ಉಪ್ಪಿನಂಗಡಿ: ಮಹಿಳೆಯ ಕೊಲೆ ಪ್ರಕರಣ; ಆರೋಪಿ ಬಾಲಕ ಸೆರೆ

Spread the love

ಉಪ್ಪಿನಂಗಡಿ: ಮಹಿಳೆಯ ಕೊಲೆ ಪ್ರಕರಣ; ಆರೋಪಿ ಬಾಲಕ ಸೆರೆ

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಪೆರ್ನೆ ಗ್ರಾಮದ ಬಿಳಿಯೂರಿನ ದರ್ಖಾಸು ನಿವಾಸಿ ಹೇಮಾವತಿ (37) ಎಂಬವರು ರವಿವಾರ ತಡ ರಾತ್ರಿ ಮೃತಪಟ್ಟಿದ್ದು, ಇದೊಂದು ಕೊಲೆ ಕೃತ್ಯ ಎಂದು ತೀರ್ಮಾನಕ್ಕೆ ಬಂದಿರುವ ಪೊಲೀಸರು ಆರೋಪಿ ಬಾಲಕನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಹೇಮಾವತಿ ಅವರ ಮನೆಯಲ್ಲಿ ರಾತ್ರಿ ತಂಗಿದ್ದ ಅವರ ಅಕ್ಕನ ಮಗ, ಹತ್ತನೇ ತರಗತಿಯ ವಿದ್ಯಾರ್ಥಿ, ಅಪ್ರಾಪ್ತ ಬಾಲಕ ಹೇಮಾವತಿ ಮಲಗಿದಲ್ಲಿಗೆ ಹೋಗಿ ದೇಹ ಸುಖ ಬಯಸಿದ್ದು, ಇದಕ್ಕೆ ಹೇಮಾವತಿ ಪ್ರತಿರೋಧ ವ್ಯಕ್ತಪಡಿಸಿದ್ದು, ಈ ವೇಳೆ ಆರೋಪಿ ಬಾಲಕ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ತನಿಖೆ ವೇಳೆ ಬಾಲಕ ಬಾಯಿ ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಘಟನೆ ಬಗ್ಗೆ ಹೇಮಾವತಿ ಅವರ ಪತಿ ವಿಠಲ ಪೈ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ಸಲ್ಲಿಸಿದ್ದು, “ನನ್ನ ಪತ್ನಿ ಹೇಮಾವತಿ ಆಕೆಯ ತಾಯಿ ಮನೆಯಲ್ಲಿ ವಾಸ್ತವ್ಯ ಇದ್ದು, ಆಕೆ ಮಲಗಿದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ತನಗೆ ಮಾಹಿತಿ ಬಂದಿತ್ತು. ಆ ಬಳಿಕ ನಾನು ಪತ್ನಿಯ ಮನೆಯಾದ ಬಿಳಿಯೂರು ಗ್ರಾಮದ ದರ್ಖಾಸ್ತು ಎಂಬಲ್ಲಿಗೆ ಹೋಗಿ ನೋಡಿದಾಗ, ಪತ್ನಿಯ ಮೃತ ದೇಹದಲ್ಲಿ ಗಾಯದ ಗುರುತು ಬಗ್ಗೆ ಸಂಶಯ ಬಂದಿರುತ್ತದೆ, ಜೂ. 16ರಂದು ರಾತ್ರಿ ಪತ್ನಿಯ ಅಕ್ಕನ ಮಗ ಪತ್ನಿಯ ಮನೆಗೆ ಬಂದಿದ್ದು, ರಾತ್ರಿ ಪತ್ನಿಯ ತಾಯಿ, ಪತ್ನಿಯ ಅಕ್ಕನ ಮಗ ಮತ್ತು ಪತ್ನಿ ಊಟ ಮಾಡಿ ಮಲಗಿದ್ದರು. ಆ ಬಳಿಕ ರಾತ್ರಿಯಿಂದ 17ರ ಬೆಳಗ್ಗಿನ ಜಾವದ ಮಧ್ಯದ ಅವಧಿಯಲ್ಲಿ ಪತ್ನಿಯ ಕುತ್ತಿಗೆಯನ್ನು ಅದುಮಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿದೆ” ಎಂದು ದೂರಿನಲ್ಲಿ ತಿಳಿಸಿದ್ದರು.

ಮೃತ ಹೇಮಾವತಿ ಅವರ ಪತಿ ವಿಠಲ ಪೈ ಅವರ ದೂರಿನ ಮೇರೆಗೆ ಆರೋಪಿ ಬಾಲಕನನ್ನು ವಿಚಾರಣೆಗೆ ಒಳಪಡಿಸಿದ್ದು, ಆತನೇ ಕೊಲೆ ಮಾಡಿರುವುದು ಸಾಬೀತಾಗಿದೆ. ಹೀಗಾಗಿ ಅಪ್ರಾಪ್ತ ಬಾಲಕನನ್ನು ಬಂಧಿಸಿ ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಕರಣದ ತನಿಖಾಧಿಕಾರಿ ಉಪ್ಪಿನಂಗಡಿ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ರವಿ ಬಿ.ಎಸ್. ತಿಳಿಸಿದ್ದಾರೆ.


Spread the love