ಉಡುಪಿ-ಕಾರ್ಕಳ ಕೆಎಸ್ ಆರ್ ಟಿಸಿ ಸಾಮಾನ್ಯ ಸಾರಿಗೆ ಬಸ್ಸಿಗೆ ಸಚಿವ ಪ್ರಮೋದ್ ಚಾಲನೆ
ಉಡುಪಿ: ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಕುಂದಾಪುರ-ಉಡುಪಿ-ಕಾರ್ಕಳ ಮಾರ್ಗದಲ್ಲಿ ನೂತನ ಸಾಮಾನ್ಯ ಸಾರಿಗೆಗಳ ಕಾರ್ಯಾಚರಣೆಗೆ ಉಡುಪಿ ನಗರ ಸಭೆ ಬಸ್ಸು ನಿಲ್ದಾಣದಲ್ಲಿ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಹಲವಾರು ದಿನಗಳ ಬೇಡಿಕೆ ಇದಾಗಿದ್ದು, ಅದರಂತೆ ಕುಂದಾಪುರ-ಉಡುಪಿ-ಕಾರ್ಕಳ ಮಾರ್ಗದಲ್ಲಿ ನೂತನ ಸಾಮಾನ್ಯ ಸಾರಿಗೆ ಬಸ್ಸುಗಳ ಒಡಾಟವನ್ನು ಆರಂಭಿಸಿದ್ದು, ಖಾಸಗಿ ಮತ್ತು ಸರಕಾರಿ ಬಸ್ಸುಗಳು ಜೊತೆ ಜೊತೆಯಲ್ಲಿ ಇದ್ದಾಗ ಮಾತ್ರ ಸಾರ್ವಜನಿಕರಿಗೆ ಉತ್ತಮ ಸೇವೆ ಲಭಿಸಲು ಸಾಧ್ಯವಿದೆ. ಈಗಾಗಲೇ ಉಡುಪಿ ನಗರಲ್ಲಿ 12 ನರ್ಮ್ ಬಸ್ಸುಗಳು ಒಡಾಟ ಮಾಡುತ್ತಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. 26 ಹೊಸ ಬಸ್ಸುಗಳ ಪರ್ಮಿಟಿ ಮನವಿ ಸಲ್ಲಿಸಲಾಗಿದೆ. ನರ್ಮ್ ಬಸ್ಸುಗಳು ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗದೆ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸುವ ಉದ್ದೇಶದಿಂದ 26 ಬಸ್ಸುಗಳಿಗೆ ಶ್ರೀಘ್ರದಲ್ಲಿಯೇ ಪರವಾನಿಗೆ ಲಭಿಸಲಿದೆ. ಮಾರ್ಚ್ 21 ರ ಪ್ರಾಧಿಕಾರದ ಸಭೆಯಲ್ಲಿ ಪರವಾನಿಗೆ ಲಭಿಸುವ ಸಾಧ್ಯತೆ ಇದೆ. ಹೊಸ ನರ್ಮ್ ಬಸ್ಸು ನಿಲ್ದಾಣಕ್ಕೆ ರೂ 4 ಕೋಟಿ ಟೆಂಡರ್ ಕರೆಯಲಾಗಿದೆ. ಹೊಸ ಕೆಎಸ್ ಆರ್ ಟಿಸಿ ಬಸ್ಸು ನಿಲ್ದಾಣಕ್ಕೆ ಪಿಪಿಪಿ ಮಾದರಲ್ಲಿ ರೂ 30 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದರು.
ಉಡುಪಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಪಾಧ್ಯಕ್ಷೆ ಸಂಧ್ಯಾ ತಿಲಕ್, ಸದಸ್ಯರಾದ ರಮೇಶ್ ಕಾಂಚನ್, ಜನಾರ್ದನ್ ಭಂಡಾರ್ಕರ್, ಸೆಲಿನಾ ಕರ್ಕಡ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಹಾಗೂ ಇತರರು ಉಪಸ್ಥಿತರಿದ್ದರು.













