ಉಡುಪಿ ಜಿಲ್ಲೆಯಲ್ಲಿ ಕ್ರೈಸ್ತ ಭಾಂಧವರಿಂದ ಸಂಭ್ರಮದ ಮೊಂತಿ ಫೆಸ್ತ್ ಆಚರಣೆ

ಉಡುಪಿ ಜಿಲ್ಲೆಯಲ್ಲಿ ಕ್ರೈಸ್ತ ಭಾಂಧವರಿಂದ ಸಂಭ್ರಮದ ಮೊಂತಿ ಫೆಸ್ತ್ ಆಚರಣೆ

ಉಡುಪಿ: ಕನ್ಯಾಮರಿಯಮ್ಮನವರ ಜನ್ಮದಿನವಾದ ಮೊಂತಿ ಫೆಸ್ತ್ ಅನ್ನು ಜಿಲ್ಲೆಯಾದ್ಯಂತ ಕ್ರೆಸ್ತ ಸಮುದಾಯದ ಜನರು ಭಕ್ತಿ ಭಾವದಿಂದ ಭಾನುವಾರ ಆಚರಿಸಿದರು.

ಪುಟ್ಟ ಮಕ್ಕಳು ಕನ್ಯಾ ಮರಿಯಮ್ಮನವರ ಮೂರ್ತಿಗೆ ಹೂಗಳನ್ನು ಸಮರ್ಪಿಸಿದ ಬಳಿಕ ಜಿಲ್ಲೆಯ ಎಲ್ಲ ಚರ್ಚುಗಳಲ್ಲಿ ಧರ್ಮಗುರುಗಳು ಆಯಾ ಊರಿನ ಗುರಿಕಾರರು ತಮ್ಮ ಹೊಲಗಳಿಂದ ಆರಿಸಿ ತಂದ ಭತ್ತದ ತೆನೆಯನ್ನು ಆರ್ಶಿವದಿಸಿ ಮೆರವಣಿಗೆಯಲ್ಲಿ ಚರ್ಚಿನ ಒಳಗೆ ಕೊಂಡೊಯ್ದು ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಂಡರು. ಪವಿತ್ರ ಬಲಿಪೂಜೆಯಲ್ಲಿ ಧರ್ಮಗುರುಗುಳು ಕುಟುಂಬ ಜೀವನ ಹಾಗೂ ಸಮಾಜದಲ್ಲಿ ಮಹಿಳೆಯ ಸ್ಥಾನಮಾನದ ಕುರಿತು ಪ್ರವಚನ ನೀಡಿದರು.

ಉಡುಪಿ ಕ್ರೆಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಜೆರಾಲ್ಡ್ ಐಸಾಕ್ ಲೋಬೊ ಅವರು ಪಾಂಬೂರು ಹೋಲಿ ಕ್ರಾಸ್ ಚರ್ಚಿನಲ್ಲಿ ಹಬ್ಬದ ಬಲಿಪೂಜೆ ಅರ್ಪಿಸಿ ಹೊಸ ತೆನೆಗಳನ್ನು ಆಶೀರ್ವದಿಸಿ ಹಬ್ಬದ ಸಂದೇಶ ನೀಡಿದರು. ಈ ವೇಳೆ ಚರ್ಚಿನ ಪ್ರಧಾನ ಧರ್ಮಗುರು ವಂ|ಹೆನ್ರಿ ಮಸ್ಕರೇನ್ಹಸ್ ಉಪಸ್ಥಿತರಿದ್ದರು.
ಕೆಲವು ಕಡೆ ಭತ್ತದ ತೆನೆಯನ್ನು ಹಿಡಿದುಕೊಂಡ ಕ್ರೈಸ್ತ ಸಮುದಾಯದವರು ಮೆರವಣಿಗೆ ನಡೆಸಿದರು. ಬುಟ್ಟಿ ತುಂಬಾ ಹೂವು ಹೊತ್ತ ಪುಟಾಣಿಗಳು ಇಗರ್ಜಿಗಳ ಆವರಣದಲ್ಲಿ ಹೂವು ಚೆಲ್ಲಿ ಮಾತೆ ಮೇರಿಯನ್ನು ಅಭಿನಂದಿಸಿದರು. ಹೊಸ ಬೆಳೆಯ ಹಸಿರು ತೆನೆಯನ್ನು ಧರ್ಮಗುರುಗಳು ಸ್ವಾಗತಿಸಿದರು. ಕ್ರೈಸ್ತರ ತೆನೆ ಹಬ್ಬದ ಪ್ರಯುಕ್ತ ವಿವಿಧ ಇಗರ್ಜಿಯಲ್ಲಿ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆದವು.

