ಎಸ್‍ಪಿ ಸಂಜೀವ್ ಪಾಟೀಲ್ ಪೋನ್-ಇನ್; ಮಟ್ಕಾ, ಅಕ್ರಮ ಮದ್ಯ ಮಾರಾಟ ತಡೆಗೆ ಸಾರ್ವಜನಿಕರ ಆಗ್ರಹ

Spread the love

ಎಸ್‍ಪಿ ಸಂಜೀವ್ ಪಾಟೀಲ್ ಪೋನ್-ಇನ್;   ಮಟ್ಕಾ, ಅಕ್ರಮ ಮದ್ಯ ಮಾರಾಟ ತಡೆಗೆ ಸಾರ್ವಜನಿಕರ ಆಗ್ರಹ

ಉಡುಪಿ: ಹಿರಿಯಡ್ಕ, ಪಡುಬಿದ್ರಿ, ಕೋಟಾ, ಬ್ರಹ್ಮಾವರ, ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ ಹಾಗೂ ಅಕ್ರಮ ಮದ್ಯ ಮಾರಾಟ ದಂಧೆ ವಿಪರೀತವಾಗಿದ್ದು, ಸೂಕ್ತ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಯನ್ನು ಆಗ್ರಹಿಸಿದ್ದಾರೆ.

ಶನಿವಾರ ಎಸ್‍ಪಿ ಕಚೇರಿಯಲ್ಲಿ ನಡೆದ 3ನೇ ವಾರದ ಫೋನ್-ಇನ್ ಕಾರ್ಯಕ್ರಮದಲ್ಲಿ 38 ದೂರುಗಳು ಸಲ್ಲಿಕೆಯಾಗಿದ್ದು, ಬಹುತೇಕ ಕರೆಗಳು ಗೂಡಂಗಡಿಗಳಲ್ಲಿ, ಹೋಟೆಲ್‍ಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ, ಮಟ್ಕಾ ದಂಧೆಯ ಬಗ್ಗೆ ದಾಖಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಎಸ್‍ಪಿ ಡಾ. ಸಂಜೀವ ಪಾಟೀಲ್, ವಾರದಲ್ಲೇ 72 ಮಟ್ಕಾ ಕೇಸ್ ದಾಖಲಾಗಿದ್ದು, 73 ಮಂದಿಯನ್ನು ಬಂಧಿಸಲಾಗಿದೆ. 8 ಇಸ್ಪೀಟ್ ಪ್ರಕರಣದಲ್ಲಿ 33 ಮಂದಿಯನ್ನು ಬಂಧಿಸಲಾಗಿದೆ. ಅಕ್ರಮ ಮದ್ಯ ಮಾರಾಟ ಸಂಬಂಧ 4 ಕೇಸ್ ದಾಖಲಾಗಿದೆ. 5 ಮಂದಿಯನ್ನು ಬಂಧಿಸಲಾಗಿದೆ. ಕುಡಿದು ವಾಹನ ಚಾಲನೆ ಬಗ್ಗೆ 68 ಕೇಸ್ ದಾಖಲಾಗಿದೆ ಎಂದು ಮಾಹಿತಿ ನೀಡಿದರು.

ಮಣಿಪಾಲದ ನಾಗರಿಕರೊಬ್ಬರು ಬಸ್‍ಗಳಲ್ಲಿ ಕರ್ಕಶ ಹಾರ್ನ್ ಬಳಸುತ್ತಿರುವುದು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಇನ್ನೂ ಹೆಚ್ಚಿನ ಪ್ರಗತಿಯಾಗಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಎಸ್‍ಪಿಯವರು, 119 ಕೇಸ್ ದಾಖಲಾಗಿದ್ದು, ಕರ್ಕಶ ಹಾರ್ನ್ ಹಾಕುವ ಬಸ್‍ಗಳ ವಿರುದ್ಧ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಪಿಪಿಸಿ ಕಾಲೇಜು-ವಳಕಾಡು ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಎರಡೂ ಕಡೆ ಪಾರ್ಕ್ ಮಾಡುವುದರಿಂದ ಟ್ರಾಫಿಕ್ ಜಾಮ್ ಆಗುತ್ತಿದೆ ಎಂದು ಸ್ಥಳೀಯರೊಬ್ಬರು ದೂರಿದರು.

