ಎಲ್.ಐ.ಸಿ  ಜೀವನ ಮಧುರ ಪಾಲಿಸಿ ಹಗರಣ; ವಿಚಾರಣೆಗಾಗಿ ಸ್ವೀಕರಿಸಿದ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ

ಎಲ್.ಐ.ಸಿ  ಜೀವನ ಮಧುರ ಪಾಲಿಸಿ ಹಗರಣ; ವಿಚಾರಣೆಗಾಗಿ ಸ್ವೀಕರಿಸಿದ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ

ಉಡುಪಿ: ಭಾರತೀಯ ಜೀವ ವಿಮಾನಿಗಮದ ಉಡುಪಿ ವಿಭಾಗಕ್ಕೆ ಸೇರಿದ 57 ಸಾವಿರಕ್ಕೂ ಹೆಚ್ಚಿನ ಮೈಕ್ರೋ ಇನ್ಶೂರೆನ್ಸ್ ಪಾಲಿಸಿದಾರರು ಕಟ್ಟಿದ್ದ ಕೋಟ್ಯಾಂತರ ರೂಪಾಯಿಗಳನ್ನು ಎಲೈಸಿಯೇ ನೇಮಿಸಿದ್ದ ಮಧ್ಯವರ್ತಿಗಳು ಕಬಳಿಸಿದ ಹಗರಣವನ್ನು ಇದೀಗ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗವು ವಿಚಾರಣೆಗಾಗಿ ಸ್ವೀಕರಿಸಿದೆ, ಕಳೆದ ಮೂರು ವರ್ಷಗಳಿಂದ ಈ ಪ್ರಕರಣದ ಕೂಲಂಕುಶ ತನಿಖೆ ನಡೆಸಿದ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಸಲ್ಲಿಸಿದ ದೂರನ್ನು ಪರಿಶಿಲಿಸಿದ ಆಯೋಗವು ಪಾಲಿಸಿದಾರರಿಗೆ ಅನ್ಯಾಯ ವಾಗಿರುವುದು ಮೇಲ್ನೋಟಕ್ಕೆ ತೋರಿಬಂದಿರುವುದರಿಂದ ವಿಚಾರಣೆಗಾಗಿ ಸ್ವೀಕರಿಸಿದೆ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ, ಉಡುಪಿ ಇದರ ಅಧ್ಯಕ್ಷರಾದ ಡಾ| ರವೀಂದ್ರನಾಥ್ ಶಾನುಭಾಗ್ ಹೇಳೀದರು.

ಅವರು ಮಂಗಳವಾರ ಉಡುಪಿಯ ವೈಕುಂಠ ಬಾಳಿಗಾ ಕಾಲೇಜಿನಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಜೀವಾವಿಮಾ ನಿಗಮವು ಮಾರಾಟ ಮಾಡಿರುವ ಸುಮಾರು 57800ರಷ್ಟು ಪಾಲಿಸಿಗಳಲ್ಲಿ ಶೇಕಡಾ 90 ರಷ್ಟು ಪಾಲಿಸಿಗಳು ರದ್ದಾಗಿರುವ ಈ ಪ್ರಕರಣದಲ್ಲಿ ಕರ್ತವ್ಯ ನಿರ್ಲಕ್ಷತೊರಿಸಿದ ಎಲೈಸಿಯ ಅಧಿಕಾರಿಗಳ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಕಳೆದ ಎರಡು ವರ್ಷಗಳಿಂದ ಪ್ರತಿಷ್ಠಾನವು ನೀಡಿದ ದೂರಿಗೆ ಜೀವಾವಿಮಾ ನಿಗಮದ ಆಡಳಿತ ಹಾಗೂ ಆರ್ಥಿಕ ಸಚಿವಾಲಯದಿಂದ ಯಾವ ಸ್ಪಂದನೆಯೂ ಬಾರದ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗಕ್ಕೆ ದೂರು ನೀಡಲಾಗಿತ್ತು.

