ಎಂ.ಆರ್.ಪಿ.ಎಲ್. ಹಸಿರು ವಲಯ ಭೂಸ್ವಾಧೀನ: ಪ್ಯಾಕೇಜ್ ಘೋಷಿಸಲು ಉಸ್ತುವಾರಿ ಸಚಿವರ ಸೂಚನೆ

Spread the love

ಎಂ.ಆರ್.ಪಿ.ಎಲ್. ಹಸಿರು ವಲಯ ಭೂಸ್ವಾಧೀನ: ಪ್ಯಾಕೇಜ್ ಘೋಷಿಸಲು ಉಸ್ತುವಾರಿ ಸಚಿವರ ಸೂಚನೆ

ಮಂಗಳೂರು:  ಎಂ.ಆರ್.ಪಿ.ಎಲ್. 3ನೇ ಹಂತದಲ್ಲಿ ಹಸಿರು ವಲಯ ನಿರ್ಮಾಣಕ್ಕೆ ಜೋಕಟ್ಟೆ ಗ್ರಾಮದ 27 ಎಕರೆ ಭೂಸ್ವಾಧೀನಗೊಳ್ಳುವ ನಿರ್ವಸಿತರಿಗೆ ಪರಿಹಾರ ಪ್ಯಾಕೇಜನ್ನು ನಿರ್ಧರಿಸಿ ಪ್ರಕಟಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಂ.ಆರ್.ಪಿ.ಎಲ್. ಹಸಿರು ವಲಯ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಸ್ಥಳೀಯರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 3 ನೇ ಹಂತದಲ್ಲಿ ಹಸಿರು ವಲಯ ನಿರ್ಮಾಣ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಲು ಈಗಾಗಲೇ ಕೆ.ಪಿ.ಟಿ. ಪಾಲಿಟೆಕ್ನಿಕ್ ಸಂಸ್ಥೆಗೆ ವಹಿಸಲಾಗಿದೆ. ಸಮೀಕ್ಷೆಯ ವರದಿ ಬರಲು 3 ತಿಂಗಳು ಆಗಲಿದೆ. ಅದಕ್ಕಿಂತಲೂ ಮುಂಚೆಯೇ ನಿರ್ವಸಿತರಿಗೆ ಪರಿಹಾರ ಪ್ಯಾಕೇಜ್ ಘೋಷಿಸುವಂತೆ ಸಚಿವರು ತಿಳಿಸಿದರು. ಸಾರ್ವಜನಿಕರಿಗೆ ಒಪ್ಪಿಗೆಯಾಗುವಂತ ಪ್ಯಾಕೇಜನ್ನು ನಿರ್ಧರಿಸುವಂತೆ ಸಚಿವರು ಎಂ.ಆರ್.ಪಿ.ಎಲ್. ಅಧಿಕಾರಿಗಳಿಗೆ ಸಲಹೆ ಮಾಡಿದರು.

ಹಸಿರು ವಲಯ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಮತ್ತು ಪ್ರಾಯೋಗಿಕವಾಗಿ ನಡೆಸಬೇಕು. ಅಲ್ಲಿರುವ ಮನೆ, ಜಮೀನುಗಳ ಬಗ್ಗೆ ನಿಖರವಾಗಿ ವರದಿ ತಯಾರಿಸಬೇಕು. ಶೀಘ್ರದಲ್ಲೇ ಪುನರ್ವಸತಿ ಪ್ಯಾಕೇಜ್ ನಿರ್ಧರಿಸುವಂತೆ ಸಚಿವರು ಹೇಳಿದರು.

ಭೂಸ್ವಾಧೀನಗೊಳ್ಳುವ ಸ್ಥಳಕ್ಕೆ ತಾನು ಶೀಘ್ರದಲ್ಲೇ ಭೇಟಿ ನೀಡುವುದಾಗಿ ತಿಳಿಸಿದ ಸಚಿವರು, ಎರಡು ತಿಂಗಳ ನಂತರ ಈ ವಿಷಯದಲ್ಲಿ ಮತ್ತೆ ಸಭೆ ನಡೆಸುವುದಾಗಿ ಹೇಳಿದರು. ಈ ಸಮಸ್ಯೆ ಶೀಘ್ರವಾಗಿ ಪರಿಹಾರವಾಗಬೇಕಿದೆ ಎಂದರು.

ಸಭೆಯಲ್ಲಿ ಎಂ.ಆರ್.ಪಿ.ಎಲ್. ಅಧಿಕಾರಿಗಳು ಮಾತನಾಡಿ, ಹಸಿರು ವಲಯ ಭೂಸ್ವಾಧೀನಕ್ಕೆ ಸಮೀಕ್ಷಾ ವರದಿ ಹಾಗೂ ಗ್ರಾಮಸ್ಥರೆಲ್ಲರ ಒಪ್ಪಿಗೆ ಅಗತ್ಯವಿದೆ ಎಂದು ತಿಳಿಸಿದರು. ಪರಿಹಾರ ಪ್ಯಾಕೇಜನ್ನು ಬೋರ್ಡ್ ಸಭೆಯಲ್ಲಿಟ್ಟು ಶೀಘ್ರವಾಗಿ ನಿರ್ಧರಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ, ಕೈಗಾರಿಕಾ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್, ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ರಾಜು, ಎಂ.ಆರ್.ಪಿ.ಎಲ್. ಅಧಿಕಾರಿಗಳು, ಮುನೀರ್ ಕಾಟಿಪಳ್ಳ, ತಾ.ಪಂ.ಮಾಜಿ ಸದಸ್ಯ ಬಶೀರ್, ಜೋಕಟ್ಟೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments