ಉಡುಪಿ: ಪಕ್ಷ ನಿಷ್ಟೆಗೆ ತನ್ನ ವಿರುದ್ದ ಶಿಸ್ತು ಕ್ರಮ ಕಾಂಗ್ರೆಸ್ ನೀಡಿದ ಉಡುಗೊರೆ : ಜಯಪ್ರಕಾಶ್ ಹೆಗ್ಡೆ

Spread the love

ಉಡುಪಿ: ಪಕ್ಷಕ್ಕೆ ನಿಷ್ಟಾವಂತನಾಗಿ ಸೇವೆ ನೀಡಿದ್ದಕ್ಕೆ ತನ್ನ ಮೇಲೆ ಪಕ್ಷ ಶಿಸ್ತು ಕ್ರಮ ಕೈಗೊಂಡಿರುವುದು ಕಾಂಗ್ರೆಸ್ ಪಕ್ಷ ನೀಡಿದ ಬಲು ದೊಡ್ಡ ಉಡುಗೊರೆ ಎಂದು ಮಾಜಿ ಸಂಸದ ಹಾಗೂ ವಿಧಾನಪರಿಷತ್ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

1-jp=hegde-press-20151215

ಅವರು ಮಂಗಳವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಕಾಂಗ್ರೆಸ್ ಪಕ್ಷ ತಾನು ಪ್ರತಾಪ್ ಚಂದ್ರ ಶೆಟ್ಟಿಯವರ ವಿರುದ್ದ ಸ್ಪರ್ಧೆ ಮಾಡಿರುವುದಕ್ಕೆ ಪಕ್ಷ ವಿರೋಧಿ ಚಟುವಟಿಕೆ ಎನ್ನುವ ಹಿನ್ನಲೆಯಲ್ಲಿ ಕ್ರಮ ಕೈಗೊಂಡಿದೆ ಆದರೆ ಕಳೆದ ಲೋಕ ಸಭಾ ಮತ್ತು ಗ್ರಾಮ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರಚಾರಕ್ಕೆ ಬಾರದ ಪ್ರತಾಪ್ ಚಂದ್ರ ಶೆಟ್ಟಿಯವರ ಮೇಲೆ ಯಾಕೆ ಶಿಸ್ತು ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. ಪ್ರತಾಪ್ ಚಂದ್ರ ಶೆಟ್ಟಿಯವರು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಂದ ಆಯ್ಕೆಯಾದ ಸದಸ್ಯರಾಗಿದ್ದು, ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಪರ ಕೆಲಸ ಮಾಡುವ ಜವಾಬ್ದಾರಿಯಿತ್ತು ಆದರೂ ಅವರು ಅದನ್ನು ಮಾಡಿಲ್ಲ ಬದಲಾಗಿ ಸುಮ್ಮನೆ ಮನೆಯಲ್ಲಿ ಕುಳಿತು, ಮುಂದಿನ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಪಂಚಾಯತ್ ಸದಸ್ಯರಿಗೆ ಪತ್ರ ಬರೆಯುವುದರಲ್ಲೆ ಇದ್ದರು. ಆದ್ದರಿಂದ ಕೆಪಿಸಿಸಿ ಮೊದಲಾಗಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಾಗಿತ್ತು ಎಂದರು.2-jp=hegde-press-20151215-001

ತಾನು ಅಧಿಕಾರದಲ್ಲಿ ಇರಲಿ ಇಲ್ಲದಿರಲಿ ಪಕ್ಷ ಸಂಘಟನೆಗಾಗಿ ಸದಾ ಕೆಲಸ ಮಾಡಿದ್ದು, ಪ್ರತಾಪ್ ಚಂದ್ರ ಶೆಟ್ಟಿಯವರಿಗೆ ಪಕ್ಷದ ಸಭೆಗಳಿಗೆ ಬರಲು ಕೂಡ ಸಮಯ ಇರಲಿಲ್ಲ. ತಾನು ವಿಧಾನಸಭೆ ಹಾಗೂ ಲೋಕ ಸಭಾ ಚುನಾವಣೆಯಲ್ಲಿ ಸೋತರೂ ಕೂಡ ಉಡುಪಿ ಹಾಗೂ ಚಿಕ್ಕಮಗಳೂರಿನಲ್ಲಿ ಜನರೊಂದಿಗೆ ಇದ್ದು ಅವರ ಸಮಸ್ಯೆಗಳನ್ನು ಆಲಿಸುವ ಕೆಲಸವನ್ನು ಮಾಡಿದ್ದೇನೆ. 2003 ರಲ್ಲಿ ತಾನು ಪಕ್ಷೇತರ ಶಾಸಕನಾಗಿದ್ದ ವೇಳೆ ಪ್ರತಾಪ್ ಚಂದ್ರ ಶೆಟ್ಟಿ ಮತ್ತು ಬ್ಲೇಸಿಯಸ್ ಡಿ’ಸೋಜಾ ವಿಧಾನಪರಿಷತ್ ಚುನಾವಣೆಯಲ್ಲಿ ಕೂಡ ನಾನು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದೆ ಎಂದರು.