ಚಿಕ್ಕಮಗಳೂರು ಜಿಲ್ಲೆಯ ಸುಮಾರು 200ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಎಲೈಸಿಯ ಪರವಾಗಿ ಪಾಲಿಸಿದಾರರಿಂದ ಹಣ ಸಂಗ್ರಹಿಸಿದ ಅಮಾಯಕ ಅಂಗನವಾಡಿ ಕಾರ್ಯಕರ್ತೆಯರು ಪಾಲಿಸಿದಾರರ ಆಕ್ರೋಶಕ್ಕೆ ಬಲಿಯಾಗಿದ್ದರು. ಆಯಾಗ್ರಾಮಗಳಲ್ಲಿದ್ದ ಪಾಲಿಸಿದಾರರಿಂದ ಸಂಗ್ರಹಿಸಿದ ಕೋಟ್ಯಾಂತರ ರೂಪಾಯಿಗಳ ಪ್ರೀಮಿಯಮ್ ಹಣವನ್ನು ಎಲೈಸಿಯೇ ನೇಮಿಸಿದ್ದ ಪ್ರತಿನಿಧಿಗಳಿಗೆ ಹಸ್ತಾಂತರಿಸಿ ತಮ್ಮ ಸರ್ವಸ್ವವನ್ನೂ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಲುಪಿದ್ದ ಅಂಗನವಾಡಿ ಕಾರ್ಯಕರ್ತೆಯರು ಇದೀಗ ನಿಟ್ಟುಸಿರು ಬಿಡುವಂತಾಗಿದೆ ಎಂದರು.

ಪ್ರಕರಣದ ಹಿನ್ನೆಲೆ
ಹಳ್ಳಿಯಲ್ಲಿರುವ ಬಡ ಜನರಿಗೆ ನೆರವಾಗುವ ಈ ಮೈಕ್ರೋ ಇನ್ಶೂರೆನ್ಸ್ ಯೋಜನೆಯ ಪ್ರಕಾರ 600ರೂಗಳಷ್ಟು ಕಡಿಮೆ ಪ್ರೀಮಿಯಂಗೆ ಪಾಲಿಸಿ ಖರೀದಿಸ ಬಹುದಾಗಿತ್ತು. 15 ವರ್ಷಗಳ ಅವಧಿಗೆ 15 ಸಾವಿರದಿಂದ 50ಸಾವಿರರೂಗಳ ಮೊತ್ತದ ಈ ಪಾಲಿಸಿಗೆ ಅತೀ ಕಡಿಮೆ ವಾರ್ಷಿಕ ಪ್ರೀಮಿಯಂ ನಿಗದಿಗೊಳಿಸಲಾಗಿತ್ತು. ಇದರಿಂದಾಗಿ ವಾರ್ಷಿಕವಾಗಿ ಒಂದೇ ಗಂಟಿನಲ್ಲಿ 600ರೂಗಳನ್ನು ಕೊಡಲಾಗದವರಿಗಾಗಿ 50ರೂ ಮಾಸಿಕ ಕಂತುಗಳನ್ನೂ ನಿಗದಿಗೊಳಿಸಲಾಯಿತು.

ಎಲೈಸಿಯವರ ಪರವಾಗಿ ಆಯಾ ಗ್ರಾಮಗಳಲ್ಲಿ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಈ ಪ್ರೀಮಿಯಂ ಹಣವನ್ನು ಸ್ವೀಕರಿಸಿ ಎಲೈಸಿಯವರೇ ನೇಮಿಸಿರುವ ಜಿಲ್ಲಾ ವಿಮಾ ಪ್ರತಿನಿಧಿಗಳಿಗೆ ಹಸ್ತಾಂತರಿಸಬೇಕಾಗಿತ್ತು. 2009-10ರ ವರ್ಷದಲ್ಲಿ ಪ್ರಾರಂಭಿಸಿದ ಈ ಯೋಜನೆಯಲ್ಲಿ ಉಡುಪಿ ವಿಭಾಗಕ್ಕೆ ಸೇರಿದ ಕಡೂರು, ಚಿಕ್ಕಮಗಳೂರು, ಅರಸಿಕೆರೆ, ತರೀಕೆರೆ, ಮೂಡಿಗೆರೆ, ಎನ್.ಆರ್.ಪುರ ಮುಂತಾದ ತಾಲೂಕುಗಳ 200ಕ್ಕೂ ಹೆಚ್ಚು ಗ್ರಾಮಗಳಿಂದ 58000 ಕ್ಕೂ ಹೆಚ್ಚಿನ ಬಡ ಹಳ್ಳಿಗರು ಈ ವಿಮಾ ಪಾಲಿಸಿ ಖರೀದಿಸಿದ್ದರು.

