ಉಡುಪಿಯಲ್ಲಿ ಸಂಭ್ರಮದ ಮಹಿಳಾ ದಿನಾಚರಣೆ: ಕೇಂದ್ರ ಸಚಿವ ಜಿಗಜಿಣಗಿ ಭಾಗಿ

Spread the love

ಉಡುಪಿಯಲ್ಲಿ ಸಂಭ್ರಮದ ಮಹಿಳಾ ದಿನಾಚರಣೆ: ಕೇಂದ್ರ ಸಚಿವ ಜಿಗಜಿಣಗಿ ಭಾಗಿ

ಉಡುಪಿ: ಸ್ವಚ್ಛ ಭಾರತ ಮಿಷನ್ ಜನಾಂದೋಲನವಾಗಿ ರೂಪುಗೊಳ್ಳುವಲ್ಲಿ ಮಹಿಳೆಯರ ಪಾತ್ರ ಅಮೂಲ್ಯವಾದದ್ದು, ಸ್ವಚ್ಛತೆ ಸಾರ್ವಜನಿಕ ಜೀವನದಲ್ಲಿ ನಿರಂತರವಾಗಿರಬೇಕೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಸಚಿವರಾದ ರಮೇಶ್ ಸಿ ಜಿಗಜಿಣಗಿ ಅವರು ಹೇಳಿದರು.

ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಹಾಗೂ ಲಯನ್ಸ್ ಕ್ಲಬ್ ಪರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸ್ವಚ್ಛ ಶಕ್ತಿ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

2014 ಅಕ್ಟೋಬರ್ 2 ರಂದು ಗಾಂಧೀಜಿ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಘೋಷಣೆಯಾದ ಬಯಲು ಶೌಚಾಲಯ ಮುಕ್ತ ಘೋಷಣೆ ಕಾರ್ಯರೂಪಕ್ಕೆ ಬರುವಲ್ಲಿ ಮಹಿಳೆಯರ ಕೊಡುಗೆ ಹೆಚ್ಚಿನದ್ದು. ಈ ನಿಟ್ಟಿನಲ್ಲಿ ಇಂದು ಆಚರಿಸುತ್ತಿರುವ ಮಹಿಳಾ ದಿನಾಚರಣೆ ಮಹಿಳೆಯರನ್ನು ಗೌರವಿಸುವ ದಿನವಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಸ್ವಚ್ಛ ಭಾರತ ಯೋಜನೆಯನ್ನು ಪ್ರಾರಂಭಿಸಿದ ದಿನದಿಂದ ಈವರೆಗೆ ದೇಶದಲ್ಲಿ 3.50 ಕೋಟಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ದೇಶದ 101 ಜಿಲ್ಲೆಗಳನ್ನು ಮತ್ತು 1.67ಲಕ್ಷ ಗ್ರಾಮಗಳನ್ನು ಬಯಲು ಶೌಚ ಮುಕ್ತಗಳನ್ನಾಗಿ ಘೋಷಿಸಲಾಗಿದೆ. ದೇಶದಲ್ಲಿ ಶೇ.61.27ರಷ್ಟು ಪ್ರಮಾಣದಲ್ಲಿ ಸಾರ್ವಜನಿಕರು ಶೌಚಾಲಯಗಳನ್ನು ಹೊಂದಿದ್ದಾರೆ. 10,500ಕೋಟಿ ರೂ. ಅನುದಾನವನ್ನು ವಿನಿಯೋಗಿಸಲಾಗುತ್ತಿದೆ. 8853ಕೋಟಿ ರೂ. ಅನುದಾನವನ್ನು ಎಲ್ಲ ರಾಜ್ಯ ಸರಕಾರಗಳು ಖರ್ಚು ಮಾಡಿವೆ. 2017-18ನೆ ಆರ್ಥಿಕ ವರ್ಷ ದಲ್ಲಿ ಸುಮಾರು 14ಸಾವಿರ ಕೋಟಿ ರೂ. ಅನುದಾನವನ್ನು ರಾಜ್ಯ ಸರಕಾರ ಗಳಿಗೆ ನೀಡಲು ಯೋಜಿಸಿದೆ ಎಂದು ಅವರು ತಿಳಿಸಿದರು.

