ಉಡುಪಿ ಜಿಲ್ಲೆಯ ಎಲ್ಲಾ ಪಿಎಚ್‌ಸಿಗಳಿಗೆ ಸೌರ ವಿದ್ಯುತ್ ಅಳವಡಿಕೆ: ಡಿಎಚ್‌ಓ ಡಾ.ಈಶ್ವರ್ ಗಡಾದ್

Spread the love

ಉಡುಪಿ ಜಿಲ್ಲೆಯ ಎಲ್ಲಾ ಪಿಎಚ್‌ಸಿಗಳಿಗೆ ಸೌರ ವಿದ್ಯುತ್ ಅಳವಡಿಕೆ: ಡಿಎಚ್‌ಓ ಡಾ.ಈಶ್ವರ್ ಗಡಾದ್
 
ಉಡುಪಿ: ವಿವಿಧ ದಾನಿಗಳ ಮೂಲಕ ಜಿಲ್ಲೆಯಲ್ಲಿರುವ ಎಲ್ಲಾ ಪಿಎಚ್‌ಸಿಗಳಲ್ಲೂ ಸೌರ ವಿದ್ಯುತ್‌ನ್ನು ಅಳವಡಿಸಲು ಕ್ರಮಕೈಗೊಂಡಿದ್ದು, ಈ ಮೂಲಕ ನವೀಕರಿಸಬಹುದಾದ ಇಂಧನದ ಬಳಕೆಗೆ ಒತ್ತು ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಈಶ್ವರ್ ಪಿ.ಗಡಾದ್ ತಿಳಿಸಿದ್ದಾರೆ.

ನಗರದಲ್ಲಿ ಸ್ಥಾಪನೆಯ 101ನೇ ವರ್ಷವನ್ನು ಆಚರಿಸುತ್ತಿರುವ ಸಿಎಸ್‌ಐ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆ (ಮಿಷನ್ ಆಸ್ಪತ್ರೆ) ಯಲ್ಲಿ ಅನುಷ್ಠಾನಗೊಳಿಸಿದ ಗ್ರೀನ್ ಹಾಸ್ಪಿಟಲ್ ಯೋಜನೆ ‘ಇನ್‌ಸ್ಪಾಯರ್’ಗೆ ಚಾಲನೆ ನೀಡುವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.

ನಮ್ಮ ನಿತ್ಯ ಬದುಕಿನಲ್ಲಿ ಆಕ್ಸಿಜನ್‌ಗೆ (ಆಮ್ಲಜನಕ) ಎಷ್ಟೊಂದು ಮಹತ್ವವಿದೆ ಎಂಬುದು ಕೋವಿಡ್‌ನ ಎರಡನೇ ಅಲೆಯ ಸಂದರ್ಭದಲ್ಲಿ ಎಲ್ಲರಿಗೂ ಮನದಟ್ಟಾಗಿದೆ. ಆಮ್ಲಜನಕದ ಕೊರತೆಯಿಂದ ಸಾಕಷ್ಟು ಸಾವುನೋವುಗಳಾಗಿವೆ. ಆದ್ದರಿಂದ ಆಮ್ಲಜನಕವನ್ನು ನೀಡುವ ಮರ ಹಾಗೂ ಪರಿಸರದ ಮಹತ್ವ, ಪ್ರಾಮುಖ್ಯತೆ ಜನತೆಯ ಅರಿವಿಗೆ ಬಂದಿದೆ ಎಂದರು.

ನಮ್ಮ ಆರೋಗ್ಯ ಇಲಾಖೆಯಿಂದ ಮರಗಳಿಂದ ತಯಾರಾಗುವ ಪೇಪರ್ ಬಳಕೆಯನ್ನು ಕಡಿಮೆ ಮಾಡಲು ಕ್ರಮ ತೆಗೆದು ಕೊಂಡಿದ್ದೇವೆ. ಪರಿಸರ ಹಾಗೂ ಹಸಿರನ್ನು ಉಳಿಸಿ ಬೆಳೆಸಲು ಎಲ್ಲರೂ ಮುಂದಾಗಬೇಕು. ಈ ನಿಟ್ಟಿನಲ್ಲಿ ಮಿಷನ್ ಆಸ್ಪತ್ರೆಯ ಈ ಯೋಜನೆ ಎಲ್ಲರಿಗೂ ಮಾದರಿ ಎಂದರು.