ಮಣಿಪಾಲ ಠಾಣೆಯಲ್ಲಿ ದೂರು ನೀಡಿದರೂ ಸ್ವೀಕರಿಸದ ಬಗ್ಗೆ, ಬಸ್‍ಗಳು ಮಣಿಪಾಲದಲ್ಲಿ ಎಲ್ಲೆಂದರಲ್ಲಿ ನಿಲುಗಡೆ ಮಾಡುತ್ತಿರುವ ಬಗ್ಗೆ,  ಮೊಬೈಲ್‍ನಲ್ಲಿ ಮಾತನಾಡಿಕೊಂಡು ವಾಹನ ಚಲಾಯಿಸುವ ಬಗ್ಗೆ ಸಾರ್ವಜನಿಕರು ಎಸ್‍ಪಿಯವರ ಗಮನಸೆಳೆದರು.

ಹಲವು ವರ್ಷದಿಂದ ಪೋಲೀಸ್ ಜೀಪ್ ಚಾಲಕರು ಒಂದೇ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವರನ್ನು ವರ್ಗಾವಣೆ ಮಾಡಬೇಕು ಎಂದು ಉಪ್ಪುಂದದ ನಾಗರಿಕರೊಬ್ಬರು ಆಗ್ರಹಿಸಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಎಸ್‍ಪಿ ತಿಳಿಸಿದರು.

ಕಾರ್ಕಳದಿಂದ ಕರೆ ಮಾಡಿದ ನಾಗರಿಕರೊಬ್ಬರು, ವೆಂಕಟರಮಣ ದೇವಸ್ಥಾನ ರಸ್ತೆಯಲ್ಲಿ ಖಾಸಗಿ ನರ್ಸಿಂಗ್ ಹೋಮ್ ಬಳಿ ಎರಡೂ ಕಡೆ ವಾಹನ ನಿಲುಗಡೆ ಮಾಡಲಾಗುತ್ತಿದೆ ಎಂದು ದೂರು ನೀಡಿದರು.

ಮಲ್ಪೆ-ಪಡುಕೆರೆ ಹೊಸ ಸೇತುವೆ ಮೇಲೆ ವಾಹನ ಪಾರ್ಕ್ ಮಾಡಲಾಗುತ್ತಿದ್ದು, ಕುಡುಕರು ಜನರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಉಡುಪಿ ಸಂತೆಕಟ್ಟೆಯಲ್ಲಿ ಸಂತೆಯ ದಿನ ವಾಹನಗಳನ್ನು ರಸ್ತೆಯ್ಲಲ್ಲೇ ಪಾರ್ಕ್ ಮಾಡುತ್ತಿದ್ದು, ಇದರಿಂದ ಸಂಚಾರಕ್ಕೆ ಅಡಚಣೆಯಾಗಿದೆ ಎಂದು 2 ದೂರುಗಳು ಸಲ್ಲಿಕೆಯಾಗಿವೆ.

ಕೊಲ್ಲೂರಿನಿಂದ ಕರೆ ಮಾಡಿದ ಸ್ಥಳೀಯರೊಬ್ಬರು, ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳ ಆಗಮನದಿಂದ ಸೂಕ್ತ ನಿರ್ವಹಣೆ ಇಲ್ಲದೆ ನಿತ್ಯ ಟ್ರಾಫಿಕ್ ಜಾಮ್ ಆಗುತ್ತಿದೆ. ದನ, ನಾಯಿಗಳು ರಸ್ತೆಯಲ್ಲೆ ಅಡ್ಡಾಡುತ್ತಿದ್ದು, ದಾರಿಹೋಕರಿಗೆ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.

ಈ ಬಾರಿಯ ಫೆÇನ್ -ಇನ್ ಕಾರ್ಯಕ್ರಮದಲ್ಲಿ ಎಸ್‍ಪಿಯವರಿಗೆ ತರೇವಾರಿ ದೂರುಗಳು ಬಂದಿದ್ದು, ಕೌಟುಂಬಿಕ ಕಲಹ, ಗೃಹರಕ್ಷಕ ಸಿಬ್ಬಂದಿಗೆ ಕೆಲಸ ನೀಡುತ್ತಿಲ್ಲ, ಕುಂದಾಪುರದಲ್ಲಿರುವ ಬೈಕ್‍ಗೆ ದಾವಣಗೆರೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಬಗ್ಗೆ ನೋಟಿಸ್ ನೀಡಿರುವುದು, ನೆರೆಹೊರೆಯವರ ಜಗಳದಿಂದ ವಿದ್ಯುತ್ ಸಂಪರ್ಕಕ್ಕೆ ತೊಡಕು, ಕಾಪು ಪರಿಸರದಲ್ಲಿ ನಿರಂತರ ದನ ಕಳ್ಳತನ, ಬಸ್‍ಗಳಲ್ಲಿ ಆಡಿಯೋ, ವಿಡಿಯೋ ಪ್ರದರ್ಶನ ಮುಂತಾದ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.


Spread the love