ಉಡುಪಿ: 1094 ಫಲಾನುಭವಿಗಳಿಗೆ ಜನಸಂಪರ್ಕ ಸಭೆಯಲ್ಲಿ ಸಚಿವ ವಿನಯಕುಮಾರ್ ಸೊರಕೆ ಸವಲತ್ತು ವಿತರಣೆ

Spread the love

ಉಡುಪಿ: ಜನರ ಬಳಿ ಸರ್ಕಾರ ಎಂಬ ಧ್ಯೇಯದೊಂದಿಗೆ ಜಿಲ್ಲೆಯ ಮೂರು ತಾಲೂಕು ಕೇಂದ್ರಗಳಲ್ಲಿ ಜನಸಂಪರ್ಕ ಸಭೆಯ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.

janasamparka_udupi 08-01-2016 11-25-17

ಇಂದು, ಉಡುಪಿ ಪುರಭವನದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ವಿವಿಧ ಇಲಾಖೆಯಡಿ ಅರ್ಹ 1094 ಫಲಾನುಭವಿಗಳಿಗೆ ಸವಲತ್ತು ವಿತರಣೆ ನಡೆಯಿತು. ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸೊರಕೆ ಅವರು, ಸರ್ಕಾರ ತನ್ನ ಪ್ರಮುಖ ಭಾಗ್ಯ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಗೆ 7,700 ಕೋಟಿ ರೂ.ಗಳನ್ನು ವ್ಯಯಿಸಿದ್ದು ಬಡ ಜನರ ಹಿತ ಸರ್ಕಾರದ ಆದ್ಯತೆ ಎಂದು ಸ್ಪಷ್ಟಪಡಿಸಿದರು.
ಜನರು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರ ಜಿಲ್ಲಾ ಮಟ್ಟದಲ್ಲಿ ತಾಲೂಕು ಮಟ್ಟದಲ್ಲಿ ವಿವಿಧ ಅದಾಲತ್ ಗಳನ್ನು ನಡೆಸಿ ರೈತರ, ಬಡವರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಜನಪರರ ಸಮಸ್ಯೆಗಳಿಗೆ ಸ್ಪಂದಿಸಲು ಎಲ್ಲ ಕ್ರಮಗಳನ್ನು ಸರ್ಕಾರ ಪ್ರಾಮಾಣಿಕವಾಗಿ ಕೈಗೊಂಡಿದೆ ಎಂದು ಎಂದು ಸಚಿವರು ಹೇಳಿದರು.
ನಗರಗಳ ಪ್ರಮುಖ ಸಮಸ್ಯೆಯಾದ ಕಸ ವಿಲೇ, ಲ್ಯಾಂಡ್ ಫಿಲ್ಲಿಂಗ್, ಘನತ್ಯಾಜ್ಯ ವಿಲೇಗೆ ನಗರಾಭಿವೃದ್ಧಿ ಇಲಾಖೆ ಸಮಗ್ರ ಯೋಜನೆ ತಯಾರಿಸಿದೆ. ಒಳಚರಂಡಿ ಯೋಜನೆಗಳನ್ನು ರೂಪಿಸಿದೆ.
ಕಂದಾಯ ಇಲಾಖೆ ಸಮಸ್ಯೆಗಳನ್ನು ಸಮಗ್ರವಾಗಿ ನಿವಾರಿಸುವ ಉದ್ದೇಶದಿಂದ ಕಂದಾಯ ಅದಾಲತ್ ಗಳು ಹಾಗೂ ತಾಂತ್ರಿಕ ಸಮಸ್ಯೆಗಳಿಂದ ಜನರಿಗಾಗುವ ತೊಂದರೆಗಳನ್ನು ನಿವಾರಿಸಲು ಗ್ರಾಮಪಂಚಾಯತಿ ಹಂತಕ್ಕೂ ಕನೆಕ್ಟಿವಿಟಿ ನೀಡುವ ಬಗ್ಗೆ ಕಂದಾಯ ಇಲಾಖೆ ಯೋಜನೆ ರೂಪಿಸಿದೆ.
ರೈತರಿಗೆ ಆತ್ಮಸ್ಥೈರ್ಯ ತುಂಬಲು, ಖುಣಮುಕ್ತ ಭಾಗ್ಯಕ್ಕಾಗಿ ರಾಜೀವ್ ಗಾಂಧಿ ನಿಗಮದ ಅಧಿಕಾರಿಗಳನ್ನು ನಗರಾಭಿವೃದ್ಧಿ ಇಲಾಖೆಗೆ ಕರೆಸಿ ಸಭೆ ನಡೆಸಲಾಗುವುದು ಎಂದು ಸಚಿವರು ಹೇಳಿದರು.
ಸರ್ವೇಯರ್ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ವೇಯರ್‍ಗಳ ನೇಮಕ, ಭೂಮಿಯ ಸಮಸ್ಯೆ ಪರಿಹರಿಸಲು ಪೋಡಿಮುಕ್ತ ಆಂದೋಲನ, 94 ಸಿ, 94 ಸಿಸಿ ಪರಿಹರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಸಚಿವರು ವಿವರಿಸಿದರು.
ಸಭೆಯಲ್ಲಿದ್ದ ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿಗಳು ಹಾಗೂ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಅವರು, ಉಡುಪಿಗೆ 24 ಗಂಟೆ ವಿದ್ಯುತ್ ಪೂರೈಕೆ ಆರ್ ಆರ್ ಟಿ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಲಾಗಿದೆ. ಎಲ್ಲ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯಕ್ಕೆ ಜಿಲ್ಲೆ ಮಾದರಿಯಾಗಲಿದೆ ಎಂದರು.
ವಡ್ಡರ್ಸೆಯಲ್ಲಿ ಸಾರ್ವಜನಿಕ ಬಾವಿ, ಅಲೆವೂರಿನಲ್ಲಿ ನೀರಿನ ಸಮಸ್ಯೆ, ಮೂಡುಬೆಳ್ಳೆ ಕುಂತಳ ನಗರದ ಟ್ಯಾಂಕ್ ಸಮಸ್ಯೆ, ವಿವಿಧ ಪಂಚಾಯಿತಿ ಸದಸ್ಯರು ತಮ್ಮ ಗ್ರಾಮದ ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದರು.
ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷೆ ವೆರೊನಿಕ ಕರ್ನೇಲಿಯಾ, ಉಡುಪಿ ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಜನಾರ್ಧನ್ ತೋನ್ಸೆ, ಜಿಲ್ಲಾಧಿಕಾರಿ ಡಾ ವಿಶಾಲ್ ಆರ್, ಸಿಇಒ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಪಿ.ಸಾಧು , ತಾಲೂಕು ಪಂಚಾಯತ್ ಉಪಾಧ್ಯಕ್ಷ ಗಣೇಶ್, ಜಿಲ್ಲಾ ಪಂಚಾಯತ್ ಸದಸ್ಯರಾದ ಐಡಾ ಗಿಬ್ಬಾ ಡಿಸೋಜ ಸಭೆಯಲ್ಲಿದ್ದರು.
ತಹಸೀಲ್ದಾರ್ ಗುರುಪ್ರಸಾದ್ ಸ್ವಾಗತಿಸಿದರು.


Spread the love