ಉಡುಪಿಯಲ್ಲಿ ಯೋಗ ಗ್ರಾಮಗಳು ರೂಪುಗೊಳ್ಳಲಿ- ದಿನಕರ ಬಾಬು

Spread the love

ಉಡುಪಿಯಲ್ಲಿ ಯೋಗ ಗ್ರಾಮಗಳು ರೂಪುಗೊಳ್ಳಲಿ- ದಿನಕರ ಬಾಬು

ಉಡುಪಿ : ಜಿಲ್ಲೆಯ ಪ್ರತಿ ಮನೆ ಮನೆಗಳಲ್ಲಿ ಯೋಗ ಅಭ್ಯಾಸ ನಡೆಯುವಂತಾಗಬೇಕು, ಗ್ರಾಮೀಣ ಪ್ರದೇಶದಲ್ಲಿ ಯೋಗಕ್ಕೆ ಹೆಚ್ಚು ಆದ್ಯತೆ ನೀಡಿ, ಕುಟುಂಬದ ಇಬ್ಬರು ಅಥವಾ ಮೂರು ಜನ ಯೋಗ ಅಭ್ಯಾಸ ಮಾಡುವುದರ ಮೂಲಕ ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯ ಗ್ರಾಮಗಳು ಯೋಗ ಗ್ರಾಮಗಳಾಗಿ ರೂಪುಗೊಳ್ಳಬೇಕು, ಈ ನಿಟ್ಟಿನಲ್ಲಿ ಸಂಬಂದಪಟ್ಟ ಇಲಾಖೆಗಳು ಹಾಗೂ ಸ್ವಯಂ ಸೇವಾ ಸಂಘಟನೆಗಳು ಕಾರ್ಯೋನ್ಮುಖವಾಗಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.

ಅವರು ಗುರುವಾರ, ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ, ಆಯುಷ್ ಇಲಾಖೆ ಬೆಂಗಳೂರು, ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಡಾ.ಜಿ.ಶಂಕರ್ ಮಹಿಳಾ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇವರ ಸಂಯುಕ್ತ ಸಹಭಾಗಿತ್ವದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯೋಗ ಅಭ್ಯಾಸವನ್ನು ಕೇವಲ ಒಂದು ದಿನ ಮಾಡಿದರೆ ಸಾಲದು, ನಿರಂತರ ಯೋಗ ಅಭ್ಯಾಸದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮಪಡಿಸಿಕೊಳ್ಳಲು ಸಾಧ್ಯ, ಕೇರಳದ ಗ್ರಾಮವೊಂದರ ಪ್ರತಿ ಮನೆಗಳಲ್ಲಿ ಕುಟುಂಬದ ಸದಸ್ಯರು ಪ್ರತಿನಿತ್ಯ ಯೋಗ ಅಭ್ಯಾಸ ಮಾಡುವುದರ ಮೂಲಕ ಇಡೀ ಗ್ರಾಮ ಯೋಗ ಗ್ರಾಮ ಎನ್ನುವ ಕೀರ್ತಿ ಪಡೆದಿದೆ, ಆದೇ ರೀತಿ ಉಡುಪಿ ಜಿಲ್ಲೆಯಲ್ಲಿಯೂ ಸಹ ಗ್ರಾಮೀಣ ಪ್ರದೇಶಧಲ್ಲಿ ಯೋಗಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿ , ಮುಂದಿನ ದಿನಗಳಲ್ಲಿ ಯೋಗ ಗ್ರಾಮಗಳು ರೂಪುಗೊಳ್ಳಬೇಕು ಎಂದು ದಿನಕರ ಬಾಬು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಉಡುಪಿ ತಾ.ಪಂ. ಅದ್ಯಕ್ಷೆ ನಳಿನಿ ಪ್ರದೀಪ್ ರಾವ್ ಮಾತನಾಡಿ,ಇಂದಿನ ಒತ್ತಡದ ಜೀವನ ಶೈಲಿ ಹಾಗೂ ಆಹಾರ ಪದ್ದತಿಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಹದಗೆಡುತ್ತಿದ್ದು, ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಯೋಗ ಉತ್ತಮ ಪರಿಹಾರ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ 20 ಬಗೆಯ ಯೋಗ ಆಸನಗಳನ್ನು ಅಭ್ಯಾಸ ಮಾಡಲಾಯಿತು. ಮುನಿಯಾಲು ಆರ್ಯುವೇದ ಕಾಲೇಜಿನ ಪ್ರಾಧ್ಯಾಪಕಿ ಜ್ಯೋತ್ನ್ಸಾ ಯೋಗ ಪ್ರಾತ್ಯಕ್ಷಿಕೆ ವಿವರಿಸಿದರು, ವಿವೇಕಾನಂದ ಪೈ ಧ್ಯಾನ ಅಭ್ಯಾಸ ಕುರಿತು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿ.ಪಂ. ಸಿಇಓ ಶಿವಾನಂದ ಕಾಪಶಿ, ಅಪರ ಜಿಲ್ಲಾಧಿಕಾರಿ ಅನುರಾಧ, ಪೌರಾಯುಕ್ತ ಜನಾರ್ಧನ್ , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಜಿ.ಶಂಕರ್ ಮಹಿಳಾ ಪ್ರ.ದ.ಕಾಲೇಜಿನ ಪ್ರಾಂಶುಪಾಲ ಡಾ. ಭಾಸ್ಕರ್ , ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಮಧುಕರ್ , ಯೋಗ ಅಭ್ಯಾಸ ಮಾಡಿದರು.

ನಿರಾಲಂಬ ಪೂರ್ಣ ಚಕ್ರಾಸನದಲ್ಲಿ ಗಿನ್ನಿಸ್ ದಾಖಲೆ ಮಾಡಿದ ಕು.ತನುಶ್ರೀ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಆಯುಷ್ ಇಲಾಖೆಯ ಆಯುಷ್ ಅಧಿಕಾರಿ ಡಾ. ಅಲಕಾನಂದ ರಾವ್ ಸ್ವಾಗತಿಸಿದರು. ವೀಣಾ ಕಾರಂತ್ ನಿರೂಪಿಸಿದರು.


Spread the love