ಉಡುಪಿ: ಹಸಿವೆ ಮುಕ್ತ ಭಾರತ ನಿರ್ಮಾಣ ಕಾಂಗ್ರೆಸ್ ಗುರಿ : ಓಸ್ಕರ್ ಫೆರ್ನಾಂಡಿಸ್

Spread the love

ಉಡುಪಿ: ಈ ಹಿಂದೆ ಭಾರತೀಯ ಜನತಾ ಪಕ್ಷವು ಇಂದಿರಾ ಮುಕ್ತ ಭಾರತ ಎನ್ನುವ ಘೋಷಣೆಯೊಂದಿಗೆ ಇಂದಿರಾ ಹಠಾವೋ ಹಮ್ಮಿಕೊಂಡಿದ್ದವು, ಆಗ ಇಂದಿರಾ ಗಾಂಧಿಯವರು ದೇಶದ ಜನತೆಯ ಬಡತನ ನಿರ್ಮೂಲನದ ಉದ್ದೇಶ ಹೊತ್ತು “ಗರೀಬಿ ಹಠಾವೋ” ಕಾರ್ಯಕ್ರಮ ದೇಶದೆಲ್ಲೆಡೆ ತಂದು ಈ ದೇಶದ ಜನತೆಯ ಕಣ್ಮಣಿಯಾದರು. ಅದೇ ಬಿಜೆಪಿ ಇಂದು ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆಂದು ಘೋಷಣೆ ಹಮ್ಮಿಕೊಂಡಿದೆ. ಆದರೆ ಕಾಂಗ್ರೆಸ್ ಯಾವುದೇ ಪಕ್ಷವನ್ನು ಭಾರತದಿಂದ ಮುಕ್ತಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳದೇ, “ಹಸಿವೆಮುಕ್ತ ಭಾರತ” ನಿರ್ಮಾಣದ ಸಂಕಲ್ಪ ಹೊಂದಿದೆ. ಪಕ್ಷದ ಈ ಕಾರ್ಯಕ್ರಮವನ್ನು ಜನತೆಗೆ ಮನವರಿಕೆ ಮಾಡಿಕೊಡಬೇಕೆಂದು ಉಡುಪಿ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ನಡೆದ ಬ್ಲಾಕ್ ಅಧ್ಯಕ್ಷರುಗಳ ಹಾಗೂ ವಿವಿಧ ಘಟಕಗಳ ಅಧ್ಯಕ್ಷರುಗಳ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯರಾದ ಓಸ್ಕರ್ ಫೆರ್ನಾಂಡಿಸ್ ಅವರು ಮಾತನಾಡುತ್ತಾ ಹೇಳಿದರು.

ಕಾಂಗ್ರೆಸ್ ಪಕ್ಷವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನತೆಗೆ 160 ಜನಪರ ಯೋಜನೆಗಳನ್ನು ಕಾರ್ಯಗತಗೊಳಿಸುವ ವಾಗ್ದಾನ ನೀಡಿತ್ತು. ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ಈಗಾಗಲೇ 100ಕ್ಕೂ ಮಿಕ್ಕಿ ಯೋಜನೆಗಳನ್ನು ಕಾರ್ಯಗತಗೊಳಿಸಿ ನುಡಿದಂತೆ ನಡೆದಿದೆ. ಗ್ರಾಮಾಂತರ ಪ್ರದೇಶ ಅಭಿವೃದ್ಧಿಯಾದರೇ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಗ್ರಾಮೀಣಾಭಿವೃದ್ಧಿಯ ಮೂಲಕ ಗ್ರಾಮೀಣ ಬಡ ಮಹಿಳೆಯರ ಸಂಘಟನೆ, ಆರ್ಥಿಕ ಸಬಲೀಕರಣ ಹಾಗೂ ಗ್ರಾಮೀಣ ಯುವ ಜನರ ಬದುಕನ್ನು ಹಸನಾಗಿಸಲು ಬಡತನ ನಿರ್ಮೂಲನ ಮತ್ತು ಆರ್ಥಿಕ ಅಭ್ಯುದಯಕ್ಕೆ ಹಲವಾರು ಕಾರ್ಯಕ್ರಮಗಳನ್ನು ಸರಕಾರ ಅನುಷ್ಠಾನಗೊಳಿಸಿದೆ. ಈ ಉದ್ದೇಶದಿಂದಲೇ ಪಕ್ಷವು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಶೇಕಡಾ 50ರಷ್ಟು ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿದೆ. ಸರ್ವರಿಗೂ ಸಮಪಾಲು, ಸಮಬಾಳು ನೀಡಿ ಸಾಮಾಜಿಕ ನ್ಯಾಯ, ಅವಕಾಶ ವಂಚಿತ ಸಮುದಾಯಕ್ಕೆ ಅವಕಾಶ ಒದಗಿದಲು ಸಮಾಜದ ಎಲ್ಲಾ ಸ್ತರದ ಜನರಿಗೆ ಅನ್ನ, ವಸತಿ, ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ ಒದಗಿಸಲು ಕಾಂಗ್ರೆಸ್ ಪಕ್ಷವು ಆದ್ಯತೆ ನೀಡಿದೆ ಎಂದು ಹೇಳಿದರು.

 ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ. ಗೋಪಾಲ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯಕುಮಾರ್ ಸೊರಕೆ, ಮಾಜಿ ಸಂಸದರಾದ ಕೆ. ಜಯಪ್ರಕಾಶ್ ಹೆಗ್ಡೆ, ಉಡುಪಿ ಶಾಸಕರಾದ ಪ್ರಮೋದ್ ಮಧ್ವರಾಜ್, ಕಾರ್ಕಳ ಮಾಜಿ ಶಾಸಕರಾದ ಹೆಚ್. ಗೋಪಾಲ ಭಂಡಾರಿ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ. ಗಫೂರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸುಧಾಕರ ಕೋಟ್ಯಾನ್ ಕಾರ್ಕಳ, ನೀರೆ ಕೃಷ್ಣ ಶೆಟ್ಟಿ ಹೆಬ್ರಿ, ನವೀನಚಂದ್ರ ಜೆ. ಶೆಟ್ಟಿ ಕಾಪು ದಕ್ಷಿಣ, ಸುಧೀರ್ ಹೆಗ್ಡೆ ಕಾಪು ಉತ್ತರ, ಶಂಕರ್ ಕುಂದರ್ ಕೋಟ, ಮಲ್ಯಾಡಿ ಶಿವರಾಮ ಶೆಟ್ಟಿ ಕುಂದಾಪುರ, ಸಂಪಿಗೇಡಿ ಸಂಜೀವ ಶೆಟ್ಟಿ ವಂಡ್ಸೆ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ದಿನೇಶ್ ಪುತ್ರನ್, ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕರಾದ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ವೆರೋನಿಕಾ ಕರ್ನೇಲಿಯೋ, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾದ ಕೇಶವ ಎಂ. ಕೋಟ್ಯಾನ್, ಜಿಲ್ಲಾ ಇಂಟಕ್ ಅಧ್ಯಕ್ಷರಾದ ಮುರಳಿ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿಷನ್ ಹೆಗ್ಡೆ ಕೊಳ್ಕೆಬೈಲ್, ಯುವ ಕಾಂಗ್ರೆಸ್ ಮುಖಂಡರುಗಳಾದ ಅಬ್ದುಲ್ ಅಜೀಜ್, ವಿಕಾಸ್ ಹೆಗ್ಡೆ, ವಿಕಾಸ್ ಶೆಟ್ಟಿ, ವಿಶ್ವಾಸ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹಮೂರ್ತಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


Spread the love