಿಗೆ ಸಮಾಧಾನ ನೀಡಲಿಲ್ಲ. ಇದಕ್ಕೆ ಮತ್ತೆ ಆಕ್ಷೇಪಿಸಿದಾಗ, ಮುಖ್ಯ ಸಚೇತಕ ಶಶಿಧರ ಹೆಗ್ಡೆ ಪ್ರತಿಕ್ರಿಯಿಸಿದರು. ಮನಪಾ ವ್ಯಾಪ್ತಿಯಲ್ಲಿ ಇತಿಹಾಸದಲ್ಲಿ ಆಗದ ಕಾಮಗಾರಿಗಳು ಕಳೆದ ಐದು ವರ್ಷಗಳಲ್ಲಿ ಆಗಿದೆ ಎಂದರು. ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರೆ, ವಿಪಕ್ಷ ಸದಸ್ಯರು ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದರು.

ಈ ಸಂದರ್ಭ ಶಶಿಧರ ಹೆಗ್ಡೆ ಮಾತು ಮುಂದುವರಿಸುತ್ತಿದ್ದಂತೆಯೇ, ವಿಪಕ್ಷ ಸದಸ್ಯೆ ಪೂರ್ಣಿಮಾ ಆಕ್ಷೇಪ ವ್ಯಕ್ತಪಡಿಸಿ ತಮ್ಮ ಸ್ಥಾನದಿಂದ ಎದ್ದು ಮೇಯರ್ ಪೀಠದೆದುರು ತೆರಳಿದರು. ಮುಖ್ಯ ಸಚೇತಕರ ಮೈಕ್ ಹಿಡಿದು, ಮುಖ್ಯ ಸಚೇತಕರು ಹೇಳಿದಂತೆ 24X7 ಕುಡಿಯುವ ನೀರಿನ ವ್ಯವಸ್ಥೆ ಆಗಿಲ್ಲ. ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿರುವುದು ಸುಳ್ಳು ಎಂದು ಆರೋಪಿಸಿದರು.

ಈ ಸಂದರ್ಭ ವಿಪಕ್ಷ- ಆಡಳಿತ ಪಕ್ಷದ ಸದಸ್ಯರ ನಡುವಿನ ಮಾತಿನ ಚಕಮಕಿ, ವಾಗ್ವಾದದಿಂದ ಕೆಲ ಹೊತ್ತು ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಮತ್ತೆ ತಮ್ಮ ಆಸನಗಳಿಗೆ ಸದಸ್ಯರು ತೆರಳಿದ ಬಳಿಕ ವಿಪಕ್ಷ ಸದಸ್ಯ ಸುಧೀರ್ ಶೆಟ್ಟಿ ವಿಷಯವನ್ನು ಮರು ಪ್ರಸ್ತಾಪಿಸಿ, ಗುತ್ತಿಗೆದಾರರಿಗೆ ಎಷ್ಟು ತಿಂಗಳವರೆಗಿನ ಬಿಲ್ ಪಾವತಿಸಲಾಗುತ್ತದೆ ಎಂಬ ಬಗ್ಗೆ ನಿರ್ಣಯಿಸಿ ಎಂದರು.

ಈ ಬಗ್ಗೆ ನಿರ್ಣಯಿಸಲಾಗದು. ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ತಿಳಿಸಿದಾಗ, ಯಾವ ರೀತಿಯ ಕ್ರಮ ಎಂದು ತಿಳಿಸಿ ಎಂದು ಸುಧೀರ್ ಶೆಟ್ಟಿ ಒತ್ತಾಯಿಸಿದರು. ಮೇಯರ್ ಭಾಸ್ಕರ್ ಮಾತನಾಡಿ, ಈಗಾಗಲೇ ಮುಖ್ಯಮಂತ್ರಿ ಬಳಿ ವಿಶೇಷ ಅನುದಾನವನ್ನು ಕೇಳಲಾಗಿದೆ. ಒಂದು ವಾರದಲ್ಲಿ ಅನುದಾನ ಬರಲಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಉಪ ಮೇಯರ್ ಮುಹಮ್ಮದ್ ಕೆ., ಸ್ಥಾಯಿ ಸಮಿತಿ ಅಧ್ಯಕ್ಷರಾದ ಪ್ರವೀಣ್ ಚಂದ್ರ ಆಳ್ವ, ನವೀನ್ ಡಿಸೋಜಾ, ರಾಧಾಕೃಷ್ಣ, ಲತಾ ಸಾಲ್ಯಾನ್ ಉಪಸ್ಥಿತರಿದ್ದರು.


Spread the love