ಉಡುಪಿ : ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಜಯಪ್ರಕಾಶ್‌ ಹೆಗ್ಡೆ ಬೆಂಬಲಿಗರಿಂದ ಬಿಜೆಪಿಗೆ ಮತ ಹಾಕಲು ನಿರ್ಧಾರ

jphegdeಉಡುಪಿ : ಕಳೆದ ವಿಧಾನಪರಿಷತ್‌ ಚುನಾವಣೆಯ ವೇಳೆ ಕಾಂಗ್ರೆಸ್‌ ಪಕ್ಷದ ಆದೇಶವನ್ನು ಮೀರಿ ಪಕ್ಷೇತರರಾಗಿ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿತಗೊಂಡಿರುವ ಮಾಜಿ ಸಂಸದ ಕೆ.ಜಯಪ್ರಕಾಶ್‌ ಹೆಗ್ಡೆ ಅವರ ಬೆಂಬಲಿಗರು ಫೆಬ್ರವರಿ 20ರಂದು ನಡೆಯುವ ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಮತ ಚಲಾಯಿಸಲು ನಿರ್ಧರಿಸಿದ್ದಾರೆ.
ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ, ಹಾಗೂ ವಾರಂಬಳ್ಳಿ ಗ್ರಾಪಂನ ಮಾಜಿ ಅಧ್ಯಕ್ಷರಾಗಿರುವ ರಾಜೇಶ್‌ ಶೆಟ್ಟಿ ಬಿರ್ತಿ ಈ ವಿಷಯವನ್ನು ತಿಳಿಸಿದ್ದು, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ವಿರೋಧಿಸಲು ಹೆಗ್ಡೆ ಅವರ ಬೆಂಬಲಿಗರು ನಿರ್ಧರಿಸಿದ್ದು, ಕುಂದಾಪುರ ಹಾಗೂ ಬ್ರಹ್ಮಾವರ ವಲಯದಲ್ಲಿ ಇದಕ್ಕೆ ಬದಲಿಯಾಗಿ ಇರುವ ಏಕೈಕ ಪರ್ಯಾಯ ಬಿಜೆಪಿಗೆ ಮತ ಚಲಾಯಿಸುವುದಾಗಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಹೆಗ್ಡೆ ಅವರ ಬೆಂಬಲಿಗರೆಲ್ಲರೂ ಬಿಜೆಪಿಗೆ ಮತ ಚಲಾಯಿಸಲಿದ್ದಾರೆ ಎಂದವರು ಹೇಳಿದರು.
ಜಯಪ್ರಕಾಶ್ ಹೆಗ್ಡೆ ಅವರಿಗೆ ಬ್ರಹ್ಮಾವರ ಹಾಗೂ ಕುಂದಾಪುರ ಕ್ಷೇತ್ರದ ನಾಲ್ಕೈದು ಜಿಪಂ ಕ್ಷೇತ್ರಗಳಲ್ಲಿರುವ ಅಪಾರ ಜನಬೆಂಬಲದ ಹಿನ್ನೆಲೆಯಲ್ಲಿ ನಿಮ್ಮಲ್ಲಿ ಯಾರೂ ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ ಎಂದು ಪ್ರಶ್ನಿಸಿದಾಗ, ಅಭ್ಯರ್ಥಿಗಳನ್ನು ಗೆಲ್ಲಿಸಲು ಬೇಕಾದ ಸಂಪನ್ಮೂಲ ನಮ್ಮಲ್ಲಿ ಇಲ್ಲದ ಕಾರಣ ನಾವ್ಯಾರು ಸ್ಪರ್ಧಿಸಲು ಮುಂದಾಗಲಿಲ್ಲ ಎಂದು ರಾಜೇಶ್‌ ಶೆಟ್ಟಿ ತಿಳಿಸಿದರು. ತಮ್ಮ ಪಕ್ಷವನ್ನು ಬೆಂಬಲಿಸುವಂತೆ ಮಾಜಿ ಶಾಸಕ ಕೆ.ರಘುಪತಿ ಭಟ್‌ ಸೇರಿದಂತೆ ಕೆಲವು ಬಿಜೆಪಿ ನಾಯಕರು ತಮ್ಮಲ್ಲಿ ಕೋರಿದ್ದರೂ, ನಾವು ಅವರಿಗೆ ಬೆಂಬಲವನ್ನು ನೀಡಲಿಲ್ಲ. ಬಿಜೆಪಿ ಪಕ್ಷ ಸೇರುವ ಸಾಧ್ಯತೆಯೂ ಸದ್ಯಕ್ಕಿಲ್ಲ ಎಂದು ಅವರು ಹೇಳಿದರು. ಜಿಪಂ ಹಾಗೂ ತಾಪಂ ಚುನಾವಣೆಯ ಫ‌ಲಿತಾಂಶವನ್ನು ನೋಡಿಕೊಂಡು ಹೆಗ್ಡೆ ಗುಂಪಿನ ಮುಂದಿನ ನಡೆಯನ್ನು ನಿರ್ಧರಿಸಲಾಗುವುದು. ಕರೆದರೂ ಮತ್ತೆ ಕಾಂಗ್ರೆಸ್‌ಗೆ ಹೋಗುವ ಸಾಧ್ಯತೆ ಇಲ್ಲವೇ ಇಲ್ಲ.

ಅತಿ ಶೀಘ್ರವೇ ಹೆಗ್ಡೆ ತಮ್ಮ ರಾಜಕೀಯ ಜೀವನದ ಮುಂದಿನ ನಡೆಯನ್ನು ಪ್ರಕಟಿಸುವರು. ಅದುವರೆಗೆ ಸದ್ಯಕ್ಕಂತೂ ನಾವೆಲ್ಲರೂ ರಾಜಕೀಯದಿಂದ “ನಿವೃತ್ತ’ರು ಎಂದು ರಾಜೇಶ್‌ ಶೆಟ್ಟಿ ತಿಳಿಸಿದರು. ಜಯಪ್ರಕಾಶ್‌ ಹೆಗ್ಡೆ ಅವರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸಿರುವುದನ್ನು ವಿರೋಧಿಸಿ ಕಳೆದ ಒಂದು ತಿಂಗಳಿನಿಂದ ಕುಂದಾಪುರ, ಬ್ರಹ್ಮಾವರ ಪರಿಸರದ ನೂರಾರು ಕಾಂಗ್ರೆಸ್‌ ಪದಾಧಿಕಾರಿಗಳು ಹಾಗೂ ಸಾಮಾನ್ಯ ಕಾರ್ಯಕರ್ತರು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಬೆಂಬಲಿಗರ ಈ ನಿರ್ಧಾರ ಕಾಂಗ್ರೆಸ್‌ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಲಿದೆ.

Notify of
Bharath

We are with u always rajesh sir