ಪ್ರತೀ ತಿಂಗಳು ಇವರಿಂದ ಪ್ರೀಮಿಯಂ ಹಣವನ್ನು ಸಂಗ್ರಹಿಸುತಿದ್ದ ಅಂಗನವಾಡಿ ಕಾರ್ಯಕರ್ತೆಯರು ನಿಯಮಿತವಾಗಿ ಅದನ್ನು ಎಲೈಸಿಯಿಂದ ನೇಮಿತವಾದ 1. ಸಮನ್ವಯ ಗ್ರಾಮಿಣ ಅಭಿವೃದ್ಧಿ ಸಂಸ್ಥೆ, 2. ಶುಭೋದಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ 3. ಮುಕ್ಕಣ್ಣೇಶ್ವರಿ ಯುವತಿ ಮಂಡಲಗಳಿಗೆ ಹಸ್ತಾಂತರಿಸುತಿದ್ದರು.

2013ರ ಜುಲೈತಿಂಗಳಲ್ಲಿ ಪಾಲಿಸಿದಾರಳೋರ್ವಳ ನಿಧನವಾದಾಗ ಸಲ್ಲಿಸಿದ್ದ ಕ್ಲೈಮ್ “ಪಾಲಿಸಿ ಜೀವಂತವಾಗಿ ಉಳಿದಿಲ್ಲ” ಎಂಬ ಕಾರಣಕ್ಕಾಗಿ ತಿರಸ್ಕರಿಸಲ್ಪಟ್ಟಿತ್ತು. ಈ ಪಾಲಿಸಿಯಲ್ಲಿ ಜೀವವಿಮಾ ನಿಗಮ ಕೇವಲ ಒಂದೇ ಪ್ರೀಮಿಯಂ ಕಂತನ್ನು ಸ್ವೀಕರಿಸಿರುವುದನ್ನು ಗಮನಿಸಲಾಯಿತು. ಪಾಲಿಸಿದಾರರು ಕಟ್ಟಿದ್ದ ಹಣವನ್ನು ಎಲೈಸಿ ಪ್ರತಿನಿಧಿಯಾದ ಸಮನ್ವಯ ಗ್ರಾಮೀಣ ಸಂಸ್ಥೆಯವರು ಲಪಟಾಯಿಸಿದುದು ಅಂದು ಮೊದಲ ಬಾರಿಗೆ ಬೆಳಕಿಗೆ ಬಂತು.

ಪಾಲಿಸಿದಾರರಿಂದ ಹಲ್ಲೆ 
ಪಾಲಿಸಿದಾರರು ಮೋಸಹೋದ ಈ ಸುದ್ದಿ ಕಾಳ್ಗಿಚ್ಚಿನಂತೆ ಚಿಕ್ಕಮಗಳೂರಿನ ಎಲ್ಲಾ ಹಳ್ಳಿಗಳಿಗೂ ತಲುಪಿತು. ಪಾಲಿಸಿದಾರರೆಲ್ಲ ಜೀವ ವಿಮಾ ಕಚೇರಿಗಳನ್ನು ಸಂಪರ್ಕಿಸಿದಾಗ 50,000 ಕ್ಕೂ ಹೆಚ್ಚಿನ ಪಾಲಿಸಿಗಳಿಗೆ ಇದೇ ಗತಿಬಂದಿರುವುದನ್ನು ಗಮನಿಸಲಾಯಿತು. ಹೆಚ್ಚಿನ ಪಾಲಿಸಿದಾರರು ಅವಿದ್ಯಾವಂತರಾಗಿದ್ದುದರಿಂದ ಅವರಿಗೆ ಹಣಲಪಟಾಯಿಸಿದ್ದು ಯಾರು ಎಂಬುದು ತಿಳಿಯಲಿಲ್ಲ, ತಿಳಿಯುವ ಅಗತ್ಯವೂ ಅವರಿಗೆ ಇರಲಿಲ್ಲ. ಏಕೆಂದರೆ ಜೀವವಿಮಾ ನಿಗಮವೆಂದರೇನು, ಎಲೈಸಿಯ ಪ್ರತಿನಿಧಿ ಯಾರು ಎಂಬುದು ಅವರಿಗೆ ಬೇಕಿರಲಿಲ್ಲ. ಅವರಿಂದ ಹಣ ಪಡೆದ ಆಯಾ ಗ್ರಾಮದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆಯರನ್ನೇ ಜವಾಬ್ದಾರರನ್ನಾಗಿಸಿ ಅವರ ಮನೆಗಳಿಗೆ ನುಗ್ಗಿ ಗಲಾಟೆ ಎಬ್ಬಿಸಿದರು. ಕೈಗೆ ಸಿಕ್ಕ ಪಾತ್ರೆ, ಹೊಲಿಗೆಯಂತ್ರ, ಕುರ್ಚಿ, ಮೇಜುಗಳನೆಲ್ಲ ಹೊತ್ತೊಯ್ದರು. ಅನೇಕ ಮಹಿಳೆಯರು ಹಲ್ಲೆಗೂ ಒಳಗಾದರು.

