ಈದ್ ಹಬ್ಬಕ್ಕೆ ಬಟ್ಟೆ ಖರೀದಿಗೆ ಇಟ್ಟ ಹಣವನ್ನು ಉಳ್ಳಾಲದಲ್ಲಿ ಡಯಾಲಿಸಿಸ್ ಕೇಂದ್ರ ನಿರ್ಮಿಸಲು ನೀಡಲು ಉಳ್ಳಾಲ ದರ್ಗಾ ಅಧ್ಯಕ್ಷರ ಕರೆ

Spread the love

ಈದ್ ಹಬ್ಬಕ್ಕೆ ಬಟ್ಟೆ ಖರೀದಿಗೆ ಇಟ್ಟ ಹಣವನ್ನು ಉಳ್ಳಾಲದಲ್ಲಿ ಡಯಾಲಿಸಿಸ್ ಕೇಂದ್ರ ನಿರ್ಮಿಸಲು ನೀಡಲು ಉಳ್ಳಾಲ ದರ್ಗಾ ಅಧ್ಯಕ್ಷರ ಕರೆ

ಮಂಗಳೂರು: ಈದ್ ಹಬ್ಬಕ್ಕೆ ಬಟ್ಟೆ ಖರೀದಿಸಲು ಇಟ್ಟಂತಹ ಮೊಬಲಗನ್ನು ಉಳ್ಳಾಲದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಯಾಲಿಸ್ ಕೇಂದ್ರವನ್ನು ಪ್ರಾರಂಬಿಸಲು ಸಹಕಾರಿಯಾಗಿ ನಾವೆಲ್ಲರೂ ಮಾದರಿಯಾಗಿ ಈ ಬಾರಿಯ ಈದ್ ಹಬ್ಬ ಆಚರಿಸೋಣ ಎಂದು ಉಳ್ಳಾಲ ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಕರೆ ನೀಡಿದ್ದಾರೆ.

ಕೊರೋನಾ ಮಹಾಮಾರಿ ವೈರಸ್ ನಿಂದಾಗಿ ಜನಸಾಮಾನ್ಯರು ಜಾತಿಮತ ಬೇದ ಯಾವುದನ್ನೂ ಗಣನೆಗೆ ತೆಗೆಯದೆ, ಮಸೀದಿ, ಮಂದಿರ, ದೇವಸ್ಥಾನ ಚರ್ಚ್ ಗಳ ಬಾಗಿಲುಗಳನ್ನು ಹಾಕಿ ಯಾವುದೇ ರೀತಿಯ ಸಾಮೂಹಿಕ ಪ್ರಾರ್ಥನೆ, ನಮಾಝ್ ಗಳಿಗೆ ಅವಕಾಶ ಇಲ್ಲದೆ ನಾವು ಬಹಳ ಆತಂಕಕಾರಿ ಜೀವನವನ್ನು ನಡೆಸುತ್ತಿದ್ದು, ರಂಜಾನಿನಲ್ಲಿ ಮುಸಲ್ಮಾನ ಬಂದುಗಳು ಪ್ರತ್ಯೇಕವಾಗಿ ಮನೆಯಲ್ಲಿಯೇ ನಮಾಝ್ ನಿರ್ವಹಿಸಿದ್ದೇವೆ. ದೇವರ ದಯೆಯಿಂದ ಇವತ್ತು ಕೊರೋನಾ ರೋಗವು ಕಮ್ಮಿಯಾಗುತ್ತಾ ಬರುತ್ತಿದ್ದು, ಕರ್ನಾಟಕದಲ್ಲಿ ಅಂತೂ ಕಮ್ಮಿಯಾಗುತ್ತಿದೆ.ಬೆಂಗಳೂರು ಮತ್ತು ಇತರ ಪ್ರದೇಶವನ್ನು ಹೊರತು ಪಡಿಸಿ ನಮ್ಮ ಮಂಗಳೂರು, ಉಡುಪಿ, ಪಕ್ಕದ ಕಾಸರಗೋಡು ಜಿಲ್ಲೆಯಲ್ಲಿ ಈ ಪ್ರಕರಣವು ಬಹಳಷ್ಟು ಕಮ್ಮಿಯಾಗಿದೆ. ವಿಷ ಜಂತುವಿನಂತೆ ಇರುವ ಈ ವೈರಸ್ ಯಾವಾಗ ಏನು ಮಾಡಬಹುದೆಂದು ದೇವನೇ ಬಲ್ಲ, ಆದ್ದರಿಂದ ನಾವು ಸಾಮಾಜಿಕ ಅಂತರ ಮತ್ತು ಮಾಸ್ಕನ್ನು ಉಪಯೋಗಿಸೋಣ.