ವಾರಾಹಿ ನೀರಾವರಿ ಯೋಜನೆ ಮುಗಿಯುವ ಹಂತದಲ್ಲಿದ್ದಾಗ ಪ್ರತಾಪ್ ಚಂದ್ರ ಶೆಟ್ಟಿಯವರು ಆಡಳಿತ ಪಕ್ಷದ ಸದಸ್ಯರಾಗಿ ಪಕ್ಷದ ವಿರುದ್ದ ಪ್ರತಿಭಟನೆ ಮಾಡಿದರು. ಆದರೆ ಯೋಜನೆ ಹಲವು ಸಮಯ ನೆನೆಗುದಿಗೆ ಬಿದ್ದಾಗ ಮೌನವಾಗಿದ್ದ ಅವರು ಪಕ್ಷ ಅಧಿಕಾರಕ್ಕೆ ಬಂದು ಯೋಜನೆಯ ಮೊದಲ ಹಂತ ಮುಗಿಯುವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ವಿರುದ್ದವೇ ಘೋಷಣೆ ಕೂಗಿದರು ಆದರೆ ಪಕ್ಷದ ನಾಯಕರಿಗೆ ಯಾಕೆ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದರು.

ಪ್ರಸ್ತುತ ವಿಧಾನಪರಿಷತ್ ಸದಸ್ಯರನ್ನೇ ಮುಂದುವರಿಸುವ ಯೋಜನೆ ಇದ್ದಲ್ಲಿ ಜಿಲ್ಲಾ ಕಾಂಗ್ರೆಸ್ ಮೊದಲೇ ತಿಳಿಸಬೇಕಿತ್ತು ಆಗ ನಾವ್ಯಾರು ಕೂಡ ಸ್ಪರ್ಧೆಯನ್ನು ಬಯಸುತ್ತಿರಲಿಲ್ಲ. ನಮಗೆ ಸ್ಪರ್ಧಿಸಲು ಅರ್ಜಿ ಹಾಕಲು ಹೇಳಿದ ಬಳಿಕ ನಾವು ಅರ್ಜಿ ಹಾಕಿದ್ದೆವು. ಪ್ರತಾಪ್ ಚಂದ್ರ ಶೆಟ್ಟಿ ಕೂಡ ತಾವು ಸ್ಪರ್ಧಿಸುವುದಿಲ್ಲ ಎಂದ ಬಳಿಕ ಆ ಅವಕಾಶವನ್ನು ಎರಡನೇ ಹಂತದ ಯಾವುದೇ ನಾಯಕರಿಗೂ ಕೂಡ ನೀಡಬಹುದಿತ್ತು. ಅಲ್ಲದೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ ವ್ಯಕ್ತಿ ಮತ್ಯಾಕೆ ಪುನಃ ಸ್ಪರ್ಧಿಸಿದರು ಎಂದು ಹೆಗ್ಡೆ ಪ್ರಶ್ನಿಸಿದರು.