ತಡವಾಗಿ ಎಚ್ಚೇತ್ತ ಉಡುಪಿಯ ಎಲೈಸಿ ಅಧಿಕಾರಿಗಳು
ಇಷ್ಟಾದರೂ ಉಡುಪಿ ವಿಭಾಗದ ಎಲ್ಲೈಸಿಯ ಅಧಿಕಾರಿಗಳು ಎಚ್ಚೆತ್ತು ಕೊಳ್ಳಲಿಲ್ಲ. ಕೂಡಲೇ ಪೋಲಿಸರಿಗೆ ದೂರುಕೊಟ್ಟಿದ್ದಲ್ಲಿ ಹಣ ಲಪಟಾಯಿಸಿದವರಿಂದ ಅಲ್ಪ ಸ್ವಲ್ಪ ಹಣವನ್ನಾದರೂ ವಶಪಡಿಸಿಕೊಳ್ಳಬಹುದಾಗಿತ್ತು. ಇದಾಗಿ ಸುಮಾರು ಒಂದು ವರ್ಷದ ಅನಂತರ ತರೀಕೆರೆ ಹಾಗೂ ಕಡೂರು ಪೋಲೀಸ್ ಸ್ಟೇಶನ್ಗಳಲ್ಲಿ ಸಮನ್ವಯಂ ಸಂಸ್ಥೆಯ ಮೇಲೆ ದೂರುಗಳು ದಾಖಲಾದವು. ಒಂದೆರಡು ಬಾರಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪೋಲಿಸರಿಗೆ ಒದಗಿಸುವುದನ್ನು ಬಿಟ್ಟಲ್ಲಿ ಪ್ರಕರಣಗಳನ್ನು ಬೆನ್ನಟ್ಟುವ ಯಾವುದೇ ಕಾರ್ಯಚರಣೆ ನಿಗಮದ ಅಧಿಕಾರಿಗಳಿಂದ ನಡೆಯಲಿಲ್ಲ.

ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ತನಿಖೆ ಪ್ರಾರಂಭವಾದ ನಂತರ ನಿಗಮದ ಅಧಿಕಾರಿಗಳು ಇದೆ ರೀತಿಯಲ್ಲಿ ಹಣ ಲಪಟಾಯಿಸಿದ ಶುಭೋದಯ ಗ್ರಾಮೀಣ ಸಂಸ್ಥೆಯ ಮೇಲೆ ಚಿಕ್ಕಮಗಳೂರಿನ ಗೋಣಿಬೀಡು ಪೋಲಿಸ್ ಠಾಣೆಯಲ್ಲಿ ದೂರು ನೀಡಿದರು. ಈ ಸಂಸ್ಥೆಯಿಂದಲೂ ಹಣ ಲಪಾಟವಣೆಯಾಗಿದೆ ಎಂದು ತಿಳಿಯಲು ಎಲೈಸಿ ಅಧಿಕಾರಿಗಳಿಗೆ ಎರಡು ವರ್ಷಗಳು ಬೇಕಾದವೇ?