ಈ ಹಬ್ಬಕ್ಕೆ ಪೂರ್ವಭಾವಿಯಾಗಿ ಚರ್ಚ್ಗಳಲ್ಲಿ 9 ದಿನಗಳ ನೊವೇನಾ ಪ್ರಾರ್ಥನೆಯ ಕಾರ್ಯಕ್ರಮ ನಡೆಯುವುದು ವಾಡಿಕೆ. ಆ. 30 ರಂದು ಆರಂಭವಾಗುತ್ತದೆ. ನೊವೇನಾ ಪ್ರಾರ್ಥನೆಯ ವೇಳೆ ಪ್ರತಿ ದಿನ ಮಕ್ಕಳು ಹೂವುಗಳನ್ನು ಕೊಂಡೊಯ್ದು ಮೇರಿ ಮಾತೆಗೆ (ಬಾಲೆ ಮೇರಿಯ ಮೂರ್ತಿಗೆ) ಸಮರ್ಪಿಸಿ, ಗೀತೆಗಳನ್ನು ಹಾಡುವ ಮೂಲಕ ಸ್ತುತಿಸಿ ಕೊನೆಯ ದಿನ ಅಂದರೆ ಸೆ. 8 ರಂದು ಹಬ್ಬದ ಸಂಭ್ರಮ. ಚರ್ಚ್ಗಳಲ್ಲಿ ಬಲಿ ಪೂಜೆ, ಹೊಸ ತೆನೆಯ ಆಶೀರ್ವಚನ ಮತ್ತು ವಿತರಣೆ, ಧರ್ಮ ಗುರುಗಳಿಂದ ಹಬ್ಬದ ಸಂದೇಶ, ಕ್ರೈಸ್ತರಿಂದ ಹಬ್ಬದ ಶುಭಾಶಯ ವಿನಿಮಯ, ಸಿಹಿ ತಿಂಡಿ ಮತ್ತು ಕಬ್ಬು ವಿತರಣೆ ಹಾಗೂ ಬಳಿಕ ಮನೆಗಳಲ್ಲಿ ಕೌಟುಂಬಿಕವಾಗಿ ಹಬ್ಬದ ಭೋಜನ ಕಾರ್ಯಕ್ರಮ ನಡೆಯುತ್ತದೆ.

ಬಲಿಪೂಜೆಯ ಬಳಿಕ ಧರ್ಮಗುರುಗಳು ಪ್ರತಿ ಕುಟುಂಬಕ್ಕೆ ಆಶೀರ್ವದಿಸಿದ ಹೊಸ ಭತ್ತದ ತೆನೆಯನ್ನು ನೀಡಿ ಹರಸಿದರು. ಇದೇ ವೇಳೆ ಚಿಕ್ಕ ಮಕ್ಕಳಿಗೆ ಸಿಹಿತಿಂಡಿ, ಕಬ್ಬುಗಳನ್ನು ಸಹ ವಿತರಿಸಲಾಯಿತು. ಇಗರ್ಜಿಯಿಂದ ಭಕ್ತಿಯಿಂದ ಕೊಂಡು ಬಂದ ಭತ್ತದ ತೆನೆಯನ್ನು ಕುಟುಂಬದ ಹಿರಿಯರು ಮನೆಗೆ ತಂದು ದೇವರ ಪೀಠದ ಮೇಲಿಟ್ಟು ಪ್ರಾರ್ಥನೆ ಸಲ್ಲಿಸಿ, ಹೊಸ ಭತ್ತದ ತೆನೆಗಳನ್ನು ಸುಲಿದು ಕುಟುಂಬದ ಸದಸ್ಯರೊಂದಿಗೆ ಪಾಯಸ ಅಥವಾ ಹಾಲಿನೊಂದಿಗೆ ಸೇವಿಸಿದರು. ಅಲ್ಲದೆ ಮನೆಗಳಲ್ಲಿ ಸಂಪೂರ್ಣ ಸಸ್ಯಹಾರದ ಭೋಜನವನ್ನು ತಯಾರಿಸಿ ಕುಟುಂಬದ ಎಲ್ಲಾ ಸದಸ್ಯರು ನೆಲದ ಮೇಲೆ ಕುಳಿತು ಬಾಳೆ ಎಲೆಯಲ್ಲಿ ಸೇವಿಸಿದರು.