ನಮಗೆ ಪವಿತ್ರ ರಂಝಾನ್ ತಿಂಗಳಲ್ಲಿ ಪವಿತ್ರ ನಮಾಜ್ ಗಳನ್ನು ಮಸೀದಿಯಲ್ಲಿ ನಿರ್ವಹಿಸಲು ಸಾದ್ಯವಾಗಿಲ್ಲ, ಏಕೆಂದರೆ ಮಸೀದಿಗಳಿಗೆ ಬೀಗ ಜಡಿದಿದ್ದರಿಂದ ಮನೆಯಲ್ಲಿಯೇ ಮಾಡುವಂತಹ ಒಂದು ಕಷ್ಟಕರ ಸಂದರ್ಭವಾಗಿದೆ. ಇಂತಹ ಒಂದು ಕಷ್ಟದ ಪರಿಸ್ಥಿತಿಯಲ್ಲಿ ನಾವು ಹಬ್ಬವನ್ನು ಆಚರಿಸುವಾಗಲೂ ಆಲೋಚನೆ ಮಾಡಬೇಕು. ಹಬ್ಬ ಆಚರಣೆ ಮಾಡುವುದು ನಮ್ಮ ಧರ್ಮವಾಗಿದೆ, ಆದರೆ ನಾವು ಈ ಒಂದು ಸಂದರ್ಭದಲ್ಲಿ ಪಟ್ಟಂತಹ ಕಷ್ಟ ಕಾರ್ಪಣ್ಯವನ್ನು ಮರೆತು ಏಕಾಏಕಿಯಾಗಿ ಬಟ್ಟೆಗಳ ಅಂಗಡಿಗೆ ಮತ್ತು ಪ್ಯಾನ್ಸಿ ಅಂಗಡಿಗಳಿಗೆ ನುಗ್ಗಿಕೊಂಡು ಹಬ್ಬದ ಆಚರಣೆಗೆ ತಯಾರು ಮಾಡುವಂತಹದು ಖಂ ಡಿತವಾಗಿಯೂ ದೇವರು ಮೆಚ್ಚಲಾರ. ಪ್ರವಾದಿವರ್ಯರ ಮಾತಿಗೆ ಅದು ವಿರುದ್ದವಾಗಿರಬಹುದು,

ಈ ರಂಜಾನ್ ತಿಂಗಳಲ್ಲಿ ಮನೆಯಲ್ಲಿಯೇ ನಮಾಝ್ ಮಾಡುವಂತಹ ಈ ಒಂದು ವ್ಯವಸ್ಥೆಯ ಅಡಿಯಲ್ಲಿ ಇರುವಾಗ ಇದನ್ನು ನಾವು ಹೃದಯಾಂತರಾಳದಿಂದ ಅರ್ಥ ಮಾಡಿಕೊಂಡು ಮುಂದಿನ ದಿನದ ಈದ್ ಹಬ್ಬವನ್ನು ಸರಳವಾಗಿ ಆಚರಿಸಿಕೊಂಡು ನಾವೆಲ್ಲರೂ ಮಾದರಿಯಾಗೋಣ…ನಾವು ಬಟ್ಟೆ ಖರೀದಿಗೆ ಇಟ್ಟಂತಹ ಮೊತ್ತವನ್ನು ಸಾರ್ವಜನಿಕರಿಗೆ ಸದುಪಯೋಗ ಆಗುವಂತಹ ಕೆಲಸ ಮಾಡಲು ದೇವರು ಅನುಗ್ರಹಿಸಲಿ ಎಂದು ಹಾಜಿ ಅಬ್ದುಲ್ ರಶೀದ್ ಹೇಳಿದರು.

ಉಳ್ಳಾಲ ಬಾಗದಲ್ಲಿ ಸಾಕಷ್ಟು ಜನ ಇವತ್ತು ಕಿಡ್ನಿ ವೈಫಲ್ಯದಿಂದ ಡಯಾಲಿಸಸ್ ಮಾಡುತ್ತಿದ್ದಾರೆ, ಆದರೆ ಉಳ್ಳಾ ಪರಿಸರದಲ್ಲಿ ಇದಕ್ಕೆ ಬೇಕಾದ ಪೂರಕ ವ್ಯವಸ್ಥೆ ಕಾಣುತ್ತಿಲ್ಲ. ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಯಾಲಿಸ್ ಸೆಂಟರನ್ನು ತೆರೆಯಲು ತಾವುಗಳು ಬಟ್ಟೆ ಖರೀದಿಗಾಗಿ ಇಟ್ಟಂತಹ ಮೊಬಲಗನ್ನು ನೀಡಿ ಸಹಕರಿಸಬೇಕೆಂದು ವಿನಂತಿಸಿದರು.

ಲಾಕ್ ಡೌನ್ ಅನ್ನು ಸರಕಾರ ಸಡಿಲಿಕೆ ಮಾಡಿದರೂ ನಾವು ಈ ಸಡಿಲಿಕೆಯ ಸದುಪಯೋಗ ಪಡೆಯದೆ ಕೊರೋನಾ ವೈರಸ್ ಮುಗಿಯುವ ಹಂತದ ವರೆಗೆ ನಾವು ನಾವಾಗಿಯೇ ಲಾಕ್ ಡೌನ್ ಅನ್ನು ಮುಂದುವರಿಸಬೇಕೆಂದು ಹೇಳಿದರು.


Spread the love