ಉದ್ಯೋಗ ಮೇಳದ ಪ್ರಯೋಜನ ಪಡೆಯಲು ಜಿ.ಪಂ. ಸಿಇಓ ಕರೆ 

Spread the love

ಉದ್ಯೋಗ ಮೇಳದ ಪ್ರಯೋಜನ ಪಡೆಯಲು ಜಿ.ಪಂ. ಸಿಇಓ ಕರೆ 

ಮಂಗಳೂರು: ಫೆಬ್ರವರಿ 17ರಂದು ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆಯುವ ಬೃಹತ್ ಉದ್ಯೋಗ ಮೇಳ ‘ದಿಶಾ ಕ್ಯಾರಿಯರ್ ಫೆಸ್ಟ್’ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳು ಲಭ್ಯವಿರಲಿದ್ದು, ಜಿಲ್ಲೆಯ ಯುವಜನತೆ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ ಕರೆ ನೀಡಿದ್ದಾರೆ.

ಅವರು ಮಂಗಳವಾರ ತಮ್ಮ ಕಚೇರಿಯಲ್ಲಿ ನಡೆದ ಉದ್ಯೋಗ ಮೇಳ ಪ್ರಚಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಉದ್ಯೋಗ ಮೇಳದಲ್ಲಿ ದೇಶ ವಿದೇಶಗಳ ಸಾಕಷ್ಟು ಸಂಸ್ಥೆಗಳು ಭಾಗವಹಿಸಲಿವೆ. ಹೈಸ್ಕೂಲ್‍ನಿಂದ ಸ್ನಾತಕೋತ್ತರ ಪದವಿ ಶಿಕ್ಷಣದವರೆಗೆ ಕಲಿತವರಿಗೆ ಅವರ ಅರ್ಹತೆಗೆ ತಕ್ಕಂತೆ ಸಾವಿರಾರು ಉದ್ಯೋಗಗಳು ಈ ಮೇಳದಲ್ಲಿ ಲಭ್ಯವಾಗಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಅಭ್ಯರ್ಥಿಗಳ ನೋಂದಣಿ ಆರಂಭವಾಗಿದ್ದು, ಉದ್ಯೋಗಾಕಾಂಕ್ಷಿಗಳು ವೆಬ್‍ಸೈಟ್ mಚಿಟಿgಚಿಟuಡಿuuಜಥಿogಚಿmeಟಚಿ.ಛಿom ಇದರಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ತಮ್ಮ ಅರ್ಹತೆಗೆ ತಕ್ಕ ಉದ್ಯೋಗವನ್ನು ಪಡೆದುಕೊಳ್ಳಲು ಇದೊಂದು ಸದಾವಕಾಶವಾಗಿದೆ ಎಂದು ಅವರು ಹೇಳಿದರು.

ಈ ಉದ್ಯೋಗ ಮೇಳದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ವಿವಿಧ ರೀತಿ ಬಹು ಪ್ರಚಾರಾಂದೋಲನ ಹಮ್ಮಿಕೊಳ್ಳಬೇಕು. ವಿಶೇಷವಾಗಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲೂ ಹೆಚ್ಚು ಅರಿವು ಮೂಡಿಸಬೇಕು. ಇದಲ್ಲದೇ, ಕಾಲೇಜುಗಳು, ವಿವಿಧ ಯುವಕ ಮಂಡಲಗಳು, ಸ್ವಸಹಾಯ ಸಂಘಗಳು, ಹಾಲು ಉತ್ಪಾದಕರ ಸಂಘಗಳಿಗೂ ಉದ್ಯೋಗಮೇಳದ ಮಾಹಿತಿ ನೀಡುವಂತೆ ಡಾ.ಎಂ. ಆರ್. ರವಿ ತಿಳಿಸಿದರು.

ಸಭೆಯಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ರೊನಾಲ್ಡ್ ಅನಿಲ್ ಫೆರ್ನಾಂಡಿಸ್, ಜಿ.ಪಂ. ಯೋಜನಾ ನಿರ್ದೇಶಕ ಲೋಕೇಶ್, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಪ್ರಾಸ್ತವಿಕವಾಗಿ ಮಾತನಾಡಿದರು.


Spread the love