28 ತಾಲೂಕುಗಳು, 5 ಜಿಲ್ಲೆಗಳು ಈಗಾಗಲೇ ಬಯಲು ಶೌಚಾಲಯ ಮುಕ್ತ ಎಂದು ಘೋಷಿಸಲಾಗಿದ್ದು, ರಾಜ್ಯದ ಪ್ರಗತಿ ವರದಿ ಅನುಸಾರವಾಗಿ ಕೇಂದ್ರ ಸರಕಾರ ಈ ಸಂಬಂಧ ಅನುದಾನವನ್ನು ಬಿಡುಗಡೆ ಮಾಡಲಿದೆ. ಸ್ವಚ್ಛತಾ ಪ್ರೇರಕರಾಗಿ ಕೆಲಸ ಮಾಡುವ ಮಹಿಳೆಯರು ಸದಾ ಅಭಿನಂದಾರ್ಹರು ಎಂದು ಸಚಿವರು ಮತ್ತೊಮ್ಮೆ ಹೇಳಿದರು.

ಇದೇ ವೇಳೆ ಸ್ವಚ್ಛತಾ ಪ್ರೇರಕರಾಗಿ ಇರುವ ಮಹಿಳೆಯರನ್ನು ಸಚಿವರು ಸನ್ಮಾನಿಸಿದರು. ಆಶಾ ಕಾರ್ಯಕರ್ತೆಯರಾದ ಸುನೀತಾ ಬೆಳ್ಮಣ್, ಸುಜಾತ ಬೇಳೂರು, ಪೂರ್ಣಿಮಾ ಎ ಶೆಟ್ಟಿ ಹಿರಿಯಡಕ ಇವರನ್ನೂ ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶೀಲಾ ಕೆ ಶೆಟ್ಟಿ ಅವರು ಮಹಿಳಾ ಮಂಡಳಿಗಳಿಗೆ ವಿಶೇಷ ಅನುದಾನ ನೀಡಲು, ಅಂಗನವಾಡಿ ಕಾರ್ಯಕರ್ತೆಯರಿಗೆ ಸಹಾಯಧನ ಹೆಚ್ಚಿಸಲು, ಆಶಾ ಕಾರ್ಯಕರ್ತೆಯರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಅವರ ಗೌರವಧನವನ್ನು ಹೆಚ್ಚಿಸಲು ಸಚಿವರಲ್ಲಿ ಬೇಡಿಕೆ ಇಟ್ಟರು.

ಸ್ವಚ್ಛತಾ ಮಿಷನ್‍ನ ರಾಜ್ಯ ಪ್ರತಿನಿಧಿ ಚೇತನಾ ಗಂಗಾ ನೀರು, ನೈರ್ಮಲ್ಯ, ಶುಚಿತ್ವ, ಆರೋಗ್ಯ ಮತ್ತು ಹೆಂಗಸರು ಕುರಿತು ಮಾತನಾಡಿದರು. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫಾನ್ಸಿಸ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಜಿಲ್ಲಾ ಪಂಚಾಯತ್‍ನ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಗ್ರೇಸಿ ಗೋನ್ಸಾಲಿಸ್ ವಂದಿಸಿದರು. ತಾಲೂಕು ಪಂಚಾಯತ್ ಅಧ್ಯಕ್ಷರಾದ ನಳಿನಿ ಪ್ರದೀಪ್ ರಾವ್, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ರಾಜೇಂದ್ರ ಪಂದುಬೆಟ್ಟು, ಜಿಲ್ಲಾ ಪಂಚಾಯತ್ ಸದಸ್ಯರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಜಿ ಸುವರ್ಣ, ಸುಧಾಕರ್ ಶೆಟ್ಟಿ ಮೈರ್ಮಾಡಿ, ಲಯನ್ಸ್ ಕ್ಲಬ್‍ನ ರಾಧಾಕೃಷ್ಣ ಮೆಂಡನ್, ಮಹಿಳಾ ಸ್ತ್ರೀಶಕ್ತಿ ಒಕ್ಕೂಟದ ಧನಲಕ್ಷ್ಮಿ, ಸರಳಾ ಕಾಂಚನ್, ರಾಧಾ ದಾಸ್, ಮುಂತಾದವರು ಉಪಸ್ಥಿತರಿದ್ದರು.

