ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಾವೇಶಕ್ಕಾಗಿ ಹಾಕಲಾಗಿದ್ದ ಬ್ಯಾನರಿಗೆ ಕಿಡಿಗೇಡಿಗಳಿಂದ ಹಾನಿ

Spread the love

ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಾವೇಶಕ್ಕಾಗಿ ಹಾಕಲಾಗಿದ್ದ ಬ್ಯಾನರಿಗೆ ಕಿಡಿಗೇಡಿಗಳಿಂದ ಹಾನಿ

ಉಡುಪಿ : ಕಾಂಗ್ರೆಸ್ ಪಕ್ಷದ ಪರಿವರ್ತನಾ ಯಾತ್ರೆ ಹಾಗೂ ಜಿಲ್ಲಾ ಸಮಾವೇಶಕ್ಕಾಗಿ ಕಲ್ಸಂಕ ರಾಯಲ್ ಗಾರ್ಡನ್ ಬಳಿ ಹಾಕಲಾದ ಬ್ಯಾನರ್ ಒಂದನ್ನು ಕಿಡಿಗೇಡಿಗಳು ಹಾನಿ ಮಾಡಿದ ಘಟನೆ ಶುಕ್ರವಾರ ನಡೆದಿದೆ.

ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾರ್ಚ್ 10 ರಂದು ಆಯೋಜಿಸಲಾದ ಪರಿವರ್ತನಾ ಯಾತ್ರೆ ಹಾಗೂ ಜಿಲ್ಲಾ ಸಮಾವೇಶದ ಬ್ಯಾನರ್ ಗಳನ್ನು ನಗರದಾದ್ಯಂತ ಹಾಕಲಾಗಿದ್ದು, ಕಲ್ಸಂಕ ಬಳಿ ಹಾಕಲಾದ ಬ್ಯಾನರಿನಲ್ಲಿ ಕಾಂಗ್ರೆಸ್ ರಾಷ್ಟ್ರಿಯ ಅಧ್ಯಕ್ಷ ರಾಹುಲ್ ಗಾಂಧಿಯವರ ಭಾವಚಿತ್ರವನ್ನು ಹರಿದು ಹಾಕಿ ಬ್ಯಾನರನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಕಾಂಗ್ರೆಸ್ ಪಕ್ಷದ ಬ್ಯಾನರನ್ನು ಅನಾವಶ್ಯಕವಾಗಿ ವಿರೂಪಗೊಳಿಸಿರುವುದು ಕಿಡೀಗೇಡಿಗಳ ವಿಕೃತ ಮನಸ್ಸನ್ನು ಬಿಂಬಿಸುತ್ತದೆ. ಕಾಂಗ್ರೆಸ್ ಪಕ್ಷ ಸದಾ ಶಾಂತಿಯನ್ನು ಬಯಸುವ ಪಕ್ಷವಾಗಿದ್ದು ಇಂತಹ ಪುಂಡಾಟದ ವರ್ತನೆಗೆ ಬೆದರುವುದಿಲ್ಲ. ಒಂದು ವೇಳೆ ಇಂತಹ ಘಟನೆಗಳು ಮುಂದುವರೆದರೆ ನಾವು ಕೂಡ ಮುಂದೆ ಸೂಕ್ತ ಪ್ರತ್ಯುತ್ತರವನ್ನು ನೀಡಲು ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.


Spread the love