ಮಿಷನ್ ಆಸ್ಪತ್ರೆಯ ಹಸಿರು ಆಸ್ಪತ್ರೆ ಯೋಜನೆಗೆ ಚಾಲನೆ ನೀಡಿ, ಆಸ್ಪತ್ರೆಯ ಆವರಣದಲ್ಲಿ ಅಳವಡಿಸಲಾದ ನವೀಕರಿಸಬಹುದಾದ ಇಂಧನ ಒದಗಿಸುವ ಸೌರ ಫಲಕಗಳನ್ನು ಸಿಎಸ್‌ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತದ ಬಿಷಪ್ ಅ.ವಂ. ಹೇಮಚಂದ್ರ ಕುಮಾರ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉಡುಪಿಯ ಮಿಷನ್ ಆಸ್ಪತ್ರೆ ತನ್ನ ಸ್ಥಾಪನೆಯ 101ನೇ ವರ್ಷದಲ್ಲಿ ಹಸಿರಿನ ಉಳಿವಿಗಾಗಿ ಹಸಿರು ಕ್ರಾಂತಿಗೆ ಮುಂದಾಗಿದ್ದು, ಸಂಸ್ಥೆಯ ಈ ಪ್ರಯತ್ನ ಅತ್ಯಂತ ಶ್ಲಾಘನೀಯ. ಮೊಬೈಲ್‌ನಿಂದಾಗಿ ಇಂದಿನ ಮಕ್ಕಳಿಗೆ ದೂರದೃಷ್ಟಿಯ ಚಿಂತನೆ ದೊರಕುತ್ತಿಲ್ಲ. ಹೀಗಾಗಿ ಅವರಲ್ಲಿ ಪರಿಸರ, ಹಸಿರು, ಗಿಡಮರಗಳ ಕುರಿತು ಕಾಳಜಿಯೇ ಮೂಡುತ್ತಿಲ್ಲ ಎಂದು ವಿಷಾಧಿಸಿದರು.

ಉಡುಪಿ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರಾವಳಿಯ ಪ್ರಥಮ ಆಸ್ಪತ್ರೆಯಾಗಿ ಅನುಷ್ಠಾನಗೊಳಿಸುತ್ತಿರುವ ‘ಇನ್‌ಸ್ಪಾಯರ್’ಯೋಜನೆಯ ರೂಪು ರೇಷೆಗಳನ್ನು ವಿವರಿಸಿದರು. ನಾವು ತೆಗೆದುಕೊಳ್ಳುವ ಸಣ್ಣ ಸಣ್ಣ ಪ್ರಯತ್ನಗಳು ನಾಳೆ ದೊಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು ಎಂದು ಆಶಾವಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಪಾಲ್ಗೊಂಡ ನಾಗಾಲ್ಯಾಂಡ್‌ನ ಗೋಸ್ಪಲ್ ಆರ್ಟಿಸ್ಟ್, ಗಾಯಕ ನೀಸೆ ಮೆರುನೊ ಸುಶ್ರಾವ್ಯವಾದ ಪ್ರಾರ್ಥನಾ ಗೀತೆ ಹಾಡಿದರು. ಸಿಎಸ್‌ಐ ಏರಿಯಾ ಅಧ್ಯಕ್ಷ ವಂ.ಐವನ್ ಡಿಸೋನ್ಸ್ ಹಾಗೂ ಮಿಷನ್ ಆಸ್ಪತ್ರೆಯ ಆಡಳಿತಾಧಿಕಾರಿ ಸಿಸ್ಟರ್ ಡೀನಾ ಪ್ರಭಾವತಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆ ಹಾಗೂ ಅದರ ಸಹ ಸಂಸ್ಥೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿ ಸಿದ ವಿವಿಧ ವಿಭಾಗಗಳ ಸಿಬ್ಬಂದಿಗಳನ್ನು ಗುರುತಿಸಿ ಗೌರವಿಸಲಾಯಿತು.

ಉಪಪ್ರಾಂಶುಪಾಲ ಹಾಗೂ ಬಯೋಮೆಡಿಕಲ್ ವಿಭಾಗದ ಮುಖ್ಯಸ್ಥ ಡಾ.ಪೆರಲಾಯ ಅತಿಥಿಗಳನ್ನು ಸ್ವಾಗತಿಸಿದರು. ಆಸ್ಪತ್ರೆಯ ಪಿಆರ್‌ಓ ರೋಹಿ ರತ್ನಾಕರ್ ವಂದಿಸಿ, ಲಿಯೋನಾ ಸ್ಟ್ರೆಲಿಟಾ ಕಾರ್ಯಕ್ರಮ ನಿರೂಪಿಸಿದರು.


Spread the love