‘ಸಂತಸದ ಕೆಲಸ ಸಂತೃಪ್ತಿಯ ಮನೆ’
ಹೋಲಿಕೆ, ಅತ್ಯುತ್ತಮಕ್ಕಾಗಿ ಸ್ಪರ್ಧೆ ಹಾಗೂ ಅಪರಿಮಿತ ನಿರೀಕ್ಷೆ, ತಾಂತ್ರಿಕ ಬೆಳವಣಿಗೆ ಇಂದಿನ ಒತ್ತಡದ ಬದುಕಿಗೆ ಪ್ರಮುಖ ಕಾರಣವಾಗಿದೆ. ನಾವು ಪ್ರತಿದಿನದ ಬದುಕನ್ನು ಯೋಜನಾಬದ್ಧವಾಗಿ ರೂಪಿಸುವುದರಿಂದ ದೈನಂದಿನ ಜೀವನದಲ್ಲಿ ಒತ್ತಡ ನಿರ್ವಹಣೆ ಸಾಧ್ಯ ಎಂದು ಮನ:ಶಾಸ್ತ್ರಜ್ಞರಾದ ಡಾ.ಪಿ.ವಿ.ಭಂಡಾರಿ ಹೇಳಿದರು.

ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಹಾಗೂ ಲಯನ್ಸ್ ಕ್ಲಬ್ ಪರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸ್ವಚ್ಛ ಶಕ್ತಿ ಸಪ್ತಾಹದಲ್ಲಿ’ ಸಂತಸದ ಕೆಲಸ ಸಂತೃಪ್ತಿಯ ಮನೆ’ ವಿಷಯದ ಕುರಿತು ಉಪನ್ಯಾಸ ನೀಡಿದರು.

ಹಾಲು ಸೀದುವುದರಿಂದ ಹಿಡಿದು ವಿಚ್ಛೇದನದವರೆಗಿನ ಹಲವು ಪ್ರಕರಣಗಳಿಗೆ ಇಂದಿನ ಇಂಟರ್‍ನೆಟ್,ವಾಟ್ಸಾಪ್ ದುರ್ಬಳಕೆ ಕಾರಣವಾಗಿದೆ ಎಂದ ಅವರು 8 ಗಂಟೆಗೂ ಮಿಗಿಲಾಗಿ ಅವಿರತ ದುಡಿಮೆಯಿಂದ ಮಹಿಳೆಯರಲ್ಲಿ ಖಿನ್ನತೆ ಹೆಚ್ಚುತ್ತಿದೆ ಎಂಬುವುದನ್ನು ವಿಶ್ಲೇಷಿಸಿದರು.

ಸಂಕಷ್ಟಗಳನ್ನು ನಂಬಿಕಸ್ಥರೊಂದಿಗೆ ಹಂಚಿಕೊಳ್ಳಿ; ಸಾಧ್ಯವಾಗದ ಕೆಲಸಗಳನ್ನು ಒಪ್ಪಿಕೊಳ್ಳದಿರಿ ಎಂದು ಸಲಹೆ ಮಾಡಿದ ಅವರು, ಉತ್ತಮ ಆಹಾರ, ಸದ್ವಿಚಾರಗಳನ್ನು ಅಳವಡಿಸಿಕೊಳ್ಳುವುದರಿಂದ ಮಕ್ಕಳಿಗೆ ಉತ್ತಮ ಮಾದರಿಗಳಾಗಿ ಎಂದು ಸಲಹೆ ಮಾಡಿದರು.

1990 ರಲ್ಲಿ ಶೇ.17 ರಷ್ಟು ಮಹಿಳೆಯರು ಉದ್ಯೋಗ ಕ್ಷೇತ್ರದಲ್ಲಿದ್ದರೆ, 2001 ರ ವೇಳೆಗೆ 24%, 2010 ರ ವೇಳೆಗೆ 44% ಮಹಿಳೆಯರು ಉದ್ಯೋಗದಲ್ಲಿ ನಿರತರಾಗಿದ್ದಾರೆ. ಸುಮಾರು 11 ಕೈಗಾರಿಕೆಗಳಲ್ಲಿ ಮಹಿಳೆಯರು ಪ್ರಮುಖವಾಗಿ ದುಡಿಯುತ್ತಿದ್ದಾರೆ. ಕ್ರಮಬದ್ಧ ಜೀವನ ಶೈಲಿಯಿಂದ ಮಾತ್ರ ಮಹಿಳೆಯರು ಯಶಸ್ವಿಯಾಗಲು ಸಾಧ್ಯವಿದೆ ಎಂದು ಅವರು ಹೇಳಿದರು.


Spread the love