ಶುಭೋಧಯ ಸಂಸ್ಥೆ ವಿಶ್ವಾಸಾರ್ಹವೇ ?
ಮೈಕ್ರೋ ಇನ್ಶೂರೆನ್ಸ್ ನಿಯಮಗಳ ಪ್ರಕಾರ ಎಲೈಸಿಯನ್ನು ಪ್ರತಿನಿಧಿಸುವ ಯಾವುದೇ ಸರ್ಕಾರೇತರ ಸಂಸ್ಥೆ(ಓಉಔ)ಕಳೆದ ಮೂರು ವರ್ಷಗಳಲ್ಲಿ ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿರುವ ವಿಶ್ವಾಸಾರ್ಹ ಸಂಸ್ಥೆಯಾಗಿರಬೇಕು ಹಾಗೂ ಸೊಸೈಟಿ ರಿಜಿಸ್ಟ್ರೇಶನ್ ಕಾಯಿದೆಯ ಪ್ರಕಾರ ನೋಂದಾವಣೆಯಾಗಿರಬೇಕು. ಜೀವ ವಿಮಾನಿಗಮ ಈ ಸಂಸ್ಥೆಯನ್ನು ತನ್ನ ಪ್ರತಿನಿಧಿಯಾಗಿ ನೇಮಿಸಿಕೊಳ್ಳುವ ಮೊದಲು ಇದರ ದಾಖಲೆಗಳನ್ನು ಪರೀಶಿಲಿಸಿದ್ದಿದೇಯೆ?. ಮಾನವ ಹಕ್ಕುಗಳ ಪ್ರತಿಷ್ಠಾನ ನಡೆಸಿದ ತನಿಖೆಯ ಪ್ರಕಾರ ಇದರ ಪಧಾಧಿಕಾರಿಗಳಾದ ದೇವರಾಜ್, ಗೀರಿಶ್ ಮತ್ತು ಎ.ಎಮ್ ಮೋಹನ್ ಎಂಬುವರು ಈ ಹಿಂದೆ ಸಮನ್ವಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಿಬ್ಬಂಧಿಗಳಾಗಿದ್ದರು. ಅಲ್ಲಿ ಹಣ ಲಪಟಾಯಿಸುವ ಸಾಧ್ಯತೆಯನ್ನು ಕಂಡು ತಾವೇ ಶುಭೋದಯ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದರು.

ಆಶ್ಚರ್ಯವೆಂದರೆ ಉಡುಪಿಯ ಸೀನಿಯರ್ ಡಿವಿಜ್ನಲ್ ಮ್ಯಾನೆಜರ್ ಆಗಿದ್ದ ಶ್ರೀ ಎನ್.ಎಸ್ ಶಿರಹಟ್ಟಿ ಹಾಗೂ ಮಾರ್ಕೆಟಿಂಗ್ ಮ್ಯಾನೇಜರ್ ಹಾಗಿದ್ದ ಬ್ಯಾಪ್ಟಿಸ್ಟ ಡಿ ಅಲ್ಮೇಡಾ ರವರು ಉಡುಪಿಯ ವಿಭಾಗಿಯ ಕಚೇರಿಯಲ್ಲಿ ಶುಭೋದಯ ಸಂಸ್ಥೆಗೆ ಸೇರಿದ ಮೇಲಿನ ಮೂವರು ಪಧಾಧಿಕಾರಿಗಳನ್ನೂ ಅಧಿಕೃತವಾಗಿ ಸನ್ಮಾನಿಸಿದ್ದರು ! ಏಕೆ ಗೊತ್ತೇ ? ಇವರೆಲ್ಲ ಒಂದೇ ದಿನದಲ್ಲಿ 1310 ಪಾಲಿಸಿಗಳನ್ನು ಮಾರಾಟ ಮಾಡಿದ್ದರಂತೆ ! ಪ್ರತಿಷ್ಠಾನವು ತನಿಖೆ ಮಾಡಿದಾಗ ಅಂದು ಮಾಡಿದ್ದ ಈ ಎಲ್ಲ ಪಾಲಿಸಿಗಳ ಖಾತೆಯಲ್ಲಿ ಕೇವಲ ಒಂದೇ ಕಂತನ್ನು ಎಲೈಸಿಗೆ ಪಾವತಿಯಾಗಿದ್ದು ಈಗ ಅವೆಲ್ಲವೂ ತಮ್ಮ ಅಸ್ಥಿತ್ವವನ್ನೇ ಕಳೆದುಕೊಂಡಿದ್ದವು.

ಎಲ್ಲೈಸಿಯಿಂದ ನಿರ್ಲಕ್ಷ ಆದದ್ದು ಹೇಗೆ ? ಎಲ್ಲಿ ?
ಜೀವವಿಮಾ ವಿಭಾಗದ ಉಡುಪಿ ವಿಭಾಗದಲ್ಲಿ ಮಾರಾಟ ಮಾಡಿದ ಒಟ್ಟು 58086 ಜೀವನ ಮಧುರ ಪಾಲಿಸಿಗಳಲ್ಲಿ 57873 ಪಾಲಿಸಿಗಳಲ್ಲಿ ಒಂದೆರಡು ಕಂತುಗಳು ಪಾವತಿಯಾಗಿರುವುದರಿಂದ ಸುಮಾರು 213 ಪಾಲಿಸಿಗಳು ಮಾತ್ರ ಜೀವಂತವಾಗಿ ಉಳಿದಿವೆ. ಅರ್ಥಾತ್, 99.63% ರಷ್ಟು ಪಾಲಿಸಿಗಳು ಅಸ್ತಿತ್ವಕಳೆದು ಕೊಂಡು ಮೂರು ವರ್ಷಗಳಾದರೂ ನಿಗಮದ ಅಧಿಕಾರಿಗಳಿಗೆ ತಿಳಿಯದೇ ಹೊದದ್ದು ಹೇಗೆ?

