ಉಡುಪಿ: ವಿಕಲಚೇತನರಲ್ಲಿ ಚೈತನ್ಯ ತುಂಬುವ ಕಾರ್ಯಕ್ರಮ

Spread the love

ಉಡುಪಿ: ‘ಕಟ್ಟುವೆವು ನಾವು ಕಂಕಣವ ನಮ್ಮಭ್ಯುದಯಕ್ಕೆಂದು; ತಟ್ಟುವೆವು ಜ್ಞಾನದ ದ್ವಾರಗಳನ್ನು’ ಎಂಬ ಪ್ರಾರ್ಥನೆಯೊಂದಿಗೆ ಉಡುಪಿ ಜಿಲ್ಲೆಯ ಬ್ರಹ್ಮಾವರದ ರುಡ್ ಸೆಟ್‍ನಲ್ಲಿ ಆಯ್ದ ವಿಕಲಚೇತನರನ್ನು ಸಬಲಗೊಳಿಸುವ ಕಾರ್ಯಕ್ರಮ ನಡೆಯುತ್ತಿದೆ.

1 2 3 4

ಕಳೆದ ಸೋಮವಾರದಿಂದ ಬ್ರಹ್ಮಾವರದ ರುಡ್‍ಸೆಟ್ ಸಂಸ್ಥೆಯಲ್ಲಿ ಉಡುಪಿ ಜಿ.ಪಂ. ನ ಸಿಇಒ ಎಂ. ಕನಗವಲ್ಲಿ ಅವರ ಮಾರ್ಗದರ್ಶನದಡಿ ವಿಕಲಚೇತನರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗುವ ದ್ವಿಚಕ್ರ ವಾಹನ ಚಾಲನಾ ತರಬೇತಿ ಮತ್ತು ವಿಶೇಷ ಉದ್ಯಮಶೀಲತಾ ಶಿಬಿರ ಆರಂಭಗೊಂಡಿದೆ. ರಾಜ್ಯಕ್ಕೆ ಮಾದರಿ ಕಾರ್ಯಕ್ರಮ ಇದಾಗಿದ್ದು, 39 ವಿಕಲಚೇತನರು ಚಾಲನಾ ತರಬೇತಿಯಲ್ಲಿ ನಿರತರಾಗಿದ್ದಾರೆ. ಜೊತೆಗೆ ಬದುಕಿನ ಬಗ್ಗೆ ಧನಾತ್ಮಕವಾಗಿ ಚಿಂತಿಸಲು, ವ್ಯಕ್ತಿತ್ವ ವಿಕಸನದಂತಹ ತರಬೇತಿ ಪಡೆದು ಹೊಸ ಬದುಕು ಆರಂಭಿಸುವ ಚಿಂತನೆಯಲ್ಲಿದ್ದಾರೆ.

ವಿಕಲಚೇತನರ ಬದುಕಿಗೆ ಭದ್ರ ಬುನಾದಿಯನ್ನು ಹಾಕುವಂತಹ ಕೆಲಸವನ್ನು ಅವರಿಗೆಂದೇ ಮೀಸಲಿಟ್ಟಿ 3% ನಿಧಿಯನ್ನು ಒಟ್ಟುಗೂಡಿಸಿ ಸುಮಾರು 25 ಲಕ್ಷ ರೂ.ಗಳನ್ನು ಬಳಸಿ 30 ರಿಂದ 32 ದ್ವಿಚಕ್ರ ವಾಹನ ನೀಡಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕನಗವಲ್ಲಿ ಅವರು ನಿರ್ಧರಿಸಿದ್ದಾರೆ. ಉಳಿದ ತರಬೇತಿ ಪಡೆದವರಿಗೆ ರಾಜೀವ್ ಗಾಂಧಿ ಚೈತನ್ಯ ಯೋಜನೆಯಡಿ ವಾಹನ ನೀಡಲು ನಿರ್ಧರಿಸಲಾಗಿದೆ.

ಉಡುಪಿಯ ಆರ್ ಟಿ ಒ ಕಚೇರಿಯೊಂದಿಗೆ ಸಮನ್ವಯ ಸಾಧಿಸಿ ಚಾಲನಾ ಲೈಸನ್ಸ್ ಪಡೆಯಲು ಇವರಿಗೆ ನೆರವಾಗಲು ಜಿಲ್ಲಾ ಪಂಚಾಯತ್ ನಿಂದಲೇ ವಾಹನ ಖರೀದಿಸಿ ನೀಡಿ ಆ ವಾಹನದ ಆಧಾರದ ಮೇಲೆ ಡ್ರೈವಿಂಗ್ ಲೈಸನ್ಸ್ ನೀಡಲಾಗುವುದು.