ರಾಜಕೀಯದಲ್ಲಿ ಅಧಿಕಾರಕ್ಕಿಂತ ಸಾಧನೆ ಮುಖ್ಯ, ನಾನು ಎಂದು ಕೂಡ ಅಧಿಕಾರಕ್ಕಾಗಿ ಲಾಭಿ ನಡೆಸಿಲ್ಲ, ಮುಂದೆಯೂ ನಡೆಸಲ್ಲ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮತದಾರರು ಎಲ್ಲಾ ವೇಳೆಯಲ್ಲಿ ನನ್ನನ್ನು ಬೆಂಬಲಿಸಿದ್ದಾರೆ, ಮುಂದೆಯೂ ಬೆಂಬಲಿಸಲಿದ್ದಾರೆ ಎನ್ನುವ ವಿಶ್ವಾಸ ನನಗಿದೆ. ಸದ್ಯ ತಾನು ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲ್ಲುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದು, ನನ್ನ ವಿರುದ್ದ ಯಾರು ಟೀಕೆಗಳನ್ನು ಮಾಡುತ್ತಿದ್ದಾರೊ ಅವರು ತಮ್ಮ ಕೆಲಸದ ಕಡೆಗೆ ಮೊದಲು ಗಮನ ನೀಡಲಿ ಎಂದು ಹೆಗ್ಡೆ ಹೇಳಿದರು.

ಜೆಡಿಎಸ್ ಅಥವಾ ಬಿಜೆಪಿಯನ್ನು ತಾವು ಸೇರುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಹೆಗ್ಡೆ, ತಾನು ಪಕ್ಷೇತರನಾಗಿಯೇ ಅಭ್ಯರ್ಥಿಯಾಗಿಯೇ ಸೇವೆ ನೀಡಲು ಬಯಸುತ್ತೇನೆ. ಪಕ್ಷೇತರನಾಗಿ ಇದ್ದರೆ ಹೆಚ್ಚಿನ ಸೇವೆಯನ್ನು ಎಲ್ಲಾ ವರ್ಗದ ಜನರಿಗೆ ಮಾಡಲು ಸಾಧ್ಯವಾಗುತ್ತದೆ. ಮತದಾರರು ಕೆಲವೊಂದು ಕಾಂಗ್ರೆಸ್ ನಾಯಕರು ಆಡುತ್ತಿರುವ ಗಾಳಿ ಸುದ್ದಿಗಳಿಗೆ ಕಿವಿಗೊಡದೆ ಮತಚಲಾಯಿಸುವಂತೆ ವಿನಂತಿಸುತ್ತೇನೆ.

ಸಚಿವ ವಿನಯ್ ಕುಮಾರ್ ಸೊರಕೆಯವರು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಗ್ಡೆ, ನಾನು ಕಾಂಗ್ರೆಸ್ ಪಕ್ಷಕ್ಕೆ ತಾನಾಗಿಯೇ ಬಂದು ಸೇರ್ಪಡೆಗೊಂಡವನಲ್ಲ ಬದಲಾಗಿ ಕಾಂಗ್ರೆಸಿನ ಹಿರಿಯ ನಾಯಕರು ನನ್ನನ್ನು ಭೇಟಿ ಮಾಡಿ ಲೋಕಸಭಾ ಚುನಾಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿದರು ಮತ್ತು ತಾನು ಇದರಲ್ಲಿ ಜಯಗಳಿಸಿದೆ. ನಾನು ಪಕ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು, ಪಕ್ಷದ ಸಂಘಟನೆಗೆ ದುಡಿದಿದ್ದೇನೆ ಹಾಗಾಗಿ ಸೊರಕೆಯವರು ನನ್ನ ಮುಂದಿನ ರಾಜಕೀಯದ ಭವಿಷ್ಯದ ಕುರಿತು ಚಿಂತಿಸುವ ಅಗತ್ಯವಿಲ್ಲ ನಾನು ಪಕ್ಷೇತರನಾಗಿಯೇ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ನನಗೆ ಜನರಲ್ಲಿ ಪೂರ್ಣ ವಿಶ್ವಾಸವಿದೆ, ನನಗೆ ಗೆಲ್ಲುವ ವಿಶ್ವಾಸವಿದ್ದು, ಪ್ರತಾಪ್ ಚಂದ್ರ ಶೆಟ್ಟಿಯವರ ವಿರುದ್ದ ದಾಖಲೆಯ ಮತಗಳ ಅಂತರದಲ್ಲಿ ಜಯಗಳಿಸಲಿದ್ದೇನೆ ಎಂದರು.


Spread the love