ಉಡುಪಿ ವಿಭಾಗದ ಮೈಕ್ರೋ ಇನ್ಶೂರೆನ್ಸ್ ವಿಭಾಗದಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಹಲವಾರು ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದ್ದಿಗಳು ಇದ್ದರೂ 99.63% ರಷ್ಟು ಪಾಲಿಸಿಗಳು ಅಸ್ತಿತ್ವ ಕಳೆದುಕೊಂಡಾಗ ಪಾಲಿಸಿದಾರರ ರಕ್ಷಣೆಯಲ್ಲಿ ಯಾವ ಪ್ರಯತ್ನಗಳು ನಡೆಯದಿರಲು ಕಾರಣಗಳೇನು?

ಇವೆಲ್ಲಾ ನಡೆದು ಐದು ವರ್ಷಗಳಾದರೂ ಈ ಹಗರಣದ ಕುರಿತು ಯಾವುದೇ ಅಧಿಕಾರಿಗಳ ತನಿಖೆಯಾಗಿಲ್ಲವೇಕೆ? ಮದ್ಯವರ್ತಿಗಳು ಹಣಲಪಟಾಯಿಸಿದ್ದು ತಿಳಿದ ಒಂದು ವರ್ಷಗಳವರೆಗೂ ಅಧಿಕಾರಿಗಳೆಲ್ಲ ಸುಮ್ಮನಿದ್ದುದೇಕೆ? ಹಣಲಪಟಾಯಿಸಿದವರು ಓಡಿಹೋದ ನಂತರವೇ ಪೋಲಿಸ್ ಕಂಪ್ಲೇಟ್ ಕೊಟ್ಟಿರುವುದಕ್ಕೆ ಏನು ಸಮಜಾಯಿಶಿ ಇದೆ? ಸಂತ್ರಸ್ತರು 19-06-2014ರಂದು ನೀಡಿದ ಆರ್ಟಿಐ ಅರ್ಜಿಗೆ ಸೂಕ್ತ ಉತ್ತರ ಕೊಡದೇ “ಇವೆಲ್ಲ ವೈಯುಕ್ತಿಕ ವಿಚಾರ” ಎಂದು ತಪ್ಪಿಸಿಕೊಂಡಿರುವುದು ಏಕೆ? ಶುಭೋದಯ ಸಂಸ್ಥೆಯ ಹಾಗೂ ಪದಾಧಿಕಾರಿಗಳ ಹಿನ್ನೆಲೆಯನ್ನು ತೆಗೆದುಕೊಳ್ಳದೇ ಏಜೆನ್ಸಿ ನೀಡಿದುದಾದರೂ ಹೇಗೆ? ಇಲ್ಲಿ ನಿಯಮಗಳ ಪಾಲನೆಯಾಗಿದೆಯೇ? 2011ರಲ್ಲಿ ಶುಭೋದಯದ ಮಾಡಿದ ಎಲ್ಲಾ ಪಾಲಿಸಿಗಳು ರದ್ದಾದಮೇಲೂ ಸ್ವತಃ ಉಡುಪಿ ಜೀವ ವಿಮಾವಿಭಾಗದ ಡಿವಿಜನಲ್ ಮ್ಯಾನೆಜರರು ಆ ಸಂಸ್ಥೆಯ ಪದಾಧಿಕಾರಿಗಳನ್ನು ಸನ್ಮಾನಿಸಿದುದು ಏಕಾಗಿ ಎಂದು ಶ್ಯಾನುಭಾಗ್ ಪ್ರಶ್ನಿಸಿದರು.