ಸಸ್ಯಾಹಾರಿ ಭೋಜನ ಈ ಹಬ್ಬದ ವೈಶಿಷ್ಟ್ಯ. ಕನಿಷ್ಠ 5 ಬಗೆಯ ಸಸ್ಯಾಹಾರಿ ಐಟಂ ಗಳಾದರೂ ಇರ ಬೇಕು ಎನ್ನುವುದು ರೂಢಿ. ಅದರಲ್ಲೂ “ಅಳು” (ಕೆಸುವಿನ ದಂಟು), “ದೆಂಟೊ’ (ಹರಿವೆ ದಂಟು), ಹೀರೆ, ಬೆಂಡೆ ಕಾಯಿಗೆ ಆದ್ಯತೆ. ಪಾಯಸ ಈ ಭೋಜನದ ಅವಿಭಾಜ್ಯ ಅಂಗ.

ಉಡುಪಿ ಧರ್ಮಪ್ರಾಂತ್ಯದ ಪ್ರಧಾನ ದೇವಾಲಯವಾದ ಮಿಲಾಗ್ರಿಸ್ ಕ್ಯಾಥೆಡ್ರಲ್ ನಲ್ಲಿ ತೆನೆ ಹಬ್ಬವನ್ನು ಭಕ್ತಿ, ಸಂಭ್ರಮದಿಂದ ಆಚರಿಸಲಾಯಿತು. ರೆಕ್ಟರ್ ಡಾ| ಲಾರೆನ್ಸ್ ಡಿ’ಸೋಜಾ ಅವರು ಭಕ್ತಿ ಕಾರ್ಯಕ್ರಮಗಳಿಗೆ ನೇತೃತ್ವ ನೀಡಿದರು.

ಉಡುಪಿ ಶೋಕ ಮಾತಾ ಇಗರ್ಜಿಯಲ್ಲಿ ಪ್ರಧಾನ ಧರ್ಮಗುರು ವಂ|ವಲೇರಿಯನ್ ಮೆಂಡೊನ್ಸಾ, ಶಿರ್ವ ಆರೋಗ್ಯ ಮಾತೆಯ ಇಗರ್ಜಿಯಲ್ಲಿ ವಂ|ಡೆನಿಸ್ ಡೆಸಾ, ಕುಂದಾಪುರ ಹೊಲಿ ರೋಜರಿ ಚರ್ಚಿನಲ್ಲಿ ವಂ|ಸ್ಟ್ಯಾನಿ ತಾವ್ರೊ, ಕಾರ್ಕಳ ಸಂತ ಲಾರೆನ್ಸ್ ಬಾಸಿಲಿಕಾದಲ್ಲಿ ವಂ| ಜೋರ್ಜ್ ಡಿಸೋಜಾ ಅವರ ನೇತೃತ್ವದಲ್ಲಿ ತೆನೆ ಹಬ್ಬದ ಭಕ್ತಿ ಕಾರ್ಯಕ್ರಮಗಳು ಜರುಗಿದವು.