ಉಡುಪಿಯಲ್ಲಿ ಐದು ದಿನಗಳ ಯೋಗ ಶಿಬಿರಕ್ಕೆ ಬಾಬಾ ರಾಮ್ ದೇವ್ ಚಾಲನೆ
ಉಡುಪಿ: ಉಡುಪಿ ಪರ್ಯಾಯ ಪಲಿಮಾರು ಮಠ, ಶ್ರೀಕೃಷ್ಣ ಮಠ ಹಾಗೂ ಪತಂಜಲಿ ಯೋಗ ಪೀಠ(ಟ್ರಸ್ಟ್ ಹರಿದ್ವಾರದ ನೇತೃತ್ವದಲ್ಲಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಯೋಗ ಗುರು ಬಾಬಾ ರಾಮ್ದೇವ್ ಅವರಿಂದ ನ.16ರಿಂದ 20ರವರೆಗೆ ಬೃಹತ್ ಯೋಗ ಶಿಬಿರಕ್ಕೆ ಯೋಗ ಗುರು ಬಾಬಾ ರಾಮ್ದೇವ್ ಶನಿವಾರ ಚಾಲನೆ ನೀಡಿದರು.
 
 
 ಬೆಳಿಗ್ಗೆ 5 ಗಂಟೆಗೆ ಆರಂಭವಾದ ಶಿಬಿರ 7.30ರ ವರೆಗೆ ನಡೆಯಿತು. ಮಹಿಳೆಯರು, ಪುರುಷರು, ಸಣ್ಣ ಮಕ್ಕಳು, ಯುವಕ ಯುವತಿಯರು, ವೃದ್ದರು ಸೇರಿದಂತೆ ಸಾವಿರಾರು ಮಂದಿ ಯೋಗಾಸನಗಳನ್ನು ಮಾಡಿದರು.


ರಾಮದೇವ್ ಅವರು ಒಂದೊಂದು ಯೋಗಾಸನ ಮಾಡುತ್ತಾ, ಅದರಿಂದಾಗುವ ಪ್ರಯೋಜನಗಳನ್ನು ವಿವರಿಸುತ್ತಿದ್ದರು. ಅನುಲೋಮ ವಿಲೋಮ ಪ್ರಾಣಾಯಾಮ, ವಜ್ರಾಸನ, ಪವನ ಮುಕ್ತಾಸನ, ಸೇರಿದಂತೆ ವಿವಿಧ ಯೋಗಭಂಗಿಗಳನ್ನು ಪ್ರದರ್ಶಿಸಿದರು. ಯೋಗಾಸನದ ಮಧ್ಯೆ ಹಾಸ್ಯ ಚಟಾಕಿಯನ್ನು ಹಾರಿಸಿದರು.


ಯೋಗ ಮಾಡಿದವರು ನಿರೋಗಿಗಳು, ರಕ್ತದೊತ್ತಡ, ಕ್ಯಾನ್ಸರ್, ಥೈರಾಡ್, ಅಸ್ತಮಾ ಮತ್ತಿತರ ಕಾಯಿಲೆಗಳನ್ನು ಯೋಗದ ಮೂಲಕ ಸಂಪೂರ್ಣ ಗುಣಪಡಿಸಬಹುದಾಗಿದೆ. ನಮ್ಮ ದೇಶದಲ್ಲಿ ತಯಾರಾಗುವ ಉತ್ಪನ್ನಗಳನ್ನು ಬಳಸಿದರೆ ದೇಶದ ಅಭಿವೃದ್ಧಿಗೆ ಬಳಸಬಹುದು. ಸ್ವದೇಶಿ ಉಳಿಸಿ, ದೇಶ ಉಳಿಸಿ ಎಂಬ ಮಂತ್ರದಂತೆ ಎಲ್ಲರೂ ಸ್ವದೇಶಿ ವಸ್ತುಗಳ ಬಳಕೆಗೆ ಹೆಚ್ಚು ಒತ್ತು ಕೊಡಬೇಕು ಎಂದರು.


ಪರ್ಯಾಯ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾದೀಶ ತೀರ್ಥ ಸ್ವಾಮೀಜಿ, ಉಡುಪಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಹಾಗೂ ಇತರರು ಉಪಸ್ಥಿತರಿದ್ದರು.
            