ಪ್ರತಿಷ್ಠಾನದಿಂದ ರಾಜ್ಯ ಗ್ರಾಹಕರ ಆಯೋಗಕ್ಕೆ ದೂರು
ಈ ಹಗರಣದಿಂದ ಕಷ್ಟ ನಷ್ಟಕ್ಕೊಳಗಾಗಿರುವ ಅಂಗನವಾಡಿ ಕಾರ್ಯಕರ್ತೆರಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಪ್ರತಿಷ್ಠಾನವು ನೀಡಿದ ಪತ್ರಕ್ಕೆ ವಿಮಾ ನಿಯಂತ್ರಣ ಮಂಡಳಿಯ ಅಧ್ಯಕ್ಷರಿಂದ ಹಾಗೂ ಆರ್ಥಿಕ ಸಚಿವಾಲಯದಿಂದ ಸೂಕ್ತ ಸ್ಪಂದನೆ ದೊರೆಯದಿದುದ್ದರಿಂದ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗಕ್ಕೆ ನೀಡಿದ ಪ್ರಾತಿನಿಧಿಕ ದಾವೆ ಯನ್ನು ಇದೀಗ ಆಯೋಗವು ವಿಚಾರಣೆಗಾಗಿ ಸ್ವೀಕರಿಸಿದೆ. ಪಾಲಿಸಿದಾರರು ಕಟ್ಟಿದ ಪ್ರೀಮಿಯಮ್ ಹಣವನ್ನು ಬಡ್ಡಿ ಸಹಿತ ಹಿಂದಿರುಗಿಸುವಂತೆ ಪ್ರತಿಷ್ಠಾನವು ಆಯೋಗವನ್ನು ವಿನಂತಿಸಿದೆ.

ಇದೇ ವೇಳೆ ಕರ್ನಾಟಕದ ಬೆಳಗಾಂ ಮತ್ತು ಮೈಸೂರು, ಮಧ್ಯ ಪ್ರದೇಶದ ಇಂದೋರ್, ಒಡಿಸಾದ ಬುವನೇಶ್ವರ್ ಮುಂತಾದ ಅನೇಕ ಕಡೆಗಳಿಂದ ಇಂತಹದೆ ದೂರುಗಳನ್ನು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಸ್ವೀಕರಿಸಿದೆ. ಈ ಎಲ್ಲಾ ದೂರುದಾರರರಿಗೆ ಸಂಪೂರ್ಣ ಕಾನೂನು ನೇರವು ನೀಡಲಾಗುವುದು ಎಂದರು.

ಅಮಾಯಕ ಸಹಾಯಕ ಏಜೆಂಟರನ್ನು ಹಿಂಸಿಸದಿರಿ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್ಐಸಿಯ ಮೈಕ್ರೋ ಇನ್ಶೂರೆನ್ಸ್ ಮುಖ್ಯ ಎಜೆಂಟರಾಗಿದ್ದ ಸಮನ್ವಯ ಸಂಸ್ಥೆ ಹಾಗೂ ಶುಭೋಧಯ ಸಂಸ್ಥೆಯವರೇ ಪಾಲಿಸಿದಾರರ ಹಣ ಲಪಟಾಯಿಸಿದ್ದಾರೆ ವಿನಃ ಹಳ್ಳಿ ಹಳ್ಳಿಯಲ್ಲಿ ಪ್ರೀಮಿಯಮ್ ಹಣ ಸಂಗ್ರಹಿಸಿದ ಸಹಾಯಕ ಏಜೆಂಟರು ಯಾವುದೇ ಮೊಸ ಮಾಡಿಲ್ಲ. ಕರ್ನಾಟಕ ರಾಜ್ಯ ಗ್ರಾಹಕರ ದೂರು ಪರಿಹಾರ ಆಯೋಗವು ಈ ಹಗರಣದ ತನಿಖೆಯನ್ನು ಈಗಾಗಲೇ ಕೈಗೆತ್ತಿಕೊಂಡಿದ್ದು ಶೀಘ್ರವೇ ಪಾಲಿಸಿದಾರರಿಗೆ ನ್ಯಾಯ ಸಿಗಲಿದೆ. ಪ್ರೀಮಿಯಂ ಹಣ ಸಂಗ್ರಾಹಿಸಿದ್ದಾರೆ ಎಂಬ ಒಂದೇ ಕಾರಣಕ್ಕಾಗಿ ಸಹಾಯಕ ಏಜೆಂಟರಾಗಿ ದುಡಿದ ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ರೈತ ಯುವಕರಿಗೆ ಹಿಂಸೆ ಮಾಡದಿರಿ.