ಉಡುಪಿ : ಯುಪಿಸಿಎಲ್‌ನಲ್ಲಿ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಮೃತ್ಯು; ಪರಿಹಾರ ಧನಕ್ಕೆ ಆಗ್ರಹಿಸಿ ಕಾರ್ಮಿಕರಿಂದ ಧರಣಿ

Spread the love

ಉಡುಪಿ : ಅದಾನಿ ಒಡೆತನದ ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಯುಪಿಸಿಎಲ್) ವಿದ್ಯುತ್ ಸ್ಥಾವರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕನೋರ್ವ ಯಂತ್ರಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ಸೋಮವಾರ ಸಂಜೆ ನಡೆದಿದೆ. ಮೃತನ ಕುಟುಂಬಕ್ಕೆ ಪರಿಹಾರ ನೀಡಲು ಆಗ್ರಹಿಸಿ ಇಂದು ಬೆಳಗ್ಗೆ ಪಡುಬಿದ್ರೆಯಲ್ಲಿ ಕಾರ್ಮಿಕರು ಧರಣಿ ನಡೆಸಿದರು.
ಮಧ್ಯಪ್ರದೇಶದ ರಿತೇಶ್ (22) ಎಂಬವರೇ ಮೃತಪಟ್ಟ ಕಾರ್ಮಿಕ. ರಿತೇಶ್ ಸೋಮವಾರ ಸಂಜೆ ಯುಪಿಸಿಎಲ್ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಕಲ್ಲಿದ್ದಲು ಯಂತ್ರ ಚಾಲನೆಗೊಂಡು ಅದರೊಳಗೆ ಸಿಲುಕಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ರಿತೇಶ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡುವಂತೆ ಆಗ್ರಹಿಸಿ ಯುಪಿಸಿಎಲ್ ಕಾರ್ಮಿಕರು ಮಂಗಳವಾರ ಕೆಲಸಕ್ಕೆ ಹಾಜರಾಗದೆ ಮುಷ್ಕರ ಹೂಡಿದ ಘಟನೆ ನಡೆದಿದೆ.
ಬೆಳಗ್ಗೆ ಸುಮಾರು 250ಕ್ಕೂ ಅಧಿಕ ಕಾರ್ಮಿಕರು ಸ್ಥಾವರದ ಒಳಕ್ಕೆ ತೆರಳದೆ ಪಡುಬಿದ್ರೆ ಪೇಟೆಯಲ್ಲಿ ನಿಂತು ಧರಣಿ ನಡೆಸಿದರು. ಬಳಿಕ ಪಡುಬಿದ್ರೆ ಪೊಲೀಸ್ ಠಾಣೆಗೆ ತೆರಳಿ ಮೃತನ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಲು ಕ್ರಮ ತೆಗೆದುಕೊಳ್ಳು ವಂತೆ ಒತ್ತಾಯಿಸಿದರು. ಇಲ್ಲದಿದ್ದಲ್ಲಿ ಬುಧವಾರ ಕಂಪೆನಿಯ ದ್ವಾರದ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಸಿದರು. ಈ ಸಂದರ್ಭ ಮಾತನಾಡಿದ ಕಾರ್ಮಿಕರು, ದುರ್ಘಟನೆ ನಡೆದ ಸಂದರ್ಭ ಕೇವಲ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಕಂಪೆನಿ ತಿಳಿಸಿತ್ತು. ಆದರೆ ಈ ಅಲ್ಪ ಪರಿಹಾರ ಬಡ ಕಾರ್ಮಿಕ ಕುಟುಂಬಕ್ಕೆ ಸಾಲದು. ಅಲ್ಲದೆ, ಈ ಹಿಂದಿನ ಅನೇಕ ಸಂದರ್ಭಗಳಲ್ಲಿ ಅಲ್ಪಮೊತ್ತದ ಪರಿಹಾರ ಮಾತ್ರ ನೀಡಿ ಕಂಪೆನಿ ಕೈತೊಳೆದುಕೊಂಡಿದೆ. ಸಮರ್ಪಕ ಪರಿಹಾರ ಕೇಳಿದರೆ ಕೆಲಸದಿಂದ ವಜಾಗೊಳಿಸುವ ಬೆದರಿಕೆ ಹಾಕಲಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಧಾನ: ಇದೇ ಸಂದರ್ಭ ಸಾವಿಗೀಡಾದ ರಿತೇಶ್‌ರ ಸಹೋದರ ಮಧ್ಯಪ್ರದೇಶದಿಂದ ಆಗಮಿಸಿದರು. ಬಳಿಕ ಯುಪಿಸಿಎಲ್ ಕಂಪೆನಿ ಅಧಿಕಾರಿಗಳು ಮತ್ತು ಕಾರ್ಮಿಕ ಮುಖಂಡರ ನಡುವೆ ಪಡುಬಿದ್ರೆಯ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಸಂಧಾನ ಸಭೆ ನಡೆಯಿತು. ರಿತೇಶ್ ಕಾರ್ಯನಿರ್ವಹಿಸುತ್ತಿದ್ದ ಪ್ರಿಸಿಷನ್ ಗುತ್ತಿಗೆದಾರ ಕಂಪೆನಿಯು ಆತನ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ, ಕಂಪೆನಿಯ ಸುಮಾರು 500ರಷ್ಟು ಕಾರ್ಮಿಕರು ಒಂದು ದಿನದ ಸಂಬಳ ನೀಡಲು ಸಭೆ ನಿರ್ಧರಿಸಿತು. ಇದಲ್ಲದೆ ಯುಪಿಸಿಎಲ್ ಕಂಪೆನಿಯು ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿತು.
ಈ ಹಿನ್ನೆಲೆಯಲ್ಲಿ ಬಳಿಕ ಉಡುಪಿ ಶವಾಗಾರದಲ್ಲಿ ರಿಸಿದ್ದ ರಿತೇಶ್‌ರ ಮೃತದೇಹದ ಮಹಜರು ನಡೆಸಿ ಮಧ್ಯಪ್ರದೇಶಕ್ಕೆ ಕೊಂಡೊಯ್ಯಲಾಯಿತು.


Spread the love