ಚಾಲನಾ ತರಬೇತಿಗೂ ಆರ್ ಟಿ ಒ ಕಚೇರಿ ನೆರವು ನೀಡುತ್ತಿದ್ದು, ಉತ್ತಮ ಚಾಲನಾತರಬೇತುದಾರ ಸೇವಾ ಮನೋಭಾವ ಹೊಂದಿರುವ ಪ್ರಕಾಶ್ ನಾಯಕ್ ಅವರು ನೀಡುತ್ತಿರುವ ಚಾಲನ ತರಬೇತಿಯಿಂದ ವಿಕಲಚೇತನರು ಖುಷಿಯಾಗಿದ್ದಾರೆ. ಎಲ್ಲರೂ ಚಾಲನಾ ತರಬೇತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಪಂಚಾಯತ್ ಸಿಇಒ ಅವರು ಈ ಯೋಜನೆಯ ಅನುಷ್ಠಾನಕ್ಕೆ ಹಲವು ಪೂರ್ವಭಾವಿ ಯೋಜನೆಗಳನ್ನು ರೂಪಿಸಿದ್ದು, ಪ್ರಥಮ ಹಂತದಲ್ಲಿ ಆಯ್ದ ವಿಕಲಚೇತನರೊಂದಿಗೆ ಸಂವಾದವನ್ನು ನಡೆಸಿದ್ದರು. ಬಳಿಕ ಬ್ರಹ್ಮಾವರ ರುಡ್ ಸೆಟ್ ನ ನಿರ್ದೇಶಕರಾದ ದಿವಾಕರ ಭಟ್ ಅವರೊಂದಿಗೆ ಚರ್ಚಿಸಿ ರುಡ್ ಸೆಟ್ ನಲ್ಲಿ ವಸತಿ ಸಹಿತ ತರಬೇತಿಗೆ ಅವಕಾಶ ಮಾಡಿಕೊಡಲಾಯಿತು.

ವಿಕಲಚೇತನರ ಅನುಕೂಲಕ್ಕಾಗಿ ತರಬೇತಿ ನಿಗದಿಯಾದಂತೆ ರ್ಯಾಂಪ್ ನ್ನು ನಿರ್ಮಿಸಲಾಯಿತು. ಅವರಿಗೆ ಅಗತ್ಯವಿರುವ ಪೂರಕ ವ್ಯವಸ್ಥೆಗಳನ್ನು ಮಾಡಲಾಯಿತು ಎಂಬುದು ದಿವಾಕರ್ ಭಟ್ ಅವರ ಅಭಿಪ್ರಾಯ.

ಇತರ ತರಬೇತಿ ಪಡೆಯುವ ಯುವಜನರೊಂದಿಗೆ ಸಹಬಾಳ್ವೆ ನಡೆಸಿದ ವಿಕಲಚೇತನರು, ಅಲ್ಲಿನ ವಾತಾವರಣ ಹಾಗೂ ಅವರು ಬೆರೆಯುವ ಹಾಗೂ ಸಹಕಾರದ ಬಗ್ಗೆಯೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಹಟ್ಟಿಯಂಗಡಿಯ ಶಾರದೆ, ಬೈಂದೂರು ನಾಗೂರಿಯ ನೂರುಲ್ಲಾ, ಉಮೇಶ್ ತಲ್ಲೂರು, ಬೈಂದೂರಿನ ಗಣೇಶ್ ತರಬೇತಿಯಿಂದಾದ ಅನುಕೂಲ ಹಾಗೂ ತಮ್ಮ ಬದುಕಿನ ಬಗ್ಗೆ, ಸಾಧನೆ ಬಗ್ಗೆ ನಿರರ್ಗಳವಾಗಿ ಇತರರೊಂದಿಗೆ ಸಂವಾದ ನಡೆಸುವಷ್ಟು ಸಾಮಥ್ರ್ಯ ಪಡೆದಿದ್ದಾರೆ.

ತಾಲೂಕು ಕಚೇರಿಗಳು ಹಾಗೂ ಇತರ ಅಗತ್ಯ ಕಚೇರಿಗಳಲ್ಲಿ ರ್ಯಾಂಪ್ ನಿರ್ಮಾಣದ ಅಗತ್ಯದ ಬಗ್ಗೆಯೂ ಅಧಿಕಾರಿಗಳ ಗಮನ ಸೆಳೆದಿದ್ದಾರೆ. ಅವರ ಬೇಡಿಕೆಗಳೆಲ್ಲವನ್ನೂ ಪರಿಶೀಲಿಸಿ ರಚನಾತ್ಮಕವಾಗಿ ಸ್ಪಂದಿಸುವ ಭರವಸೆಯನ್ನು ಸಿಇಒ ಕನಗವಲ್ಲಿ ಅವರೆಲ್ಲರಿಗೆ ನೀಡಿದ್ದಾರೆ.

ಒಟ್ಟಿನಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಅವರ ಮಾರ್ಗದರ್ಶನದಲ್ಲಿ, ರುಡ್‍ಸೆಟ್ ನವರ ಸಂಪೂರ್ಣ ಸಹಕಾರದೊಂದಿಗೆ ಒಂದು ಅತ್ಯುತ್ತಮ, ಯಶಸ್ವಿ ಯೋಜನೆಗೆ ಉಡುಪಿ ಮುನ್ನುಡಿ ಬರೆದದ್ದಂತೂ ಸತ್ಯ.


Spread the love